HomeUncategorized🌸ವಿಶೇಷ ಲೇಖನ🌸 ...

🌸ವಿಶೇಷ ಲೇಖನ🌸 ಮರುಭೂಮಿಯಲ್ಲಿ ಅರಳಿದ ಹೂವು

Spread the love

ವಾರಿಸ್ ಡಿರಿ ಪ್ರಪಂಚದ ಪ್ರಸಿದ್ಧ ಹೆಸರು. 1980ರ ದಶಕದಲ್ಲಿ ಜಾಹೀರಾತು ಲೋಕದಲ್ಲಿ ದಿಢೀರ್ ಕ್ರಾಂತಿಯನ್ನು ಉಂಟು ಮಾಡಿದವರು. ಆಫ್ರಿಕಾದ ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದ ಕಪ್ಪುಶಿಲೆಯಂತಿದ್ದ ಈ ಸುಂದರಿ ಜಾಹೀರಾತು ಲೋಕದಲ್ಲಿ ತನ್ನನ್ನು ತಾನು ಬೆಳ್ಳಿ ತಾರೆಯಂತೆ ಗುರುತಿಸಿಕೊಂಡವರು. ತನ್ನ ಬದುಕಿನ ಅನಂತ ನೋವುಗಳನ್ನು ತನ್ನ ಆತ್ಮಕಥೆಯಲ್ಲಿ ಜಗತ್ತಿನೆದುರು ತೆರೆದಿಟ್ಟು ಬೆಚ್ಚಿ ಬೀಳಿಸಿದವರು. ವಾರಿಸ್ ಡಿರಿನ ಬದುಕು ಸಮಾಜದ ವ್ಯವಸ್ಥೆಗೆ ಮಸುಕಿಲ್ಲದ ಕನ್ನಡಿ.

ನನ್ನ ನೆಚ್ಚಿನ ಪುಸ್ತಕಗಳಲ್ಲಿ ಒಂದಾದಂತಹ ಮರುಭೂಮಿಯು ಒಂದೊಂದು ಪುಟವು ತೆರೆದುಓದುತ್ತಿರುವಾಗ ತನ್ನೆದೆಯಲ್ಲಿ ಒಂದು ರೀತಿಯ ಭಯ, ಆ ಜಾಗದಲ್ಲಿ ನನ್ನನ್ನು ಕಲ್ಪಿಸಿಕೊಂಡು ಓದುತ್ತಿದ್ದರೆ ಮೈ ಜುಮ್ ಎನಿಸುತ್ತದೆ. ಜಗತ್ತಿನ ಪುರುಷ ಲೋಕದ ಕ್ರೌರ್ಯವನ್ನು ಎಳೆಎಳೆಯಾಗಿ ತೆರೆದಿಟ್ಟ ಕೃತಿ ಇದು. ಕಲ್ಲು ಮನಸ್ಸನ್ನು ಕೂಡಾ ಕರಗಿಸುತ್ತದೆ. ಹಸಿವು, ಬಡತನ, ಅಪಮಾನ, ಅತ್ಯಾಚಾರದಂತಹ ಸಹಿಸಲು ಸಾಧ್ಯವಾಗದಂತಹ ಘಟನೆಗಳು ವಾರಿಸ್ ಅವರ ಬದುಕಿನಲ್ಲಿ ಕಾಣಿಸಿಕೊಂಡವು, ಆಫ್ರಿಕಾದ ಬುಡಕಟ್ಟು ಜನಾಂಗಗಳ ಆಚರಣೆಯಲ್ಲಿದ್ದ ಯೋನಿಚ್ಛೇದನೆ ಎಂಬ ಕ್ರೂರ ಪದ್ಧತಿಯನ್ನು ಸಹಿಸಿಕೊಂಡರು ಸಹ ಜಾಹೀರಾತು ಲೋಕದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ.

ವಾರಿಸ್ ಡಿರಿ ಅವರ ಆತ್ಮಕಥೆಯಾದ “Desert folwer” ಎಂಬ ಇಂಗ್ಲೀಷ್ ಕೃತಿ ಪ್ರಪಂಚದ 85 ಭಾಷೆಗಳಲ್ಲಿ ಅನುವಾದವಾಗಿದೆ. ಕನ್ನಡಕ್ಕೆ ಡಾ.ಎನ್. ಜಗದೀಶ್ ಕೊಪ್ಪ ಅವರು ಮರುಭೂಮಿಯ ಹೂ ಎಂಬ ಶಿರ್ಷಿಕೆಯಲ್ಲಿ ಅನುವಾದ ಮಾಡಿದ್ದಾರೆ.

ಕಪ್ಪು ಕಲ್ಲಿನ ಶಿಲೆ ಅಂತಿದ್ದ ಸೋಮಾಲಿಯಾದ ಯಾವುದೋ ಒಂದು ಮೂಲೆಯಲ್ಲಿ ಯಾರಿಗೂ ಕಾಣದೆ ತಿಳಿಯದೆ ಬೇಡವಾದ ವಸ್ತುವಿನಂತೆ ಬದುಕಿದ್ದಂತಹ ನಮ್ಮ ನಾಯಕಿ ವಿಶ್ವ ಸೌಂದರ್ಯ ಲೋಕದಲ್ಲಿಒಂದು ಸ್ಥಾನವನ್ನು ಪಡೆದು ಕಪ್ಪ ಸೌಂದರ್ಯ ಸಂಕೇತವೆಂದು ಸಾರಿ ಹೆಣ್ಣು ಮಕ್ಕಳಿಗೆ ತಿಳಿಸಿದ್ದಾಳೆ. ನಾನು ಕಪ್ಪಿದೀನಿ ಎಂದು ಕೊರಗುವಂತಹ ಹೆಣ್ಣು ಮಕ್ಕಳಿಗೆ ಈ ಪುಸ್ತಕ ಆತ್ಮವಿಶ್ವಾಸವನ್ನು ತುಂಬುತ್ತಿದೆ.

ವಾರಿಸ್ ಡಿರಿ ಬಾಲ್ಯದಲ್ಲಿ ತನಗೆ ಎದುರಾದಂತಹ ಸಮಸ್ಯೆಗಳ ವಿರುದ್ಧ ಈಜಿ ದಡ ಸೇರಿದವಳು. ಹಸಿವು ಬಡತನ ಅಪಮಾನಗಳ ನಡುವೆ ತನ್ನ ಬದುಕನ್ನು ರೂಪಿಸಿಕೊಂಡವಳು. ಸೂಪರ್ ಮಾಡೆಲ್ ಅಗಿ ಬೆಳೆದವಳು. ತನ್ನ ಎಲ್ಲಾ ನೋವುಗಳನ್ನು ತನ್ನ ಆತ್ಮಕತೆಯಲ್ಲಿ ದಾಖಲಿಸಿ ಜಗತ್ತಿನಲ್ಲಿ ಮುಕ್ತವಾಗಿ ತೆರೆದಿಟ್ಟು ಲೋಕದ ಜೊತೆಗೆ ಓದುಗರನ್ನು ಕೂಡ ಬೆಚ್ಚು ಬೆಳಿಸಿದಳು. ಆಕೆಯ ಬದುಕು ಕಥೆಯಲ್ಲ ಒಂದು ಸಾಹಸದಪಯಣ. ಸಾವಿನ ನೆರಳಿನಲ್ಲಿ ಬದುಕುತಿದ್ದ ಒಂದು ಬುಡಕಟ್ಟು ಜನಾಂಗದಲ್ಲಿ ಜನಿಸಿದ ಹೆಣ್ಣು ಒಬ್ಬಳುಸಾವಿಗೂ ಹೆದರದೆ ಎದೆ ಕೊಟ್ಟು ನಿಲ್ಲುವಂತಹ ಧೀರ ಸಾಹಸಿಯಾದ ಪಯಣವೆ ಅದ್ಭುತವಾದುದು.

*ವಾರಿಸ್‌ಳ ಬದುಕು–ಬವಣೆ*

ವಾರಿಸ್ ಳ ತಂದೆ ಅಲೆಮಾರಿ ಜನಾಂಗದವರು. ತಾಯಿ ಮೊಗದಿಶ್ ನಗರದ ಕುಟುಂಬದಿಂದ ಬಂದವಳು. ಶಾಲೆಯನ್ನು ಕಾಣದೆ, ಶಿಕ್ಷಣವನ್ನು ಪಡೆಯದೆ ಬದುಕನ್ನು ಕಂಡವಳು. ಬುಟ್ಟಿ ಎಣಿಯುವುದು, ಸಾಕು ಪ್ರಾಣಿಗಳ ಪೋಷಣೆ ಹಾಗೂ ರಕ್ಷಣೆ ಈ ಕುಟುಂಬದ ಆರ್ಥಿಕ ಮೂಲವಾಗಿತ್ತು.

ಈ ರೀತಿಯ ವಾತಾವರಣದೊಂದಿಗೆ ಬದುಕಿದ್ದಂತಹ ವಾರಿಸ ತನ್ನ ಸ್ನೇಹಿತನಿಂದಲೇ ನಾಲ್ಕು ವರ್ಷದಬಾಲಕಿಯಾಗಿದ್ದಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ಇನ್ನೂ ಈ ಜನಾಂಗದಲ್ಲಿ ಕ್ರೂರವಾದ ಆಚರಣೆ ಪದ್ಧತಿ ಇದೆ. ಅದನ್ನು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಅಮಾನುಷವಾದ ಆಚರಣೆಯಾಗಿದೆ. ಅದೆನೆಂದರೆ ಹೆಣ್ಣು ಮಕ್ಕಳ ಋತುಮತಿಯಾಗುವ ಮೊದಲೇ ಮಾಡುವ ಗುಪ್ತಾಂಗದ ಚೇದನ ಕ್ರಿಯೆ. ಆಕ್ರೂರ ಪದ್ಧತಿ ಆ ಜನಾಂಗದ ಎಲ್ಲ ಹೆಣ್ಣು ಮಕ್ಕಳ ಅನುಭವದಲ್ಲಿಯೂ ಬಂದಿರುವಂತದ್ದು, ಇದು ಧಾರ್ಮಿಕ ಹೆಸರಿನಲ್ಲಿ ನಡೆಸುವಂತಹ ಒಂದು ಅನಿಷ್ಟವಾದ ಪದ್ಧತಿ. ಹೆಣ್ಣಿನ ಪವಿತ್ರತೆಯನ್ನು ಸಾಬೀತುಪಡಿಸಲು ಈ ಅಮಾನವೀಯ ಕ್ರಿಯೆಯನ್ನು ಮಾಡುತ್ತಾರೆ. ಹಾಗಿದ್ದರೆ ಗಂಡಿನ ಪವಿತ್ರತೆಯನ್ನುಸಾಬೀತು ಪಡಿಸುವುದು ಹೇಗೆ? ಅವನಿಗೂ ಒಂದು ಕ್ರಿಯೆ ಇರಬೇಕಿತ್ತಲ್ಲವೇ?. ಪ್ರತಿಯೊಬ್ಬ ಮಹಿಳೆ ವಿವಾಹವಾಗಬೇಕೆಂದರೆ ಕ್ರಿಯೆಗೆ ಒಳಗಾಗಲೇಬೇಕು, ಇದನ್ನು ಮಾಡಿಸಿಕೊಳ್ಳದಂತಹ ಹೆಣ್ಣು ಮಗಳು ಅಪವಿತ್ರಳು ಇವಳನ್ನು ಮದುವೆಯಿಂದ ನಿರಾಕರಿಸಲಾಗುತ್ತಿತ್ತು, ಗಂಡಿನ ಪಾವಿತ್ರತೆಯ ಪ್ರಶ್ನೆ ಬಂದಾಗಯಾವ ಪದ್ದತಿಯು ಹುಟ್ಟಿಕೊಳ್ಳಲಿಲ್ಲವೇ? ಹಾಗಾದರೆ ಗಂಡು ಯಾವಾಗಲೂ ಪವಿತ್ರವಾದಂತವನೇ?.

ಆ ಮರುಭೂಮಿಯಲ್ಲಿ ಬರಿಗಾಲಿನಲ್ಲಿ ಬಿದ್ದು ಒದ್ದಾಡಿ ಕಷ್ಟಪಟ್ಟು ಮೊಗದೀಶ್ ನಗರಕ್ಕೆ ಚಿಕ್ಕಮ್ಮನ ಮನೆಯನ್ನು ಹುಡುಕಿಕೊಂಡು ಸೇರುತ್ತಾಳೆ. ಆ ಬರುವಂತಹ ಸಂದರ್ಭದಲ್ಲಿ ಅವಳಿಗೆ ಹಲವಾರು ರೀತಿಯ ದೈಹಿಕ ತೊಂದರೆಗಳು ಉಂಟಾಗುತ್ತವೆ, ಅವುಗಳನ್ನು ಅವಳು ಎದುರಿಸಿ ಒಂದು ಕ್ಷಣ ಮಾತ್ರದಲ್ಲಿ ಪಾರಾಗುತ್ತಾಳೆ. ಎಲ್ಲೂ ಅವಳು ಕುಗ್ಗದೆ, ಯಾವುದೋ ಒಂದು ಕಡೆ ನನ್ನ ಬದುಕಿನ ಅವಕಾಶದ ಬಾಗಿಲು ತನ್ನಂತಾನೆ ತೆರೆದುಕೊಳ್ಳುತ್ತದೆ ಎಂಬ ಭಾವನೆ ತನ್ನಲ್ಲಿ ಅಡಗಿಸಿಕೊಂಡು ಮುಂದೆ ನಡೆಯುತ್ತಾಳೆ.

ಮೊಗದಿಶ್ ನಗರದಲ್ಲಿ ಅವಳ ಚಿಕ್ಕಮ್ಮನ ಮನೆಯನ್ನು ಕಷ್ಟಪಟ್ಟು ಕೆಲಸಗಳನ್ನು ಮಾಡುತ್ತಾಳೆ. ಅಲ್ಲೂ ಕೂಡ ಹಲವಾರು ತೊಂದರೆಗಳನ್ನು ಅನುಭವಿಸಿ ಕೂದಲೆಳೆಯ ಅಂತರದಲ್ಲಿ ಪಾರಾಗುತ್ತಾಳೆ. ಆ ನಗರ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು, ಕಷ್ಟ ಕಾರ್ಪಣ್ಯಗಳನ್ನು ಸಹಿಸಿದ ಅವಳು ತಿಂಗಳ ಮುಟ್ಟುಬಂತೆಂದರೆ ಸಹಿಸಲಾಗದ ನೋವು ಅನುಭವಿಸುತ್ತಿದ್ದಾಳೆ. ಅದು ಪ್ರತಿ ತಿಂಗಳು ಕ್ರೌರ್ಯವೇ ಆಗಿತ್ತು. ಕಾಲಕಳೆದಂತೆ ವಾರಿಸ್ ಹೆಣ್ಣು ಮಕ್ಕಳಿಗೆ ಋತುಮತಿಯಾಗುವ ಮುಂಚಿತವಾಗಿಯೂ ಮಾಡುತ್ತಿದ ಆ ಅನಿಷ್ಟ ಪದ್ದತಿ ವಿರುದ್ಧ ಸಿಡಿದಿದ್ದಳು.

ಆ ನಗರದಲ್ಲಿಯೂ ಮನೆ ಕೆಲಸದವಳಾಗಿ ಬಿಡುವಿಲ್ಲದೆ ನಿರಂತರವಾಗಿ ಗಾಣದ ಎತ್ತಿನಂತೆ ಪ್ರತಿದಿನ ದುಡಿಯುತ್ತಿರುತ್ತಾಳೆ. ಗಡಿಯಾರದ ಮುಳ್ಳಿಗೆ ಪ್ರತಿಸ್ಪರ್ಧಿಯಾಗಿ ಕೆಲಸ ಮಾಡುತ್ತಿರುತ್ತಾಳೆ. ನಂತರ ಅವಳುಒಂದು ದಿನ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರ್ತಾಳೆ ಒಂದು ತುತ್ತಿಗಾಗಿ ಜೀವನ ಪೂರ್ತಿ ಬದುಕಿನೊಡನೆ ಹೋರಾಟ ಮಾಡಿ ಬಂದವಳು. ನಂತರ ದಿನಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಕಲಿಯುತ್ತಾಳೆ.

ಇದೇ ಸಂದರ್ಭದಲ್ಲಿ ರಸ್ತೆ ಬೀದಿಯಲ್ಲಿ ಸಿಕ್ಕ ಛಾಯಾಗ್ರಹಾಯಕನೊಬ್ಬ ವಾರಿಸ್ ನ ಫೋಟೋ ತೆಗೆಯಲು ಹಿಂದೆ ಬೀಳುತ್ತಾನೆ. ಸತತ ಪ್ರಯತ್ನ ನಂತರ ವಾರಿಸ್ ಒಪ್ಪಿಕೊಂಡು ಆತನ ಫೋಟೋ ಸ್ಟುಡಿಯೋಗೆ ಕಾಲಿಡುತ್ತಾಳೆ. ಇದರಿಂದ ಆಕೆ ಬದುಕಿನಲ್ಲಿ ಬದಲಾವಣೆ ಗಾಳಿ ಬೀಸಿತು. ಅಲ್ಲಿಂದ ಮುಂದಕ್ಕೆ ನಡೆದಿದ್ದೆಲ್ಲಾ ಅವಳ ಜೀವನದಲ್ಲಿ ಪವಾಡವೇ ಎನಿಸಬಹುದು. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದೆಂದು ತೋರಿಸಿಕೊಟ್ಟವಳು.

ಯಾವುದೋ ಒಂದು ಮೂಲೆಯಲ್ಲಿ ಮುಸುರೆ ತಿಕ್ಕೊಂಡು ಒಂಟೆ ಕಾಯುತ್ತಾ 4 ಗೋಡೆಗಳ ಮಧ್ಯೆ ಕಾಲಕಳೆಯುತ್ತಿದ್ದಂತಹ ವಾರಿಸ್ ಡಿರಿ ಜಗತ್ತಿನಾದ್ಯಂತ ರೂಪದರ್ಶಿಯಾಗಿ ಕಾಣಿಸಿಕೊಂಡಳು. ಹಲವಾರು ಫೋಟೋಗ್ರಾಫರ್ ಗಳು ಅವಳ ಹಿಂದೆ ಬಿಳ್ಳುತ್ತಿದ್ದರು. ಡೇರೆನ್ಸ್ ಎನ್ನುವ ಪ್ರಸಿದ್ದ ಫೋಟೋ ಗ್ರಾಫರ್ಕೂಡ ರೂಪದರ್ಶಿಯಾದ ವಾರಿ ಫೋಟೋ ತೆಗೆಯಲು ಅವಕಾಶಗಳನ್ನು ಕೋರುತ್ತಿದ್ದನು. ಇದರಿಂದ ಅವಳಿಗೆ ಒಂದುವರೆ ಸಾವಿರ ಪೌಂಡ್ ದೊರೆಯುತ್ತಿತ್ತು. ಕಷ್ಟಪಟ್ಟು ದುಡಿಯುತ್ತಿದ್ದರು ಇಷ್ಟು ಹಣಸಿಗುತ್ತಿರಲಿಲ್ಲವೆಂದು ಡಿರಿ ಭಾವುಕಳಾಗುತ್ತಿದ್ದಳು.

ನಂತರ ರೂಪದರ್ಶಿಯಾಗಿ ಹಲವು ವೇದಿಕೆಗಳಲ್ಲಿ ವಾರಿಸ್ ಮಿಂಚಿದಳು. ಸೋಮಾಲಿಯಾದಲ್ಲಿ ಬಿರುಬಿಸಿಲಿಗೆ ಮೈಯೊಡ್ಡಿ ಕುರಿ ಮೇಯಿಸುತ್ತಾ ಕಾಲ ಕಳೆಯುತ್ತಿದ್ದ ಕರಿ ಇದ್ದಲಿನಂತಹ ಯುವತಿಯೊಬ್ಬಳು ಜಾಹೀರಾತು ಜಗತ್ತನ್ನೇ ತನ್ನ ತೆಕ್ಕೆಗೆ ತಂದು ನಿಲ್ಲಿಸಿದಳು. ವಿದೇಶಗಳಿಂದಲೂ ಆಕೆಗೆ ಬೇಡಿಕೆಗಳು ಬರಲಾರಂಭಿಸಿದವು. ಜಾಹೀರಾತು ನಿಮಿತ್ತ ಅಮೇರಿಕದತ್ತ ಹಾರಿದಳು. ರೂಪದರ್ಶಿಯಾದ ವಾರಿಸ್‌ಳ ಫೋಟೋ ಅದಾಗಲೇ ಜಗತ್ಪ್ರಸಿದ್ದವಾಗಿದ್ದವು. ಪತ್ರಿಕೆ, ಚಾನೆಲ್‌ಗಳಲ್ಲಿ, ರಸ್ತೆ ಬದಿಯ ಜಾಹೀರಾತು ಫಲಕಗಳಲ್ಲಿ ಕಪ್ಪು ಮುಖವೊಂದು ಕ್ರಾಂತಿಯ ಅಲೆಯನ್ನು ಸೃಷ್ಟಿಸಿದ್ದವು. ತಿಂಗಳು ಪೂರ್ತಿ ಬಿಡುವಿಲ್ಲದ ಕೆಲಸ ಕಾರ್ಯಗಳು, ವಿಶ್ವವಿಖ್ಯಾತ ಛಾಯಾಗ್ರಾಹಕರ ಕಣ್ಣೆಲ್ಲವು ವಾರಿಸ್‌ಳತ್ತ ಬಿದ್ದವು. ಆಕೆಯ ಬದುಕಿನಲ್ಲಿ ನೋಡಿರದಷ್ಟು ಹಣದ ಮಾಡೆಲಿಂಗ್‌ನಿಂದ ಬಳಿ ಬಂತು. ಇವೆಲ್ಲ ಸುಖ ಸಂತಸದ ಮಧ್ಯೆವಾರಿಸ್‌ಳಿಗೆ ಸೋಮಾಲಿಯಾದ ಮರುಭೂಮಿ ಗಾಢವಾಗಿ ಕಾಡುತ್ತಿತ್ತು.

ಬಾಲ್ಯದಲ್ಲಿ ಅನುಭವಿಸಿದ ನೋವು, ಬಡತನ, ಅಲೆದಾಟ, ಅಪಮಾನ ಎಲ್ಲವೂ ಕಣ್ಣೆದುರಿಗೆ ಬಂದು ನಿಲ್ಲುತ್ತಿದ್ದವು. ತನ್ನ ಹದಿನಾಲ್ಕನೇ ವಯಸ್ಸಿನ ತನಕ ಸುಡುವ ಮರಳುಗಾಡಿನಲ್ಲಿ ಕಾಲುಗಳಿಗೆ ಚಪ್ಪಲಿಗಳಿಲ್ಲದೆ ಒಳ್ಳೆ ಕುರಿಗಳನ್ನು ಮೇಯಿಸುತ್ತಿದ್ದ, ದಾರಿಯಲ್ಲಿ ಕಾಲಡಿ ಒಡೆದು ಒಸರುತ್ತಿದ್ದ ನೆತ್ತರನ್ನು ನೋಡುತ್ತಾ ನಡೆದಾಡುತ್ತಿದ್ದ ಕ್ಷಣಗಳೆಲ್ಲವೂ ಆಕೆಯ ಬದುಕಿನಲ್ಲಿ ಮರೆಯಲಾರದಂತಾಗಿತ್ತು. ಎಷ್ಟೇ ಸುಖ ಸಂತಸದಲ್ಲಿ ತೇಲಾಡಿದರೂ ವಾರಿಸ್‌ಳಿಗೆ ತನ್ನ ಕುಟುಂಬದ ನೆನಪುಗಳು ಆಗುತ್ತಲೇ ಇತ್ತು. ಅಮ್ಮನ ಪ್ರೀತಿ, ವಾತ್ಸಲ್ಯ, ಅವಳಿಗೆ ನೀಡಿದಂತಹ ಧೈರ್ಯ ಕಾಡುತ್ತಲೆ ಇತ್ತು.

*ವಾರಿಸ್ ಬೆನ್ನತ್ತಿದ್ದ ಬಿಬಿಸಿ*

ವಾರಿಸ್‌ಳ ರೋಚಕ ಬದುಕಿನ ಕುರಿತು ಅರಿತುಕೊಂಡಂತಹ ಬಿಬಿಸಿ ಚಿತ್ರ ತಂಡ ಆಕೆಯ ಬೆನ್ನು ಹತ್ತಿತ್ತು. ಅದರಂತೆ ವಾರಿಸ್ ಕ್ರಮಿಸಿ ಬಂದ ಕಲ್ಲು ಮುಳ್ಳು ತುಂಬಿದ ಅತಿ ಭಯಾನಕ ಸನ್ನಿವೇಶಗಳನ್ನು ತಿಳಿದುಒಂದು ಅದ್ಭುತ ಡಾಕ್ಯೂಮೆಂಟರಿ  ಸಿನೆಮಾ ರಚಿಸಲು ಬಿಬಿಸಿ ತಂಡ ಮುಂದಾಗಿತ್ತು. ಅಮ್ಮನನ್ನು ಹುಡುಕಲು ಇದೇ ಒಳ್ಳೆಯಸಂದರ್ಭ ಎಂದೆನಿಸಿ ತನ್ನ ಬಾಲ್ಯದ ಬದುಕನ್ನು ತೋರಿಸಲು ಬಿಬಿಸಿ ಚಿತ್ರ ತಂಡದೊಂದಿಗೆ ಸೋಮಾಲಿಯ ಕಡೆ ಆಕೆ ಕಾಲಿಟ್ಟಳು. ಹೇಗೋ ಹೆಣಗಾಡಿ ಹುಡುಕಿ ತನ್ನ ಅಮ್ಮನ ಮಡಿಲು ಸೇರಿದ ಆಕ್ಷಣವಂತೂ ಅತ್ಯಂತ ರೋಮಾಂಚಕ. ಮಕ್ಕಳಿಗೆ ಏನೇ ಸಾಧಿಸಿದರು, ನಾವ್ ಎಷ್ಟೇ ದೊಡ್ಡ ವ್ಯಕ್ತಿಗಳಾಗಿಬೆಳೆದಿರೋ ತಂದೆ ತಾಯಿಯ ಪ್ರೀತಿ ಯಾವತ್ತಿದ್ದರೂ ಅಮೂಲ್ಯವಾದದ್ದು.

ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತಹದ್ದನ್ನು ವಾರಿಸ್ ತನ್ನಲ್ಲಿ ಹೊಂದಿದ್ದಳು, ಬಾಲ್ಯದಲ್ಲಿ ನೋಡಿದ್ದ ಅದೇ ಮುಖ, ಅದೇ ಭಾವ, ಆಸೆ, ಮನೆ ಬಿಟ್ಟು ಹೊರಡುವಾಗ ತಾಯಿ ಹೇಳಿದಂತಹ ಒಂದುಮಾತು ಯಾವಾಗಲೂ ಕಾಡುತ್ತಿತ್ತು. ಅಮ್ಮನ ಪ್ರತಿಧ್ವನಿಗಳು ಆಕೆಯ ಕಿವಿಯೊಳಗೆ ಅನುರಣಿಸಲುಮಆರಂಭವಾಯಿತು. ಅಮ್ಮನ ಬಿಸಿಯಪ್ಪುಗೆ ಸ್ಪರ್ಶ ಮರುಭೂಮಿಯನ್ನೇ ಆವರಿಸುವಂತಿತ್ತು. ಎಲ್ಲವೂಅವಳಿಗೆ ಭಾವಿಸುತ್ತಲೇ ಹೋದವು ಅಂತೆಯೇ ತನ್ನ ಮೂವತ್ತನೇ ವಯಸ್ಸಿನಲ್ಲಿ ವಾರಿಸ್ ಹೆಣ್ಣು ಮಗುವಿನ ತಾಯಿಯಾಗುವಳು. ಬಾಲ್ಯದಲ್ಲಿ ಯೋನಿ ಛೇದನ ಎಂಬ ಅಮಾನುಷ ಕ್ರಿಯೆಗೊಳಗಾದ ವಾರಿಸ್ ಸರ್ಜರಿಮೂಲಕ ತನ್ನ ನೋವನ್ನು ನಿವಾರಿಸಿಕೊಂಡಿದ್ದಳು ಹಾಗೂ ಈ ಕ್ರೌರ್ಯದ ವಿರುದ್ಧ ನಿರಂತರ ಸಿಡಿದೆದ್ದಳು. ಇದೇ ಸಂದರ್ಭದಲ್ಲಿ ವಾರಿಸ್‌ಳನ್ನು ವಿಶ್ವಸಂಸ್ಥೆಯು ತನ್ನ ರಾಯಭಾರಿಯಾಗಿ ಈ ಕ್ರೌರ್ಯದ ವಿರುದ್ಧಜಾಗೃತಿ ಮೂಡಿಸಲು ಸಿದ್ಧತೆ ನಡೆಸಿತು. ಸಂಸ್ಕೃತಿ ಎಂಬ ಹೆಸರಿನಲ್ಲಿ ಈ ಅನಿಷ್ಟತೆಯ ವಿರುದ್ಧ ಅದೇ ಸೋಮಾಲಿಯಾಕ್ಕೆ ಕಾಲಿಟ್ಟು ಜನ ಜಾಗೃತಿಯನ್ನು ಮೂಡಿಸಲು ಆರಂಭಿಸುವಳು. ಪಾರಂಪರಿಕವಾಗಿದತಂಹ  ಒಂದು ಕ್ರೂರ ಪದ್ದತಿಯ ವಿರುದ್ಧ ಹೋರಾಟ ಮಾಡುವಂತಹ ಸಂದರ್ಭದಲ್ಲಿಆ ಬುಡಕಟ್ಟಿನ ಹಿರಿಯರುಗಳು ವಾರಿಸ್ ವಿರುದ್ಧ ಮುಗಿಬಿದ್ದರು ಆದರೂ ಕೂಡಾ ಕ್ರಮೇಣ ಅಮಾನವೀಯ ವಿರುದ್ಧ ಭೀಕರ ಯುದ್ಧವನ್ನು ಸಾರುತ್ತಾಳೆ.

ಈ ರೀತಿ ವಾರಿಸ್ ಎಂಬ ಕಪ್ಪು ಶಿಲೆಯಂತಹ ಯುವತಿಯ ಕ್ರಾಂತಿಯ ಹಣತೆ ವಿಶ್ವದಲ್ಲೇ ಸ್ಫೂರ್ತಿಯ ಬೆಳಕನ್ನು ಹೊತ್ತಿಸಿತು. ನಾಲ್ಕು ಗೋಡೆಗಳಿಗೆ ಸೀಮಿತವಾಗಿದಂತಹ ಹೆಣ್ಣು , ಧೈರ್ಯವಾಗಿ ಹೊರ ಬಂದು ಏನಾದರೂ ಸಾಧಿಸಲೇಬೇಕೆಂದುಕೊಂಡು ಎಲ್ಲವನ್ನೂ ಎದುರಿಸಿ ತನ್ನ ಬದುಕನ್ನು ರೂಪಿಸಿಕೊಂಡು ಜಗತ್ತಿನ ಒಂದು ಹೆಣ್ಣು ಮಕ್ಕಳ ರೋಲ್‌ಮಾಡಲ್ ಆಗಿ ನಿಂತಳು. ಇಂತಹ ಬದುಕಿನ ಆತ್ಮಕಥನವನ್ನು ಕನ್ನಡಕ್ಕೆ ಅನುವಾದಿಸಿದ ಜಗದೀಶ್ ಕೊಪ್ಪ ಅವರಿಗೆ ನಾನು ಅನಂತ ಅನಂತವಾದ ಧನ್ಯವಾದಗಳುಅರ್ಪಿಸುತ್ತೇನೆ…

ನಂದನ ಎನ್ ಗೌಡ, ಪ್ರಥಮ ಎಂ ಎ

ಕನ್ನಡ ಭಾರತಿ ಕುವೆಂಪು ವಿವಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments