ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.1
ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದ್ದು, ಇಂತಹ ಸಂದರ್ಭದಲ್ಲಿ ನಿಮ್ಮ ಕೃತಿಗಳು ಹೆಚ್ಚು ಮಹತ್ವ ಪಡೆಯಬೇಕು. ಅವುಗಳನ್ನು ಮತ್ತಷ್ಟು ಬರೆಯುವಂತಾಗಬೇಕು. ನಿವೃತ್ತಿ ಬದುಕು ಕ್ರಿಯಾಶೀಲವಾಗಿರಲಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಶಿಸಿದರು.
ಅವರು ಆಲ್ಕೊಳದ ರೋಟರಿ ಸೆಂಟ್ರಲ್ ಭವನದಲ್ಲಿ ಆಯೋಜಿಸಿದ್ದ ‘ಪ್ರತಿಭಟನೆಯ ಧ್ವನಿಗಳು’ ಶಿರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿತವಾದ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ಇಂಗ್ಲಿಷ್ ಕೃತಿ ‘ವಾಯ್ಸ್ ಆಫ್ ಪ್ರೊಟೆಸ್ಟ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಪ್ರತಿಭಟನೆಗಳೇ ನಮ್ಮ ಹಕ್ಕುಗಳನ್ನು ಪಡೆಯುವ ಅಸ್ತçವಾಗಿದೆ. ಈ ನಿಟ್ಟಿನಲ್ಲಿ ಅವರ ಕೃತಿ ಹೆಚ್ಚು ಮನ್ನಣೆ ಪಡೆದು ಯುವಕರ ತಲುಪಲಿ. ನಿವೃತ್ತಿ ಎಂದರೆ ಕೇವಲ ಹಾರ ಹಾಕಿ ಅವರನ್ನು ಅಭಿನಂದಿಸುವುದಲ್ಲ, ಅದು ಜ್ಞಾನ ಮತ್ತು ಸೇವೆಯನ್ನು ಗುರುತಿಸುವ ಕೆಲಸವೂ ಹೌದು ಎಂದರು.
ಕೃತಿಯ ಅನುವಾದಕ ಹಾಗೂ ಚಿಂತಕ ಡಾ.ಹೆಚ್.ಎಸ್. ನಾಗಭೂಷಣ್ ಮಾತನಾಡಿ, ಬರೆಯುವುದು ಕೂಡ ಸಾಮಾಜಿಕ ಹೊಣೆಗಾರಿಕೆ. ಸಾಹಿತ್ಯ ಎನ್ನುವುದು ಸಮಾಜದ ಕನ್ನಡಿ. ಹೂವು ಅರಳುವುದು, ಮಳೆ ಸುರಿಯುವುದು, ಹಕ್ಕಿ ಹಾಡುವುದು, ಹೇಗೆ ಸಹಜ ಕ್ರಿಯೆಯೋ ಹಾಗೆ ಬರೆಯುವುದು ಕೂಡ ಲೇಖಕನ ಸಹಜ ಕ್ರಿಯೆ ಎಂದರು.
ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ಅವರು ಜಗತ್ತಿನ ನೋವುಗಳ ಕುರಿತು ಬರೆದ ಕೃತಿಯನ್ನು ಡಾ. ಸಿ. ಚನ್ನಪ್ಪ ವಾಲೆಮನೆ ಅವರು ‘ವಾಯ್ಸ್ ಆಫ್ ಪ್ರೊಟೆಸ್ಟ್’ ಬರೆಯುವುದರ ಮೂಲಕ ಅವಲೋಕನ ಮಾಡಿದ್ದಾರೆ. ನಾನು ಅದನ್ನು ‘ಪ್ರತಿಭಟನೆಯ ಧ್ವನಿಗಳು’ ಎಂಬ ಹೆಸರಿಟ್ಟು ಅನುವಾದಿಸಿದ್ದೇನೆ. ಕನ್ನಡಿಗರು ಅರ್ಥ ಮಾಡಿಕೊಳ್ಳಲಿ ಎಂಬ ಉದ್ದೇಶ ನನ್ನದು ಎಂದರು.
ಪ್ರತಿಭಟನೆಗಳನ್ನೇ ಹತ್ತಿಕ್ಕುವ ಕಾಲವಿದು. ಇದಕ್ಕೆ ಉದಾಹರಣೆ ಎಂದರೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಉಪವಾಸ ಸತ್ಯಾಗ್ರಹ. ವಿದ್ಯಾರ್ಥಿಗಳ ಹಿತಕ್ಕಾಗಿ ಉಪವಾಸ ಮಾಡುತ್ತಿರುವ ಒಬ್ಬ ನಾಯಕನ ಮಾತನ್ನೂ ಕೇಳಿಸಿಕೊಳ್ಳದೇ ಆ ಪ್ರತಿಭಟನೆಯ ಧ್ವನಿಯನ್ನು ರಂಪಾಟ ಎಂದು ಕರೆಯುವ ವ್ಯವಸ್ಥೆಯ ಕಾಲದಲ್ಲಿ ನಾವಿದ್ದೇವೆ. ಇಂತಹ ಸಮಯದಲ್ಲಿ ಚನ್ನಪ್ಪ ವಾಲೆಮನೆ ಅವರ ಕೃತಿ ಹೆಚ್ಚು ಪ್ರಸ್ತುತವಾಗುತ್ತದೆ. ದಮನಿತರ ಶೋಷಿತರ ಪರವಾಗಿ ಇಳಿಯುವುದೇ ಪ್ರತಿಭಟನೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಜಿ.ಎನ್. ಪ್ರಕಾಶ್, ಜಿ.ಕಿರಣ್ ಕುಮಾರ್, ಸುರೇಖಾ ಮುರಳೀಧರ್, ಗೀತಾಂಜಲಿ ಪ್ರಕಾಶನದ ಮೋಹನ್ ಸೇರಿದಂತೆ ಹಲವರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಲಿರುವ ಡಾ.ಸಿ. ಚನ್ನಪ್ಪ ವಾಲೆಮನೆ ದಂಪತಿಗಳನ್ನು ಸನ್ಮಾನಿಸಲಾಯಿತು. ಮತ್ತು ಅವರ ಶಿಷ್ಯರು ಅವರ ಕುರಿತು ಮಾತನಾಡಿದರು. ದೀಪಶ್ರೀ ಸ್ವಾಗತಿಸಿದರು.
