ಕೈಮಗ್ಗ ನಿಗಮಕ್ಕೆ ಚೇತನ್ಗೌಡ: ಒಂದೇ ಜಾತಿಗೆ ಮಣೆ- ಪಕ್ಷದಲ್ಲಿ ಅಸಮಾಧಾನ!
ಹಿರಿತನ ಕಡೆಗಣನೆ- ಇದ್ಯಾವ ಸೀಮೆ ಸಾಮಾಜಿಕ ನ್ಯಾಯ?
ಶಿವಮೊಗ್ಗ: ರಾಜ್ಯ ಸರ್ಕಾರದ ರಾಜ್ಯ ಕೈಮಗ್ಗ ಮತ್ತು ಜವಳಿ ನಿಗಮದ ಅಧ್ಯಕ್ಷರನ್ನಾಗಿ ಯುವ ಕಾಂಗ್ರೆಸ್ ಮಾಜಿ ಪ್ರಧಾನಕಾರ್ಯದರ್ಶಿ ಚೇತನ್ ಗೌಡ ಅವರನ್ನು ನೇಮಕ ಮಾಡಲು ಎಐಸಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ರಾಜ್ಯಸರ್ಕಾರದ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷ ನೇಮಕ ಮಾಡಲು ಎಐಸಿಸಿ ಶಿಫಾರಸ್ಸು ಪಟ್ಟಿ ಹೊರಬಿದ್ದ ಬೆನ್ನಲ್ಲೇ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.
ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳ ನಂತರ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆಗೆ ಮುಂದಾಗಿರುವ ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರದ 39 ವಿವಿಧ ನಿಗಮ , ಮಂಡಳಿಗೆ ಅಧ್ಯಕ್ಷ ನೇಮಕಾತಿಗೆ ಪಕ್ಷದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಮುಖ್ಯಮಂತ್ರಿಗಳಿಗೆ ಮಾಡಿರುವ ಶಿಫಾರಸ್ಸು ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ರಾಜ್ಯ ಯುವಕಾಂಗ್ರೇಸ್ ಮಾಜಿ ಪ್ರಧಾನಕಾರ್ಯದರ್ಶಿ ಚೇತನ್ ಗೌಡ ಅವರ ಹೆಸರಿದ್ದು, ಅವರನ್ನು ರಾಜ್ಯ ಕೈಮಗ್ಗ ಮತ್ತು ಜವಳಿ ನಿಗಮಕ್ಕೆ ಅಧ್ಯಕ್ಷರನ್ನಾಗಿಸಲೂ ಸೂಚಿಸಲಾಗಿದೆ.
ಚೇತನ್ಗೌಡ ವಿದ್ಯಾರ್ಥಿ ಕಾಂಗ್ರೇಸ್ನಿಂದಲೂ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಯುವಕಾಂಗ್ರೇಸ್ನ ಮಾಜಿ ಪ್ರಧಾನಕಾಂiiದರ್ಶಿಯೂ ಆಗಿದ್ದಾರೆ. ಆದರೆ ಪಕ್ಷದಲ್ಲಿ ವಿದ್ಯಾರ್ಥಿ ಕಾಂಗ್ರೆಸ್ನಿಂದಲೂ ಪಕ್ಷಕ್ಕ ನಿಷ್ಠೆಯಿಂದ ದುಡಿದ ಅನೇಕ ಹಿರಿಯರು ಇರುವಾಗಲೆ ಅವರ ಹಿರಿತವನ್ನು ಕಡೆಗಣಿಸಿ ಚೇತನ್ಗೌಡ ಅವರಿಗೆ ಮಣೆ ಹಾಕಿರುವುದು ಪಕ್ಷದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಒಂದೇ ಜಾತಿಗೆ ಪ್ರಾಮುಖ್ಯತೆ:
ಜಿಲ್ಲೆಯಲ್ಲಿ ಸರ್ಕಾರಿ ನಾಮನಿರ್ದೇಶನದಲ್ಲಿ ಒಂದೇ ಜಾತಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಪಕ್ಷಕ್ಕಾಗಿ ದುಡಿದ ಇತರೆ ವರ್ಗಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪಕ್ಕೆ ಚೇತನ್ಗೌಡ ಅವರ ಈಗಿನ ನೇಮಕಾತಿಯೂ ಪುಷ್ಠಿ ನೀಡಿದಂತಿದೆ.
ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ(ಸೂಡಾ) ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಮಂಡಳಿ(ಕಾಡಾ) ಅಧ್ಯಕ್ಷ ಸ್ಥಾನದಲ್ಲಿ ಈಗಾಗಲೆ ಒಕ್ಕಲಿಗ ಸಮುದಾಯದವರೇ ಇದ್ದು, ಆಶ್ರಯ ಸಮಿತಿ, ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯಗಳಿಗೆ ಸದಸ್ಯರ ನೇಮಕಾತಿಯಲ್ಲೂ ಒಕ್ಕಲಿಗ ಸಮುದಾಯ ಪ್ರಾಬಲ್ಯ ಪಡೆದುಕೊಂಡಿದೆ. ಹೀಗಿದ್ದಾಗ್ಯೂ ಅದೇ ಸಮುದಾಯದ ಚೇತನ್ಗೌಡ ಅವರನ್ನು ರಾಜ್ಯಮಟ್ಟದ ನಿಗಮಕ್ಕೆ ನೇಮಕ ಮಾಡಲು ಹೊರಟಿರುವುದು ಯಾವ ಸೀಮೆ ಸಾಮಾಜಿಕ ನ್ಯಾಯ ಎಂದು ಹೆಸರು ಹೇಳಲಿಚ್ಚಿಸದ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ , ದಲಿತ ಸಮುದಾಯದ ಅನೇಕ ಯುವ ಮುಂದಾಳುಗಳು ಪಕ್ಷಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದರೂ ಅವರನ್ನು ಕಡೆಗಣಿಸಿ ಒಂದೇ ಜಾತಿಗೆ ಮಣೆ ಹಾಕುತ್ತಿರುವುದು ಸರಿಯಲ್ಲ. ಯುವಕರಿಗೆ ಪಕ್ಷದಲ್ಲಿ ಅವಕಾಶ ಕಲ್ಪಿಸುವ ಪಕ್ಷದ ನಿರ್ಧಾರ ಸ್ವಾಗತಾರ್ಹ .ಆದರೆ ಪಕ್ಷಕ್ಕಾಗಿ ದುಡಿಯುತ್ತಿರುವ ಚೇತನ್ಗೌಡ ಅವರಿಗಿಂತಲೂ ಹಿರಿತನ ಹೊಂದಿರುವವರನ್ನು ಬದಿಗೊತ್ತಿರುವುದು ಪಕ್ಷಕ್ಕಾಗಿ ದುಡಿದವರಿಗೆ ಭ್ರಮನಿರಸನ ಉಂಟು ಮಾಡಿದೆ ಎನ್ನುತ್ತಾರೆ.
ನಿಗಮ ಮಂಡಳಿ, ವಿಶ್ವವಿದ್ಯಾನಿಲಯ ಸೇರಿದಂತೆ ಸರ್ಕಾರದ ವಿವಿದ ಸಂಸ್ಥೆಗಳಿಗೆ ನಾಮ ನಿರ್ದೇಶನದಿಂದ ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆವರೆಗೂ ಬಲಾಢ್ಯ ಜಾತಿಗಳಿಗೆ ಮಣೆ ಹಾಕಲಾಗುತ್ತಿದ್ದು , ದಲಿತರು, ಹಿಂದುಳಿದ ವರ್ಗಗಳನ್ನು ಕೇವಲ ದುಡಿಸಿಕೊಳ್ಳಲು ಮಾತ್ರ ಸೀಮಿತವಾಗಿದೆ. ,ಅಹಿಂದ ಮುಖ್ಯಮಂತ್ರಿಯೆಂದೆ ಹೆಗ್ಗಳಿಕೆ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲೇ ಸಾಮಾಜಿಕ ನ್ಯಾಯ ದಿವಾಳಿಯಾಗುತ್ತಿರುವುದು ವಿಪರ್ಯಾಸ ಎಂದು ಜಿಲ್ಲಾಕಾಂಗ್ರೆಸ್ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಯೋಗ ತೆರಳಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ’ಶಿವಮೊಗ್ಗ ಟೆಲೆಕ್ಸ್’ ನೊಂದಿಗೆ ಮಾತನಾಡುತ್ತಾ ತಿಳಿಸಿದರು.
