Homeಜಿಲ್ಲೆನೇಮಕಾತಿಯಲ್ಲಿ ಅಕ್ರಮ ಸರ್ಕಾರದಿಂದ ಯಾವುದೇ ಕ್ರಮ ಇಲ್ಲ; ಶಾಸಕ

ನೇಮಕಾತಿಯಲ್ಲಿ ಅಕ್ರಮ ಸರ್ಕಾರದಿಂದ ಯಾವುದೇ ಕ್ರಮ ಇಲ್ಲ; ಶಾಸಕ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.1

ವಿವಿಧ ಇಲಾಖೆಯ ನೇಮಕಾತಿ ಸಂಬಂಧಪಟ್ಟಂತೆ ಕೆಪಿಎಸ್‌ಸಿ ಯಲ್ಲಿ ಅನೇಕ ಹಗರಣಗಳು ನಡೆಯುತ್ತಿದ್ದು, ಇದುವರೆಗೂ ಕಾಂಗ್ರೆಸ್ ಸರ್ಕಾರ ಯಾವುದೇ ಕಠಿಣ ಕ್ರಮಕೈಗೊಂಡಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ದೂರಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2015 ರಿಂದ 2018 ರವರೆಗೆ ಕೆಪಿಎಸ್‌ಸಿ ಮತ್ತು ಕೆಇಎ ಯಿಂದ ನಡೆದ ಎಫ್‌ಡಿಎ, ಎಸ್‌ಡಿಎ ಸೇರಿದಂತೆ ವಿವಿಧ ಇಲಾಖೆ ಗೆಜೆಟೆಡ್ ನೇಮಕಾತಿಯಲ್ಲಿ ಹಗರಣವಾಗುತ್ತ ಬಂದಿದ್ದು, 2016 ರಲ್ಲಿ ಪಿಯುಸಿ ಹಾಗೂ 2018 ರಲ್ಲಿ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದರೂ ಕಾಂಗ್ರೆಸ್ ಸರ್ಕಾರ ಯಾವುದೇ ಕಠಿಣ ಕಾನೂನು ತರಲಿಲ್ಲ.

ಇತ್ತೀಚಿನ ಪಶುಸಂಗೋಪನಾ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಅಕ್ರಮಗಳ ಆರೋಪ ಕೇಳಿಬಂದಿದ್ದು, ಸರ್ಕಾರಿ ಹುದ್ದೆ ಪಡೆಯುವ ಕನಸನ್ನು ಹೊಂದಿರುವ ವಿದ್ಯಾರ್ಥಿಗಳೊಂದಿಗೆ ಸರ್ಕಾರ ಆಟವಾಡುತ್ತಿದೆ. ಇಂತಹ ವ್ಯವಸ್ಥೆಗೆ ನಿರ್ಮಾಣವಾಗಲು ಸರ್ಕಾರವೇ ನೇರ ಹೊಣೆ ಎಂದು ದೂರಿದರು.

ಇನ್ನೂ ಎಇ ನೇಮಕಾತಿ ಪ್ರಕರಣದ ತನಿಖೆಗೆ ವಿಜಯ್ ಕುಮಾರ್ ಕುಚನೂರೆ ನೇತೃತ್ವದ ಸಮಿತಿ ಸುಮಾರು 40 ಸಭೆ ನಡೆಸಿ, ಸಿಸಿಟಿವಿ ದೃಶ್ಯಾವಳಿ, ಓಎಂಆರ್ ಶೀಟ್‌ಗಳು ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ 498 ಪುಟಗಳ ವರದಿ ಸಲ್ಲಿಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಕೇಂದ್ರದಂತೆ ರಾಜ್ಯದಲ್ಲೂ ಪರೀಕ್ಷೆ ಅಕ್ರಮ ತಡೆಯಲು ಕಾನೂನು ತನ್ನಿ:

ಸಾರ್ವಜನಿಕ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ತಂದಿರುವ ಸಾರ್ವಜನಿಕ ಪರೀಕ್ಷೆಗಳ (ತಿದ್ದುಪಡಿ) ಮಸೂದೆ ಮಾದರಿಯಲ್ಲೇ ಕರ್ನಾಟಕ ಸರ್ಕಾರವೂ ಕೆಪಿಎಸ್‌ಸಿ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳ ಅಕ್ರಮಗಳಿಗೆ ಕಡಿವಾಣ ಹಾಕುವ ಕಠಿಣ ಕಾನೂನು ತರಬೇಕು.

ನೀಟ್ ಪರೀಕ್ಷೆಯ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2024ರಲ್ಲಿ ಕಠಿಣ ಕಾನೂನು ರೂಪಿಸಿ, ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದ್ದು, ರಾಜ್ಯಸಭೆಯಲ್ಲಿಯೂ ಅನುಮೋದನೆ ಪ್ರಕ್ರಿಯೆ ನಡೆದಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ನಂದನ್ ನೀಲೇಕಣಿ, ಎಸ್. ಸೋಮನಾಥ್, ರಘುನಾಥ್ ಶೇಖರ್, ಬಿ. ಕಾಮಕೋಟಿ, ಅನಿತಾ ಕರ್ವಾಲ್ ಹಾಗೂ ಅಮೃತ್ ಲಾಲ್ ಮೀನಾ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಟಾಸ್ಕ್ ಫೋರ್ಸ್ ರಚಿಸಿರುವುದು ಪ್ರಶಂಸನೀಯ.

ಅಧಿವೇಶನದಲ್ಲೇ ಕಠಿಣ ಕಾನೂನು ತರಲಿ:

ಕೇಂದ್ರ ಸರ್ಕಾರದಂತೆ ರಾಜ್ಯದಲ್ಲೂ ಬಲಿಷ್ಠ ಕಾನೂನು ಜಾರಿಗೆ ತರಬೇಕು. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲೇ ಈ ಸಂಬಂಧ ಮಸೂದೆ ಮಂಡಿಸಬೇಕು. ಕಾನೂನು ತರಲು ಸರ್ಕಾರ ವಿಫಲವಾದರೆ ವಿದ್ಯಾರ್ಥಿಗಳ ಹಿತಾಸಕ್ತಿಯ ಪರವಾಗಿ ಬಿಜೆಪಿ ವಿಧಾನಮಂಡಲದ ಒಳಗೂ ಹೊರಗೂ ಹೋರಾಟವನ್ನು ತೀವ್ರಗೊಳಿಸಲಿದ್ದು, ಕೆಪಿಎಸ್‌ಸಿ ನೇಮಕಾತಿ ಹಗರಣಗಳು ಮತ್ತು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಜನರ ಮುಂದೆ ಬಯಲು ಮಾಡುವ ಅಭಿಯಾನವನ್ನು ನಡೆಸುವುದಾಗಿ ತಿಳಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments