ಶಿವಮೊಗ್ಗ, ಏ.24: ನಗರದಲ್ಲಿನ ಶಾಲಾ-ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಡೊನೇಷನ್ ಹಾಗೂ ಅತಿಯಾದ ಶುಲ್ಕದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಶಿವಮೊಗ್ಗ ಜಿಲ್ಲಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಅತಿಯಾದ ಶುಲ್ಕ ಮತ್ತು ಡೊನೇಷನ್ ಮೂಲಕ ಜನರಿಂದ ಸುಲಿಗೆ ನಡೆಯುತ್ತಿದೆ. ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದರೂ ಇದುವರೆಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಅನುಮಾನಾಸ್ಪದವಾಗಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯ ತಿಳಿದಿದ್ದರೂ ಮೌನ ವಹಿಸಿರುವುದು ಪ್ರಶ್ನಾರ್ಥಕವಾಗಿದೆ ಎಂದರು.
ಗಮನಿಸಿ:ಪ್ರತಿಷ್ಠಿತ ಕಂಪನಿಗಳಿಂದ ಉದ್ಯೋಗ ಮೇಳ
ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಉಚಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ಒದಗಿಸಲು ಸರ್ಕಾರ ವಿಫಲವಾಗಿದೆ. ಇದರಿಂದ ಶ್ರೀಮಂತರ ಮಕ್ಕಳಿಗೆ ಮಾತ್ರ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ಬಡ ಮಕ್ಕಳಿಗೆ ಸಮಾನ ಸ್ಪರ್ಧೆ ಸಾಧ್ಯವಾಗುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಂಡ ನಂತರ ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡುತ್ತಿರುವುದು ದುಃಖಕರ ಸಂಗತಿ ಎಂದು ಸಂಘಟನೆ ಹೇಳಿದೆ. 1ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣವನ್ನು ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದೆ.
ಇನ್ನು ಮುಂದೆ ಹೆಚ್ಚಿನ ಶುಲ್ಕ ವಸೂಲಿಯ ಬಗ್ಗೆ ಮಾಹಿತಿ ಲಭ್ಯವಾದರೆ, ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ವಿರುದ್ಧ ಮುತ್ತಿಗೆ ಹಮ್ಮಿಕೊಳ್ಳುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.
ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಸುರೇಶ್, ಗೌರವಾಧ್ಯಕ್ಷ ಮೂರ್ತಿ ವಿ. ಜಿಲ್ಲಾಧ್ಯಕ್ಷ ಶಿವಕುಮಾರ್ ಎಸ್.ಬಿ. ಜಿಲ್ಲಾ ಕಾರ್ಯ ಅಧ್ಯಕ್ಷ ಜೀವನ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ.ಬಿ. ಜಿಲ್ಲಾ ಉಪಾಧ್ಯಕ್ಷ ರಮೇಶ್ ಮಲ್ಲಿಗೇನಹಳ್ಳಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಗದೀಶ್ ವೈ.ಎಸ್. ಪತ್ರಿಕೆ ಸಲಹೆಗಾರರಾದ ಮಾಲತೇಶ್, ರಾಮಣ್ಣ ರಾಗಿಗುಡ್ಡ, ಕುಮಾರ್, ಗಣೇಶ್, ಪಂಚಾಕ್ಷರಿ, ಶಿವಣ್ಣ, ರಾಮು, ವಿ. ಸಂಗಮೇಶ್, ಪ್ರತಾಪ್, ಮಹಿಳಾ ಘಟಕದ ಉಪಾಧ್ಯಕ್ಷರಾದ ಅನ್ನಪೂರ್ಣ, ಕೃಷ್ಣವೇಣಿ, ಅನಿತಾ ರಾಜನ್, ಶಿಲ್ಪ ಮೊದಲಾದವರಿದ್ದರು.
