ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.19
ಜಂತರ್ ಮಂತರ್ ಚಳುವಳಿಯನ್ನು ಸಾಂಪ್ರದಾಯಿಕ ರಾಜಕೀಯ ಚಳುವಳಿಯ ಚೌಕಟ್ಟಿನಲ್ಲಿ ನೋಡುವುದು ಸರಿಯಲ್ಲ. ಬದಲಾಗಿ, ಒಂದು ನಿರ್ದಿಷ್ಟ ತಲೆಮಾರಿನ ಅನುಭವ, ಅಸಮಾಧಾನ ಮತ್ತು ಪ್ರಶ್ನೆಗಳಿಂದ ರೂಪುಗೊಂಡ ಚಳುವಳಿಯಾಗಿದೆ ಎಂದು ಚಿಂತಕ ಶ್ರೀಪಾದ್ ಭಟ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ‘ನಮ್ಮ ಬಳಗ ಶಿವಮೊಗ್ಗ’ ವತಿಯಿಂದ ಆಯೋಜಿಸಿದ್ದ ‘ಜಂತರ್ ಮಂತರ್ ಆಂದೋಲನ: ಹೊಸ ಸ್ವಾತಂತ್ರ್ಯಕ್ಕೆ ದಾರಿಯೇ?’ ಎಂಬ ವಿಷಯದ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಜಂತರ್ ಮಂತರ್ ಚಳುವಳಿ ಯಾವುದೇ ರಾಜಕೀಯ ಅಥವಾ ಸೈದ್ಧಾಂತಿಕ ಚಳುವಳಿಯಲ್ಲ. ಇದು ನಿರ್ದಿಷ್ಟ ರಾಜಕೀಯ ಸಿದ್ಧಾಂತ ಅಥವಾ ಪಕ್ಷದ ಭಾಷೆಯನ್ನು ಹೊಂದಿಲ್ಲ. ಅದು ಒಂದು ತಲೆಮಾರಿನ ಚಳುವಳಿಯಾಗಿದೆ. ಯುವಜನರ ಈ ಧ್ವನಿಗೆ ರಾಜಕೀಯ ಭಾಷೆ ಹಾಗೂ ವ್ಯಾಪಕವಾದ ಸಾಮಾಜಿಕ ಅರ್ಥವನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಅದೇ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದು ಅಗತ್ಯ ಎಂದರು.
ಗಮನಿಸಿ: ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಿ : ಬಿ.ವೈ.ರಾಘವೇಂದ್ರ
ಯುವಜನರ ಈ ಚಳುವಳಿಯ ಪ್ರಮುಖ ಸಾಧನೆಗಳಲ್ಲಿ ವ್ಯಕ್ತಿಕೇಂದ್ರಿತ ಅಥವಾ ‘ಕಲ್ಟ್’ ರಾಜಕಾರಣವನ್ನು ಪ್ರಶ್ನಿಸಿರುವುದು ಒಂದಾಗಿದೆ. ಒಂದು ಕಾಲದಲ್ಲಿ ತಮ್ಮ ಕುಟುಂಬದ ಹಿರಿಯರು ಬೆಂಬಲಿಸಿದ್ದ ರಾಜಕೀಯ ನಾಯಕತ್ವವನ್ನೇ ಯುವಜನರು ಪ್ರಶ್ನಿಸಲು ಆರಂಭಿಸಿರುವುದು ಗಮನಾರ್ಹ ಬೆಳವಣಿಗೆ ಎಂದು ವಿಶ್ಲೇಷಿಸಿದರು.
ಜಂತರ್ ಮಂತರ್ ಚಳುವಳಿಯ ವೈಶಿಷ್ಟ್ಯವನ್ನು ಕೇವಲ ಅದರ ರಾಜಕೀಯ ಪರಿಣಾಮದಲ್ಲಿ ಹುಡುಕಬಾರದು. ಅದು ಹೊಸ ತಲೆಮಾರು ತನ್ನದೇ ಆದ ಭಾಷೆಯಲ್ಲಿ ಸಮಾಜ,ಅಧಿಕಾರ ಮತ್ತು ರಾಜಕೀಯವನ್ನು ಪ್ರಶ್ನಿಸುವ ಪ್ರಯತ್ನವಾಗಿದ್ದು, ಆ ಧ್ವನಿಯನ್ನು ವಿಶಾಲವಾದ ಪ್ರಜಾಪ್ರಭುತ್ವದ ಚರ್ಚೆಯೊಂದಿಗೆ ಜೋಡಿಸುವ ಅಗತ್ಯವಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ವಿಚಾರಗಳನ್ನು ಕೇವಲ ಉಲ್ಲೇಖಿಸುವುದಕ್ಕಿಂತ, ಅವುಗಳ ಹಿಂದಿರುವ ಆಶಯಗಳನ್ನು ಯುವಜನರೊಂದಿಗೆ ಮುಕ್ತವಾಗಿ ಚರ್ಚಿಸುವುದು ಮುಖ್ಯ. “ಅವರ ವಿಚಾರಗಳನ್ನು ವ್ಯಾಖ್ಯಾನಿಸಿ ಹೇಳುವುದಕ್ಕಿಂತ ಯುವಜನರೊಂದಿಗೆ ಸಂವಾದ ನಡೆಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನುಅರ್ಥ ಮಾಡಿಸುವುದು ನಮ್ಮ ಮುಂದಿರುವ ಪ್ರಮುಖ ಸವಾಲು” ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಸಂವಿಧಾನಿಕ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಸಂಸ್ಥೆಗಳು ದುರ್ಬಲವಾದರೂ ಪರವಾಗಿಲ್ಲ ಎಂಬ ಮನೋಭಾವ ಸಮಾಜದಲ್ಲಿ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
“ಸಿಬಿಐ, ಚುನಾವಣಾ ಆಯೋಗ, ನ್ಯಾಯಾಂಗ ಸೇರಿದಂತೆ ಯಾವುದೇ ಸಂಸ್ಥೆ ದುರ್ಬಲವಾದರೂ ಪರವಾಗಿಲ್ಲ; ದೇಶ ಅಭಿವೃದ್ಧಿಯಾಗಬೇಕು ಎಂಬ ಮನೋಭಾವ ಬೆಳೆದರೆ ಪ್ರಜಾಪ್ರಭುತ್ವದ ಮೂಲ ಆಶಯವೇ ದುರ್ಬಲವಾಗುತ್ತದೆ. ಈ ಸಂಸ್ಥೆಗಳು ಏಕೆ ಮುಖ್ಯ ಎಂಬುದನ್ನು ಜನರಿಗೆ, ವಿಶೇಷವಾಗಿ ಯುವಜನರಿಗೆ ತಿಳಿಸುವ ಅಗತ್ಯವಿದೆ” ಎಂದರು.
ಫ್ಯಾಸಿಸಂ ಅಥವಾ ಸರ್ವಾಧಿಕಾರಿ ಪ್ರವೃತ್ತಿಗಳನ್ನು ಕೇವಲ ರಾಜಕೀಯ ಸಂಘಟನೆಗಳ ಸಿದ್ಧಾಂತಗಳ ಮೂಲಕವೇ ಅರ್ಥೈಸಲು ಸಾಧ್ಯವಿಲ್ಲ. ಇಂತಹ ಪ್ರವೃತ್ತಿಗಳಿಗೆ ಸಮಾಜದೊಳಗಿನ ಕೆಲವು ಮನೋಭಾವಗಳು ಸಹ ಪೂರಕವಾಗಬಹುದು ಎಂಬುದನ್ನು ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ವ್ಯವಸ್ಥೆ ಸರಿಯಾಗಿ ನಡೆಯಬೇಕು, ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ಹಾಜರಾಗಬೇಕು ಎಂಬ ಕಾರಣಗಳಿಂದ ಸರ್ವಾಧಿಕಾರಿ ವ್ಯವಸ್ಥೆಯನ್ನು ಸಮರ್ಥಿಸುವ ಮನೋಭಾವ ಕೆಲವರಲ್ಲಿ ಕಾಣಿಸಿಕೊಂಡಿತ್ತು. ಇಂತಹ ಮನಸ್ಥಿತಿಗಳೇ ಕೆಳಮಟ್ಟದಿಂದ ಸರ್ವಾಧಿಕಾರಿ ಪ್ರವೃತ್ತಿಗಳಿಗೆ ಬೆಂಬಲ ನೀಡುವ ಪರಿಸ್ಥಿತಿಯನ್ನು ನಿರ್ಮಿಸುತ್ತವೆ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ ಉಪನ್ಯಾಸಕಿ ಜಿ ಕೆ ಪ್ರೇಮ ಮಾತಾನಾಡಿದರು. ಭಾಸ್ಕರ್ ನಿರೂಪಿಸಿದರು.
ನಮ್ಮ ಶಿವಮೊಗ್ಗ ಬಳಗದ ಪ್ರಕಾಶ್ ಕೋನಾಪುರ್, ಡಾ. ಪ್ರಕಾಶ್ ಮರ್ಗನಹಳ್ಳಿ, ಡಾ. ಲವ ಜಿ, ಪ್ರೋ. ರಾಚಪ್ಪ, ಎಂ.ಬಿ. ನಟರಾಜ್, ಪತ್ರಕರ್ತ ದೇವೇಂದ್ರಪ್ಪ, ಪ್ರೇಮಾ ಮತ್ತಿತರರು ಇದ್ದರು.
