ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.18
ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಸುಲಭ ಮತ್ತು ಸಮಗ್ರ ಆಡಳಿತ ಸೇವೆ ಒದಗಿಸುವ ಉದ್ದೇಶದಿಂದ ನಗರದ ಎಲ್ಲಾ ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು ನೂತನ ‘ಆಡಳಿತ ಸೌಧ’ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸಚಿವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ಚೇತನ್ ಕೆ. ಗೌಡ ಅವರು, ಯೋಜನೆಗೆ ಅಗತ್ಯ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡುವಂತೆ ಕೋರಿದರು. ಇದೇ ವೇಳೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಸವಿಸ್ತಾರ ಯೋಜನಾ ವರದಿ (ಡಿಪಿಆರ್) ಹಾಗೂ ಪೂರಕ ದಾಖಲೆಗಳ ಪ್ರತಿಗಳನ್ನು ಸಚಿವರಿಗೆ ಹಸ್ತಾಂತರಿಸಿದರು.
ಗಮನಿಸಿ: ಜಿಲ್ಲೆಯಲ್ಲಿ ಎಸ್ಐಆರ್ ಪರಿಷ್ಕರಣೆ: ಶೇ.99.9 ರಷ್ಟು ಇ-ಫಾರ್ಮ್ ವಿತರಣೆ
ಪ್ರಸ್ತುತ ಶಿವಮೊಗ್ಗ ನಗರದ ಹಲವು ಪ್ರಮುಖ ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ವೆಚ್ಚವಾಗುತ್ತಿದ್ದು, ಸಾರ್ವಜನಿಕ ಹಣದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಅಲ್ಲದೆ, ವಿವಿಧ ಇಲಾಖೆಗಳ ಕಚೇರಿಗಳು ನಗರದ ವಿವಿಧ ಭಾಗಗಳಲ್ಲಿ ಚದುರಿರುವ ಕಾರಣ ಸಾರ್ವಜನಿಕರು, ರೈತರು ಹಾಗೂ ಗ್ರಾಮೀಣ ಭಾಗದ ಜನರು ಒಂದೇ ದಿನದಲ್ಲಿ ಹಲವು ಇಲಾಖೆಗಳ ಕೆಲಸ ಮುಗಿಸಲು ಅನಗತ್ಯ ಓಡಾಟ ನಡೆಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಪ್ರಸ್ತಾವಿತ ಆಡಳಿತ ಸೌಧ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಾಗವು ಶಿವಮೊಗ್ಗದ ಮುಖ್ಯ ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ದೂರದಲ್ಲಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಜನರಿಗೆ ಸುಲಭವಾಗಿ ತಲುಪಬಹುದಾದ ಕೇಂದ್ರ ಸ್ಥಾನದಲ್ಲಿದೆ. ಯೋಜನೆ ಜಾರಿಯಾದರೆ ಸಾರ್ವಜನಿಕ ಸೇವೆಗಳು ಮತ್ತಷ್ಟು ಸುಗಮವಾಗುವುದರ ಜೊತೆಗೆ ಸರ್ಕಾರದ ಬಾಡಿಗೆ ವೆಚ್ಚವೂ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಚೇತನ್ ಕೆ. ಗೌಡ ಸಚಿವರ ಗಮನಕ್ಕೆ ತಂದರು.
ಮನವಿಗೆ ಸಚಿವ ಸತೀಶ್ ಜಾರಕಿಹೊಳಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಯೋಜನೆಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಉಪಸ್ಥಿತರಿದ್ದರು.
