ಶಿವಮೊಗ್ಗ, ಆ.18 :ವಿಜ್ಞಾನ ನಿಂತ ನೀರಲ್ಲ. ಸದಾ ಚಲನೆಯಲ್ಲಿರುವ ಅನ್ವೇಷಣೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ನಮ್ಮ ಮನೆ-ಮನಗಳಿಗೆ ವಿಜ್ಞಾನವೇ ಬರುತ್ತಿದ್ದು ಅದನ್ನು ಬಳಸಿಕೊಳ್ಳುವ ಮನಸ್ಥಿತಿ ನಮ್ಮದಾಗಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ನ ಅಧ್ಯಕ್ಷರು ಹಾಗೂ ಕೆಎಸ್ಟಿಎ ಸದಸ್ಯರಾದ ಡಾ.ಹುಲಿಕಲ್ ನಟರಾಜ್ ನುಡಿದರು.
ವಿಜ್ಞಾನ ತಂತ್ರಜ್ಞಾನ ಸಂಶೋಧನೆ ಮತ್ತು ಕಲಾ ಪ್ರಗತಿ ಸಂಸ್ಥೆ ಹಾಗು ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ವತಿಯಿಂದ ಕೆಳದಿ ಶಿವಪ್ಪನಾಯಕ ಕೃಷಿ ತೋಟಗಾರಿಗೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇವರ ಸಹಯೋಗದಲ್ಲಿ ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಸೋಮವಾರದಿಂದ ಏರ್ಪಡಿಸಲಾಗಿರುವ ಐದು ದಿನಗಳ ವಿಜ್ಞಾನ ಮತ್ತು ತಂತ್ರಜ್ಞಾನಗಳ ವಸ್ತು ಪ್ರದರ್ಶನ – ಅನ್ವೇಷಣೋತ್ಸವ2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಯ, ಆತಂಕ, ದುಗುಡ, ದುರಾಸೆಯಿಂದ ವಿಜ್ಞಾನ ದೂರವಾಗುತ್ತದೆ. ಆದರೆ ನಾವು ಇವನ್ನೆಲ್ಲ ಮೀರಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಅಭಿವೃದ್ದಿಯೆಡೆ ಹೆಜ್ಜೆ ಹಾಕಬೇಕು. ವಿಜ್ಞಾನಕ್ಕೆ ಸಂಬಂಧಿಸಿದಂತೆ ಸದಾ ಕುತೂಹಲಿಗಳಾಗಿದ್ದು ಪ್ರತಿ ವಿಷಯಗಳ ಬಗ್ಗೆ ಮಾಹಿತಿ ಪಡೆದು, ವಿಚಾರಿಸಿ ಅದರಲ್ಲಿ ತೊಡಗಿಕೊಳ್ಳಬೇಕೆಂದರು.
ಅನ್ವೇಷಣೋತ್ಸವದಲ್ಲಿ ದೇಶದ ಪ್ರತಿಷ್ಟಿತ 8 ಸಂಸ್ಥೆಗಳು ಪಾಲ್ಗೊಂಡಿದ್ದು ವಿದ್ಯಾರ್ಥಿಗಳಲ್ಲಿನ ಚೈತನ್ಯವನ್ನು ಪುಟಿದೇಳಿಸುವ ಉದ್ದೇಶ ಹೊಂದಿವೆ. ಡಿಆರ್ಡಿಒ, ಇಸ್ರೋ, ಪ್ಲಾಸ್ಮಾ ಸಂಶೋಧನಾ ಸಂಸ್ಥೆಗಳಿಗೆ ಸಾಮಾನ್ಯರಿಗೆ ಪ್ರವೇಶ ಕಷ್ಟವಾಗಿದೆ. ಆದರೆ ಈ ಸಂಸ್ಥೆಗಳು ಈಗ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಪ್ರದರ್ಶನದ ಸದುಪಯೋಗ ಪಡೆಯಬೇಕು. ಪ್ರತಿ ವಿದ್ಯಾರ್ಥಿಗಳು ವಿಜ್ಞಾನಿಗಳಾಗಬೇಕು. ಹೊಸ ಅನ್ವೇಷಣೆಗಳನ್ನು ಮಾಡಬೇಕು. 24/7 ಅನ್ವೇಷಣೆಯಲ್ಲಿ ತೊಡಗಿದಾಗ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಕೌತುಕ ಮೂಡಿಸಿದ ಪ್ರದರ್ಶನ :
ಪ್ರದರ್ಶನದ ಆರಂಭದಲ್ಲಿ ವಿಐಟಿಎಂ ನವರ “ಸೈನ್ಸ್ ಆನ್ ವೀಲ್ಸ್” ಎಲ್ಲರ ಗಮನ ಸೆಳೆದು, ಸಾರ್ವಜನಿಕರು, ವಿದ್ಯಾರ್ಥಿಗಳು ಮೊಬೈಲ್ ವಾಹನದೊಳಗೆ ಫಲಕಗಳನ್ನು ಓದಿಕೊಂಡು ಸ್ವತಃ ತಾವೇ ಉತ್ಸಾಹದಿಂದ ಪ್ರಯೋಗ ಮಾಡುತ್ತಿದ್ದರು.
ಇಸ್ರೋದ ಉಪಗ್ರಹಗಳ ಮಾದರಿ, ಬಾಹ್ಯಾಕಾಶ ನೌಕೆಗಳ ಚಿತ್ರ-ಮಾದರಿಗಳು, ಬಾಹ್ಯಾಕಾಶ ಸಂಶೋಧನೆಗಳ ವಿವರಗಳು, ಪ್ಲಾಸ್ಮಾ ಮತ್ತು ಫ್ಯೂಷನ್ ವಿಜ್ಞಾನ ಹಾಗೂ ಪ್ಲಾಸ್ಮಾದ ಜೀವಂತ ಪ್ರದರ್ಶನಗಳು ಮಾಹಿತಿಪೂರ್ಣವಾಗಿದ್ದು ಆಸಕ್ತಿದಾಯಕವಾಗಿವೆ. ಆರ್ಯಭಟ ಪ್ಲಾನೆಟೊರಿಯಂ ನಲ್ಲಿ ಡೋಮ್ ವಿಜುಯಲ್ಸ್ ಮೂಲಕ ಕಾಸ್ಮಿಕ್ ಜಗತ್ತಿನ ಪರಿಚಯ ಮಾಡಿಸುವುದು ವಿಸ್ಮಯಾತ್ಮಕ ಅನುಭವ ನೀಡುತ್ತದೆ.
