– ಎನ್ .ರವಿಕುಮಾರ್
ಪರಿಶಿಷ್ಟ ಜಾತಿ/ವರ್ಗಗಳ ಮೇಲಿನ ದೌರ್ಜನ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಡೆಯುವ ಮತ್ತು ಸಂತ್ರಸ್ತರಿಗೆ ನ್ಯಾಯ–ಪರಿಹಾರಗಳನ್ನು ಕಾಲಮಿತಿಯೊಳಗೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿದ ವಿಶೇಷ ಪೊಲೀಸ್ ಠಾಣೆಗಳು ವರ್ಷದೊಳಗೆ ಉದ್ದೇಶಿತ ಆಶಯಗಳಿಂದ ವಿಮುಖವಾಗಿವೆ.
ಏಪ್ರಿಲ್ 14 , 2025 ರಂದು ಸಂವಿಧಾನಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದಂದೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ/ವರ್ಗಗಳ ಮೇಲಿನ ದೌರ್ಜನ್ಯ ತಡೆ ಮತ್ತು ನ್ಯಾಯ ಒದಗಿಸಲು ರಾಜ್ಯದಲ್ಲಿ 31 ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯಿತು.
ಸಾಮಾನ್ಯ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ದೌರ್ಜನ್ಯ ಪ್ರಕರಣಗಳ ದೂರು ನೋಂದಣಿ, ತನಿಖೆ ಕಾರ್ಯಗಳು ವಿಳಂಬಗೊಳ್ಳುತ್ತಿರುವುದು, ಮತ್ತು ನಿರ್ದಿಷ್ಠ ಗತಿಯಲ್ಲಿಸಂತ್ರಸ್ತರಿಗೆ ನ್ಯಾಯವನ್ನು ಒದಗಿಸುವಲ್ಲಿ ವಿಫಲವಾಗಿವೆ ಎಂಬುದನ್ನು ಮನಗಂಡು ಪರಿಶಿಷ್ಟಜಾತಿ ವರ್ಗಗಳ ನಕಲಿ ಜಾತಿಪ್ರಮಾಣ ಪತ್ರ ಪ್ರಕರಣಗಳ ತನಿಖೆಗಾಗಿ ಹಾಲಿ ಇರುವ ನಾಗರೀಕ ಹಕ್ಕುಗಳ ಜಾರಿನಿ ರ್ದೇಶನಾಲಯದ (ಡಿಸಿಆರ್‌ಇ) ಅಡಿಯಲ್ಲಿ ಅಟ್ರಾಸಿಟಿ ಪ್ರಕರಣಗಳ ದೂರು ಸ್ವೀಕಾರ, ತನಿಖೆ , ಆರೋಪ ಪಟ್ಟಿ ಸಲ್ಲಿಕೆ ಮತ್ತು ನ್ಯಾಯಾಂಗ ವ್ಯಾಪ್ತಿಯ ಅಧಿಕಾರವನ್ನು ಕೊಟ್ಟು ರಾಜ್ಯದಲ್ಲಿ 31 ವಿಶೇಷ ಪೊಲೀಸ್ ಠಾಣೆಗಳಿಗೆ ಚಾಲನೆ ನೀಡಲಾಯಿತು. ಆದರೆ ವರ್ಷ ಕಳೆಯುವುದರೊಳಗೆ ವಿಶೇಷ ಪೊಲೀಸ್ಠಾಣೆಗಳು ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಬೆನ್ನು ತೋರಿಸಿರುವುದು ಕಂಡು ಬರುತ್ತಿದೆ.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ದೌರ್ಜನ್ಯಗಳ ವಿರುದ್ದ ’1989 ಎಸ್ಸಿ/ಎಸ್ಟಿ(ದೌರ್ಜನ್ಯತಡೆ) ಕಾಯ್ದೆ’ ಯಡಿ ಕೇಸು ದಾಖಲಿಸುವ ಅಧಿಕಾರವನ್ನು ಈ ವಿಶೇಷ ಪೊಲೀಸ್ ಠಾಣೆಗಳಿಗೆ ನೀಡಿದ್ದು, ರಾಜ್ಯದಲ್ಲಿ ಪರಿಶಿಷ್ಟರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಹತ್ತಿಕ್ಕುವುದು, ಸಂತ್ರಸ್ತರಿಗೆ ಕಾಲಮಿತಿಯಲ್ಲಿ ನ್ಯಾಯ ಒದಗಿಸುವುದು ಮತ್ತು ತಪ್ಪಿತಸ್ತರಿಗೆ ಶಿಕ್ಷೆ ಕೊಡಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿತು. ಅದಕ್ಕಾಗಿ ಡಿಸಿಆರ್‌ಇ ನ ಅಡಿಷನಲ್ ಡೈರಕ್ಟರ್ ಜನರಲ್ ಆಫ್ ಪೊಲೀಸ್ (ಎಡಿಜಿಪಿ)ಅವರನ್ನೆ ಮುಖ್ಯಸ್ಥರನ್ನಾಗಿ ನೇಮಿಸಿದ್ದು, ಓರ್ವ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ( ಐಜಿಪಿ), ವಲಯವಾರು 7 ಎಸ್ .ಪಿಗಳು, 6 ಡಿಎಸ್ಪಿಗಳನ್ನು ನೇಮಕ ಮಾಡಿರುವ ಸರ್ಕಾರ ಪ್ರತ್ಯೇಕ ಸಿಬ್ಬಂದಿ, ವಾಹನಗಳು ಸೇರಿದಂತೆ ಜಿಲ್ಲಾ ವಾರುಪ್ರತ್ಯೇಕ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿತು.

ಸಾಮಾನ್ಯ ಪೊಲೀಸ್ ಠಾಣೆಗಳಿಗೆ ಬರುವ ಅಟ್ರಾಸಿಟಿ ದೂರುಗಳನ್ನು, (ಹಲ್ಲೆ ಕೊಲೆ, ಅತ್ಯಾಚಾರಸೇರಿದಂತೆ) ವಿಶೇಷ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು. ವಿಶೇಷ ಪೊಲೀಸ್ ಠಾಣೆಗಳು ತನಿಖೆ ನಡೆಸಿ60 ದಿನದೊಳಗೆ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಬೇಕು. ಎಂಬ ನಿಯಮಗಳಿವೆ. ಆದರೆ ಇದೇ ಏಪ್ರಿಲ್ 14 ಕ್ಕೆ ವಿಶೇಷ ಪೊಲೀಸ್ ಠಾಣೆಗಳು ಸ್ಥಾಪನೆಗೊಂಡು ಒಂದು ವರ್ಷಗಳಾಗಿದ್ದು ಎಷ್ಟು ಪ್ರಮಾಣದಲ್ಲಿ ಪರಿಶಿಷ್ಟರ ಮೇಲಿನ ಪ್ರಕರಣಗಳು ದಾಖಲಾಗಿವೆ ಎಂಬುದರ ಅಂಕಿಅಂಶಗಳು ಹೊರಬಿದ್ದಿಲ್ಲ. ವಿಶೇಷ ಪೊಲೀಸ್‌ಠಾಣೆಗಳ ಮುಖ್ಯಸ್ಥರಾಗಿರುವ ಡಿಸಿಆರ್‌ಇ ಎಡಿಜಿಪಿಯಿಂದ ಮೊದಲುಗೊಂಡು ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ವರೆಗೂ ಸರ್ಕಾರ ಕೊಟ್ಟಿರುವ ಅವರ ಮೊಬೈಲ್ ಸಂಖ್ಯೆಗಳಲ್ಲಿ ಬಹುತೇಕ ಜಿಲ್ಲೆಯ ಅಧಿಕಾರಿಗಳ ಮೊಬೈಲ್ ಸಂಖ್ಯೆ ಗಳು “ನೀವು ಕರೆಮಾಡಿದ ಸಂಖ್ಯೆ ಸದ್ಯಕ್ಕೆ ಸ್ವಿಚ್ ಆಫ್ ಆಗಿದೆ“ ಅಥವಾ ನಿರಂತರವಾಗಿ ‘’ನೀವು ಕರೆ ಮಾಡಿದ ಸಂಖ್ಯೆ ಕಾರ್ಯನಿರತವಾಗಿದೆ” ಎಂದು ಪ್ರತಿಕ್ರಿಯಿಸುತ್ತದೆ.
ಸಾಮಾನ್ಯ ಪೊಲೀಸ್ ಠಾಣೆಗಳಿಗೆ ಬರುವ ಅಟ್ರಾಸಿಟಿ ಮತ್ತು ಪರಿಶಿಷ್ಟ ಜಾತಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಪೋಕ್ಸೋ ಕೇಸುಗಳನ್ನು ವಿಶೇಷ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಿದರೂ ಅದರ ಪ್ರಗತಿಬಗ್ಗೆ ಯಾವುದೇ ಮಾಹಿತಿಯನ್ನು ಸಂವಹನ ದೃಷ್ಟಿಯಿಂದಲಾದರೂ ಆಯಾ ಜಿಲ್ಲೆಗಳ ಪೊಲೀಸ್ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತಿಲ್ಲ ಎಂದು ಸಾಮಾನ್ಯ ಪೊಲೀಸ್ ಠಾಣೆಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
“ಶಿವಮೊಗ್ಗದಲ್ಲಿನ ವಿಶೇಷ ಪೊಲೀಸ್ ಠಾಣೆಯ ಅಧಿಕಾರಿಗಳ ಸರ್ಕಾರಿ ಮೊಬೈಲ್ ಸಂಖ್ಯೆ ಕೂಡ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ.”
*ಸರ್ಕಾರದ ಆಶಯ ಮಣ್ಣುಪಾಲು!?*
ರಾಜ್ಯದಲ್ಲಿ ಪರಿಶಿಷ್ಟ ಜಾತಿ ವರ್ಗಗಳ ಮೇಲಿನ ದೌರ್ಜನ್ಯ , ಹಲ್ಲೆ , ಹತ್ಯೆ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿ. 2025ಕ್ಕೆ ಅಂತ್ಯಗೊಂಡಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ/ವರ್ಗಗಳ ಮೇಲಿನ ದೌರ್ಜನ್ಯ ಶೇ. 45ರಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಶಿಕ್ಷೆಯ ಪ್ರಮಾಣ ಕೇವಲಶೇ. 11 ರಷ್ಟು ಮಾತ್ರವಿದೆ. ಪೊಲೀಸ್ ಠಾಣೆಗಳಲ್ಲಿ ಅಟ್ರಾಸಿಟಿ ಕೇಸುಗಳನ್ನು ದಾಖಲಿಸಲು ಅನಗತ್ಯ ವಿಳಂಬ ಅನುಸರಿಸುತ್ತಿರುವುದು, ಮತ್ತು ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬ ಮಾಡಲಾಗುತ್ತಿದೆ. ಇದರಿಂದ ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂಬುದನ್ನು ಗಂಭೀರವಾಗಿ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜಕಲ್ಯಾಣ ಸಚಿವ ಡಾ. ಹೆಚ್ ಸಿ ಮಹಾದೇವಪ್ಪ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಅಂದಿನ ಡಿಸಿಆರ್‌ಇ ಎಡಿಜಿಪಿ ಆಗಿದ್ದ ಅರುಣ್ ಚಕ್ರವರ್ತಿ ಅವರೊಂದಿಗೆ ಸಮಾಲೋಚಿಸಿ ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ನಿರ್ಧಾರಕೈಗೊಂಡು ಏಪ್ರಿಲ್ 14 , 2025 ಅಂಬೇಡ್ಕರ್ ಜನ್ಮ ದಿನದಂದೆ ಘೋಷಣೆ ಮಾಡಿ ಅಸ್ತಿತ್ವಕ್ಕೆ ತಂದರು.
ವಿಶೇಷ ಪೊಲೀಸ್ ಠಾಣೆಗಳಿಗೆ ನೇಮಕಗೊಂಡ ಅಧಿಕಾರಿಗಳು ಬದ್ದತೆಯಿಂದ ಕೆಲಸ ಮಾಡುವಲ್ಲಿ ಹಿಂಜರಿದಿರುವುದು ಎದ್ದು ಕಾಣುತ್ತಿದೆ. ಅಯಕಟ್ಟಿನ ಜಾಗಗಳಿಗೆ ವರ್ಗಾವಣೆ ಬಯಸುವ ಅಧಿಕಾರಿಗಳಿಗೆ ಈ ವಿಶೇಷ ಪೊಲೀಸ್ ಠಾಣೆಗಳು ನಿಷ್ಪ್ರಯೋಜಕ ದಂತೆ ಕಾಣುತ್ತಿವೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಈ ಠಾಣೆಗಳಿಗೆ ನೇಮಕ ಗೊಂಡ ಪೊಲೀಸ್ ಅಧಿಕಾರಿಗಳಲ್ಲೂ ಜಾತಿಯೇತೆಯ ಮನೋ ಧೋರಣೆಯೂ ಬದ್ದತೆಯ ಕೊರತೆಗೆ ಕಾರಣ ಎಂಬ ಮಾತುಗಳು ಇಲಾಖೆಯಿಂದಲೆ ಕೇಳಿ ಬರುತ್ತಿವೆ.
ಪೊಲೀಸ್ ಅಧಿಕಾರಿಗಳ ಈ ಧೋರಣೆ ಪರಿಶಿಷ್ಟರ ಮೇಲಿನ ದೌರ್ಜನ್ಯಗಳನ್ನು ತಡೆಯುವ , ಜಾತಿಆಧಾರಿತ ಅಪರಾಧಗಳನ್ನು ಹತ್ತಿಕ್ಕುವ ಸರ್ಕಾರದ ಆಶಯವನ್ನು ಮಣ್ಣು ಪಾಲು ಮಾಡಿದೆ. ಡಾ.ಬಿ.ಆರ್ಅಂಬೇಡ್ಕರ್ ಜನ್ಮದಿನದಂದು ಈ ಪೊಲೀಸ್ ಠಾಣೆಗಳಿಗೆ ಚಾಲನೆ ಕೊಟ್ಟು ಪ್ರಚಾರ ಗಿಟ್ಟಿಸಿಕೊಂಡದ್ದಷ್ಟೆ ಸರ್ಕಾರಕ್ಕೆ ಆದ ಲಾಭ.!
