ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.18
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣಗಳ ನಡುವಿನ ಸಚಿವ ಸ್ಥಾನದ ಕಿತ್ತಾಟದಿಂದ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಂಠಿತವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿದರು ಕಾಂಗ್ರೆಸ್ ಪಕ್ಷದ ಮೇಲೆ ಅವರ ಪ್ರಭಾವ ಇದ್ದೆ ಇರುತ್ತದೆ. ಹಾಗಾಗಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೂ ಕೂಡ ಇನ್ನೂ ಸಚಿವ ಸಂಪುಟ ವಿಸ್ತರಣೆ ಮಾಡಲು ಪರದಾಡುತ್ತಿದ್ದಾರೆ. ಈ ಇಬ್ಬರು ನಾಯಕರ ಬಣಗಳು ತಮ್ಮ ಶಾಸಕರನ್ನು ಸಚಿವ ಸಂಪುಟದೊಳಗೆ ಸೇರಿಸಲು ಪೈಪೋಟಿಗೆ ಬಿದ್ದಿದ್ದಾರೆ. ಇದರ ಫಲವಾಗಿ ರಾಜ್ಯದಲ್ಲಿ ಆಡಳಿತ ಸುಧಾರಣೆ ಅಧೋಗತಿಗೆ ತಲುತ್ತಿದೆ ಎಂದರು.
ಗಮನಿಸಿ: ಜಿಲ್ಲೆಯಲ್ಲಿ ಶೇ.44 ರಷ್ಟು ಮಳೆ ಕೊರತೆ-ಶೇ.28.09 ಬಿತ್ತನೆ; ಈ ಬಗ್ಗೆ ಡಿಸಿ ಹೇಳಿದ್ದೇನು?
ಕಾಂಗ್ರೆಸ್ ರಾಜ್ಯದಲ್ಲಿ ಸಂಪೂರ್ಣ ಬಹುಮತ ಪಡೆದು ಸರ್ಕಾರ ರಚನೆ ಮಾಡಿದ್ದರೂ, ಡಿ.ಕೆ.ಶಿವಕುಮಾರ್ ಆಸೆಯಂತೆ ಸಿಎಂ ಆದರೂ ಸಚಿವ ಸಂಪುಟ ಮಾತ್ರ ವಿಸ್ತರಣೆ ಆಗಲಿಲ್ಲ. ಹಲವು ತಿಂಗಳಿನಿಂದ ಇದೇ ಗೊಂದಲ ಕಾಂಗ್ರೆಸ್‌ನೊಳಗೆ ಮುಂದುವರೆಯುತ್ತಿದೆ. ಇತ್ತ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಶಾಸಕ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಕಾಯುತ್ತಿದ್ದಾರೆ. ಈ ಇಬ್ಬರ ರಾಜಕೀಯ ಪೈಪೋಟಿಗೆ ಜನಸಾಮಾನ್ಯರು ಹಾಗೂ ರೈತರು ಸಂಕಷ್ಟಕ್ಕೆ ಬಲಿಯಾಗತ್ತಿದ್ದಾರೆ ಎಂದು ಟೀಕಿಸಿದರು.
ರೈತರ ಸಮಸ್ಯೆ ಕುರಿತು ಮಾತನಾಡಿ, ರಾಜ್ಯದಲ್ಲಿ ಬರಗಾಲ ಬಂದಿದೆ. ಸರ್ಕಾರ ರೈತರಿಗೆ ಬೆಳೆ ಬೆಳೆಯಬೇಡಿ ಎಂದು ತಿಳಿಸಿದೆ. ಅನೇಕರು ಮಳೆ ಕೊರತೆಯಿಂದ ಗುಳೆ ಹೋಗುತ್ತಿದ್ದಾರೆ. ಆದರೆ ಈ ಸಮಸ್ಯೆಗಳ ಕುರಿತು ಸರ್ಕಾರ ಇದುವರೆಗೂ ಸಮೀಕ್ಷೆ ನಡೆಸಿಲ್ಲ. ಈಗ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ನೆರವು ಕೇಳುತ್ತಿದ್ದಾರೆ. ಆದರೆ ಅದಕ್ಕೂ ಮುನ್ನ ಬೆಳೆ ನಷ್ಟದ ನಿಖರ ವರದಿ ಸಿದ್ದಪಡಿಸಬೇಕಿತ್ತು. ಅದನ್ನು ಮಾಡದೆ ಅಧಿಕಾರ ಪಡೆಯುವಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಉಂಟಾಗಿರುವ ಬರಗಾಲದಿಂದ ಬೆಳೆ ಸಂಪೂರ್ಣ ನಾಶವಾಗುತ್ತಿದೆ. ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿತ್ತು. ಆದರೆ ಸರ್ಕಾರದ ಗಮನ ಸಂಪುಟ ವಿಸ್ತರಣೆ ಮತ್ತು ಆಂತರಿಕ ರಾಜಕೀಯದ ಮೇಲೆಯೇ ಇದೆ. ಇನ್ನೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು “ನನಗೆ ಮಾಹಿತಿ ಇಲ್ಲ” ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲ ಶುರುವಾಗಿದೆ ಎಂದು ಟೀಕಿಸಿದರು.
