ರೇಪ್ ಕೇಸು: ಪ್ರಜ್ವಲ್ ರೇವಣ್ಣಗೆ ಜೀವಿತಾವಧಿ ಶಿಕ್ಷೆ
ಜನಪ್ರತಿನಿಧಿಗಳ ನ್ಯಾಯಾಲಯ ಐತಿಹಾಸಿಕ ತೀರ್ಪು
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ರಾಜಕೀಯ ಪರಂಪರೆ ಬಾರಿ ಹೊಡೆತ
ಬೆಂಗಳೂರು: ಮನೆಕೆಲಸ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ . ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನಭಟ್ ಅವರು ಜೀವಿತಾವಧಿ ಜೈಲು ಶಿಕ್ಷೆ, ಮತ್ತು ೧೦ ಲಕ್ಷ ರೂ. ಗಳ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದ್ದಾರೆ.
ಇಂದು ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಕಣ್ಣೀರಿಟ್ಟರು.
ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ( ಐಪಿಸಿ ೩೭೬(೨)ಎನ್. ೩೭೬(ಕೆ)(೨) ಸೆಕ್ಷನ್ ಗಳ ಅಡಿಯಲ್ಲಿ ಜೀವಿತಾವಧಿಯ ವರೆಗೂ ಕಾರಾಗೃಹ ಶಿಕ್ಷೆ ವಿಧಿಸಿ. ೧೦ ಲಕ್ಷ ರೂ. ಗಳ ದಂಡ ವಿಧಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರ ರಾಜಕೀಯ ಪರಂಪರೆಗೆ ಈ ತೀರ್ಪು ಬಾರಿ ಹೊಡೆತ ಕೊಟ್ಟಿದ್ದರೆ. ಜನಸಾಮಾನ್ಯರಲ್ಲಿ ನ್ಯಾಯಾಲಯದ ಬಗೆಗೆ ವಿಶ್ವಾಸ ಮೂಡಿಸಿದೆ. ರಾಜಕೀಯಾಧಿಕಾರ, ಹಣ, ಸಾಮಾಜಿಕ ಪ್ರಭಾವ ಗಳಿದ್ದಾಗ್ಯೂ ನ್ಯಾಯಾಲಯದ ಮುಂದೆ ಎಲ್ಲರೂ ಸಮಾನ ಎಂಬ ಸಂದೇಶವನ್ನು ಈ ತೀರ್ಪು ಸಾರಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಜ್ವಲ್ ರೇವಣ್ಣ ನಡೆಸಿದ ದುಷ್ಕೃತ್ಯದ ತನಿಖೆಗೆ ರಾಜ್ಯಸರ್ಕಾರ ಎಸ್ ಐಟಿ ರಚಿಸಿದ್ದು, ಎಸ್ ಐಟಿ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸುವಲ್ಲಿ ದಕ್ಷತೆ ತೋರಿದೆ. ಸರ್ಕಾರದ ಪರವಾಗಿ ಅಭಿಯೋಜಕರಾದ ಅಶೋಕ್ ನಾಯಕ್ ,ಬಿ.ಎನ್ ಜಗದೀಶ್ ವಾದಿಸಿದ್ದರು.
