ಶಿವಮೊಗ್ಗ, ಏ.16: ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ವತಿಯಿಂದ “ಹ್ಯಾಕ್ ಮಲೆನಾಡು-2026” ಎಂಬ 24 ಗಂಟೆಗಳ ಬೃಹತ್ “ಹ್ಯಾಕಥಾನ್” ಅನ್ನು ಏ.17 ಮತ್ತು 18 ರಂದು ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪಿಇಎಸ್ ಟ್ರಸ್ಟ್ನ ಕುಲಸಚಿವ ಡಾ.ನಾಗರಾಜ್ ಆರ್. ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಎಐ ಟಾಸ್ಕ್ ಫೋರ್ಸ್ ಮಹಾತ್ವಕಾಂಕ್ಷೆಯ ಉಪಕ್ರಮದಡಿ ಈ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದರು.
ಇದರಲ್ಲಿ ಎರಡು ವಿಭಾಗಗಳಿದ್ದು, ಮೊದಲನೆಯದು ಐಟಿ ಸೇವೆಗಳಲ್ಲಿ ಗ್ರಾಹಕ ಸರಕುಗಳು ಮತ್ತು ವಿಮರ್ಶೆಯ ಸಾರಾಂಶ ಹಾಗೂ ಎರಡನೆಯದು ಆರ್ಟಿಫಿಷಿಯಲ್ ಇಂಟಲಿಜೇನ್ಸ್. ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ದಿಮತ್ತೆ ಮಾನವ ಜೀವನದ ಅವಿಭಾಜ್ಯ ಅಂಗವಾಗುತ್ತಿದೆ. ಕೃತಕ ಬುದ್ದಿಮತ್ತೆ ಕೆಲಸಗಳನ್ನು ವೇಗವಾಗಿ ಮತ್ತು ನಿಖರವಾಗಿ ನೆರವೇರಿಸುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ರೋಗ ನಿರ್ಣಯ, ಶಿಕ್ಷಣ ಕ್ಷೇತ್ರದಲ್ಲಿ ವೈಯಕ್ತಿ ಕಲಿಕೆ, ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸುವುದು ಮತ್ತು ಕೈಗಾರಿಕೆಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆಗಳಲ್ಲಿ ಎಐ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಗಮನಿಸಿ: ಕೆಎಫ್ ಡಿ ಪ್ರಕರಣ ವರದಿ- ಆರೋಗ್ಯ ಇಲಾಖೆಯಿಂದ ಪ್ರಮುಖ ಸೂಚನೆ
ಹ್ಯಾಕಥಾನ್ನ ಪ್ರಮುಖ ಉದ್ದೇಶ ನೈಜ ಜಗತ್ತಿನ ಸವಾಲುಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವುದಾಗಿದೆ. ನವೀನ ಆಲೋಚನೆಗಳು ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಉತ್ತೇಜಿಸುವ ಉದ್ದೇಶದಿಂದ ಹ್ಯಾಕಥಾನ್ ನಡೆಯುತ್ತಿದ್ದು, ವಿದ್ಯಾರ್ಥಿಗಳು ಮತ್ತು ತಂತ್ರಜ್ಞಾನ ಆಸಕ್ತರು ತಮ್ಮ ಸೃಜನಾತ್ಮಕ ಯೋಜನೆಗಳನ್ನು ಪ್ರದರ್ಶಿಸಲು ವೇದಿಕೆಯಾಗಲಿದೆ ಎಂದರು.
ದೇಶದ ವಿವಿಧ ಕಡೆಗಳಿಂದ ಸುಮಾರು 60 ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಿಂದ ಆಯ್ದ 650 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಇದರಲ್ಲಿ ನಮ್ಮ ಪಿಇಎಸ್ ಕಾಲೇಜಿನಿಂದ 14 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದರು.
ಏ.17 ರ ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಟಿಸಿಎಸ್ ಡೆಲವೆರಿ ಸೆಂಟರ್ ನ ಮುಖ್ಯಸ್ಥ ಸುನೀಲ್ ದೇಶಪಾಂಡೆ, ಶೈಕ್ಷಣಿಕ ಮೈತ್ರಿಯ ಪ್ರಾದೇಶಿಕ ಮುಖ್ಯಸ್ಥ ಪ್ರವೀಣ್ ಚಂದ್ರನ್.ವಿ, ಗಣ್ಯರಾದ ಸುಧಾಂಶು ಶೇಖರ್, ಪ್ರಮೋದ್ ಕುಮಾರ್.ಪಿ, ವರುಣ್.ಯು ಹಾಜರಾಗಲಿದ್ದಾರೆ.
ನಂತರ 24 ಗಂಟೆಗಳ ತಾಂತ್ರಿಕ ಸ್ಪರ್ಧೆಗಳು ಆರಂಭವಾಗಲಿದ್ದು, ವಿಜೇತ ತಂಡಗಳಿಗೆ ಒಟ್ಟು 1.75 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದರು.
ಏ.18 ಬೆಳಿಗ್ಗೆ 11 ಗಂಟೆಗೆ ಸ್ಪರ್ಧೆ ಮುಕ್ತಾಯವಾಗಲಿದ್ದು, ಮಧ್ಯಾಹ್ನ ೨.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಿಇಎಸ್ ಐಟಿಎಂನ ಪ್ರಾಂಶುಪಾಲರಾದ ಡಾ. ಸ್ವಾಮಿ ಡಿ.ಆರ್., ಉಪ ಪ್ರಾಂಶುಪಾಲರಾದ ಡಾ.ಶೇಖರ್.ಆರ್, ಪ್ರೊ.ಡಾ.ಅರ್ಜುನ್ ಯು. ಇದ್ದರು.
