ಶಿವಮೊಗ್ಗ ,ಏ.10 : ಉಬ್ರಾಣಿ, ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಹೊದಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕೆರೆಗಳಿಗೆ ನೀರು ಒದಗಿಸಬೇಕೆಂದು ಆಗ್ರಹಿಸಿ ಉಬ್ರಾಣಿ ಏತ ನೀರಾವರಿಯೋಜನೆ ಮತ್ತು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಿಂದ ವಂಚಿತ ಗ್ರಾಮಗಳ ರೈತ ಹೋರಾಟ ಸಮಿತಿಯಿಂದ ಇಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನೀಯರ್ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ಮತ್ತು ಧರಣಿ ನಡೆಸಲಾಯಿತು.
ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಏತ ನೀರಾವರಿ ಯೋಜನೆ ಮತ್ತು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿಯಲ್ಲಿ ಅನೇಕ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲು ಯೋಜನೆ ಮಾಡಲಾಗಿತ್ತು. ಆದರೆಹೊದಿಗೆರೆ ಗ್ರಾಮ ಹಾಗೂ ಸುತ್ತಲಿನ ಜೋಡಿತಿಮ್ಲಾಪುರ, ಬೆಂಕಿಕೆರೆ, ಹೆಬ್ಬಳಗೆರೆ, ಹರಳಕಟ್ಟ, ಮಾದಾಪುರ, ಶೆಟ್ಟಿಹಳ್ಳಿ, ಎರಗಟ್ಟಿ ಹಳ್ಳಿ, ಕೆಂಚಾಪುರ, ಬಯಲು ಬಸಪ್ಪನಕಟ್ಟೆ, ವಿ.ರಾಮೇನಹಳ್ಳಿ ಸೇರಿದಂತೆ ಹಲವುಗ್ರಾಮಗಳ ಕೆರೆಗಳಿಗೆ ಈ ಯೋಜನೆಯ ಪ್ರಯೋಜನ ಆಗಿಲ್ಲ. ಈ ಭಾಗದಲ್ಲಿ ಕುಡಿಯುವ ನೀರು, ಮತ್ತು ವ್ಯವಸಾಯಕ್ಕೆ, ಜಾನುವಾರುಗಳಿಗೆ ರೈತರು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹೆಚ್ಚಿನ ರೈತ ಕುಟುಂಬಗಳು ಕೊಳವೆ ಭಾವಿಗಳನ್ನೇ ಅವಲಂಬಿಸಿದ್ದು ಅಂತರ್ ಜಲಮಟ್ಟ ಕುಸಿದು ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸದರಿ ಗ್ರಾಮಗಳ ಕೆರೆಗಳು ತುಂಬಿದ್ದಲ್ಲಿ ಅಂತರ್ ಜಲ ಮಟ್ಟ ಹೆಚ್ಚಾಗುತ್ತದೆ. ಹಾಗೂ ಕುಡಿಯುವ ನೀರು ಮತ್ತು ಜಾನುವಾರುಗಳ ಸಾಕಾಣಿಕೆಗೆ ಶಾಶ್ವತ ಪರಿಹಾರ ಸಿಗಲಿದೆ. ಆದ್ದರಿಂದ ಉಬ್ರಾಣಿ ಏತ ನೀರಾವರಿ ಯೋಜನೆಯಡಿ ಶಾಶ್ವತವಾಗಿ ನೀರು ಒದಗಿಸುವಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದರು.
ಗಮನಿಸಿ: ನೇರ ಸಂದರ್ಶನಕ್ಕೆ ಕರೆ
ಸಾಸ್ವೆಹಳ್ಳಿ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡಿರುವ ಜಕ್ಕಲಿ ಬಳಿಯಿಂದ ಪೈಪ್ಲೈನ್ ಮೂಲಕ ತುರ್ತಾಗಿ ನಮ್ಮ ಭಾಗವ ಕೆರೆಗಳಿಗೆ ನೀರು ತುಂಬಿಸಬೇಕು. ಸಾಸ್ವೆಹಳ್ಳಿ ಏತ ನೀರಾವರಿ 2 ನೇ ಹಂತದಲ್ಲಿ ಬಿಡುಗಡೆಗೊಂಡಿರುವ 365 ಕೋಟಿ ರೂ.ಗಳಲ್ಲಿ ಮೊದಲ ಹಂತದ 100 ಕೋಟಿ ರೂ. ಮಂಜೂರಾಗಿದ್ದು, ಆದಷ್ಟು ಬೇಗ ಟೆಂಡರ್ ಕಾರ್ಯ ಮುಗಿಸಿ ಕಾಮಗಾರಿಯನ್ನು ತುರ್ತಾಗಿ ಆರಂಭಿಸಬೇಕು. ಹಾಗೂ ಉಳಿದ ಹಣವನ್ನು ಬಿಡುಗಡೆಗೊಳಿಸಲು ಸರ್ಕಾರದ ಗಮನಕ್ಕೆ ತಂದು ಒತ್ತಾಯಿಸಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ, ಸೂಕ್ತಕ್ರಮ ಕೈಗೊಳ್ಳಬೇಕು ಇದರಿಂದಸಾವಿರಾರು ರೈತ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಪ್ರಾದೇಶಿಕ ಅಸಮತೋಲನತೆ ಸರಿಪಡಿಸಬೇಕು ಹಾಗೂ ಉಬ್ರಾಣಿ, ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಕಾರ್ಯಪಾಲನೆಯ ಉಪವಿಭಾಗದ ಕಛೇರಿಯನ್ನು ಚನ್ನಗಿರಿಯಲ್ಲೇ ತೆರೆಯಬೇಕೆಂದು ರೈತ ಹೋರಾಟ ಸಮಿತಿ ಒತ್ತಾಯಿಸಿದೆ.
ಶಾಸಕ ಶಿವಗಂಗಾ ಬಸವರಾಜ್ ಮತ್ತು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸ್ಥಳಕ್ಕೆ ಬರುವವರೆಗೆ ಧರಣಿ ಸತ್ಯಾಗ್ರಹ ನಿಲ್ಲಿಸುವುದಿಲ್ಲವೆಂದು ರೈತರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ರಮೇಶ್ ಹೊದಿಗೆರೆ, ಮಂಜಣ್ಣ ಹುಗ್ಗೆ, ಜಾನ್ಪ್ರಕಾಶ್, ಪಿ.ಜೆ.ರುದ್ರಪ್ಪ, ಶೇಖರಪ್ಪ ಮೇದಿಗೆರೆ, ಹರೀಶ್ ಪೂಜಾರ್, ಉಮೇಶ್, ಕೆಂಚಪ್ಪ ಮಾಳೇಹಳ್ಳಿ, ಪವಿ, ಮಂಜು, ಸ್ವಾಮಿ, ಹೆಚ್.ಮಂಜು ಮತ್ತಿತರರಿದ್ದರು.
