ಭೋವಿ ನಿಗಮದಲ್ಲಿ ಕಮಿಷನ್ ದಂಧೆ ಆರೋಪ: ಸಿಎಂ ರಾಜೀನಾಮೆಗೆ ಬಿಜೆಪಿ -ಜೆಡಿಎಸ್ ಆಗ್ರಹ
ಮುಖ್ಯಮಂತ್ರಿ ಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ: ಸಚಿವ ಮಧು ಬಂಗಾರಪ್ಪ
ಎಲ್ಲವನ್ನೂ ತನಿಖೆ ಮಾಡಲಾಗುವುದು: ಸಚಿವ ಪ್ರಿಯಾಂಕ ಖರ್ಗೆ
ಅಧ್ಯಕ್ಷ ಎಸ್ ರವಿಕುಮಾರ್ ಪದಚ್ಯುತಿ?
ಬೆಂಗಳೂರು: ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್ ರವಿಕುಮಾರ್ ನಿಗಮದಿಂದ ಫಲಾನುಭವಿಗಳಿಗೆ ಯೋಜನೆ ಗಳ ಸೌಲತ್ತು ಮಂಜೂರು ಮಾಡುವಲ್ಲಿ ಕಮಿಷನ್ ಕೇಳಿದ್ದಾರೆ ಎನ್ನಲಾದ ವಿಡಿಯೋ ಹರಿದಾಡುತ್ತಿರುವುದು ರಾಜ್ಯ ಸರ್ಕಾರಕ್ಕೆ ಹೊಸ ತಲೆನೋವು ತಂದಿದೆ.
ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳು ಈ ಬಗ್ಗೆ ಮಾಹಿತಿ ಪಡೆದಿದ್ದು, ಯಾವುದೇ ಕ್ಷಣದಲ್ಲೂ ಎಸ್ ರವಿಕುಮಾರ್ ಅವರನ್ನು ಭೋವಿ ಅಭಿವೃದ್ದಿ ನಿಗಮ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಿಗಮದಲ್ಲಿ ಕೇಳಿ ಬಂದಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ ಖರ್ಗೆ ನಾವು ಯಾವುದನ್ನು ಮುಚ್ಚಿಡುವುದಿಲ್ಲ. ದಾಖಲೆಗಳನ್ನು ಕೊಡಲಿ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪ್ರತಿಪಕ್ಷಗಳಿಗೆ ಎದಿರೇಟು ನೀಡಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಚಿವರಾಗಿದ್ದ ನಾಗೇಂದ್ರ ಅವರ ತಲೆದಂಡವಾಗಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೆ ಭೋವಿ ಅಭಿವೃದ್ದಿ ನಿಗಮದಲ್ಲಿ ಅಧ್ಯಕ್ಷ ಎಸ್ .ರವಿಕುಮಾರ್ ಅವರು ಕಮಿಷನ್ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾದ ವಿಡಿಯೋ ಈಗ ವೈರಲ್ ಆಗಿದೆ.
ಇದರ ಬೆನ್ನಲ್ಲೆ ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ಭೋವಿ ನಿಗಮದ ಅಧ್ಯಕ್ಷರು ಕಮಿಷನ್ ಕೇಳಿರುವುದು ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಇದರ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತ್ಯೇಕ ಹೇಳಿಕೆಗಳನ್ನು ಹಂಚಿಕೊಂಡಿದ್ದು, ವಾಲ್ಮೀಕಿ ನಿಗಮದಲ್ಲಿ ನಡೆದಂತೆ ಭ್ರಷ್ಟಾಚಾರ ಭೋವಿ ನಿಗಮದಲ್ಲೂ ನಡೆಯುತ್ತಿದ್ದು, ಪರಿಶಿಷ್ಟ ಸಮುದಾಯಗಳೀಗೆ ಕಾಂಗ್ರೇಸ್ ಮಾಡುತ್ತಿರುವ ಅನ್ಯಾಯ ಇದಾಗಿದೆ. ಭೋವಿ ನಿಗಮದ ಅಧ್ಯಕ್ಷರೇ ಕಮಿಷನ್ ಕೇಳುತ್ತಿರುವುದು ಕಾಂಗ್ರೆಸ್ ಸರ್ಕಾರದಲ್ಲಿ ಲಂಚಗುಳಿತನ, ಭ್ರಷ್ಟಾಚಾರ, ಕಮಿಷನ್ ದಂಧೆಗೆ ಹಿಡಿದ ಕನ್ನಡಿಯಾಗಿದೆ ಎಂದಿದ್ದಾರೆ.
