ಶಿವಮೊಗ್ಗ,ಅ.27: ಕಾರ್ಯ ಒತ್ತಡಗಳ ನಡುವೆಯೂ ದಿನಕ್ಕೆ ಒಂದು ಗಂಟೆಯಾದರೂ ಆರೋಗ್ಯದ ಕಡೆ ಗಮನ ಹರಿಸುವುದು ಅತ್ಯವಶ್ಯಕ ಎಂದು ಹೆಚ್ಚುವರಿ ಎಸ್ಪಿ ಕಾರಿಯಪ್ಪ ಸಲಹೆ ನೀಡಿದರು.
ಆಯುಧ ಪೂಜೆಯ ಶುಭ ಸಂದರ್ಭದ ಅಂಗವಾಗಿ ನಗರದ ಪ್ರತಿಷ್ಠಿತ ಕಿರಣ್ಸ್ ಮೈ ಜಿಮ್ನಲ್ಲಿ ಏರ್ಪಡಿಸಲಾಗಿದ್ದ ಪವರ್ ಲಿಫ್ಟಿಂಗ್ ಹಾಗೂ ಕಾರ್ಡಿಯೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಇಂತಹ ಸ್ಪರ್ಧೆಗಳನ್ನು ಏರ್ಪಡಿಸಿ ದೈಹಿಕ ಚಟುವಟಿಕೆಗೆ ಉತ್ತೇಜನ ನೀಡುತ್ತಿರುವ ಮಾಲೀಕ ಕಿರಣ್ ಸಾಗರ್, ಲಕ್ಷಿö್ಮ ಮತ್ತು ತರಬೇತುದಾರರಾದ ಚೇತನ್, ಗಂಗಾಧರ್, ಕಾರ್ತಿಕ್, ಕಾರ್ತಿಕ್ ಎಸ್.ನಾಯಕ್ ಅವರಿಗೆ ಅಭಿನಂದಿಸಿ ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ಹೀಗೆ ಇನ್ನುಷ್ಟು ಉತ್ತಮವಾದ ಕಾರ್ಯಕ್ರಮವನ್ನು ನಡೆಸುವಂತಾಗಲಿ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಜಿಮ್ ಮಾಲೀಕ ಕಿರಣ್ ಸಾಗರ್, “ಜಿಮ್ ಎಂದರೆ ಕೇವಲ ದೇಹವನ್ನು ಬಲಿಷ್ಠಗೊಳಿಸುವ ಸ್ಥಳವಲ್ಲ, ಅದು ಶಿಸ್ತು, ಆತ್ಮವಿಶ್ವಾಸ, ತಾಳ್ಮೆ ಮತ್ತು ಗುರಿ ಸಾಧಿಸುವ ಮನೋಬಲವನ್ನು ಬೆಳೆಸುವ ಸ್ಥಳ” ಎಂದು ತಿಳಿಸಿದರು.
ವಿಜೇತರ ವಿವರ:
ಹಿರಿಯ ಪುರುಷರ ಹಾಗೂ ಕಿರಿಯ ಪುರುಷರ ವಿಭಾಗಕ್ಕೆ ಪವರ್ ಲಿಫ್ಟಿಂಗ್ ಹಾಗೂ ಹಿರಿಯ ಮಹಿಳೆಯರ ಹಾಗೂ ಕಿರಿಯ ಮಹಿಳೆಯರ ವಿಭಾಗಕ್ಕೆ ಕಾರ್ಡಿಯೋ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪವರ್ ಲಿಫ್ಟಿಂಗ್ನ ಹಿರಿಯ ಪುರುಷರ ವಿಭಾಗದಲ್ಲಿ ತನೂಜ್ – 260 ಕೆಜಿ ಪ್ರಥಮ, ಮಹೇಶ್-250 ಕೆಜಿ ದ್ವಿತೀಯ, ನಾಮದೇವ್ 245 ಕೆಜಿ ತೃತೀಯ ಹಾಗೂ ಕಿರಿಯ ವಿಭಾಗದಲ್ಲಿ ಅಂಕಿತ್- ಪ್ರಥಮ, ಅಮೋಘ್-ದ್ವಿತೀಯ, ಮಂಜುನಾಥ್-ತೃತೀಯ ಸ್ಥಾನ ಪಡೆದಿದ್ದಾರೆ.
ಕಾರ್ಡಿಯೋ ಹಿರಿಯ ಮಹಿಳಾ ವಿಭಾಗದಲ್ಲಿ ಅರ್ಚನಾ-ಪ್ರಥಮ, ರೇಖಾ-ದ್ವಿತೀಯ, ಶಿಲ್ಪಾ- ತೃತೀಯ ಹಾಗೂ ಕಿರಿಯ ವಿಭಾಗದಲ್ಲಿ ಲಾವಣ್ಯ-ಪ್ರಥಮ, ಮುಸ್ಕಾನ್-ದ್ವಿತೀಯ, ಅರ್ಚನಾ-ತೃತೀಯ ಸ್ಥಾನ ಪಡೆದಿದ್ದಾರೆ.
