Homeಜಿಲ್ಲೆಸಂತ್ರಸ್ತನ ಹೆಸರಿನಲ್ಲಿ ದಾಖಲೆ ತಿದ್ದಿ ಅರಣ್ಯ ಭೂಮಿ ಮಂಜೂರು ಆರೋಪ

ಸಂತ್ರಸ್ತನ ಹೆಸರಿನಲ್ಲಿ ದಾಖಲೆ ತಿದ್ದಿ ಅರಣ್ಯ ಭೂಮಿ ಮಂಜೂರು ಆರೋಪ

Spread the love

ಶಿವಮೊಗ್ಗ.ಜು.10: ಶರಾವತಿ ಮುಳುಗಡೆ ಸಂತ್ರಸ್ತನಲ್ಲದಿದ್ದರೂ ಸರ್ಕಾರಿ ದಾಖಲೆಗಳನ್ನು ತಿದ್ದಿ, ಮುಳುಗಡೆ ಸಂತ್ರಸ್ತನ ಹೆಸರಿನಲ್ಲಿ ಅರಣ್ಯ ಭೂಮಿ ಮಂಜೂರು ಮಾಡಿಸಿಕೊಂಡಿರುವ ಆನಂದಪುರದ ವಕೀಲ ಎಂ.ಆರ್. ಷಣ್ಮುಖನ ಮೇಲೆ ಎಫ್‌ಐಆರ್ ಆಗಿದ್ದರೂ ಇದುವರೆಗೂ ಪೊಲೀಸರು ಬಂಧಿಸದೆ ನಿರ್ಲಕ್ಷ್ಯ ಮಾಡಿದ್ದಾರೆಂದು ರೈತ ಮುಖಂಡ ದಿನೇಶ್ ಶಿರವಾಳ  ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಭೂಮಿ ಕಬಳಿಕೆ ಮಾಡಿರುವ ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ವತಃ ಅರಣ್ಯ ಸಚಿವರೇ ಒಂದು ವರ್ಷದ ಹಿಂದೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಆದೇಶಿಸಿದ್ದರೂ ಕೂಡ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಸಚಿವರ ಆದೇಶಕ್ಕೂ ಕಿಮ್ಮತ್ತು ನೀಡಿಲ್ಲವೆಂದು ದೂರಿದರು.

ಸಾಗರದ ಕಂದಾಯ ಇಲಾಖೆ ಹಾಗೂ ಆನಂದಪುರದ ನಾಡ ಕಚೇರಿ ಅಭಿಲೇಖಾಲಯದಲ್ಲಿನ ಸರ್ಕಾರಿ ಮೂಲ ದಾಖಲೆಗಳನ್ನು ಕೈ ಬರಹದಲ್ಲಿ ಬರೆದುಕೊಂಡು ಮಲಂದೂರು ಮೀಸಲು ಅರಣ್ಯದ ಸರ್ವೇ ನಂಬರ್ 157 ಸೇರಿದಮತೆ ವಿವಿಧ ಸರ್ವೆ ನಂಬರ್‌ಗಳಲ್ಲಿ 90ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಳ್ಳಲಾಗಿದೆ. ಇವರು ಶರಾವತಿ ಮುಳುಗಡೆ ಸಂತ್ರಸ್ತನೂ ಅಲ್ಲ. ಪಾರಂಪರಿಕ ಅರಣ್ಯವಾಸಿಯೂ ಆಗಿರುವುದಿಲ್ಲ ಎಂದರು.

1961-62 ರಲ್ಲಿನ ಮುಳುಗಡೆಯಾದ ಸಂತ್ರಸ್ತ ರುದ್ರಪ್ಪ ಬಿನ್ ಮಂಜಪ್ಪ ಎಂಬುವರ ದಾಖಲೆಗಳನ್ನು 1993-94  ತಿದ್ದಿ, ರುದ್ರಪ್ಪಗೌಡ ಎಂದು ಕೈಬರಹದಲ್ಲಿ ತಿದ್ದಿ, ತನ್ನ ಕುಟುಂಬದವರೇ ಸಂತ್ರಸ್ತರೆಂದು ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅದೇ ಸರ್ಕಾರಿ ದಾಖಲೆ ಎಂದು ಬಿಂಬಿಸಲಾಗಿದೆ ಎಂದರು.

ಈತ ಕೈ ಬರಹದಲ್ಲಿ ದಾಖಲೆಗಳನ್ನು ತಿದ್ದಿರುವುದು ದಾವಣಗೆರೆಯ ಫೊರೆನ್ಸಿಕ್ ಲ್ಯಾಬ್‌ನ ಎಫ್‌ಎಸ್‌ಎಲ್‌ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದರಿಂದಾಗಿ ಸಾಗರ ತಹಶೀಲ್ದಾರ್  ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕಣ ದಾಖಲಾಗಿ 15 ದಿನ ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
1999 ಹಾಗೂ 2009 ರಲ್ಲಿ ಮೃತಪಟ್ಟ ಈತನ ಅಜ್ಜ, ಅಜ್ಜಿಯ ಹೆಸರಿನಲ್ಲಿ 2018 ರಲ್ಲಿ ಜಮೀನು ಮಂಜೂರಾತಿ ಹಕ್ಕುಪತ್ರ ಪಡೆಯಲಾಗಿದೆ. ಮೃತ ವ್ಯಕ್ತಿಗಳೇ ಸ್ವತಃ ಸಹಿ ಮಾಡಿದಂತೆ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಮೃತ ವ್ಯಕ್ತಿಗಳ ಹೆಸರಿನಲ್ಲಿ ದಾಖಲೆ ಸೃಷ್ಟಿ ಮಾಡಿ ಜಮೀನು ಮಂಜೂರಾತಿ ಪಡೆದಿರುವುದೇ ಈತ ಯಾವ ಮಟ್ಟದ ಕ್ರಮಿನಲ್ ಎಂಬುದು ಗೊತ್ತಾಗುತ್ತದೆ ಎಂದರು.

ಈತನ ವಿರುದ್ಧ ಧ್ವನಿ ಎತ್ತಿದವರ ಮೇಲೆ ಅಡಿಕೆ ಕಳ್ಳತಮ ಅಟ್ರಾಸಿಟಿಯಂತಹ ಸುಳ್ಳು ಕೇಸು ಹಾಕಿಸಲಾಗುತ್ತಿದೆ. ಅರಣ್ಯ ಭೂಮಿ ಮಂಜೂರು ಮಾಡಿಸುವುದಾಗಿ ಹೇಳಿ ನಕಲಿ ದಾಖಲೆಗಳನ್ನು ನೀಡಿ ಕೋಟ್ಯಂತರ ರೂ. ವಸೂಲಿ ಮಾಡಿ ಜನರಿಗೂ ಮೋಸ ಮಾಡಲಾಗುತ್ತಿದೆ ಎಂದರು.

ತೆಲಗಿ ಛಾಪಕಾಗದ ಹಗರಣಕ್ಕಿಂತ ಹೆಚ್ಚಿನ ಭೂಹಗರಣ ಈತ ಮಾಡಿದ್ದಾನೆ. ಈತ ಬೆಂಗಳೂರಿನ ಶಿವಾಜಿನಗರದಿಂದ ಸಿದ್ಧಪಡಿಸಿಕೊಂಡು ಬರುವ ನಕಲಿ ದಾಖಲೆಗಳಿಗೆ ಮರುಳಾಗಿ ಲಂಚ ಪಡೆದು ತಹಶೀಲ್ದಾರ್, ಆರ್‌ಐಗಳು ಭೂಮಿ ಮಂಜೂರು ಮಾಡಿದ್ದಾರೆ. ಈ ಭೂಹಗರಣ ಈ ಜಿಲ್ಲೆಗೆ ಮಾತ್ರ ಸೀಮಿತವಾಗಿ ಮಾಡಿಲ್ಲ. ಚಿಕ್ಕಮಗಳೂರು, ಹಾಸನ, ತುಮಕೂರು ಜಿಲ್ಲೆಗಳೀಗೂ ವ್ಯಾಪಿಸಿದೆ. ಹೀಗಾಗಿ ರಾಜ್ಯ ಸರ್ಕಾರ ವಿಶೇಷ ಗಮನಹರಿಸಿ ಸಿಓಡಿ ತನಿಖೆ ನಡೆಸುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮುರಳೀಧರ್, ಎನ್.ಸಿ.ಗಂಗಾಧರ್, ಪ್ರೇಮ್‌ಕುಮಾರ್, ಡಾ.ರಾಮಚಂದ್ರಪ್ಪ, ಗಣಪತಿ, ಗುರುಮೂರ್ತಿ, ತಿಪ್ಪಿ ರಾಘವೇಂದ್ರ, ಶಿವು ಮೈಲಾರಿಕೊಪ್ಪ, ಚಂದ್ರಪ್ಪ ಆಲಳ್ಳಿ, ರಾಘವೇಂದ್ರ ಹೊಸಗುಂದ ಮೊದಲಾದವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments