Homeಜಿಲ್ಲೆಒಳ್ಳೆಯ ಆಯ್ಕೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಎಸ್ ಎನ್ ಚನ್ನಬಸಪ್ಪ

ಒಳ್ಳೆಯ ಆಯ್ಕೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಎಸ್ ಎನ್ ಚನ್ನಬಸಪ್ಪ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.1

ಬದುಕಲು ನಮ್ಮ ಆಲೋಚನೆಗಳು ಹಾಗೂ ಮನಸ್ಥಿತಿ ಬದಲಾಗಿ, ಮಹಾಂತ ಶಿವಯೋಗಿಗಳಂತಹ ಮನಸ್ಥಿತಿ ಬೆಳೆದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಿಸಿದರು.

ಅವರು ಶನಿವಾರ ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಹ್ಯಾದ್ರಿ ಕಲಾ ಕಾಲೇಜು ಹಾಗೂ ಎನ್‌ಎಸ್‌ಎಸ್ ಘಟಕ 1 ಮತ್ತು 2ರ ಸಂಯುಕ್ತ ಆಶ್ರಯದಲ್ಲಿ ಸಹ್ಯಾದ್ರಿ ಕಲಾ ಕಾಲೇಜು ಸಭಾಂಗಣದಲ್ಲಿ ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ‘ವ್ಯಸನಮುಕ್ತ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾಂತರ ಕೊಡುಗೆ: ಜನರ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಯುವಕರನ್ನು ದುಶ್ಚಟಗಳ ದುಷ್ಪರಿಣಾಮಗಳಿಂದ ರಕ್ಷಿಸಲು ಜೀವನ ಮುಡಿಪಾಗಿಟ್ಟ ಮಹಾನ್ ಪುರುಷ ಮಹಾಂತ ಶಿವಯೋಗಿಗಳು. ಇಂತಹ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ನಾವೆಲ್ಲ ಸಾಗಬೇಕು.

ಪ್ರಸ್ತುತ ಎಲ್ಲೆಡೆ ಮದ್ಯ, ತಂಬಾಕು ಲಭ್ಯವಿದ್ದು, ನಮಗೆ ಏನು ಬೇಕು ಎಂಬ ಆಯ್ಕೆ ನಾವು ಮಾಡಬೇಕಿದೆ. ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದ ಅವರು ನಿತ್ಯ ದುಶ್ಚಟಗಳ ವಿರುದ್ದ ಹೋರಾಡಿ ಅದನ್ನು ಮೆಟ್ಟಿ ನಿಲ್ಲಬೇಕು ಎಂದು ಯುವಜನತೆಗೆ ಕರೆ ನೀಡಿದರು.

ಗಮನಿಸಿ: ಅಧ್ಯಾಪಕರು ಹೊಸತನಕ್ಕೆ ತೆರೆದುಕೊಳ್ಳಬೇಕು: ಪ್ರೊ.ಕೇಶವ.ಹೆಚ್

ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ ಮಾತನಾಡಿ, ಮಾದಕ ವಸ್ತುಗಳ ದುಶ್ಚಟ ಮಾನವನಿಗೆ ಮತ್ತು ಸಮಾಜಕ್ಕೆ ಮಾರಕವಾಗಿದ್ದು, ಇದರಿಂದ ದೂರ ಇರಲು ಎಲ್ಲ ರೀತಿಯ ಪ್ರಯತ್ನಗಳಾಗಬೇಕು. ಯುವಜನತೆಯಲ್ಲಿ ಇಂದು ಮೊಬೈಲ್ ರೀಲ್ಸ್ ಕೂಡ ಒಂದು ದೊಡ್ಡ ಚಟವಾಗಿ ಬೆಳೆದಿದೆ. ಯುವಕರು ಜವಾಬ್ದಾರಿ ಅರಿತು, ಕೌಶಲ್ಯ ವೃದ್ಧಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಹಾರೈಸಿದರು.

ಹೆಚ್ಚುಚರಿ ಪೊಲೀಸ್ ವರಿಷ್ಟಾಧಿಕಾರಿ ಕಾರಿಯಪ್ಪ ಮಾತನಾಡಿ, ಸಾಮಾನ್ಯವಾಗಿ 18 ರಿಂದ 35 ವರ್ಷದೊಳಗಿನ ಯುವಕರು ದುಶ್ಚಟಗಳಿಗೆ ಬಲಿಯಾಗುವ ಸಂಭವ ಹೆಚ್ಚು. ಗಾಂಜಾ ಸೇರಿದಂತೆ ಹಲವು ಸಿಂಥೆಟಿಕ್ ಮಾದಕ ವಸ್ತುಗಳು ಲಭ್ಯವಿದ್ದು ಇವಕ್ಕೆ ಬಲಿಯಾಗುತ್ತಿರುವುದು ಶೋಚನೀಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಶೆ ಮುಕ್ತ ಭಾರತ ಮಾಡಲು ಬಹಳಷ್ಟು ಒತ್ತು ನೀಡುತ್ತದ್ದು ಎಲ್ಲರ ಸಹಕಾರ ಅಗತ್ಯವಾಗಿದೆ.

“ಮಾದಕ ವಸ್ತುಗಳಿಗೆ ಬೇಡ ಬ್ರೋ” : ಯಾವುದೇ ಮಾದಕ ವಸ್ತುಗಳಿಗೆ ‘ಬೇಡ ಬ್ರೋ’ ಅನ್ನುವ ಅಭಿಯಾನದ ಮೂಲಕ ದುಶ್ಚಟಗಳನ್ನು ತಿರಸ್ಕರಿಸಬೇಕು ಎಂದು ಯುವಜನತೆಗೆ ಕರೆ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಮನೋವೈದ್ಯ ಡಾ. ಸಚಿನ್ ಒ. ಎನ್ ವಿಶೇಷ ಉಪನ್ಯಾಸ ನೀಡಿ, 12 ರಿಂದ 18ರ ವಯಸ್ಸಿನವರು ಸಾಮಾನ್ಯವಾಗಿ ಚಟಗಳಿಗೆ ಆಕರ್ಷಿತರಾಗುತ್ತಾರೆ. ಕುತೂಹಲ ಹಾಗೂ ಗೆಳೆಯರ ಒತ್ತಾಯ ಅಥವಾ ಇತರೆ ಒತ್ತಡದಿಂದ ಚಟಗಳು ಆರಂಭವಾಗುತ್ತವೆ.

ಮೊದಲಿಗೆ ಖುಷಿ ಕೊಡುವ ಚಟ ನಂತರ ಅನೇಕ ಗಂಭೀರ ಆರೋಗ್ಯ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ದುಶ್ಚಟಗಳಿಂದ ಹೊರ ಬರುವುದು ಕಷ್ಟವಾಗುತ್ತದೆ. ಆದರೆ ಇತರರ ಬೆಂಬಲ, ಸಹಕಾರ ಮತ್ತು ಚಿಕಿತ್ಸೆ ಮೂಲಕ ಹೊರ ಬರಬಹುದು. ಚಟಗಳಿಂದ ಹೊರಬರಲು ‘ಟೆಲಿ ಮನಸ್’ ಸಹಾಯವಾಣಿ 14416 ಮೂಲಕ ಉಚಿತ ಆಪ್ತಸಮಾಲೋಚನೆ ಪಡೆಯಬಹುದು ಎಂದು ಸಲಹೆ ನೀಡಿದರು.

ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿರಾಜ್ ಅಹಮದ್ ಎಸ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಎಲ್ ಓ ಡಾ. ಶಮಾ ಅಂಜುಮ್ ವಿದ್ಯಾರ್ಥಿ ಕ್ಷೇಮಾಧಿಕಾರಿ ಮಂಜುನಾಥ್ ಸ್ವಾಗತಿಸಿದರು. ಎನ್‌ಎಸ್‌ಎಸ್ ಘಟಕ-2ರ ಕಾರ್ಯಕ್ರಮಾಧಿಕಾರಿ ಹಾಲಮ್ಮ ವಂದಿಸಿದರು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಾರುತಿ ಆರ್, ಉಪನ್ಯಾಸಕರಾದ ಸಂಗೀತ, ಅರುಣ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments