ಶಿವಮೊಗ್ಗದ ಆರ್ಎಸ್ಎಸ್ ಮತ್ತು ಬಿಜೆಪಿ ಮುಖಂಡ ಹಾಗೂ ಈ ಹಿಂದೆ ಇಂಧನ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದ ಶ್ರೀನಾಥ್ ನಗರಗದ್ದೆ ಸೇರಿದಂತೆ ಇನ್ನಿಬ್ಬರನ್ನು ನಕಲಿ ದಾಖಲೆ ಸೃಷ್ಟಿಸಿ ಮಲ್ಲೇಶ್ವರದ ಪೊಲೀಸ್ ವಸತಿ ಗೃಹದ ಜಾಗವನ್ನು ಕಬಳಿಸಲು ಯತ್ನಿಸಿದ್ದ ಪ್ರಕರಣದಲ್ಲಿ ಬೆಂಗಳೂರಿನ ಮಲ್ಲೇಶ್ವರ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಶಿವಮೊಗ್ಗದ ಶ್ರೀನಾಥ್ ನಗರಗದ್ದೆ ಸೇರಿದಂತೆ ತುಮಕೂರಿನ ಕೃಷ್ಣಮೂರ್ತಿ ಹಾಗೂ ಮೈಸೂರಿನ ಕಿಶನ್ ಪೋಲಿಸರು ಬಂಧಿಸಿದ್ದು, ಲೋಕಾಯುಕ್ತ ಬೆಂಗಳೂರು ದಕ್ಷಿಣ ಜಿಲ್ಲೆಯ ಇನ್ಸ್ಪೆಕ್ಟರ್ ಎಂ.ಕುಮಾರ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ.
ಪ್ರಕರಣಕ್ಕೆ ಶ್ರೀನಾಥ್ ಸೂತ್ರದಾರಿ:
ಆರ್ಎಸ್ಎಸ್ ಮುಖಂಡ ಶ್ರೀನಾಥ್ ನಗರಗದ್ದೆಯೇ ಈ ಪ್ರಕರಣದ ಸೂತ್ರಧಾರ ಎಂಬುದು ಬೆಳಕಿಗೆ ಬಂದಿದ್ದು, 80 ಕೋಟಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಲಾಗಿದೆ ಎಂದು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು ಪೊಲೀಸ್ ವಸತಿ ಗೃಹಗಳು ಹಳೆಯದಾಗಿದ್ದು, ವಸತಿ ಗೃಹ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಉತ್ತರ ವಿಭಾಗದ ಡಿಸಿಪಿ ಅವರು ಪ್ರಸ್ತಾವ ಸಲ್ಲಿಸಿದ್ದರು. ಅದೇ ಜಾಗವನ್ನು ಕಬಳಿಸಲು ಈ ತಂಡವು ಮುಂದಾಗಿದೆ. ಅಕ್ರಮಕ್ಕೆ ಇ-ಖಾತಾ ಮಾಡಿಕೊಟ್ಟ, ವಿದ್ಯುತ್ ಬಿಲ್ ವರ್ಗಾವಣೆ ಮಾಡಿಕೊಟ್ಟ ಬಿಬಿಎ ಮತ್ತು ಬೆಸ್ಕಾಂ ಆಧಿಕಾರಿಗಳಿಗೂ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇನ್ನೂ ಹಲವು ಕೆಲವು ಅಧಿಕಾರಿಗಳ ಪಾತ್ರ ಇರುವುದೂ ಕಂಡುಬಂದಿದೆ.
ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನು 1913ರ ನಕ್ಷೆಯಲ್ಲಿಯೇ ಪೊಲೀಸ್ ವಸತಿ ಗೃಹವೆಂದು ಗುರುತಿಸಲಾಗಿತ್ತು. ಪ್ರಸ್ತುತ ಸ್ಥಳದಲ್ಲೀಗ ನಾಲ್ವರು ಇನ್ಸ್ಪೆಕ್ಟರ್ ಕುಟುಂಬ ಹಾಗೂ ಸಿಬ್ಬಂದಿ ವಾಸಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಅಲ್ಲೇ ವಾಸವಿರುವ ಇನ್ಸ್ಪೆಕ್ಟರ್ ಕುಮಾರ್ ಮನೆಗೆ ವಿದ್ಯುತ್ ಬಿಲ್ ಬಂದಿದ್ದು, ಅದರಲ್ಲಿ ಮಹಾಲಕ್ಷ್ಮಿ ಎಂಬ ಖಾಸಗಿ ಹೆಸರಿತ್ತು. ಅನುಮಾನಗೊಂಡ ಕುಮಾರ್ ಬೆಸ್ಕಾಂ, ಜಿಬಿಎ, ಉಪ ನೋಂದಣಿ ಕಚೇರಿಗಳಿಗೆ ಭೇಟಿ ನೀಡಿ ವಿಚಾರಣೆ ಆರಂಭಿಸಿದಾಗ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಮಹಾಲಕ್ಷ್ಮಿ ಎಂಬ ಹೆಸರಿಗೆ ವರ್ಗಾವಣೆ ಮಾಡಿರುವುದು ಕಂಡಬಂದಿತ್ತು.
ಜೊತೆಗೆ, ಜಿಬಿಎ ಮೂಲಕ ಅಕ್ರಮವಾಗಿ ಇ-ಖಾತಾ ಮಾಡಿಸಿರುವುದು ಹಾಗೂ ಮಾರಾಟ ಮಾಡಲು ಒಪ್ಪಂದ ಪತ್ರ ಕೂಡ ಮಾಡಲಾಗಿತ್ತು. ಆಸ್ತಿ ವರ್ಗಾವಣೆಗೊಂಡಿರುವ ಮಹಾಲಕ್ಷ್ಮಿ ವಯೋವೃದ್ಧರಾಗಿದ್ದಾರೆ. ಆ ಆಸ್ತಿ ಕಬಳಿಕೆ ವಿಚಾರ ಮಹಾಲಕ್ಷ್ಮಿ ಅವರ ಗಮನದಲ್ಲೇ ಇರಲಿಲ್ಲ. ಆದರೆ, ಆರೋಪಿಗಳು ಅಕ್ರಮ ದಾಖಲೆ ಸೃಷ್ಟಿಸಿ ಅವರ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿದ್ದು ತನಿಖೆಯಲ್ಲಿ ಕಂಡುಬಂದಿದೆ.
