ಶಿವಮೊಗ್ಗ,ಮೇ.12: ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸಮಾಜದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಗದ್ಗುರು ಶ್ರೀ ಪಂಚಪೀಠಾದೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೃತಜ್ಞತಾ ಸಮರ್ಪಣಾ ಸಮಾರಂಭ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಮೇ.16 ಮತ್ತು 17 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಾರಂಭದ ಸ್ವಾಗತ ಸಮಿತಿ ಉಪಾಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿ, ಕೇವಲ 46 ಸದಸ್ಯರೊಂದಿಗೆ 1925 ರಲ್ಲಿ ಪ್ರಾರಂಭವಾದ ಬಸವೇಶ್ವರ ಸೊಸೈಟಿ ಈಗ 5300 ಸದಸ್ಯರಿರುವ ದೊಡ್ಡ ಸೊಸೈಟಿಯಾಗಿ ಬೆಳೆದಿದ್ದು, 14 ಕೋಟಿ ರೂ. ಠೇವಣಿಯನ್ನು ಸಹ ಹೊಂದಿದೆ. ಇಂತಹ ಸಂಸ್ಥೆಯ ಶತಮಾನೋತ್ಸವದ ಹಿನ್ನೆಲೆಯಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ. ಇಂದಿನ ಪೀಳಿಗೆಗೆ ನಮ್ಮ ಧಾರ್ಮಿಕ ಆಚರಣೆಗಳ ನೆನಪಿಸುವ ವಿಶೇಷ ಕಾರ್ಯಕ್ರಮವಾಗಿದೆ ಎಂದರು.
35 ವರ್ಷಗಳ ನಂತರ ನಡೆಯುತ್ತಿರುವ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಅಂತಿಮ ಸಿದ್ಧತೆಗಳು ನಡೆಯುತ್ತಿವೆ ಎಂದರು.
ಮೇ.17 ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಗಾಂಧಿ ಬಜಾರ್‌ನ ಬಸವೇಶ್ವರ ದೇವಾಲಯದ ಆವರಣದಿಂದ ಅಡ್ಡಪಲ್ಲಕ್ಕಿ ಉತ್ಸವ ಆರಂಭವಾಗುವುದು. ಬಿ.ಹೆಚ್. ರಸ್ತೆ, ನೆಹರೂ ರಸ್ತೆ ಮೂಲಕ ವಿನೋಬನಗರದ ಅಲ್ಲಮಪ್ರಭು ಮೈದಾನಕ್ಕೆ ಅದ್ದೂರಿ ಮೆರವಣಿಗೆ ಯೊಂದಿಗೆ ತೆರಳಲಾಗುವುದು.
ಗಮನಿಸಿ:ಮೇ 16 ರಂದು ಉದ್ಯೋಗ ನೇರ ಸಂದರ್ಶನ
ನಂತರ ಅಲ್ಲಿ ಧಾರ್ಮಿಕ ಸಭೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನಾ ಸಮಾರಂಭ ನಡೆಯಲಿದ್ದು ಇದರಲ್ಲಿ ಸುಮಾರು 50 ಸಾವಿರ ಜನರು ಸೇರುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಸೊಸೈಟಿ ಶತಮಾನೋತ್ಸವದ ಬಗ್ಗೆ ಮಾಹಿತಿ ನೀಡಿದ ಸ್ವಾಗತ ಸಮಿತಿ ಖಜಾಂಚಿ ಎಸ್.ಪಿ. ದಿನೇಶ್, ಬಸವೇಶ್ವರ ಸೊಸೈಟಿ ಶತಮಾನೋತ್ಸವ ಸಮಾರಂಭವು ಮೇ. 16 ರ ಬೆಳಿಗ್ಗೆ 10 ಗಂಟೆಗೆ ಕುವೆಂಪು ರಂಗ ಮಂದಿರದಲ್ಲಿ ನಡೆಯಲಿದೆ ಎಂದರು.
ವೀರಶೈವ ಲಿಂಗಾಯತ ಸಮಾಜದ 52 ಸಂಘಟನೆಗಳು ಸೇರಿ ಈ ಎರಡು ದಿನಗಳ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದು, ವಿವಿಧ ಸಮಿತಿಗಳ ಮೂಲಕ ಯಶಸ್ವಿಯಾಗಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬಳ್ಳಕೆರೆ ಸಂತೋಷ್, ಪ್ರಮುಖರಾದ ಬೆನಕಪ್ಪ, ಚಂದ್ರಯ್ಯ, ವಿರೂಪಾಕ್ಷಪ್ಪ, ವಾಗ್ದೇವಿ, ಸುಜಾತ ಬಸವರಾಜ್, ವಿಸಿಎಸ್ ಮೂರ್ತಿ, ಪಿ.ರುದ್ರೇಶ್, ರಾಜಶೇಖರ್, ಜೆ.ವಿಜಯಕುಮಾರ್, ಗಣೇಶ್ ಎಂ.ಅಂಗಡಿ, ಪ್ರದೀಪ್ ಎಲಿ, ಸಚಿನ್, ಮೋಹನ್, ಹಾಲೇಶ್, ಲೋಕಣ್ಣ ಮತ್ತಿತರರಿದ್ದರು.
