ಕುವೆಂಪು ವಿವಿಯಲ್ಲಿ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರಸಂಕಿರಣ: ವ್ಯಾಪಕ ವಿರೋಧ
ಕುವೆಂಪು, ಅನಂತಮೂರ್ತಿ ಆಶಯಗಳಿಗೆ ಧಕ್ಕೆ -ಸಂಘಪರಿವಾರದ ಅಜೆಂಡಾ ಜಾರಿಗೆ ಹುನ್ನಾರ!
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯ ಸ್ವರ್ಣ ರಶ್ಮಿ ಟ್ರಸ್ಟ್ ಮತ್ತು ಶ್ರೀ ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ವತಿಯಿಂದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿರುವ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರ ಸಂಕಿರಣಕ್ಕೆ ಬೌದ್ಧಿಕ ವಲಯ ಮತ್ತು ಪ್ರಗತಿಪರ ಚಿಂತಕರ ವಲಯದಿಂದ ತೀವ್ರವಿರೋಧ ವ್ಯಕ್ತವಾಗುತ್ತಿದೆ.
ಕುವೆಂಪು ವಿವಿ ಕುಲಪತಿಗಳಾದ ಶರತ್ ಅನಂತಮೂರ್ತಿ ಅವರು ವಿಶ್ವವಿದ್ಯಾನಿಲಯದಲ್ಲಿ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರ ಸಂಕಿರಣ ಅಯೋಜಿಸಿರುವುದನ್ನು ಸಮರ್ಥಿಸಿಕೊಂಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಈ ವಿಚಾರಸಂಕಿರಣದ ಔಚಿತ್ಯವನ್ನು ಪ್ರಶ್ನಿಸಿ ಕುವೆಂಪು ವಿವಿ ಯ ಕುಲಪತಿಗಳಿಗೆ ಪತ್ರ ಬರೆದಿರುವ ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ ಶ್ರೀಪಾಲ್ ಅವರು, ವಿಚಾರ ಸಂಕಿರಣದಲ್ಲಿ ಬಹುತೇಕರು ಬಲಪಂಥೀಯ ಸಿದ್ದಾಂತವನ್ನು ಪ್ರತಿಪಾದಿಸುವ ಹಾಗೂ ಸಂಘಪರಿವಾರದ ಬೇರೆ ಬೇರೆ ಕಾರ್ಯಕ್ರಮಗಳ ಹೆಸರಿನಲ್ಲಿ ವಿಶ್ವವಿದ್ಯಾನಿಲಯಗಳಿಗೆ ಬರುತ್ತಿದ್ದು, ಇದೀಗದ ಭಗವದ್ಗೀತೆಯ ಹೆಸರಲ್ಲಿ ಕುವೆಂಪು ವಿವಿಗೆ ಬರುತ್ತಿದ್ದಾರೆ. ಇವರೆಲ್ಲರೂ ಗಾಂಧಿ, ಬುದ್ದ, ಬಸವಣ್ಣ , ಅಂಬೇಡ್ಕರ್ ನಿಲುವುಗಳನ್ನು ವಿರೋಧಿಸುವ ಸಂಸ್ಥೆಯ ಸಕ್ರೀಯವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇಡೀ ದೇಶದ ವಿಶ್ವ ವಿದ್ಯಾಲಯಗಳನ್ನು ಒಂದೇ ಸಿದ್ದಾಂತದ ಅಡಿಯಲ್ಲಿ ತಂದು, ವಿದ್ಯಾರ್ಥಿಗಳಿಗೆ ಸಂವಿದಾನಕ್ಕಿಂತ ಹೆಚ್ಚಾಗಿ ಮನುಸ್ಮೃತಿಯನ್ನು ತಲೆಗೆ ತುಂಬಬೇಕು ಎಂಬ ಸಂಘಪರಿವಾರದ ತೀರ್ಮಾನದಂತೆ ಬೇರೆ ಬೇರೆ ಕಾರ್ಯಕ್ರಮಗಳ ಹೆಸರಿನಲ್ಲಿ ಬರುತ್ತಿದ್ದವರು ಈಗ ಭಗವದ್ಗೀತೆ ಹೆಸರಿನಲ್ಲಿ ವಿಶ್ವ ವಿದ್ಯಾಲಯಗಳಿಗೆ ಬರುತ್ತಿದ್ದಾರೆ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಚಾತುರ್ವರ್ಣ ವ್ಯವಸ್ಥೆಯ ಮೂಲವನ್ನು ಭಗವದ್ಗೀತೆಯಿಂದಲೆ ಸಮರ್ಥಿಸಲಾಗುತ್ತದೆ, ಇದು ನಾವು ಒಪ್ಪಿಕೊಂಡಿರುವ ಈ ದೇಶದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ದವಾಗಿರುತ್ತದೆ. ಕೆಲವು ಸಿದ್ದಾಂತಗಳನ್ನು ವಿಶ್ವ ವಿದ್ಯಾಲಯಗಳಿಗೆ ಸುಳಿಯದಂತೆ ನೋಡಿಕೊಳ್ಳುವುದು ಪ್ರಜ್ಞಾವಂತರಾದ ನಮ್ಮಗಳ ಜವಬ್ದಾರಿ, ಅದರಲು ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಹೆಸರಿನ ವಿಶ್ವ ವಿಧ್ಯ್ಯಾಲಯದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿರುವ ಕಾರ್ಯಕ್ರಮಗಳು ನಡೆಯುವುದನ್ನು ನಾನು ತೀವ್ರವಾಗಿ ಖಂಡಿಸುವೆ. ಜೊತೆಗೆ ನಾನ್ನೊಬ್ಬ ಸಿಂಡಿಕೇಟ್ ಸದಸ್ಯನಾಗಿ, ವಕಿಲನಾಗಿ ಜಾತ್ಯಾತೀತಗೆ ದಕ್ಕೆ ತರುವ ವರ್ಣಾಶ್ರಮವನ್ನು ಪ್ರತಿಪಾದಿಸುವ ಕಾರ್ಯಕ್ರಮಗಳನ್ನು ವಿರೋದಿಸದಿದ್ದಲ್ಲಿ ನಾನು ಕೂಡ ಅದರಲ್ಲಿ ಭಾಗಿಯಾದಂತೆ ಈ ಹಿನ್ನಲೆಯಲ್ಲಿ ನ. 18 ರಂದು ಹಮ್ಮಿಕೊಂಡಿರುವ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ಎಂಬ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ವಿವಿಯ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ,ಉನ್ನತ ಶಿಕ್ಷಣ ಸಚಿವರಿಗೂ ಶ್ರೀಪಾಲ್ ಪತ್ರ ಬರೆದಿದ್ದಾರೆ.
ಕುಲಪತಿಗಳಿಗೆ ಬಹಿರಂಗ ಪತ್ರ

ಲೇಖಕ ಹರ್ಷಕುಮಾರ್ ಕುಗ್ವೆ ಅವರು ಕುವೆಂಪು ವಿವಿ ಕುಲಪತಿಗಳಿಗೆ ಬಹಿರಂಗ ಪತ್ರ ಬರೆದಿದ್ದು, ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಭಾರತದಲ್ಲಿ ಮನುಷ್ಯರೆಲ್ಲರಿಗೂ ಅತ್ಯಗತ್ಯವಾದ ಕೆಲವು ಮೂಲಬೂತ ತತ್ವಗಳ ನೆಲೆಯಲ್ಲಿ ಭಗವದ್ಗೀತೆ, ಮನುಸ್ಮೃತಿಯಂತಹ ಪಠ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವುದು ತಮಗೂ ತಿಳಿದಿರಬಹುದು. ಕುವೆಂಪು ವಿಶ್ವವಿದ್ಯಾಲಯದಂತಹ ಯೂನಿವರ್ಸಿಟಿ ಪ್ರಜಾಪ್ರಭುತ್ವ, ಸಂವಿಧಾನದ ಮೂಲ ತತ್ವಗಳ ನೆಲೆಯಲ್ಲಿ ಭಗವದ್ಗೀತೆ, ಮನುಸ್ಮೃತಿ, ವೇದ ಸಾಹಿತ್ಯ, ಪ್ರಾಚೀನ ಜ್ಞಾನ ಪರಂಪರೆ ಇತ್ಯಾದಿಗಳನ್ನು ಚರ್ಚಿಸಬೇಕೆ ಅಥವಾ ಈಗಾಗಲೇ ದೇಶವನ್ನು ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಹೇಗೆ ಒಡೆಯಬೇಕು ಎಂದು ನೀಲನಕ್ಷೆ ಇಟ್ಟುಕೊಂಡು ಹೊರಟಿರುವ ಐಡಿಯಾಲಜಿಗಳ ಜನರ ಮೂಲಕ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕೆ? ಈ ಕುರಿತು ನಿಮ್ಮ ವಿವೇಚನೆ ಏನು ಎಂದು ಪ್ರಶ್ನಿಸಿದ್ದಾರೆ.
ಭಗವದ್ಗೀತೆಯಾಗಲೀ, ಮನಸ್ಮೃತಿಯಾಗಲೀ ಯೂನಿವರ್ಸಿಟಿಯಲ್ಲಿ ಚರ್ಚೆಯಾಗಬಾರದು ಎಂದೇನಿಲ್ಲ. ಆದರೆ ಮುಕ್ತ ಚರ್ಚೆ ಎಂದರೆ ಅಲ್ಲಿ ಒಂದೇ ಐಡಿಯಾಲಜಿಯವರನ್ನು ಕರೆಸಿ ಭಾಷಣ ಕೊಡುವುದಲ್ಲ. ನಿಮಗೆ ಅಷ್ಟು ಆಸಕ್ತಿ ಇದ್ದರೆ ಭಗವದ್ಗೀತೆಯ ಕುರಿತು ಹಲವು ನೆಲೆಗಳಲ್ಲಿ ಚರ್ಚೆ ಇಟ್ಟುಕೊಳ್ಳಬಹುದಿತ್ತು. ಬಹಳ ಮುಖ್ಯವಾಗಿ ಅಂಬೇಡ್ಕರ್ ಅವರು ಚರ್ಚಿಸಿರುವ ನೆಲೆಯನ್ನು, ಗಾಂಧೀಜಿ ಚರ್ಚಿಸಿರುವ ನೆಲೆಯನ್ನುಕೂಡಾ ಸೇರಿಸಿಕೊಳ್ಳಬಹುದಿತ್ತು. ಆದರೆ, ನಾಡಿದ್ದು ನಡೆಯುತ್ತಿರುವ ಕಾರ್ಯಕ್ರಮಕ್ಕೆ ಮುಕ್ತ ಚಿಂತನೆಯ ಉದ್ದೇಶವಿರದೇ ಮನುವಾದಿ, ವರ್ಣಾಶ್ರಮ ಚಿಂತನೆಯನ್ನು ಯೂನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ದಕ್ಕಿಸಿಕೊಳ್ಳುವ ಒಂದೇ ಅಜೆಂಡಾವಿರುವುದು ಸ್ಪಷ್ಟ. ಇದಕ್ಕೆ ನಮ್ಮ ವಿರೋಧವಿದೆ ಎಂಬುದನ್ನು ಈ ಮೂಲಕ ನಿಮಗೆ ತಿಳಿಸಲು ಬಯಸುತ್ತೇನೆ. ಈ ಕಾರ್ಯಕ್ರಮವನ್ನು ರದ್ದುಪಡಿಸಿ ಕಾರ್ಯಕ್ರಮದ ರೂಪುರೇಷೆಯನ್ನು ಡೆಮಕ್ರಟಿಕ್ ಆಗಿ ನಡೆಸಿ, ಯೂನಿವರ್ಸಿಟಿಯ ಬೇರೆ ಬೇರೆ ವಿಭಾಗಗಳನ್ನೂ ಒಳಗೊಂಡು ಹೊಸ ರೀತಿಯಲ್ಲಿ ನಿಜವಾದ ಮುಕ್ತ ಚರ್ಚೆಯನ್ನು ಮತ್ತೊಂದು ದಿನ ಆಯೋಜಿಸಬೇಕು ಎಂದು ಹರ್ಷಕುಮಾರ್ ಕುಗ್ವೆ ಆಗ್ರಹಿಸಿದ್ದಾರೆ.
“ಶರತ್ ಅನಂತಮೂರ್ತಿ ಅವರ ಕಾಲದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಖಂಡನಾರ್ಹ… ಕುಲಪತಿಗಳು ಕುವೆಂಪು ಚಿಂತನೆಗಳನ್ನು ನೆನಪು ಮಾಡಿಕೊಳ್ಳಲಿ…”
-ಲಕ್ಸ್ಮಣ ಕೊಡಸೆ. ಹಿರಿಯ ಪತ್ರಕರ್ತರು.
ಡಿಎಸ್ ಎಸ್ ತಮಟೆ ಚಳವಳಿ:
ನಾಳೆ ಆಯೋಜಿಸಿರುವ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರ ಸಂಕಿರಣಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ವಿಶ್ವಮಾನವ ಸಂದೇಶವನ್ನು ಬೋಧಿಸಿದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆಸಲು ಮುಂದಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ವಿದ್ಯಾ ನಿಲಯದ ಕುಲಪತಿಗಳೇ ವಹಿಸಿಕೊಂಡಿರುವುದನ್ನು ಗಮನಿಸಿದರೆ ಇದು ಕುವೆಂಪುರವರ ಆದರ್ಶಗಳಿಗೆ ಮಾಡುತ್ತಿರುವ ಅಪಚಾರ ಮತ್ತು ಅಂಬೇಡ್ಕರ್ ರವರ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರವಾಗಿದೆ ಎಂದು ಟೀಕಿಸಿದ್ದಾರೆ.
ಸಂಘಪರಿವಾರದವರು ಭಗವದ್ಗೀತೆ ಪ್ರಚಾರದ ಮೂಲಕ ವಿಶ್ವ ವಿದ್ಯಾ ನಿಲಯಗಳಿಗೆ ಬರುತ್ತಿದ್ದಾರೆನ್ನುವುದು ಗುಟ್ಟಾಗೇನು ಇಲ್ಲ. ಸದರಿ ಕಾರ್ಯಕ್ರಮಕ್ಕೆ ಬರುವ ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಸಹ ಬಲಪಂಥೀಯ ಸಿದ್ದಾಂತವನ್ನು ಪ್ರತಿಪಾದಿಸುವ ಹಾಗೂ ಗಾಂಧಿ ಬಸವಣ್ಣ ಮತ್ತು ಅಂಬೇಡ್ಕರ್ ವಿಚಾರಗಳನ್ನು ವಿರೋಧಿಸುವ ಸಂಸ್ಥೆಯ ಸಕ್ರೀಯ ಸದಸ್ಯರುಗಳಾಗಿದ್ದಾರೆ. ನ.18 ರಂದು ನಡೆಯಲಿರುವ “ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸಬೇಕು. ಒಂದು ವೇಳೆ ರದ್ದುಗೊಳಿಸದಿದ್ದರೆ ಸಮಿತಿಯ ವತಿಯಿಂದ ಪ್ರತಿಭಟನಾ ತಮಟೆ ಚಳುವಳಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಕುವೆಂಪು ವಿವಿ ಆಯೋಜಿಸಿರುವ ಈ ವಿಚಾರ ಸಂಕಿರಣ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲೂ ವಿರೋಧ್ಯವ್ಯಕ್ತವಾಗುತ್ತಿದ್ದು, ಹರ್ಷಕುಮಾರ್ ಕುಗ್ವೆ ಅವರ ಬಹಿರಂಗ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕುಲಪತಿ ಶರತ್ ಅನಂತಮೂರ್ತಿ ಅವರು ನಾಳಿನ ವಿಚಾರ ಸಂಕಿರಣವನ್ನು ಸಮರ್ಥಿಸಿಕೊಂಡಿರುವುದು ಪ್ರಗತಿಪರ ವಲಯದಲ್ಲಿ ಆಶ್ಚರ್ಯ ವ್ಯಕ್ತವಾಗುತ್ತಿದೆ.
ಹರ್ಷಕುಮಾರ್ ಕುಗ್ವೆ ಅವರೇ ನಿಮ್ಮ ಅಭಿಪ್ರಾಯ critical ಆಗಿದ್ದೂ ಅತ್ಯಂತ ಗೌರವದಿಂದಲೇ ಆಡಿದ ಮಾತು ನಿಜವಾಗಿಯೂ ನನ್ನನ್ನು ಮರುಚಿಂತನೆಗೆ ಹಚ್ಚಿದೆ. ಆದರೆ ನೀವು ಕೆಲ issues ನ conflate ಮಾಡಿ ಹೇಳುತ್ತಿದ್ದೀರಿ! ಯಾರೋ ಒಬ್ಬ ಚಿಂತಕ ((I think it was Rousseau)) ಹೇಳಿದ ಹಾಗೆ, I am in complete disagreement with what you are saying, but I’ll defend to death, your right to say it”. ಮೇಲ್ನೋಟಕ್ಕೆ ಒಂದು ಧಾರ್ಮಿಕ ಗ್ರಂಥ ಕುರಿತು ಅಪರಾಧ ತಡೆಯಲ್ಲಿ ಅದರ ಪಾತ್ರ ಏನಿರಬಹುದು ಎಂಬ ಚರ್ಚೆಯಾಗ ಬೇಕೆಂಬ ( ಆಧುನಿಕ ಚೌಕಟ್ಟಿನ ನೆಲೆಯಲ್ಲಿ) ಚರ್ಚೆಯಲ್ಲಿ in principle ತಪ್ಪು ಕಾಣುವುದಿಲ್ಲ. ಎಲ್ಲಿ problem ಆಗಬಹುದು ಎಂದರೆ ಧಾರ್ಮಿಕ ರೀತಿಯ ಪ್ರಚಾರ ವಾಗ ಬಾರದು. University ಯಲ್ಲಿ ಎಲ್ಲಾ ತರದ ಚರ್ಚೆ ಗಳಿಗೂ ಅವಕಾಶವಿರ ಬೇಕು ಆದರೆ critical approach ನು ಎಂದೂ ಕೈಬಿಡಕೂಡದು. ಇವರ ಈ framework ನ ಮೊದಲ ಟೀಕಾಕಾರನೇ ನಾನು! ! Please come to this function ಆದರೆ ನಮಗೆ ಇದು ಸರಿಯಲ್ಲ ಅಂತ ಅನ್ನಿಸಿದರೆ ಇದನ್ನು ಛಿeಟಿsoಡಿ ಮಾಡುವುದು ತಪ್ಪು. Let the university continue to be a place for debate, dissension, disagreements but all done through mutual respect!ಈ ವಿಷಯದಲ್ಲಿ ಕುವೆಂಪುರವರ ಜೀವನದೃಷ್ಟಿ ತತ್ವಗಳಿಗೆ ನಿಜವಾದ ಅರ್ಥ ತರಲು ಸಾಧ್ಯ. ಕೇವಲ ಹುಸಿತನದಿಂದ ಕೂಡಿದ ಧೋರಣೆ ಗಳಿಂದಲ್ಲ.Anyway I deeply appreciate and thank you for this point of view you have expressed and would really like to discuss this further with you. Let us meet shortly ಎಂದು ಸಮರ್ಥಿಸಿಕೊಂಡಿದ್ದಾರೆ.
