ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಬದುಕಿನ ಮುನ್ನಡೆಯನ್ನು ಸಂಭ್ರಮಿಸಲು ಮೇ. 9 ರಂದು ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ಬಿಎಸ್‌ವೈ ಅಭಿಮಾನೋತ್ಸವ ಆಚರಿಸಲಾಗುತ್ತಿದೆ.
ಇದೊಂದು ಪಕ್ಷಾತೀತ ಸಮಾರಂಭ, ಇಲ್ಲಿ ಪಕ್ಷದ ಚಿಹ್ನೆ, ಬಾವುಟಗಳಿಲ್ಲ ಎಂದು ಹೇಳಲಾಗುತ್ತಿದ್ದರೂ ಇದು ಬಿಜೆಪಿ ಪಕ್ಷದ ಕಾರ್ಯಕ್ರಮವೇ ಆಗಿದೆ ಎನ್ನುವುದು ಸ್ಪಷ್ಟ.
ಆಹ್ವಾನ ಪತ್ರಿಕೆಯಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಂಸದರು, ಎನ್‌ಡಿಎ ಪಾಲುದಾರ ಪಕ್ಷವಾಗಿರುವ ಜೆಡಿಎಸ್‌ನ ನಾಯಕ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಬಿಜೆಪಿಯ ನಾಯಕರನ್ನು ಹೊರತು ಪಡಿಸಿದರೆ ಉಳಿದಂತೆ ಮಠಾಧಿಪತಿಗಳು ಅತಿಥಿಗಳ ಸಾಲಿನಲ್ಲಿದ್ದಾರೆ. ಬೇರಾವ ಪಕ್ಷದ ನಾಯಕರೂ ಅತಿಥಿಗಳ ಪಟ್ಟಿಯಲ್ಲಿ ಇಲ್ಲದಿರುವುದು ಇದೊಂದು ಬಿಜೆಪಿ ಪಕ್ಷಕ್ಕೆ ಸೀಮಿತವಾದ ಸಮಾರಂಭ ಎನ್ನುವುದಕ್ಕೆ ಸಾಕ್ಷಿ.
ರೈತರ ಸಮಸ್ಯೆಗಳು, ಬಡವರ ಭೂಮಿ ಹಕ್ಕಿನ ವಿಷಯಗಳನ್ನಿಟ್ಟುಕೊಂಡು ಶಿಕಾರಿಪುರದ ಪುರಸಭೆಯಿಂದ ವಿಧಾನಸಭೆಯ ಮುಖ್ಯಮಂತ್ರಿ ಪಟ್ಟದವರೆಗೂ ಯಡಿಯೂರಪ್ಪನವರು ನಡೆದ ಹೋರಾಟದ ಹಾದಿ ಸುಗಮವೇನಾಗಿರಲಿಲ್ಲ. ಬಿಜೆಪಿ ಧರ್ಮಾಧಾರಿತ ಕೋಮುವಾದಿ ಅಜೆಂಡಾಗಳನ್ನಿಟ್ಟುಕೊಂಡು ಪಕ್ಷವನ್ನು ಕಟ್ಟುತ್ತಿದ್ದ ಕಾಲದಲ್ಲಿ ಯಡಿಯೂರಪ್ಪನವರು ನಾಡಿನ ಅನ್ನದಾತನ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕಾಗಿ, ಭೂಹೀನರ ಭೂಮಿ ಹಕ್ಕಿಗಾಗಿ(ಬಗರ್ ಹುಕುಂ), ಬಡವರ ಬದುಕಿಗಾಗಿ ಬೀದಿಯಲ್ಲಿ ಹೋರಾಡುತ್ತಿದ್ದರು. ಅದು ಅವರ ರಾಜಕೀಯ ಆದ್ಯತೆಯೂ ಆಗಿತ್ತು.
ಅಧಿಕಾರ ಸಂದರ್ಭಕ್ಕೆ ಹೇಳುವುದಾದರೆ 2006 ರಿಂದ 2013 ವರೆಗೆ ಯಡಿಯೂರಪ್ಪವರು ಕಂಡ ರಾಜಕೀಯ ಏಳು ಬೀಳು ಗಳು ಕಡಿಮೆಯೇನಲ್ಲ. ಮುಖ್ಯಮಂತ್ರಿಯಾಗಿದ್ದಾಗಲೆ ಭ್ರಷ್ಟಾಚಾರ ಆರೋಪಗಳಿಂದ ಜೈಲು ಸೇರಿ ಅಧಿಕಾರ ಕಳೆದುಕೊಳ್ಳುವಂತಾಯಿತು. ಬಿಜೆಪಿ ವರಿಷ್ಠರ ಧೋರಣೆಗೆ ಬಂಡೆದ್ದು ಸ್ವತಂತ್ರ ಪಕ್ಷ ಕಟ್ಟಿ ಬಿಜೆಪಿಗೆ ತಮ್ಮ ಶಕ್ತಿಯನ್ನು ತೋರಿಸಿದರು. ಮತ್ತೆ ಬಿಜೆಪಿಗೆ ಮರಳಿದ ಯಡಿಯೂರಪ್ಪನವರು ಪಕ್ಷಕ್ಕೆ ತಮ್ಮ ಶಕ್ತಿ ಧಾರೆ ಎರೆದರು.
2018 ರಲ್ಲಿ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪನವರು ಮೂರುದಿನಗಳ ಅವಧಿಯಲ್ಲೇ ಬಹುಮತ ಸಾಬೀತು ಮಾಡಲಾಗದೆ ಪದತ್ಯಾಗ ಮಾಡಬೇಕಾಯಿತು. ಛಲ ಬಿಡದೆ 2019 ರಲ್ಲಿ ಮತ್ತೆ ಕಾಂಗ್ರೇಸ್‌ನ 17 ಶಾಸಕರನ್ನು ಸೆಳೆದು ಸರ್ಕಾರ ರಚಿಸಿಕೊಂಡ ಯಡಿಯೂರಪ್ಪನವರು ಎರಡು ತಿಂಗಳು ಏಕಾಂಗಿಯಾಗಿ ರಾಜ್ಯದಲ್ಲಿ ಪ್ರವಾಹದಂತ ಧಾರುಣ ಸ್ಥಿತಿಯನ್ನು ನಿಭಾಯಿಸಿದ್ದರು, ಕೋವಿಡ್ ಕಾಲದಲ್ಲಿ ಕೋಮು ಸಾಮರಸ್ಯ ಕಾಪಾಡುವುದೇ ಅವರಿಗೆ ಕೋವಿಡ್ ರೋಗಕ್ಕಿಂಲೂ ದೊಡ್ಡ ಸವಾಲಾಗಿತ್ತು. ಅದನ್ನು ಅಧಿಕಾರ ದಂಡದಿಂದ ನಿಭಾಯಿಸಿದರು. ಇಂತಹ ಕಾರಣಕ್ಕಾಗಿಯೆ ಅಷ್ಟು ಸುಲಭವಾಗಿ ಯಡಿಯೂರಪ್ಪ ಅವರನ್ನು ಕೋಮುವಾದಿ ಪಟ್ಟಿಗೆ ಸೇರಿಸಲಾಗದು ಇವೆಲ್ಲವೂ ಅವರ ಸಾಮರ್ಥ್ಯಕ್ಕೆ ಸಾಕ್ಷಿ.
ಈ ಬಾರಿ ಯಡಿಯೂರಪ್ಪ ಅವರ ಮೇಲೆ ಯಾವುದೇ ಗಂಭೀರ ಭ್ರಷ್ಟಾಚಾರ ಆರೋಪಗಳಿರಲಿಲ್ಲ. ಅವರ ಆಡಳಿತಕ್ಕೆ ಕಪ್ಪುಚುಕ್ಕೆ ಕೂಡ ಇರಲಿಲ್ಲ. ಈ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಎರಡು ವರ್ಷಪೂರೈಸಿದ ಸಂದರ್ಭದಲ್ಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಣ್ಣೀರಿನೊಂದಿಗೆ ನಿರ್ಗಮಿಸಬೇಕಾಯಿತು.
ಯಡಿಯೂರಪ್ಪನವರಿಗೆ 75 ವರ್ಷ ತುಂಬಿತ್ತು ನಿಜ, ಆದರೆ ಯಡಿಯೂರಪ್ಪ ಅವರಿಂದ ಅಕಾಲಿಕವಾಗಿ ಮುಖ್ಯಮಂತ್ರಿ ಪದವಿಯನ್ನು ಕಿತ್ತುಕೊಂಡ ಬಿಜೆಪಿ ಹೈಕಮಾಂಡ್ ಇದಕ್ಕೆ ಇದುವರೆಗೂ ಸ್ಪಷ್ಟವಾದ ಕಾರಣವನ್ನು ಕೊಟ್ಟಿಲ್ಲ. ಈ ಪ್ರಶ್ನೆ ಹಾಗೆ ಉಳಿದಿದೆ. ಯಡಿಯೂರಪ್ಪನವರು 2022 ರಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದರೂ ಸಕ್ರೀಯ ರಾಜಕಾರಣದಿಂದ ಅವರಿನ್ನೂ ನಿವೃತ್ತಿ ಆಗಿಲ್ಲ.
ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಶ್ರಮ ಕೀರ್ತಿ ಯಡಿಯೂರಪ್ಪ ಅವರದ್ದೇ ಎನ್ನುವುದರಲ್ಲಿ ಯಾವ ತಕರಾರು ಇಲ್ಲ. ಇಲ್ಲಿ ಯಾವ ಅಮಿತ್ ಷಾ, ನರೇಂದ್ರ ಮೋದಿ ಅವರ ಚಾಣಕ್ಯ ತನವೂ ಕಾಣುವುದಿಲ್ಲ. ಒನ್ ಅಂಡ್ ಓನ್ಲಿ ಯಡಿಯೂರಪ್ಪ. ಅವರನ್ನು
ಮಾಸ್ ಲೀಡರ್ ಎಂಬುದನ್ನು ಈ ನಾಡು ಒಪ್ಪಿಕೊಂಡಿದೆ. ಇಂತಹ ಯಾವುದೇ ರಾಜಕೀಯ ಜನನಾಯಕರ ಸಾರ್ವಜನಿಕ ಬದುಕು ಸಾಧನೆಯನ್ನು ಅಭಿಮಾನೋತ್ಸವಗಳಿಂದ ಗೌರವಿಸುವುದು ಔಚಿತ್ಯ ಪೂರ್ಣ. ಅದು ಪಕ್ಷಾತೀತವಾಗಿದ್ದರಂತೂ ಇನ್ನಷ್ಟು ಅರ್ಥಪೂರ್ಣವಾಗುತ್ತಿತ್ತು.
ಆದರೆ ಈಗ ನಡೆಯುತ್ತಿರುವ ಬಿ ಎಸ್ ವೈ ಅಭಿಮಾನೋತ್ಸವ ಸೀಮಿತ ರಾಜಕೀಯ ಉದ್ದೇಶವನ್ನು ಹೊಂದಿರುವ ಸಮಾರಂಭವಷ್ಟೇ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರಬಲ ವಿಪಕ್ಷವಾಗಿ ಹೋರಾಡುವಲ್ಲಿ ಸೊರಗುತ್ತಿರುವ ಬಿಜೆಪಿ ಯಡಿಯೂರಪ್ಪ ಎಂಬ ಜನನಾಯಕರ ಪ್ರಭಾವಳಿಯ ಊರುಗೋಲು ಮೇಲೆ ಎದ್ದು ನಿಲ್ಲುವ ಪ್ರಯತ್ನದ ಭಾಗದಂತೆ ಈ ಅಭಿಮಾನೋತ್ಸವ ಕಾಣುತ್ತಿದೆ.

’ಅಭಿಮಾನೋತ್ಸವದಿಂದ ಯಾವ ಸಂದೇಶ ಹೊರಡುತ್ತದೆ ’ ಎಂಬ ಪ್ರಶ್ನೆಗೆ ಈ ಉತ್ಸವದ ಉಸ್ತುವಾರಿ ವಹಿಸಿರುವವರಲ್ಲಿ ಒಬ್ಬರಾದ ಮಾಜಿ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಅವರು ಉತ್ತರಿಸಿದ್ದು ಹೀಗೆ’ಯಡಿಯೂರಪ್ಪನವರು ಧೀಮಂತ ನಾಯಕರು. ದಕ್ಷಿಣದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಅವರು, ಅವರ ರಾಜಕೀಯ ಬದುಕಿನ ಮಾದರಿಯನ್ನು ಹೊಸ ಪೀಳಿಗೆಗೆ ಕಾಣಿಸಬೇಕಾಗಿದೆ. ಅಭಿಮಾನೋತ್ಸವದಿಂದ ಇಂತಹುದ್ದೇ ಸಂದೇಶ ಹೋಗುತ್ತದೆ ಎಂದು ಹೇಳಲು ಆಗದು, ಎಲ್ಲಾ ರೀತಿಯ ಸಂದೇಶಗಳು ಕಾಣಬಹುದು.’ ಎಂದು ಸೂಚ್ಯವಾಗಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಬಲದಲ್ಲಿ ಅಧಿಕಾರಕ್ಕೆ ಬಂದಿದೆ. ಇದರ ಪರಿಣಾಮ ಅಭಿವೃದ್ದಿ ಕೆಲಸಗಳು ಸ್ಥಗಿತಗೊಂಡಿವೆ ಎನ್ನುವ ಅಸಮಾಧಾನ ಆಡಳಿತ ರೂಢ ಕಾಂಗ್ರೆಸ್ ಶಾಸಕರಿಂದಲೇ ಕೇಳಿಬರುತ್ತಿವೆ. ಎಸ್‌ಸಿಪಿ/ ಟಿಎಸ್ ಪಿ ಅನುದಾವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ಶಾಸಕರದ್ದೇ ವಿರೋಧವಿದೆ. ಮುಖ್ಯಮಂತ್ರಿ ಸ್ಥಾನದ ಕುರಿತು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಬಣದ ನಡುವೆ ಪ್ರತಿದಿನ ಹೇಳಿಕೆ ಪ್ರತಿಹೇಳಿಕೆಗಳು ಹೊರಬೀಳುತ್ತಿದ್ದು ಆಡಳಿತ ಮೇಲೆ ಗಂಭೀರ ಪರಿಣಾಮಗಳನ್ನುಂಟು ಮಾಡುತ್ತಿದೆ. ಒಳಮೀಸಲಾತಿ ವಿಚಾರದಲ್ಲಿ ಬಿಜೆಪಿ ಆರಂಭಿಸಿದ ಶೂರತ್ವ ಈಗ ಇಲ್ಲದಾಗಿದೆ. ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ಎಡವಿದೆ ಎನ್ನುವುದನ್ನು ಒಳಮೀಸಲಾತಿ ಹೋರಾಟಗಾರರೆ ಎತ್ತಿ ಹಿಡಿದಿದ್ದಾರೆ. ಇಂತಹ ಸಂಗತಿಗಳನ್ನಿಟ್ಟುಕೊಂಡು ಬಿಜೆಪಿ ರಚನಾತ್ಮಕ ವಿಪಕ್ಷವಾಗಿ ಸರ್ಕಾರವನ್ನು ದಂಡಿಸುವ ಅವಕಾಶವನ್ನು ಕೈಚೆಲ್ಲಿ ಕುಳಿತಿದೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬ ಜನಮಾತು ಈಗ ಮರೆತು ಹೋಗಿದೆ.
ರಾಜ್ಯ ಬಿಜೆಪಿ ಈಗ ಹಿರಿಯನಿಲ್ಲದ ಒಡೆದ ಮನೆ. ಯಡಿಯೂರಪ್ಪ ಅವರ ಮಗ ಬಿ.ವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೂ ಪಕ್ಷ ಶಕ್ತಿ ಬಲವರ್ಧನೆ ಆಗುತ್ತಿಲ್ಲ. ವಿಜಯೇಂದ್ರ ಅವರಿಗೆ ತೊಡರುಗಾಲಿನಂತಿದ್ದ ಬಸವನಗೌಡ ಪಾಟೀಲ್ ಯತ್ನಾಳ್,. ಕೆ ಎಸ್ ಈಶ್ವರಪ್ಪ ಅವರುಗಳನ್ನು ಪಕ್ಷದಿಂದ ಹೊರಹಾಕಿದ ಮೇಲೂ ವಿಜಯೇಂದ್ರ ಅವರ ಹಾದಿ ಸುಲಭವಾಗಿಲ್ಲ. ಪಕ್ಷದೊಳಗಿನ ಗುಂಪುಗಾರಿಕೆ ಕಾಂಡಕೊರಕ ಹುಳುಗಳಂತೆ ಕಾಡುತ್ತಿವೆ. ಮೊನ್ನೆಯಷ್ಟೆ ನಡೆದ ಬಾಗಲಕೋಟೆ, ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲಿನ ಆತ್ಮಾವಲೋಕನಕ್ಕೂ ಬಿಜೆಪಿಯಲ್ಲಿಯಾರೂ ಸಿದ್ದರಿಲ್ಲ.

ಇಂತಹ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು 2028 ರ ಚುನಾವಣೆ ವರೆಗೂ ಪಕ್ಷವನ್ನು ಉತ್ಸಾಹದಲ್ಲಿಟ್ಟುಕೊಳ್ಳಲು ಕೊನೆಗೆ ಬಿ.ಎಸ್ ಯಡಿಯೂರಪ್ಪ ಅವರನ್ನೆ ಬಿಜೆಪಿ ವರಿಷ್ಠರು ಆಶ್ರಯಿಸಿದಂತಿದೆ.
ಯಡಿಯೂರಪ್ಪ ಓರ್ವ ಜನನಾಯಕ, ರಾಜ್ಯದಲ್ಲಿ ಲಿಂಗಾಯಿತ ಸಮುದಾಯದ ಅಗ್ರ ನಾಯಕರಷ್ಟೇ ಅಲ್ಲ, ಎಲ್ಲಾ ವರ್ಗದ ಮತಗಳನ್ನು ಸೆಳೆಯಬಲ್ಲ ಯಡಿಯೂರಪ್ಪ ಅವರನ್ನು ನೈಪಥ್ಯಕ್ಕೆ ಸರಿಸಿದ ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ಯಡಿಯೂರಪ್ಪ ಅವರ ಜಾಗಕ್ಕೆ ಪರ‍್ಯಾಯ ನಾಯಕರೊಬ್ಬರನ್ನು ತರಲು ಸಾಧ್ಯವೇ ಆಗಲಿಲ್ಲ.
ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ಆರ್ ಅಶೋಕ್, ಡಾ ಆಶ್ವಥ್ನಾರಾಯಣ, ಸಿ ಟಿ ರವಿ ಅವರನ್ನೆಲ್ಲಾ ಯಡಿಯೂರಪ್ಪ ಅವರ ಜಾಗಕ್ಕೆ ಪ್ರತಿಷ್ಠಾಪಿಸಲು ಯತ್ನಿಸಿದ ಬಿಜೆಪಿ ಹೈಕಮಾಂಡ್‌ಗೆ ನಿರಾಸೆಯೇ ಆಗಿದೆ.
2028 ರ ವಿಧಾನಸಭಾ ಚುನಾವಣೆಗೆ ಬಿಜೆಪಿಗೆ ಮತ ಕ್ರೂಢೀಕರಣ ಮಾಡಿಕೊಡಬಲ್ಲ ಯಾವ ಮುಖಗಳೂ ಇಲ್ಲ ಎನ್ನುವ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಮತಬೇಟೆಗೆ ಬಳಸಿಕೊಳ್ಳುವ ಇರಾದೆ ಹೈಕಮಾಂಡ್‌ಗೆ ಇದ್ದಂತಿದೆ. ತಮ್ಮ ಮಗ ವಿಜಯೇಂದ್ರರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆಂಬ ಆಸೆಯೂ ತಂದೆಯಾಗಿ ಯಡಿಯೂರಪ್ಪನವರಿಗಿಲ್ಲ ಎನ್ನಲಾದೀತೆ? ಅದಕ್ಕಾಗಿಯೆ ನಡೆಯುತ್ತಿರುವ ಅಭಿಮಾನೋತ್ಸವ ಕ್ಕೆ ಖುದ್ದು ಬಿಜೆಪಿಯ ನಂಬರ್ ಟು ಅಗ್ರ ನಾಯಕ ಅಮಿತ್ ಷಾ ಬರುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಹಾಡಿ ಹೊಗಳಲಿದ್ದಾರೆ. !
2020 ರಲ್ಲಿ ಮುಖ್ಯಮಂತ್ರಿ ಕುರ್ಚಿಯಲ್ಲಿದ್ದ ಬಿ.ಎಸ್ ಯಡಿಯೂರಪ್ಪ ಅವರ 78 ನೇ ಜನ್ಮದಿನ ಸಮಾರಂಭಕ್ಕೆ ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಂದಿದ್ದರು. ’’ರಾಜಕೀಯವೇ ಬೇರೆ, ಮನುಷ್ಯ ಸಂಬಂಧವೇ ಬೇರೆ’’ ಎಂದು ಯಡಿಯೂರಪ್ಪ ಅವರನ್ನು ಕೊಂಡಾಡಿ ಬರ್ತ್ ಡೇ ವಿಶ್ ಮಾಡಿದ್ದರು. ಸಿದ್ದರಾಮಯ್ಯನವರು ಬಂದ ಕಾರಣಕ್ಕೆ “ನನ್ನ ಈ ಜನ್ಮದಿನ ಸಮಾರಂಭವನ್ನು ಮರೆಯಲಾಗದು” ಎಂದು ಯಡಿಯೂರಪ್ಪ ಸಾರ್ಥಕ ಸಂತೃಪ್ತಿಯನ್ನು ಅನುಭವಿಸಿದ್ದರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಎಸ್ ವೈ ಅಭಿಮಾನೋತ್ಸವ ಇಂತಹ ಸುಂದರ ಸಂದರ್ಭದಿಂದ ದೂರವಂತೂ ಉಳಿದಿದೆ.
ಬಿಜೆಪಿ ಯಾವ ಕಾರಣಕ್ಕೂ ವ್ಯಕ್ತಿಗತ ವೈಭವೀಕರಣದ ( ಮೋದಿ ಹೊರತು ಪಡಿಸಿ!!) ಸಮಾವೇಶಗಳಿಗೆ ಅವಕಾಶ ನೀಡುವುದಿಲ್ಲ. ಆದರೆ ಯಡಿಯೂರಪ್ಪನವರ 50 ವರ್ಷಗಳ ರಾಜಕೀಯ ಬದುಕಿನ ಗೌರವಾರ್ಥ ನಡೆಯುತ್ತಿರುವ ಅಭಿಮಾನೋತ್ಸವಕ್ಕೆ ತಥಾಸ್ತು ಎಂದಿದೆ ಎಂದರೆ, ಇದರ ಹಿಂದೆ ’ಯಡಿಯೂರಪ್ಪನವರೇ ಗತಿ’ ಎಂಬ ನಿರ್ಧಾರಕ್ಕೆ ಬಿಜೆಪಿ ಹೈ ಕಮಾಂಡ್ ಬಂದಂತಿದೆಯೇ?!
–ಎನ್. ರವಿಕುಮಾರ್
