ಶಿವಮೊಗ್ಗ, ಏ.7: ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಇರುವ ಬಡ ಫಲಾನುಭವಿಗಳ ವಾರ್ಷಿಕ ಆದಾಯದ ಮಿತಿಯನ್ನು 32 ಸಾವಿರಕ್ಕೆ ನಿಗಧಿ ಪಡಿಸಿರುವುದು ಸರಿಯಲ್ಲ ಮತ್ತು ಈ ಮಿತಿ 3 ಲಕ್ಷಕ್ಕೆ ಏರಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ವಿಧವಾ ವೇತನ, ಅಂಗವಿಕಲರ ಪಿಂಚಣಿ, ಸಂಧ್ಯಾಸುರಕ್ಷ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಮನಸ್ವಿ ಯೋಜನೆ ಸೇರಿದಂತೆ ಹಲವು ಯೋಜನೆಗಳ ಅಡಿಯಲ್ಲಿ ಪಿಂಚಣಿಯನ್ನು ನೀಡುತ್ತಾ ಬಂದಿದೆ. ಆದರೆ ಈಗ ರಾಜ್ಯ ಸರ್ಕಾರ ಈ ಯೋಜನೆಗಳನ್ನು ಪಡೆಯಲು ವಾರ್ಷಿಕ 32 ಸಾವಿರ ರೂ.ಗಳ ಆದಾಯ ಮಿತಿಯನ್ನು ನಿಗಧಿ ಮಾಡಿ, ಪರಿಷ್ಕರಣೆ ಮಾಡಲು ಹೊರಟಿದೆ.
ಈಗಾಗಲೇ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ೩೨ ಸಾವಿರಕ್ಕೂ ಹೆಚ್ಚು ಆದಾಯ ಇರುವ ಫಲಾನುಭವಿಗಳ ಕುಟುಂಬಗಳನ್ನು ಪಟ್ಟಿ ಮಾಡುತ್ತಿದೆ. ಜಿಲ್ಲೆಯಲ್ಲಿ ಸುಮಾರು 50 ಸಾವಿರ ಫಲಾನುಭವಿಗಳು ಈ ನಿಯಮದಿಂದ ತಮ್ಮ ಪಿಂಚಣಿಯನ್ನು ಕಳೆದುಕೊಳ್ಳುವ ಹೊತ್ತು ಬಂದಿದೆ. ಇದು ಜನ ವಿರೋಧಿ ನೀತಿಯಾಗಿದೆ ಎಂದರು.
ಸಮಾಜದಲ್ಲಿ ಹೆಣ್ಣಾಗಲೀ, ಗಂಡಾಗಲೀ ಕೂಲಿ ಮಾಡಿದರೂ ಕೂಡ ದಿನಕ್ಕೆ 300 ರೂ. ಸಿಗುತ್ತದೆ. ಅಂದರೆ ವರ್ಷಕ್ಕೆ 1.8 ಲಕ್ಷ ರೂ. ಆಗುತ್ತದೆ. ಗಾರೆ ಕೆಲಸದವರು, ಇತರೆ ಕುಶಲಕರ್ಮಿಗಳು, ಕಟ್ಟಡ ಕಾರ್ಮಿಕರು ದಿನಕ್ಕೆ 500 ರೂ. ಕನಿಷ್ಠ ದುಡಿಯುತ್ತಾರೆ. ಇವರಿಗೆ ವರ್ಷಕ್ಕೆ 1.80 ಲಕ್ಷ ರೂ.ದುಡಿಯುತ್ತಾರೆ. ಹೀಗಿರುವಾಗ ಕೇವಲ 32 ಸಾವಿರ ರೂ. ಆದಾಯ ಇರಬೇಕೆಂದು ಸರ್ಕಾರ ಆದೇಶ ಹೊರಡಿಸಿರುವುದು ಅವೈಜ್ಞಾನಿಕವಾಗಿದೆ ಮತ್ತು ಖಂಡನೀಯವಾಗಿದೆ. ಇದರಿಂದ ಲಕ್ಷಾಂತರ ಫಲಾನುಭವಿಗಳಿಗೆ ತೊಂದರೆಯಾಗಲಿದ್ದು, ಸರ್ಕಾರದ ಸಹಾಯದಿಂದ ವಂಚಿತರಾಗುತ್ತಾರೆ ಎಂದು ದೂರಿದರು.
ಆದ್ದರಿಂದ ಸರ್ಕಾರ ಕೂಡಲೇ ಈ ಆದೇಶವನ್ನು ವಾಪಾಸ್ಸು ತೆಗೆದುಕೊಳ್ಳಬೇಕು ಮತ್ತು ಫಲಾನುಭವಿಗಳವಾರ್ಷಿಕ ಆದಾಯ ಮಿತಿಯನ್ನು ಕನಿಷ್ಠ 3 ಲಕ್ಷಕ್ಕೆ ಏರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಫಲಾನುಭವಿಗಳನ್ನು ಸಂಘಟಿಸಿ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಪ್ರಮುಖರಾದ ಹೆಚ್.ಎಂ. ಸಂಗಯ್ಯ, ಆಲಿಂಖಾನ್ ರವಿ ಅರಸಾಳು, ಶಂಕ್ರಾನಾಯ್ಕ ಇದ್ದರು.
