Homeಜಿಲ್ಲೆಕಾಂತರಾಜು ವರದಿ ತಿರಸ್ಕೃತರಿಂದ ಸಾಮಾಜಿಕ ಸಮೀಕ್ಷೆ ವರದಿ ಜಾರಿ ನಿರೀಕ್ಷಿಸಲು ಸಾಧ್ಯವೇ?: ರಘು ಕೌಟಿಲ್ಯ

ಕಾಂತರಾಜು ವರದಿ ತಿರಸ್ಕೃತರಿಂದ ಸಾಮಾಜಿಕ ಸಮೀಕ್ಷೆ ವರದಿ ಜಾರಿ ನಿರೀಕ್ಷಿಸಲು ಸಾಧ್ಯವೇ?: ರಘು ಕೌಟಿಲ್ಯ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.13

ಈ ಹಿಂದೆ ಕಾಂತರಾಜು ವರದಿಯನ್ನು ಪ್ರಬಲವಾಗಿ ವಿರೋಧಿಸಿದ್ದ ಡಿ.ಕೆ.ಶಿವಕುಮಾರ್ ಈಗ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಸಮೀಕ್ಷೆ ವರದಿಯನ್ನು ಜಾರಿ ಮಾಡುವ ಮನಸ್ಸು ಮಾಡುತ್ತಾರೆಯೇ? ಎಂದು ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಪ್ರಶ್ನಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಗಣತಿ ಮತ್ತು ಸಾಮಾಜಿಕ ಸಮೀಕ್ಷೆಯ ಹೆಸರಿನಲ್ಲಿ ಹಿಂದುಳಿದ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರ ವ್ಯವಸ್ಥಿತವಾಗಿ ವಂಚನೆ ಮಾಡಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಸಮೀಕ್ಷೆ ವರದಿಯನ್ನು ತಕ್ಷಣ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸಿದ್ದರಾಮಯ್ಯನರವನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಆದರೆ ಈಗೀನ ಮುಖ್ಯಮಂತ್ರಿ ಈ ವರದಿ ಮಾಡುತ್ತಾರೆ ಎಂಬ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರೇ ಈ ಸಮೀಕ್ಷೆಯನ್ನು ತಕ್ಷಣವೇ ಜಾರಿ ಮಾಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದರು.

ಜಾತಿ ಗಣತಿಯ ಹೆಸರಿನಲ್ಲಿ ಜನರ “ಮೂಗಿಗೆ ತುಪ್ಪ ಸವರಿ”, ಆಯೋಗ ಹಾಗೂ ಸಮೀಕ್ಷಾ ವರದಿಯನ್ನು ರಾಜಕೀಯ ಅಧಿಕಾರ ಉಳಿಸಿಕೊಳ್ಳಲು ಪಾದರಕ್ಷೆಯಂತೆ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಅವಧಿಯಲ್ಲಿ ಸಿದ್ಧವಾದ ವರದಿಯನ್ನು ಏಳು ವರ್ಷ ಅಧಿಕಾರದಲ್ಲಿದ್ದರೂ ಸಿದ್ದರಾಮಯ್ಯ ಸ್ವೀಕರಿಸಲಿಲ್ಲ. ವರದಿ ಜಾರಿಗೊಳಿಸುವುದು ಇರಲಿ, ಸ್ವೀಕರಿಸುವ ಮನಸ್ಸನ್ನೂ ಮಾಡಲಿಲ್ಲ. ಇದು ಪಲಾಯನವಾದ ಹಾಗೂ ಆತ್ಮವಂಚನೆಯಾಗಿದೆ ಎಂದರು.

ಹಿಂದುಳಿದವರ ಹೆಸರಿನಲ್ಲಿ ಸುಮಾರು 165 ಕೋಟಿ ರೂಪಾಯಿ ನೀರಿಗೆ ಹೋಮ ಮಾಡಲಾಗಿದೆ. ಬಳಿಕ ಮತ್ತಷ್ಟು ವೆಚ್ಚ ಸೇರಿ ಒಟ್ಟಾರೆ 600 ರಿಂದ 650 ಕೋಟಿ ರೂಪಾಯಿ ಜಾತಿ ಗಣತಿ ಹಾಗೂ ಸಾಮಾಜಿಕ ಸಮೀಕ್ಷೆಗೆ ಖರ್ಚಾಗಿದೆ ಎಂದು ಹೇಳಿದ ಅವರು, ಮೂರು ತಿಂಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿ ಸಮೀಕ್ಷೆ ಪೂರ್ಣಗೊಳಿಸುತ್ತೇವೆ ಎಂದು ನೀಡಿದ್ದ ಭರವಸೆ ಈಡೇರಲಿಲ್ಲ ಎಂದರು.

ಮೂರು ತಿಂಗಳು ಮಾತ್ರವಲ್ಲ, ಆರು ತಿಂಗಳು ಹಾಗೂ ಒಂದು ವರ್ಷ ಕಳೆದರೂ ಸಮೀಕ್ಷೆ ಪೂರ್ಣಗೊಂಡಿಲ್ಲ. ತಮ್ಮ ಮಾಹಿತಿಯ ಪ್ರಕಾರ ಸುಮಾರು ಒಂದು ಕೋಟಿ ಜನರ ಸಮೀಕ್ಷೆಯೇ ಆಗದೆ, ಅಪೂರ್ಣ ವರದಿಯಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆಯಾಗಬಹುದು ಎಂಬ ಆತಂಕದಿಂದ ವರದಿಯನ್ನು ಉದ್ದೇಶಪೂರ್ವಕವಾಗಿ ಸ್ವೀಕರಿಸಲಿಲ್ಲ. ದೆಹಲಿಯಿಂದ ರಾಜೀನಾಮೆ ನೀಡುವಂತೆ ಸೂಚನೆ ಬಂದ ನಂತರವೇ ತರಾತುರಿಯಲ್ಲಿ ವರದಿಯನ್ನು ತರಿಸಿಕೊಳ್ಳಲಾಯಿತು. ಇದರಿಂದ ವರದಿ ಬಹಳ ಹಿಂದೆಯೇ ಸಿದ್ಧವಾಗಿದ್ದರೂ ಅದನ್ನು ಸ್ವೀಕರಿಸುವ ಮನಸ್ಸು ಸಿದ್ದರಾಮಯ್ಯ ಅವರಿಗೆ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಹಿಂದುಳಿದ, ಶೋಷಿತ ಹಾಗೂ ದಮನಿತ ಸಮುದಾಯಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಇದ್ದದ್ದು ಕೇವಲ ಕೃತಕ ಪ್ರೀತಿ ಮತ್ತು ಮೊಸಳೆ ಕಣ್ಣೀರು ಮಾತ್ರ. ಈ ವಿಷಯ ಈಗ ನ್ಯಾಯಾಲಯದ ಮೆಟ್ಟಿಲೇರಿದೆ ಎಂದರು.

ಸಾಮಾಜಿಕ ಸಮೀಕ್ಷೆ ನಡೆಸುವುದು ಸಂವಿಧಾನಬದ್ಧ ಪ್ರಕ್ರಿಯೆಯಾಗಿದ್ದು, ಹತ್ತು ವರ್ಷಕ್ಕೊಮ್ಮೆ ಸರ್ಕಾರ ಆಯೋಗದ ಮೂಲಕ ಸಾಮಾಜಿಕ ಸ್ಥಿತಿಗತಿಯ ವರದಿ ಸಿದ್ಧಪಡಿಸುವುದು ಕಡ್ಡಾಯವಾಗಿದೆ. ಆದರೆ ಅದು ನಡೆಯದೆ ಇರುವುದು ದುರಂತ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments