ಸಾರೆಕೊಪ್ಪ ಬಂಗಾರಪ್ಪ ಸ್ಮಾರಕ “ಬಂಗಾರಧಾಮ” ಈಗ ಐತಿಹಾಸಿ ಪ್ರವಾಸಿ ತಾಣ
ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಮಧುಬಂಗಾರಪ್ಪ
ನಾಡಿನ ವರ್ಣರಂಜಿತ ರಾಜಕಾರಣಿ, ಬಡವರ ಬಂಧು ಎಂದು ಜನಮಾನಸದಲ್ಲಿ ಉಳಿದಿರುವ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಮತ್ತು ಅವರ ಪತ್ನಿ ಶ್ರೀಮತಿ ಶಕುಂತಲ ಬಂಗಾರಪ್ಪ ಅವರ ಸೊರಬದಲ್ಲಿನ ಸಮಾಧಿಯ ಸ್ಮಾರಕಸ್ಥಳ “ಬಂಗಾರಧಾಮ”ವನ್ನು ರಾಜ್ಯ ಸರ್ಕಾರ ಐತಿಹಾಸಿಕ ಪ್ರವಾಸಿ ತಾಣವೆಂದು ಘೋಷಿಸಿದೆ.
ಎಸ್ ಬಂಗಾರಪ್ಪ ಅವರು ಡಿಸಂಬರ್ ೨೬, ೨೦೧೧ ರಂದು ವಿಧಿವಶರಾಗಿದ್ದು ಅವರ ಅಂತ್ಯಸಂಸ್ಕಾರವು ಸೊರಬ ಪಟ್ಟಣದ ಹೃದಯಭಾಗದಲ್ಲಿ ಅವರ ಕುಟುಂಬದ ಒಡೆತನದಲ್ಲಿದ್ದ ಜಾಗದಲ್ಲೇ ನೆರವೇರಿಸಲಾಯಿತು. ಇದೇ ಸ್ಥಳದಲ್ಲಿ ಅವರ ಪುತ್ರ ಮಧುಬಂಗಾರಪ್ಪ ಅವರ ನೇತೃತ್ವದ ಎಸ್ ಬಂಗಾರಪ್ಪ ಫೌಂಡೇಷನ್ ವತಿಯಿಂದ ಅತ್ಯಂತ ಆಕರ್ಷಣೀಯ ಸ್ಮಾರಕ ನಿರ‍್ಮಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬತಾಲ್ಲೂಕಿನ ಕುಬಟೂರಿನಲ್ಲಿ ಹಿಂದುಳಿದವರ್ಗದ ಗೇಣಿ ರೈತನ ಮಗನಾಗಿ ಜನಿಸಿದ್ದ ಸಾರೆಕೊಪ್ಪ ಬಂಗಾರಪ್ಪ (ಅಕ್ಟೋಬರ್,26, 1932 ) ನವರು ಈ ರಾಜ್ಯದ ಮುಖ್ಯಮಂತ್ರಿ ಪಟ್ಟದ ವರೆಗೂ ಬೆಳೆದು ಬಂದದ್ದು ಬಹುದೊಡ್ಡ ಇತಿಹಾಸ.
ಬಡವರ ಪರ ಹೋರಾಟದಿಂದಲೆ ಜನನಾಯಕರಾಗಿ ಹೊರಹೊಮ್ಮಿದ ಬಂಗಾರಪ್ಪ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಕೊಟ್ಟ ಕೊಡುಗೆಗಳು ಸದಾ ಸ್ಮರಣೀಯ. ಬಂಗಾರಪ್ಪ ನವರ ಚಿಂತನೆ, ಅಭಿರುಚಿ, ಜನಸಮೂಹದೊಂದಿಗೆ ಅವರಿಗಿದ್ದ ಬಾಂಧವ್ಯಕ್ಕೆ ತಕ್ಕಂತೆ ಅವರ ಪುತ್ರ ಮಧುಬಂಗಾರಪ್ಪ ತಮ್ಮ ಸ್ವಂತ ಖರ್ಚಿನಲ್ಲಿ ಸ್ಮಾರಕವನ್ನು ನಿರ‍್ಮಿಸಿದ್ದು ಜನರನ್ನು ಸೆಳಯುತ್ತಿದೆ.
ಸುಮಾರು ಒಂದು ಕಾಲು ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಬಂಗಾರಧಾಮ ವು 100*100 ಅಡಿ ವ್ಯಾಪ್ತಿಯ ವಿಶಿಷ್ಟ ವಿನ್ಯಾಸದ ಪುಣ್ಯಸ್ಥಳವಾಗಿದ್ದು, ಗ್ರಾನೈಟ್ ಮತ್ತು ಮಾರ್ಬಲ್ ಕೆತ್ತನೆಯ ಕಲಾಕೃತಿಗಳು ಇದರ ಸೌಂದರ್ಯವನ್ನು ಹೆಚ್ಚಿಸಿವೆ. ಧ್ಯಾನಮಂದಿರ, ಕುಡಿಯುವ ನೀರು, ಶೌಚಾಲಯ, ವಾಕಿಂಗ್ ಪಾಥ್, ಹೂವಿನ ತೋಟ, ಅಲಂಕಾರಿಕ ಗಿಡಗಳು ಸೇರಿದಂತೆ ಅಗತ್ಯ ಸೌಲಭ್ಯಗಳು ಇಲ್ಲಿ ಲಭ್ಯ.
ಇದಲ್ಲದೆ, ೧,೫೦೦ ಮಂದಿಗೆ ಆಸನ ವ್ಯವಸ್ಥೆಯೊಂದಿಗೆ ಆಧುನಿಕ ಬಯಲು ರಂಗಮಂದಿರ ನಿರ್ಮಾಣಗೊಂಡಿದ್ದು, ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ. ಹೆಲಿಫ್ಯಾನ್ ಅಳವಡಿಕೆಯೊಂದಿಗೆ ವಾತಾವರಣ ಮತ್ತಷ್ಟು ಸುಂದರಗೊಂಡಿದೆ.
‘ಬಂಗಾರ ಧಾಮ’ವನ್ನು ರಾಜ್ಯ ಸರ್ಕಾರ ಐತಿಹಾಸಿಕ ಪ್ರವಾಸಿ ತಾಣವಾಗಿ ಗುರುತಿಸಿದೆ. ಇದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಗೃಹ ಸಚಿವರಾದ ಡಾ. ಜಿ. ಪರಮೇಶ್ವರ; ಕಾನೂನು, ಸಂಸತ್ತೀಯ ವ್ಯವಹಾರಗಳ ಸಚಿವರಾದ ಎಚ್. ಕೆ. ಪಾಟೀಲ; ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ; ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್; ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಬೋಸರಾಜು; ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕ ಶಾಸಕರು, ಸಚಿವರು ಹಾಗೂ ಹಿರಿಯ ನಾಯಕರು ಈ ಸ್ಥಳಕ್ಕೆ ಭೇಟಿ ನೀಡಿ ‘ಬಂಗಾರ ಧಾಮ’ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಲ್ಲದೆ, ಈಗಾಗಲೇ ‘ಬಂಗಾರ ಧಾಮ’ ಅನೇಕ ಗಣ್ಯರು, ಸಾರ್ವಜನಿಕರು ಭೇಟಿ ನೀಡುತ್ತಿದ್ದಾರೆ.
‘ಬಂಗಾರ ಧಾಮ’ವು ಕರ್ನಾಟಕದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ಮತ್ತು ಶಕುಂತಲಮ್ಮ ಅವರ ಪುಣ್ಯಸ್ಥಳವಾಗಿ ಅಭಿಮಾನಿಗಳ ಮನದಾಳದಲ್ಲಿ ವಿಶೇಷ ಸ್ಥಾನ ಪಡೆದಿದೆ. ಸೊರಬದ ಮಧ್ಯಭಾಗದಲ್ಲಿರುವ ಈ ಧಾಮವು ದೇಶದಲ್ಲಿಯೇ ವಿಭಿನ್ನ ಶಕ್ತಿಧಾಮವಾಗಿ ಗುರುತಿಸಿಕೊಂಡಿದೆ ಸಂಪಿಗೆ ಮರ, ಕಲ್ಪವೃಕ್ಷ, ಈಚಲು ಮರಗಳನ್ನು ಒಳಗೊಂಡ ಸಸ್ಯಸಂಪತ್ತಿ, ೫೬ ಅಡಿ ಎತ್ತರದ ಕ್ಲಾಕ್ ಟವರ್, ವಿದ್ಯುತ್ ಅಲಂಕಾರ ಹಾಗೂ ಆಕರ್ಷಕ ಸಂಗೀತ ಬಂಗಾರ ಧಾಮದ ವೈಶಿಷ್ಟ್ಯಗಳಾಗಿ ಕಂಗೊಳಿಸುತ್ತಿವೆ ಎಂದು ಮಧುಬಂಗಾರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
