Homeಜಿಲ್ಲೆಜಿಲ್ಲೆಯಲ್ಲಿ ಶೇ.44 ರಷ್ಟು ಮಳೆ ಕೊರತೆ-ಶೇ.28.09 ಬಿತ್ತನೆ; ಈ ಬಗ್ಗೆ ಡಿಸಿ ಹೇಳಿದ್ದೇನು?

ಜಿಲ್ಲೆಯಲ್ಲಿ ಶೇ.44 ರಷ್ಟು ಮಳೆ ಕೊರತೆ-ಶೇ.28.09 ಬಿತ್ತನೆ; ಈ ಬಗ್ಗೆ ಡಿಸಿ ಹೇಳಿದ್ದೇನು?

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜುಲೈ 18

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದ್ದು ಜಿಲ್ಲೆಯಲ್ಲೂ ಉದ್ಭವಿಸಿರುವ ಮಳೆಯ ಕೊರತೆಯನ್ನು ಅತ್ಯಂತ ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತವು ಸಂಪೂರ್ಣ ಸಜ್ಜಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹಲವು ಪ್ರಮುಖ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ :
ಜಿಲ್ಲೆಯ ಜಲಾಶಯಗಳು ಮತ್ತು ಕೆರೆಗಳಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ.
ಪರ್ಯಾಯ ವ್ಯವಸ್ಥೆ: ಕುಡಿಯುವ ನೀರಿನ ಅಭಾವವಿರುವ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಕ್ಷಣವೇ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಟ್ಯಾಂಕರ್‌ಗಳ ಮೂಲಕ ಅಥವಾ ನೀರು ಸರಬರಾಜು ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ.
ಜಿಲ್ಲೆಯ ಮಹಾನಗರಪಾಲಿಕೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಇಲ್ಲ. ಆನವಟ್ಟಿಗೆ ಮಾತ್ರ ಬೋರ್ ವೆಲ್ ನೀರು ವ್ಯವಸ್ಥೆ ಮಾಡಲಾಗಿದ್ದು ಇನ್ನುಳಿದಂತೆ ನದಿಮೂಲದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಸೊರಬ, ಶಿರಾಳಕೊಪ್ಪ, ಹೊಸನಗರಕ್ಕೆ ಇನ್ನೆರಡು ತಿಂಗಳು ಕುಡಿಯುವ ನೀರಿನ ಕೊರತೆ ಇಲ್ಲ ಹಾಗೂ ಉಳಿದೆಡೆ 6-8 ತಿಂಗಳು ಸಮಸ್ಯೆ ಇಲ್ಲ.
ಒಟ್ಟು 44 ಗ್ರಾಮ ಪಂಚಾಯತ್‌ಗಳಲ್ಲಿ ಜನವರಿಯಿಂದ ಜೂನ್ ಮಾಹೆವರೆಗೆ ಒಟ್ಟು 97 ಬೋರ್ ವೆಲ್ ಕೊರೆಸಲಾಗಿದೆ. ಜೂನ್ ಮಾಹೆಯಲ್ಲಿ 27 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 37 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಸಲಾಗಿದೆ. ಶಿವಮೊಗ್ಗ, ಭದ್ರಾವತಿ, ಸೊರಬ, ಹೊಸನಗರ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಕ್ರಮ ವಹಿಸಲಾಗಿದೆ.

ಜಿಲ್ಲಾಧಿಕಾರಿಗಳ ಕರೆ:

“ಜಿಲ್ಲೆಯಲ್ಲಿನ ಮಳೆ ಕೊರತೆಯನ್ನು ನಿರ್ವಹಿಸಲು ಜಿಲ್ಲಾಡಳಿತವು ಸಿದ್ದತೆ ಮಾಡಿಕೊಂಡಿದೆ. ಸಾರ್ವಜನಿಕರು ಹಾಗೂ ರೈತಬಾಂಧವರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ನೀರನ್ನು ಅತ್ಯಂತ ಮಿತವಾಗಿ ಬಳಸಬೇಕು.

  • ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ, ಶಿವಮೊಗ್ಗ

ಕೃಷಿ :
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ರೈತರು ಪರಿಸ್ಥಿತಿಗೆ ತಕ್ಕಂತೆ ಪರ್ಯಾಯ ಬೆಳೆ ಹಾಗೂ ಕಡಿಮೆ ಅವಧಿಯ ತಳಿಗಳ ಕಡೆಗೆ ಗಮನಹರಿಸಬೇಕೆಂದು ತಿಳಿಸಲಾಗಿದೆ.

ಜೂನ್ ತಿಂಗಳ ಆರಂಭದಲ್ಲಿ ತೀವ್ರ ಮಳೆ ಅಭಾವ ಕಂಡುಬಂದಿದ್ದರೂ, ಜೂನ್ ಅಂತ್ಯ ಹಾಗೂ ಜುಲೈ ಮೊದಲ ವಾರದಲ್ಲಿ ಬಿದ್ದ ಮಳೆಯು ಬಿತ್ತನೆಗೆ ಉತ್ತಮ ಅವಕಾಶ ಕಲ್ಪಿಸಿತ್ತು. ಆದರೆ, ಕಳೆದ ಒಂದು ವಾರದಿಂದ ಮಳೆ ಸಂಪೂರ್ಣ ಕ್ಷೀಣಿಸಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಭತ್ತದ ಸಸಿಮಡಿ ತಯಾರಿಕೆ ಹಿನ್ನಡೆಯಾಗಿದ್ದು, ಈಗಾಗಲೇ ಶಿಕಾರಿಪುರ ಮತ್ತು ಸೊರಬ ತಾಲ್ಲೂಕುಗಳಲ್ಲಿ ಬಿತ್ತನೆಯಾಗಿರುವ ಖುಷ್ಕಿ ಬೆಳೆಗಳಿಗೆ ತೇವಾಂಶದ ಕೊರತೆ ಎದುರಾಗಿದೆ.

ಜಿಲ್ಲೆಯಲ್ಲಿ ಶೇ. 44 ರಷ್ಟು ಮಳೆ ಕೊರತೆ :
ಭದ್ರಾವತಿ ತಾಲ್ಲೂಕಿನಲ್ಲಿ ಶೇ. 54, ಸೊರಬ ಶೇ. 47, ಹೊಸನಗರ ಶೇ. 45, ಶಿಕಾರಿಪುರ: ಶೇ. 38, ತೀರ್ಥಹಳ್ಳಿ ಶೇ. 36, ಶಿವಮೊಗ್ಗ ಶೇ. 26, ಸಾಗರ ಶೇ. 18 ಮಳೆ ಕೊರತೆ ಇದೆ.

ಜೂನ್ 1 ರಿಂದ ಜುಲೈ 17 ರವರೆಗಿನ ಅವಧಿಯಲ್ಲಿ ಜಿಲ್ಲೆಯ ವಾಡಿಕೆ ಮಳೆ 894.7 ಮಿ.ಮೀ ಆಗಬೇಕಿತ್ತು. ಆದರೆ ಕೇವಲ 501.5 ಮಿ.ಮೀ ನಷ್ಟು ಮಾತ್ರ ಮಳೆಯಾಗಿದ್ದು, ಒಟ್ಟಾರೆ ಶೇ. 44 ರಷ್ಟು ಮಳೆ ಕೊರತೆ ದಾಖಲಾಗಿದೆ. ಭದ್ರಾ ಜಲಾಶಯ ಇನ್ನು ಭರ್ತಿಯಾಗದ ಕಾರಣ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬಿತ್ತನೆಗೆ ಹಿನ್ನಡೆಯಾಗಿದೆ.
ಗುರಿಯ ಶೇ. 28.09 ರಷ್ಟು ಮಾತ್ರ ಬಿತ್ತನೆ :ಮಳೆ ಅಭಾವದಿಂದಾಗಿ ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳ ಬಿತ್ತನೆ ತೀವ್ರ ಕುಂಠಿತಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 1,13,458 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಜುಲೈ 17 ರ ವರೆಗೆ ಕೇವಲ 31,868 ಹೆಕ್ಟೇರ್ ಶೇ. 28.09 ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.
ಭತ್ತ 66,200 ಹೆಕ್ಟೇರ್ ಗುರಿಗೆ ಕೇವಲ 8,743 ಹೆಕ್ಟೇರ್ ಶೇ. 13.21 ಬಿತ್ತನೆಯಾಗಿದೆ. ಮೆಕ್ಕೆಜೋಳ 45,807 ಹೆಕ್ಟೇರ್ ಗುರಿಗೆ 22,405 ಹೆಕ್ಟೇರ್ ಶೇ. 48.91 ಬಿತ್ತನೆಯಾಗಿದೆ. ರಾಗಿ 400 ಹೆಕ್ಟೇರ್ ಗುರಿಗೆ 182 ಹೆಕ್ಟೇರ್ ಶೇ. 45.50 ಬಿತ್ತನೆಯಾಗಿದ್ದು ಇತರ ಬೆಳೆಗಳು 1,051 ಹೆಕ್ಟೇರ್ ಗುರಿಗೆ 538 ಹೆಕ್ಟೇರ್ ಶೇ. 51.18 ಬಿತ್ತನೆಯಾಗಿದೆ.

ಗಮನಿಸಿ: ಜಿಲ್ಲೆಯಲ್ಲಿ ನೂತನ ‘ಆಡಳಿತ ಸೌಧ’ ನಿರ್ಮಾಣಕ್ಕೆ ಡಿಪಿಆರ್ ಸಲ್ಲಿಕೆ

ರೈತರಿಗೆ ಕೃಷಿ ಇಲಾಖೆಯ ಪ್ರಮುಖ ಸಲಹೆಗಳು:

ಪರ್ಯಾಯ ಬೆಳೆ ಪದ್ಧತಿ: ಮೆಕ್ಕೆಜೋಳದ ಬಿತ್ತನೆ ಅವಧಿ ಮುಗಿಯುತ್ತಾ ಬಂದಿರುವುದರಿAದ ಕಡಿಮೆ ನೀರು ಬೇಡುವ ಪರ್ಯಾಯ ಬೆಳೆಗಳಾದ ರಾಗಿ ತಳಿಗಳು (GPU-28, INDAF-9, KMR-204) ಹಾಗೂ ದ್ವಿದಳ ಧಾನ್ಯಗಳಾದ ಹೆಸರು, ಅಲಸಂದೆ, ಉದ್ದು ಇವುಗಳನ್ನು ಬೆಳೆಯಬಹುದು.
ಭತ್ತದ ಅಲ್ಪಾವಧಿ ತಳಿಗಳು: ಭತ್ತದ ನಾಟಿಗೆ ಆಗಸ್ಟ್ ಅಂತ್ಯದವರೆಗೆ ಅವಕಾಶವಿದ್ದು, ನೀರಿನ ಲಭ್ಯತೆಗೆ ಅನುಗುಣವಾಗಿ ಅಲ್ಪಾವಧಿ ತಳಿಗಳಾದ IR-64, RNR-15048, BPT-5204, JGL-1798, MTU-1001 ಮತ್ತು MTU-1010 ಅನ್ನು ಬೆಳೆಯಲು ಸೂಚಿಸಲಾಗಿದೆ.
ಸ್ವಂತ ನೀರಾವರಿ ಸೌಲಭ್ಯ ಹೊಂದಿರುವ ರೈತರು (ಕೊಳವೆ ಬಾವಿ, ತೆರೆದ ಬಾವಿ, ಕೃಷಿ ಹೊಂಡ) ಬೆಳೆಗಳ ತೇವಾಂಶ ಕೊರತೆಯ ಸಂದಿಗ್ಧ ಹಂತದಲ್ಲಿ ತುಂತುರು ಅಥವಾ ಹನಿ ನೀರಾವರಿ ಮೂಲಕ ನೀರು ಹಾಯಿಸಬೇಕು.
ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳು ಹಾಗೂ ಖಾಸಗಿ ಮಾರಾಟಗಾರರಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದೆ. ಪ್ರಸ್ತುತ ರೈತ ಸಂಪರ್ಕ ಕೇಂದ್ರಗಳಲ್ಲಿ 2,796 ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ ಜಿಲ್ಲೆಯಾದ್ಯಂತ ಒಟ್ಟು 34,562 ಮೆಟ್ರಿಕ್ ಟನ್ ವಿವಿಧ ಗ್ರೇಡ್‌ಗಳ ರಸಗೊಬ್ಬರ ಲಭ್ಯವಿದೆ.

ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ-1 ವರ್ಷಕ್ಕಾಗುವಷ್ಟು ಮೇವು ಲಭ್ಯತೆ:
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಜಾನುವಾರುಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು, ಮುಂದಿನ 50 ವಾರಗಳವರೆಗೆ (ಸುಮಾರು ಒಂದು ವರ್ಷ) ಯಾವುದೇ ಮೇವಿನ ಕೊರತೆ ಇಲ್ಲ.
21ನೇ ಜಾನುವಾರು ಗಣತಿಯ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಜಾನುವಾರುಗಳು (ದನ ಮತ್ತು ಎಮ್ಮೆ) 4,84,298, ಸಣ್ಣ ಜಾನುವಾರುಗಳು (ಕುರಿ ಮತ್ತು ಮೇಕೆ) 86,120 ಇದೆ.
ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 10.6 ಲಕ್ಷ ಟನ್ ಮೇವು ಲಭ್ಯವಿದೆ. ಈ ಮೇವು ಜಿಲ್ಲೆಯ ಎಲ್ಲಾ ತಾಲೂಕುಗಳ ಜಾನುವಾರುಗಳಿಗೆ ಮುಂದಿನ 50 ವಾರಗಳವರೆಗೆ ಸಾಕಾಗಲಿದೆ.
ಭದ್ರಾವತಿ ತಾಲ್ಲೂಕಿನಲ್ಲಿ 59 ವಾರಗಳಿಗೆ ಸಾಕಾಗುತ್ತದೆ. ಹೊಸನಗರ 47 ವಾರಗಳಿಗೆ, ಸಾಗರ 55 ವಾರಗಳಿಗೆ, ಶಿಕಾರಿಪುರ 47 ವಾರಗಳಿಗೆ, ಶಿವಮೊಗ್ಗದಲ್ಲಿ 48 ವಾರಗಳಿಗೆ, ಸೊರಬ 51 ವಾರಗಳಿಗೆ ಮತ್ತು ತೀರ್ಥಹಳ್ಳಿಯಲ್ಲಿ 51ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ.

ತೋಟಗಾರಿಕೆ :
ಜಿಲ್ಲೆಯ ಒಟ್ಟು ಸಾಗುವಳಿ ವಿಸ್ತೀರ್ಣ 2,39,995 ಹೆ. ಇದ್ದು, ಇದರಲ್ಲಿ ತೋಟಗಾರಿಕೆಯು ಅತ್ಯಂತ ಪ್ರಧಾನವಾಗಿದ್ದು ಒಟ್ಟು 1,76,291.58 ಹೆಕ್ಟರ್ ಪ್ರದೇಶದಲ್ಲಿ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು1,46,4009 ಹೆ. ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗಿದೆ. ಇದಲ್ಲದೇ ಜಿಲ್ಲೆಯಲ್ಲಿ ಶುಂಠಿ, ಕಾಳುಮೆಣಸು, ಮಾವು, ಬಾಳೆ, ಗೋಡಂಬಿ, ಏಲಕ್ಕಿ, ಸಪೋಟ, ಅನಾನಸ್ ಪ್ರಮುಖ ಬೆಳೆಗಳಾಗಿರುತ್ತವೆ.
ಪ್ರಸಕ್ತ ಸಾಲಿನಲ್ಲಿ ಎಲ್ ನಿನೋ ಪರಿಣಾಮದಿಂದಾಗಿ ಮುಂಗಾರು ದುರ್ಬಲವಾಗಿದ್ದು, ಜುಲೈ ಮಾಹೆಯ ಮಧ್ಯಭಾಗ ಮುಗಿದಿದ್ದರೂ ಕೂಡ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತ ಬಾಂಧವರು ಈ ಕೆಳಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ರೈತರಲ್ಲಿ ಮನವಿ ಮಾಡಲಾಗಿದೆ.

• ಅಡಿಕೆ ಮತ್ತು ಬಹುವಾರ್ಷಿಕ ತೋಟದ ಬೆಳೆಗಳಲ್ಲಿ ಹನಿ ನೀರಾವರಿ ಅಳವಡಿಸಿ ನೀರಿನ ಮಿತ ಬಳಕೆ ಮಾಡುವುದು ಹಾಗೂ ನೀರಿನ ತೀವ್ರ ಸಂಕಷ್ಟದ ಸಮಯದಲ್ಲಿ ಪರ್ಯಾಯ ಸಾಲು ಪದ್ಧತಿಯನ್ನು ಅನುಸರಿಸುವುದು. ಅಡಿಕೆ ಗಿಡದ ಸುತ್ತ ಸಾವಯವ ಹೊದಿಕೆ ಮಾಡಿ ಅಡಿಕೆ ಮತ್ತು ತೆಂಗು ತೋಟಗಳಲ್ಲಿ ಹಸಿರೆಲೆ ಗೊಬ್ಬರದ ಬೆಳೆಗಳಾದ ಹುರುಳಿ, ಅಲಸಂದೆ, ವೆಲ್ವೆಟ್ ಬೀನ್ಸ್ ಬೆಳೆದು ಪುನಃ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಾಗುತ್ತದೆ. ಅಂತೆಯೇ, ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಸೂಡಮನಾಸ್, ಬೇವಿನ ಹಿಂಡಿ ಮುಂತಾದವುಗಳನ್ನು ಬೆಳೆಗಳಿಗೆ ಒದಗಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದಾಗಿದೆ. ಮಳೆ ಕೊರತೆ ತೀವ್ರವಾಗಿದ್ದಲ್ಲಿ ಅಥವಾ ಅಲ್ಪ ಮಳೆಯ ಪರಿಸ್ಥಿತಿಯಲ್ಲಿ ಬಾಳೆ, ಪಪ್ಪಾಯ ಮತ್ತು ಟಮೊಟೊದಂತಹ ಹೆಚ್ಚು ನೀರಿನ ಅವಶ್ಯಕತೆ ಇರುವ ಬೆಳೆಗಳನ್ನು ಬೆಳೆಯದೆ ಇರುವುದು ಸೂಕ್ತವಾಗುತ್ತದೆ. ರಾಸಾಯನಿಕ ಗೊಬ್ಬರಗಳ ಮಿತ ಬಳಕೆ ಮಾಡುವುದು ಹಾಗೂ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಾತ್ರ ಗೊಬ್ಬರಗಳನ್ನು ನೀಡುವುದು, ಕಳೆ ನಿರ್ವಹಣೆ ಮಾಡುವುದು ಹಾಗೂ ಕೀಟ ಮತ್ತು ರೋಗಗಳ ಸಮಗ್ರ ಹತೋಟಿ ಮಾಡಬೇಕಾಗುತ್ತದೆ.

• ಅನಾವೃಷ್ಟಿಯಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಂಭವ ಇರುವುದರಿಂದ ವಿದ್ಯುತ್ ಶಕ್ತಿಗೆ ಪರ್ಯಾಯವಾಗಿ ಸೋಲಾರ್ ಪಂಪ್ಸೆಟ್ ಅಳವಡಿಸಿಕೊಂಡು ಬೆಳೆಗಳಿಗೆ ನೀರು ಒದಗಿಸುವುದಕ್ಕೆ ರೈತರೂ ಕಾರ್ಯ ಪ್ರವೃತ್ತರಾಗಬೇಕಿದೆ. ಮಳೆ ಅಭಾವ ಹೀಗೆಯೇ ಮುಂದುವರೆದರೆ ಗುಡ್ಡಗಾಡು ಪರಿಸರ ಪ್ರದೇಶಗಳಲ್ಲಿ ಮಳೆ ನೀರನ್ನು ಸಂಗ್ರಹಿಸಲು ಇಳಿಜಾರಿಗೆ ಅಡ್ಡಲಾಗಿ ನಿಯಮಿತ ಅಂತರಗಳಲ್ಲಿ ಕ್ಯಾಚ್ ಪಿಟ್ಸ್ ನಿರ್ಮಿಸಬೇಕೆಂದು ತಿಳಿಸಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments