Homeಜಿಲ್ಲೆಬಿ.ಎಸ್ ಯಡಿಯೂರಪ್ಪ ಮತ್ತು ರಾಜಧರ್ಮ! "ಅದೆಲ್ಲಾ ಬಿಡಿಪಾ , ರೈತರ, ಬಡವರ ಸಮಸ್ಯೆಗಳಿವೆ ಅದು ನನಗೆ...

ಬಿ.ಎಸ್ ಯಡಿಯೂರಪ್ಪ ಮತ್ತು ರಾಜಧರ್ಮ! “ಅದೆಲ್ಲಾ ಬಿಡಿಪಾ , ರೈತರ, ಬಡವರ ಸಮಸ್ಯೆಗಳಿವೆ ಅದು ನನಗೆ ಮುಖ್ಯ”   ಬಿ.ಎಸ್ ವೈ  ಹೇಳಿದ್ಯಾಕೆ?!

Spread the love

ಬಿ.ಎಸ್ ಯಡಿಯೂರಪ್ಪ ಮತ್ತು ರಾಜಧರ್ಮ!

ಅದೆಲ್ಲಾ ಬಿಡಿಪಾ , ರೈತರ, ಬಡವರ ಸಮಸ್ಯೆಗಳಿವೆ ಅದು ನನಗೆ ಮುಖ್ಯ”   ಬಿ.ಎಸ್ ವೈ  ಹೇಳಿದ್ಯಾಕೆ?!

2020 ಏಪ್ರಿಲ್ , ಕೋವಿಡ್ ಅಮರಿಕೊಂಡು ಮನುಷ್ಯತ್ವವನ್ನೇ ಅಗ್ನಿ ಪರೀಕ್ಷೆಗೊಡ್ಡಿದ ಕಾಲವದು. ಈ ಸೋಂಕಿಗೆ ಇಡೀ ಜಗತ್ತು ವಿಜ್ಞಾನದಲ್ಲಿ ಕಾರಣ ,ಪರಿಹಾರಗಳನ್ನು ಹುಡುಕುತ್ತಿದ್ದರೆ ಭಾರತದಲ್ಲಿ ಧರ್ಮ,ದೇವರು ಎಂದೆಲ್ಲಾ ಬಡಬಡಿಸಲಾಗುತ್ತಿತ್ತು, ಮುಸ್ಲಿಂ ತಬ್ಲಿಘೀಗಳೇ ಈ ಸೋಂಕಿಗೆ ಕಾರಣ ಎಂದು ಮುಸ್ಲಿಂ ಸಮುದಾಯವನ್ನು ಕಟಕಟೆಗೆ ನಿಲ್ಲಿಸಿ ಜನಾಂಗೀಯ ದ್ವೇಷವನ್ನು ಬಿತ್ತಲಾಗುತ್ತಿತ್ತು.

ಕರ್ನಾಟಕದಲ್ಲೂ ಕೋವಿಡ್ ಗಿಂತಲೂ ಭೀಕರವಾದ ಜನಾಂಗೀಯ ದ್ವೇಷ ಭುಗಿಲೆದ್ದಿತು, ಬೆಂಗಳೂರಿನ ದಾಸರಳ್ಳಿಯಲ್ಲಿ ಕೋವಿಡ್‌ನಿಂದ ಹಸುವಿಗೆ ತುತ್ತಾದ ಜನರಿಗೆ ಅನ್ನ ಆಹಾರ ಸಾಮಗ್ರಿ ಕೊಡುತ್ತಿದ್ದ ಜರೀನತಾಜ್ ಎಂಬುವರ ಮೇಲೆ ಹಿಂದೂ ಬಲ ಪಂಥೀಯ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿದರು.

“ಎಲ್ಲೋ ನಡೆಯುವ ಪ್ರತ್ಯೇಕ ಘಟನೆಗೆ ಇಡೀ ಮುಸ್ಲಿಂ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ

ನಮಾಜು ನಿಷೇಧಿಸಿದ್ದ ಸಂದರ್ಭದಲ್ಲಿ ಬೆಳಗಾವಿಯ ಹಳ್ಳಿಯೊಂದರಲ್ಲಿ ಮಸೀದಿ ಸ್ವಚ್ಛಗೊಳಿಸುತ್ತಿದ್ದ ಕೆಲಸಗಾರನ ಮೇಲೆ ಹಲ್ಲೆ ನಡೆಸಲಾಯಿತು, ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಮುಸ್ಲಿಮರಿಗೆ ಪ್ರವೇಶ ನಿಷೇಧಿಸಿ ನಾಮ ಫಲಕಗಳನ್ನು ಹಾಕಲಾಯಿತು.

ಮಂಡ್ಯ ಜಿಲ್ಲೆಯ ರೈತರು ಮುಸ್ಲಿಮರಿಂದ ಪಡೆದ ನೋಟುಗಳನ್ನು ತೊಳೆಯುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್ ರೋಗವನ್ನು ಧಾರ್ಮಿಕ ದೃಷ್ಟಿಕೋನದಿಂದ ನೇರವಾಗಿ ಮುಸ್ಲಿಮರ ತಲೆಗೆ ಕಟ್ಟಿ ದ್ವೇಷವನ್ನು ಪ್ರಚೋದಿಸಲಾಗುತ್ತಿತ್ತು.

ಹಿಂದೂ ಬಲಪಂಥೀಯ ಸಂಘಟನೆಗಳಲ್ಲಿ ಈ ಮಟ್ಟಿಗಿನ ಜನಾಂಗೀಯ ದ್ವೇಷ ಉಕ್ಕಲು ಅವರಿಗಿದ್ದ ಧೈರ್ಯವೆಂದರೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರ ಸೂತ್ರ ಹಿಡಿದಿತ್ತು. ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಕಂಗಾಲಾಗಿದ್ದ ಮುಸ್ಲಿಂ ಸಮುದಾಯ ಸೇರಿದಂತೆ ಮನುಷ್ಯತ್ವವನ್ನು ಪ್ರತಿಪಾದಿಸುವ ಎಲ್ಲ ಜನರು ಸರ್ಕಾರ ಕೈಗೊಳ್ಳಬಹುದಾದ, ಮುಖ್ಯಮಂತ್ರಿ ಯಡಿಯೂರಪ್ಪನವರು ಎತ್ತಿ ಹಿಡಿಯಬಹುದು ರಾಜಧರ್ಮದ ಕಡೆಗೆ ಅನುಮಾನದಿಂದಲೇ ನೋಡುತ್ತಿತ್ತು.

ಇಂತಹ ಹೊತ್ತಿನಲ್ಲಿ..
ಮುಖ್ಯಮಂತ್ರಿ ಯಡಿಯೂರಪ್ಪ ನ್ಯೂಸ್ ಚಾನಲ್ ವೊಂದರ ಸಂದರ್ಶನದಲ್ಲಿ “ಎಲ್ಲೋ ನಡೆಯುವ ಪ್ರತ್ಯೇಕ ಘಟನೆಗೆ ಇಡೀ ಮುಸ್ಲಿಂ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ” ಎಂದು ಮಹತ್ವದ ಮಾತುಗಳನ್ನು ಆಡಿಬಿಟ್ಟರು.
ಅಷ್ಟೇ ಅಲ್ಲ,; ಮುಸ್ಲಿಮರ ಮೇಲಿನ ಹಿಂಸಾಚಾರಕ್ಕೆ ಕಾರಣರಾದ ಜನರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾನು ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ ಕರ್ನಾಟಕದಲ್ಲಿ ಇದುವರೆಗೆ ಮುಸ್ಲಿಮರ ವಿರುದ್ಧ ಕನಿಷ್ಠ ಮೂರು ಹಿಂಸಾಚಾರದ ಘಟನೆಗಳು ವರದಿಯಾಗಿವೆ ಮತ್ತು ಪರಿಶೀಲಿಸಲ್ಪಟ್ಟಿವೆ.” ಎಂದಾಗ ಆತಂಕದಲ್ಲಿದ್ದ ಈ ನಾಡು ನಿಟ್ಟುಸಿರು ಬಿಟ್ಟಿತು. ಯಡಿಯೂರಪ್ಪನವರು ರಾಜಧರ್ಮ ವನ್ನು ಎತ್ತಿಹಿಡಿದಿದ್ದರು. ಇದನ್ನು ಪಕ್ಷಾತೀತವಾಗಿ , ಧರ್ಮಾತೀತವಾಗಿ ಎಲ್ಲರೂ ಸ್ವಾಗತಿಸಿದರು. ಯಡಿಯೂರಪ್ಪ ಅವರಿಗೆ ಭೇಷ್ ಎಂದರು.

ಯಡಿಯೂರಪ್ಪನವರು ಗುಜರಾತ್ ನಲ್ಲಿ ಲಾಕ್ಡೌನ್ ನಲ್ಲಿ ಸಿಕ್ಕಿಕೊಂಡಿದ್ದ ಕರ್ನಾಟಕದ ,ಅದರಲ್ಲೂ ಶಿಕಾರಿಪುರದ ತಬ್ಲಿಘಿ ಗಳನ್ನೂ ವಿಶೇಷ ಸಾರಿಗೆ ವ್ಯವಸ್ಥೆಯಲ್ಲಿ ಕರೆತಂದು ಕ್ವಾರಂಟೈನ್‌ನಲ್ಲಿ ಆಶ್ರಯ-ಅನ್ನ ನೀಡಿದರು.

ಹಿಂದೂ ಬಲಪಂಥೀಯ ಸಂಘಟನೆಗಳ ರಣೋತ್ಸಾಹಕ್ಕೆ ಯಡಿಯೂರಪ್ಪನವರು ತಣ್ಣೀರು ಎರಚಿದ್ದರು. ಅದಕ್ಕಾಗಿ ಯಡಿಯೂರಪ್ಪ ವಿರುದ್ಧ ಅವರದ್ದೇ ಪಕ್ಷದ, ಮಾತೃ ಸಂಸ್ಥೆಯ ತಲೆಯಾಳು, ಕಾಲಾಳುಗಳು ಬುಸುಗುಟ್ಟಿದರು . ಯಡಿಯೂರಪ್ಪ ಅವರ ಪರಮ ಆಪ್ತ ಸಂಸದರೇ ಯಡಿಯೂರಪ್ಪನವರು ಮುಸ್ಲಿಮ್ ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಇರಿದರು.

ಗಂಟಲಲ್ಲಿ ಹಾಲಾಹಲವನ್ನೇ ನುಂಗಿಕೊಂಡು ನಡೆದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಆಡಳಿತದ ದಿನ
ಜನಾಂಗೀಯ ದ್ವೇಷ ದ ವಿರುದ್ಧ ಹೋರಾಡುತ್ತಾ 27 ವರ್ಷಗಳ ಕಾಲ ಜೈಲಿನಲ್ಲಿದ್ದು ಬಂದು ದಕ್ಷಿಣಾ ಆಫ್ರಿಕಾದ ಅಧ್ಯಕ್ಷರಾದ ನೆಲ್ಸನ್ ಮಂಡೇಲಾ ತಮ್ಮ ಮೊದಲ ಅಧ್ಯಕ್ಷೀಯ ಭಾಷಣದಲ್ಲಿ ಆಡಿದ ರಾಜ ಧರ್ಮದ ಮಾತು ಮತ್ತು ನೀತಿಯನ್ನು ನೆನಪಿಸುತ್ತದೆ.

ಎಸ್ , ಬಂಗಾರಪ್ಪ ಅವರು ಬಿಜೆಪಿಗೆ ಬಂದಾಗ ರಾಜಕೀಯ ಮತ್ಸರ , ಅಭದ್ರತೆಯ ಕಿಲುಬು ಇಲ್ಲದೆ
ಪಕ್ಷದ ಒಳಿತೇ ಎಂದು ಯಡಿಯೂರಪ್ಪನವರು ಎಂದಿನಂತೆ ದುಡಿದರು.

ಪಕ್ಷದಲ್ಲಿ ನಡೆದ ವಿದ್ರೋಹ ಗಳ ವಿರುದ್ಧ ಸ್ವಾಭಿಮಾನದಿಂದ ಸಿಡಿದು ನಿಂತರು, ತಮ್ಮ ನಾಯಕತ್ವವನ್ನು ಸಾಬೀತು ಪಡಿಸಿದರು. ಮತೀಯ ರಾಜಕಾರಣದಿಂದ ಪ್ರಜ್ಞಾಪೂರ್ವಕವಾಗಿ ಅಂತರ ಕಾಯ್ದುಕೊಂಡೇ ನಡೆದರು. ಕೋಮುವಾದಿ ಸಿದ್ಧಾಂತದ ಪಕ್ಷದಲ್ಲಿದ್ದು ಕೋಮುವಾದಿ ಆಗದೇ ಉಳಿದಿರುವುದು ಅವರ ಹೆಗ್ಗಳಿಕೆ.

ಪತ್ರಿಕೆಯೊಂದರ ವರದಿಗಾರರೊಬ್ಬರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒನ್ ಟು ಒನ್ ಸಂದರ್ಶಿಸುವಾಗ “ಹಿಂದೂತ್ವದ ಬಗ್ಗೆ ಈಗ ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನೆ ಎಸೆದು ಬಿಟ್ಟರು. ಯಡಿಯೂರಪ್ಪನವರು ಆ ವರದಿಗಾರನ ಕೈ ಹಿಡಿದುಕೊಂಡು “ಅದೆಲ್ಲಾ ಬಿಡಿಪಾ , ರೈತರ, ಬಡವರ ಸಮಸ್ಯೆಗಳಿವೆ ಅದು ನನಗೆ ಮುಖ್ಯ” ಎಂದು ಎದ್ದು ನಿಂತರು. ( ಆಫ್ ದಿ ರೆಕಾರ್ಡ್ ನಲ್ಲಿ ಬಹಳ ಮಾತುಗಳು ಬಂದವು) ಇದು ಅವರ ಹೋರಾಟದ ಆದ್ಯತೆಯ ತಾತ್ವಿಕತೆಗೆ ಹಿಡಿದ ಕನ್ನಡಿಯಾಗಿತ್ತು.

ಉತ್ತರದ ರಾಜ್ಯಗಳಲ್ಲಿ ಕೋಮುವಾದಿ ರಾಜಕಾರಣ ಅಧಿಕಾರ ಯಶಸ್ಸು ಕಂಡಂತೆ ಕರ್ನಾಟಕದಲ್ಲಿ ಸಾಧ್ಯವಾಗದು ಎಂಬುದನ್ನು ಅರಿತೇ ಯಡಿಯೂರಪ್ಪ ಅವರು ಅಭಿವೃದ್ದಿ ಮತ್ತು ಸೌಹಾರ್ಧತೆ ನೆಲೆಯಲ್ಲಿ ರಾಜಕಾರಣವನ್ನು ಮುನ್ನಡೆಸಲು ಯತ್ನಿಸಿದರು. ಅದು ಆರ್.ಎಸ್ ಎಸ್, ಬಿಜೆಪಿಗೆ ಅಪಥ್ಯವಾಗಿದ್ದು ನಿಜ,

ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ ಹೋರಾಟ ಮತ್ತು ಶ್ರಮ ಯಡಿಯೂರಪ್ಪನವರಿಗೆ ಸಲ್ಲಬೇಕು. ಇಂತಹ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅಕಾಲಿಕವಾಗಿ ಕೆಳಗಿಳಿಸಿದ್ದಕ್ಕೆ ಈ ಹೊತ್ತಿನವರೆಗೆ ಉತ್ತರ ಸಿಕ್ಕಿಲ್ಲ.(ಸಂಬಂಧಪಟ್ಟವರು ಕೊಟ್ಟಿಲ್ಲ)! ಯಡಿಯೂರಪ್ಪ ಎಂದರೆ ಅಭಿವೃದ್ಧಿ ಅನ್ನೋದಕ್ಕೆ ಶಿವಮೊಗ್ಗ ಜಿಲ್ಲೆ ಎಲ್ಲಾ ಕಾಲಕ್ಕೂ ಸಾಕ್ಷಿ.ಅದನ್ನು ಪಕ್ಷಾತೀತವಾಗಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ .

ಕೋವಿಡ್ ಕಾಲದಲ್ಲಿ ಪತ್ರಕರ್ತರ ಸಂಕಷ್ಟಗಳನ್ನು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಮುಂದಿಟ್ಟಾಗ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ಧೋರಣೆಯನ್ನು ಎಂದಿನಂತೆ ತಮ್ಮ ಕಡು ಕೋಪದಿಂದ ಕಡೆಗಣಿಸಿ ಕಷ್ಟದಲ್ಲಿರುವ ಪತ್ರಕರ್ತರಿಗೆ ಉದಾರವಾಗಿ ಕೈ ಚಾಚಿದರು. ಸಾಮಾನ್ಯವಾಗಿ ಸಿಟ್ಟು ದುಮುಗುಡುವಂತೆ ಮುಖಮುದ್ರೆಯ ಯಡಿಯೂರಪ್ಪ ಅವರ ಎದೆಯೊಳಗೊಬ್ಬ ಅಂತಃಕರಣ ತುಂಬಿದ ಯಡಿಯೂರಪ್ಪ ಜೀವಿಸಿರುವುದನ್ನು ಈ ಸಂದರ್ಭದಲ್ಲಿ ಕಂಡಿದ್ದೇನೆ. ಜನಪರ ಹೋರಾಟಗಳಿಂದಲೇ ರಾಜಕೀಯ ಉತ್ತುಂಗಕ್ಕೇರಿದ ಮಾಸ್ ಲೀಡರ್ ಯಡಿಯೂರಪ್ಪ ಅವರ ವಿರುದ್ಧ ಕೇಳಿಬಂದ ಆರೋಪಗಳ ಆಚೆಗೂ ಅವರನ್ನು , ಅವರ ನಾಯಕತ್ವವನ್ನು ಮೆಚ್ಚಲು ಅನೇಕ ಕಾರಣಗಳಿವೆ. ಅವರಿನ್ನೂ ದಣಿವರಿಯದ ನಿಜ ನಾಯಕ.

Wish u happy birthday Sir…..

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments