ನಾನೇ ಸಿ.ಎಂ ಆಗಿ ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ಯಾಕೆ ಗೊತ್ತಾ?!
*ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕೊನೆಗೂ ಒಂದು ಹಂತಕ್ಕೆ ಬಂದು ತಲುಪಿದೆ. ಸಿದ್ದರಾಮಯ್ಯ ಅವರು ಮುಂದಿನ ಮೂರುವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಪುನರ್ಚ್ಚರಿಸುವ ಮೂಲಕ ನಿರ್ಣಾಯಕ ರಾಜಕೀಯ ಹಾದಿಯನ್ನು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ನಡುವೆ ಮುಖ್ಯಮಂತ್ರಿ ಸ್ಥಾನ ಹಂಚಿಕೆ ಯಾಗಿದ್ದು, ಎರಡೂವರೆ ವರ್ಷಗಳ ಅಂದರೆ ಬರುವ ನವಂಬರ್ ನಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದಾರೆ. ಎಐಸಿಸಿ ಹೈಕಮಾಂಡ್ ಸಮ್ಮುಖದಲ್ಲಿ ನಡೆದಿದೆ ಎನ್ನಲಾದ ’ಜಂಟ್ಲಮನ್ ಅಗ್ರಿಮೆಂಟ್’ ಪ್ರಕಾರ ನವಂಬರ್ಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿದ್ದವು, ಡಿ.ಕೆ ಶಿವಕುಮಾರ್ ಬೆಂಬಲಿಗ ಶಾಸಕರುಗಳು ಇದೇ ವಾದವನ್ನುಪ್ರಬಲವಾಗಿ ಪ್ರತಿಪಾದಿಸುತ್ತಾ ಬಂದಿದ್ದರು ಕೂಡ.
ಈ ವಿದ್ಯಮಾನಗಳ ನಡುವೆಯೇ ಎಐಸಿಸಿ ಹಿಂದುಳಿದವರ್ಗಗಳ ಸಲಹಾ ಸಮಿತಿಗೆ ಸಿದ್ದರಾಮಯ್ಯ ಅವರನ್ನು ಸದಸ್ಯರನ್ನಾಗಿ ನೇಮಿಸಿದ ಬೆಳವಣಿಗೆ ಇನ್ನೇನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ಕಾಲ ಕೂಡಿಬರತೊಡಗಿದೆ ಎಂಬ ವಿಶ್ಲೇಷಣೆಗಳು, ಮತ್ತು ಡಿಕೆಶಿ ಪಾಳೆಯದಲ್ಲಿ ಉತ್ಸಾಹ ಕಾಣತೊಡಗಿದ್ದು ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಸಂಚಲನ ಮೂಡಿದ್ದಂತೂ ನಿಜ. ಇದನ್ನು ಗಮನಿಸಿದ ಸಿದ್ದರಾಮಯ್ಯ ತಕ್ಷಣವೇ ಹಿಂದುಳಿದ ವರ್ಗಗಳ ಸಲಹಾ ಸಮಿತಿಗೆ ತಮ್ಮ ನೇಮಕಾತಿಯ ಕುರಿತು ಸ್ಪಷ್ಟನೆ ನೀಡಬೇಕಾಯಿತು. ಮತ್ತು ಸಿ.ಎಂ ಪಟ್ಟ ಬದಲಾವಣೆಯ ಯಾವ ಉದ್ದೇಶವು ಈ ನೇಮಕಾತಿಯ ಹಿಂದೆ ಅಡಗಿಲ್ಲ ಎನ್ನುವುದು ಅವರ ತಕ್ಷಣದ ಪ್ರತಿಕ್ರಿಯೆಯ ಒಳಗಿನ ಉದ್ದೇಶವೂ ಆಗಿತ್ತು.
ಈ ಎಲ್ಲಾ ಬೆಳವಣಿಗೆಗಳು ಇದೀಗ ದೆಹಲಿಗೆ ಶಿಫ್ಟ್ ಆಗಿದ್ದು ಎರಡು ವಾರಗಳ ಹಿಂದೆ ದೆಹಲಿಯಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದುವರ್ಷ ಮುಖ್ಯಮಂತ್ರಿ ನಾನೇ ಆಗಿರುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲೆ ಸ್ಪಷ್ಟಪಡಿಸಿದರೆ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ.
ದೆಹಲಿಯಲ್ಲೆ ಹೇಳಿಕೆ ನೀಡಿದ ಡಿಕೆಶಿ ಈ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸದೆ ನನಗೆ ಬೇರೆ ದಾರಿಯಿಲ್ಲ ಎನ್ನುವ ಮೂಲಕ ತಾವು ಸಿದ್ದರಾಮಯ್ಯ ಅವರ ಹೇಳಿಕೆಗೆ ಬಲ ತುಂಬಿದರು. ಡಿಕೆಶಿ ಅವರ ಈ ಹೇಳಿಕೆ ಹಿಂದೆ ಬೇರೆಯದೆ ರಾಜಕೀಯ ತಂತ್ರಗಾರಿಕೆ ಇರಬಹುದು, ಬಿಟ್ಟು ಹಿಡಿಯುವ ತಂತ್ರಗಾರಿಕೆಯೂ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದ್ದರೂ, ಗುರುವಾರ(ಜು.೧೦) ದೆಹಲಿಯಲ್ಲಿ ನಡೆದ ವಿದ್ಯಮಾನಗಳು ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆಗಳಿಗೆ ಮಂಗಳ ಹಾಡುವ ಸನ್ನಿವೇಶವಂತೂ ಸೃಷ್ಟಿಸಿದೆ.
ಸಿದ್ದರಾಮಯ್ಯ ಅವರು ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾದ ಮೂರೇ ತಿಂಗಳಿಗೆ ಮುಖ್ಯಮಂತ್ರಿ ಬದಲಾವಣೆ ವಿಷಯ ಮುನ್ನಲೆಗೆ ಬಂದಿದ್ದು, ಸಿದ್ದರಾಮಯ್ಯ ವರ್ಸಸ್ ಡಿಕೆಶಿ ಎಂಬಂತೆ ಅವರವರ ಬೆಂಬಲಿಗರು ಹೇಳಿಕೆ ಪ್ರತಿಹೇಳಿಕೆಗಳನ್ನು ನೀಡುತ್ತಲೆ ಬಂದಿದ್ದರು. ಇದೀಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಲ್ಲದಕ್ಕೂ ತೆರೆ ಎಳೆಯುವಂತೆ ಮುಂದಿನ ಮೂರು ವರ್ಷಗಳಿಗೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಅಧಿಕಾರ ಹಂಚಿಕೆ ಒಪ್ಪಂದ ನಡೆದಿಲ್ಲ ಎಂದು ಹೈಕಮಾಂಡ್ ಅಂಗಳದಲ್ಲೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದನ್ನು ಹೈಕಮಾಂಡ್ ಇದುವರೆಗೂ ಸ್ಪಷ್ಟಪಡಿಸಿಲ್ಲ. ಹಾಗಂತ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂಬುದನ್ನು ಕೂಡ ಎಲ್ಲಿಯೂ ಹೇಳಿಲ್ಲ. ರಾಜಕಾರಣದಲ್ಲಿ ಮಾತಿಗೊಂದು ಅರ್ಥ, ಮೌನಕ್ಕೊಂದು ಅರ್ಥ ಇರುತ್ತದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ಹೇಳಿಕೆ , ಪ್ರತಿಹೇಳಿಕೆಗಳ ಭರಾಟೆಗಳು ನಡೆದಿರುವಾಗಲೆ ಎಐಸಿಸಿ ಅಧ್ಯಕ್ಷರು ಎಚ್ಚರಿಕೆ ನೀಡಿದಾಗ್ಯೂ ನಾಯಕರ ಬೆಂಬಲಿಗರ ಬಾಯಿ ಮುಚ್ಚಿಸಲಾಗಲಿಲ್ಲ. ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದಷ್ಟೆ ಕಾಂಗ್ರೆಸ್ ವರಿಷ್ಠರು ಹೇಳಿದರೆ ವಿನಃ ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳಿಗೆ ನಿಖರವಾದ ಉತ್ತರಕೊಡದಿರುವುದು ಪಕ್ಷದ ಕಾರ್ಯಕರ್ತರು ಮತ್ತು ಸರ್ಕಾರದ ಆಡಳಿತದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು.
ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಕುಗ್ಗಿಲ್ಲ. ಕಾಂಗ್ರೆಸ್ ೨೦೨೮ ರ ವಿಧಾನಸಭಾ ಚುನಾವಣೆಯಲ್ಲೂ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡೆ ಮತಯಾಚಿಸುವುದು ಲಾಭದಾಯಕ ಎನ್ನುವ ಎಲ್ಲಾ ಅಂಶಗಳನ್ನು ಮನದಟ್ಟು ಮಾಡಿಕೊಂಡಿರುವ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನೆ ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಸುವ ಅನಿವಾರ್ಯತೆಗೆ ಬಿದ್ದಿದೆ.
ಸಿದ್ದರಾಮಯ್ಯ ಅವರೆ ಮುಂದುವರೆಯಲಿ ಎಂಬ ಹೈಕಮಾಂಡ್ ನ ಮನೋಇಂಗಿತದ ಸುಳಿವು ಅರಿತೆ ಸಿದ್ದರಾಮಯ್ಯ ಅವರು ಮುಂದಿನ ಮೂರುವರ್ಷವೂ ನಾನೆ ಸಿ.ಎಂ ಆಗಿರುತ್ತೇನೆ ಎಂದು ಘೋಷಿಸಿಕೊಂಡಿದ್ದಾರೆ ಎನ್ನುತ್ತಿವೆ ದೆಹಲಿ ಮೂಲಗಳು.
