ಶಿವಮೊಗ್ಗ: ಸಿಂಗದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಬಹಿಷ್ಕಾರ ಹಾಕಿ ಒಕ್ಕೂಟ ವ್ಯವಸ್ಥೆ ಗೆ ಅಸಹಕಾರ ಮನೋಭಾವವನ್ನು ತೋರಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದ್ದಾರೆ.
ಸಾಗರದಲ್ಲಿ ನೆನ್ನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರು ಕೊನೆಗಳಿಗೆಯಲ್ಲಿ ವಾಪಾಸ್ ಹೋಗಿದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳು ಭಾಗವಹಿಸದಿರುವುದರಲ್ಲಿ ಮುಖ್ಯಮಂತ್ರಿಗಳ ಪಾತ್ರವೇನಿಲ್ಲ. ಜಿಲ್ಲಾ ಸಚಿವ ಮಧುಬಂಗಾರಪ್ಪ ಸೇತುವೆ ಕೆಲಸದಲ್ಲಿ ತಮ್ಮದೇನು ಪಾತ್ರವಿಲ್ಲ ಎಂದು ಕಸಿವಿಸಿಯಾಗಿ ಕೀಳಿರಿಮೆಯಿಂದ ಬಹಿಷ್ಕರಿಸಿದ್ದಾರೆ. ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವರು, ಶಾಸಕರು ಭಾಗವಹಿಸುತ್ತೆನೆ ಎಂದು ಹೇಳಿ ಕೊನೆ ಘಳಿಗೆಯಲ್ಲಿ ಬರದೆ ಹೋದದ್ದು ವಿಧ್ವಂಸಕ ಕೃತ್ಯಕ್ಕೆ ಸಮ ಎಂದು ಸುದ್ದಿಗೋಷ್ಟಿಯಲ್ಲಿಂದು ಆರೋಪಿಸಿದರು.
ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಸಂಘಟಿಸಬೇಕಿತ್ತು. ಅವರೆ ಆಯೋಜಿಸಿದ್ದರೆ ನಾವು ಕೆಳಗೆ ಕುಳಿತು ನೋಡುತ್ತಿದ್ದೆವು. ಟ್ರಂಪ್ ಬಂದೂರು ಕಾರ್ಯಕ್ರಮಕ್ಕೆ ಭಾಗವಹಿಸುತ್ತೇವೆ ಎಂದು ಹೇಳಿದವರು ಕೊನೆಗೆ ಯಾಕೆ ಬರಲಿಲ್ಲ ಎಂದು ಸಚಿವ ಮಧುಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ದ ವಾಗ್ದಾಳಿ ನಡೆಸಿದ ಹರತಾಳು ಹಾಲಪ್ಪ, ಸೇತುವೆ ಯಾರಪ್ಪನ ದುಡ್ಡು ಹಾಕಿಲ್ಲ. ಸರ್ಕಾರದ ದುಡ್ಡು, ಕಾಂಗೇಸ್ ಸರ್ಕಾರವಿದ್ದಾಗಲೆ ಯಾಕೆ ಮಾಡಬಾರದಿತ್ತು. ಅಸಂಬದ್ದ ಮಾತುಗಳನ್ನು ಬಿಡಬೇಕು. ಯಡಿಯೂರಪ್ಪ ಮತ್ತು ಮಕ್ಕಳು ಯಾವತ್ತೂ ಅಭಿವೃದ್ದಿಗೆ ವಿರೋಧ ಮಾಡಿಲ್ಲ. ಸೇತುವೆ ಉದ್ಘಾಟನೆಯಲ್ಲಿ ಯಾವುದೇ ಶಿಷ್ಟಾಚಾರದ ಲೋಪ ಆಗಿಲ್ಲ. ಜಿಲ್ಲಾ ಮಂತ್ರಿ ಕಿಳಿರಿಮೆಯಿಂದಾಗಿ ಕಾರ್ಯಕ್ರಮಕ್ಕೆ ಭಾಗವಹಿಸಿಲ್ಲ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡ ವ್ಯಕ್ತಿ, ನಮ್ಮ ಪಕ್ಷ ಸಿದ್ದಾಂತ ಏನೆ ಇದ್ದರೂ ಅವರನ್ನು ಗೌರವಿಸುತ್ತೇವೆ. ಆದರೆ ಅವರು ಜಿಲ್ಲಾ ಮಂತ್ರಿ ,ಶಾಸಕರ ಮಾತು ಕೇಳಿಕೊಂಡು ಕಾರ್ಯಕ್ರಮಕ್ಕೆ ಬಾರದೆ ಇರುವ ಸಣ್ಣ ತನ ತೋರಬಾರದಿತ್ತು. ಹಸಿರುಮಕ್ಕಿ ಸೇತುವೆಗೆ ಬಿಜೆಪಿ ಸರ್ಕಾರದಲ್ಲಿ ೫೦ ಕೋ.ರೂ ಬಿಡುಗಡೆ ಮಾಡಿದ್ದು, ಈಗ ಕಾಂಗ್ರೆಸ್ ಸರ್ಕಾರವೇ ಇದೆ ಜಿಲ್ಲಾ ಮಂತ್ರಿ ಮಧುಬಂಗಾರಪ್ಪ ಹಣ vಂದು ಪೂರ್ಣಗೊಳಿಸಲಿ ಅಸಂಬದ್ಧಮಾತುಗಳನ್ನು ಬಿಟ್ಟು ಜಿಲ್ಲೆಯಲ್ಲಿ ಕೆಲಸ ಮಾಡಿಲಿ ಎಂದು ಹಾಲಪ್ಪ ತಾಕೀತು ಮಾಡಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಏನೇನೋ ಮಾತಾಡುತ್ತಾರೆ. ಯಡಿಯೂರಪ್ಪ ಅವರ ಬಗ್ಗೆ ಒಳಗೊಂದು ಹೊರಗೊಂದು ಮಾತಾಡುತ್ತಾರೆ. ಸರ್ಕಾರದಲ್ಲಿ ಗುಂಪಿನಿಂದ ಗುಂಪಿಗೆ ಹಾರಲು ಸಿದ್ದರಾಮಯ್ಯ ಅವರನ್ನೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ . ಇದು ಹಿಂದಿನಿಂದಲೂ ಅವರಿಗೆ ಬಂದಿರುವ ಚಾಳಿ ಎಂದು ವಾಗ್ದಾಳಿ ನಡೆಸಿದರು.
ಸುದ್ಧಿಗೋಷ್ಟಿಯಲ್ಲಿ ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಡಿ.ಎಸ್ ಅರುಣ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಶಿವರಾಜು, ಹರಿಕೃಷ್ಣ, ಅಣ್ಣಪ್ಪ, ಮಾಲತೇಶ ಉಪಸ್ಥಿತರಿದ್ದರು.
