ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜೂ.27
ಜಾತಿ, ಧರ್ಮ, ದ್ವೇಷ ಇರುವುದೆಲ್ಲಾ ರಾಜಕೀಯಕ್ಕೆ ಮಾತ್ರ ಮನುಷ್ಯ ಬಂಧುತ್ವಕ್ಕಲ್ಲವೆಂದು ನಾಗರೀಕ ಸಮಾಜ ಮತ್ತೇ ಮತ್ತೇ ಸಾಬೀತು ಮಾಡುತ್ತಲೆ ಇದೆ. ಅದರಂತೆ ಶಿಕಾರಿಪುರದಲ್ಲಿ ಅಂತಹ ಮನುಷ್ಯ ಬಂಧುತ್ವಕ್ಕೆ ಒಂದು ಘಟನೆ ಸಾಕ್ಷಿಯಾಗಿದ್ದು, ನಿಜವಾದ ಧರ್ಮ ಮಾತ್ರ, ಇನ್ನೊಂದು ಧರ್ಮವನ್ನು ಪ್ರೀತಿಸಲು ಸಾಧ್ಯವೆಂಬುದು ಸಾರಿದೆ.
ಗಮನಿಸಿ: 6 ತಿಂಗಳಲ್ಲಿ 24.55 ಲಕ್ಷದ ಗಾಂಜಾ ಪತ್ತೆ-ನಾಶಕ್ಕೆ ಪೊಲೀಸ್ ಇಲಾಖೆ ಮುಂದು
ಒಂದೇ ಒಂದು ಮುಸ್ಲಿಂ ಕುಟುಂಬವೂ ಇಲ್ಲದ ಗ್ರಾಮವೊಂದರಲ್ಲಿ ಇಡೀ ಬಂಜಾರ ಸಮುದಾಯದ ಜನರು ಒಟ್ಟಾಗಿ ಅತ್ಯಂತ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ಮೊಹರಂ ಹಬ್ಬವನ್ನು ಆಚರಿಸುವ ಮೂಲಕ ಕೋಮು ಸೌಹಾರ್ದತೆಯನ್ನು ತೋರಿದ್ದು, ಇಡೀ ನಾಗರೀಕ ಸಮಾಜಕ್ಕೆ ಮಾದರಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ಈ ವಿಶಿಷ್ಟ ಮತ್ತು ಭಾವೈಕ್ಯತೆಯ ಆಚರಣೆ ನಡೆದಿದೆ. ಈ ತಾಂಡಾದಲ್ಲಿ ಸಂಪೂರ್ಣವಾಗಿ ಬಂಜಾರ ಸಮುದಾಯದವರೇ ವಾಸವಾಗಿದ್ದು, ಇಲ್ಲಿ ಯಾವುದೇ ಮುಸ್ಲಿಂ ಮನೆಗಳಿಲ್ಲ. ಆದಾಗ್ಯೂ, ಇಲ್ಲಿನ ಜನರಿಗೆ ಮೊಹರಂ ಹಬ್ಬದ ಮೇಲಿರುವ ಭಕ್ತಿ ಹಾಗೂ ನಂಬಿಕೆ ಮಾತ್ರ ಅನನ್ಯವಾದದ್ದು. ಪ್ರತಿ ವರ್ಷದಂತೆ ಈ ಬಾರಿಯೂ ಇಡೀ ತಾಂಡಾದ ಜನತೆ ಒಂದಾಗಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ.
ಮೂರು ದಿನಗಳ ಕಾಲ ಪೂಜೆ: ಶೀರಿಹಳ್ಳಿ ತಾಂಡಾದಲ್ಲಿ ಸತತ ಮೂರು ದಿನಗಳ ಕಾಲ ಮೊಹರಂ ಆಚರಣೆಯ ಸಡಗರ ಮನೆ ಮಾಡಿತ್ತು. ಬಂಜಾರ ಸಮುದಾಯದ ಹಿರಿಯರು ಹಾಗೂ ಯುವಕರು ಸೇರಿ ಗ್ರಾಮದ ಖಾಜಾ ಬಂಧನ್ ದೇವಸ್ಥಾನದಲ್ಲಿ ಸಕಲ ಸಿದ್ಧತೆಗಳೊಂದಿಗೆ ‘ಅಲೈ ದೇವರನ್ನು’ ಪ್ರತಿಷ್ಠಾಪಿಸಿ, ಮೂರು ದಿನಗಳ ಕಾಲ ನಿಷ್ಠೆಯಿಂದ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಹಾಗೂ ನೈವೇದ್ಯಗಳನ್ನು ಸಲ್ಲಿಸಿದರು.
ಬಂಜಾರ ಸಂಪ್ರದಾಯದ ಗಾಯನ: ಮೆರವಣಿಗೆಯ ಉದ್ದಕ್ಕೂ ಬಂಜಾರ ಸಮುದಾಯದ ಮಹಿಳೆಯರು ಮತ್ತು ಪುರುಷರು ತಮ್ಮದೇ ಆದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಸಾಂಸ್ಕೃತಿ ಹಾಡುಗಳು ಹಾಗೂ ಭಜನೆಗಳ ಮೂಲಕ ಅಲೈ ದೇವರಿಗೆ ವಿಶಿಷ್ಟವಾಗಿ ಭಕ್ತಿ ಸಮರ್ಪಿಸಿದರು. ಇದು ಕೇವಲ ಧಾರ್ಮಿಕ ಆಚರಣೆಯಾಗಿರದೆ ಕಲೆಯ ಸಮ್ಮಿಲನವಾಗಿತ್ತು.
ಕಷ್ಟಗಳನ್ನು ನೀಗಿಸುವ ದೇವರೆಂಬ ನಂಬಿಕೆ: ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ತಾಂಡಾದ ಭಕ್ತರು ತಮ್ಮ ಜೀವನದ ಕಷ್ಟ-ಕಾರ್ಪಣ್ಯಗಳನ್ನು, ಅನಾರೋಗ್ಯದ ಸಮಸ್ಯೆಗಳನ್ನು ಅಲೈ ದೇವರ ಮುಂದೆ ಪ್ರಾರ್ಥಿಸಿಕೊಂಡು ಹೇಳಿಕೊಳ್ಳುತ್ತಾರೆ. ಇದೇ ವೇಳೆ ದೇವರಿಂದ `ಹೇಳಿಕೆ’ (ಅಪ್ಪಣೆ ಅಥವಾ ಭವಿಷ್ಯದ ನುಡಿ) ಕೇಳುವ ವಿಶಿಷ್ಟ ಸಂಪ್ರದಾಯವೂ ಇಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.ಮೂರನೇ ದಿನದಂದು ತಾಂಡಾದ ಬೀದಿ ಬೀದಿಗಳಲ್ಲಿ ಅಲೈ ದೇವರ ಅದ್ದೂರಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ತಡೋ ದೇವರ ಬಳಿ ಹೋಗಿ ಪೂಜೆ ಸಲ್ಲಿಸಲಾಗುತ್ತೆ ನಂತರ, ಮೂರು ದಿನಗಳ ಕಾಲ ಶ್ರದ್ಧೆಯಿಂದ ವ್ರತ ಆಚರಿಸಿ ಧರಿಸಿದ್ದ `ಅಲೈ ಮಾಲೆ’ಯನ್ನು ಭಕ್ತರು ಕೆರೆ ನೀರಿನಲ್ಲಿ ವಿಸರ್ಜನೆ ಮಾಡಿದರು. ನೀರಲ್ಲಿ ಬಿಟ್ಟು ಪೂಜೆ ಸಲ್ಲಿಸುವುದರೊಂದಿಗೆ ಈ ವರ್ಷದ ಸೌಹಾರ್ದತೆಯ ಮೊಹರಂ ಆಚರಣೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
