Homeಜಿಲ್ಲೆಖಾತೆ ಬದಲಾವಣೆ ಹೆಸರಿನಲ್ಲಿ ಪಾಲಿಕೆ ಸುಲಿಗೆ; ಹಿತರಕ್ಷಣಾ ವೇದಿಕೆ ಸರ್ಕಾರಕ್ಕೆ ಮನವಿ

ಖಾತೆ ಬದಲಾವಣೆ ಹೆಸರಿನಲ್ಲಿ ಪಾಲಿಕೆ ಸುಲಿಗೆ; ಹಿತರಕ್ಷಣಾ ವೇದಿಕೆ ಸರ್ಕಾರಕ್ಕೆ ಮನವಿ

Spread the love

ಶಿವಮೊಗ್ಗ,ಏ.24 : ಸರ್ಕಾರದ ಸುತ್ತೋಲೆಗೆ ವಿರುದ್ಧವಾಗಿ ‘ಖಾತೆ ಬದಲಾವಣೆ ಶುಲ್ಕ ಹೆಸರಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ, ಸುಲಿಗೆ ಮಾಡುತ್ತಿದೆ ಎಂದು ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಪಾಲಿಕೆ ಪೌರಾಯುಕ್ತ ಕೆ.ಮಾಯಣ್ಣಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಶಿವಮೊಗ್ಗ ನಗರದಲ್ಲಿ 2006 ರಿಂದ ಪ್ರಾರಂಭಿಸಿ ಇಲ್ಲಿಯವರೆಗೆ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಹಲವು ಪಟ್ಟು ಹೆಚ್ಚಾಗಿ ಖಾತೆ ಬದಲಾವಣೆ ಶುಲ್ಕ ಸಂಗ್ರಹಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಅಲ್ಲದೆ ತೆರಿಗೆದಾರರು ನಿರಂತರ ಸುಲಿಗೆಗೆ ಒಳಗಾಗಿದ್ದಾರೆ. ಕಳೆದ ಮರ‍್ನಾಲ್ಕು ವರ್ಷಗಳಿಂದ ಈ ನ್ಯೂನ್ಯತೆಯನ್ನು ಸರಿಪಡಿಸುವಂತೆ ಆಯುಕ್ತರಿಗೆ ತಿಳಿಸುತ್ತಾ ಬಂದಿದ್ದರೂ ಅದಿನ್ನು ಈಡೇರಲಿಲ್ಲ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ರಾಜ್ಯ ಸರ್ಕಾರ ಜನವರಿ 2006ರಲ್ಲಿಯೇ ನೊಂದಾವಣೆ ಆಸ್ತಿಯ ಮುದ್ರಾಂಕ ಶುಲ್ಕದ ಮೇಲೆ ಶೇ.2ರಷ್ಟು ಖಾತೆ ಬದಲಾವಣೆ ಶುಲ್ಕ ತೆಗೆದುಕೊಳ್ಳಬೇಕು ಎಂದು ಸ್ಪಷ್ಟ ಸುತ್ತೋಲೆ ನೀಡಿದೆ. ಅಲ್ಲದೆ ಈ ಬಗ್ಗೆ ಫೆಬ್ರವರಿ 2022ರಲ್ಲಿ ಮತ್ತೊಮ್ಮೆ ಸುತ್ತೋಲೆ ಹೊರಡಿಸಿ ಮುದ್ರಾಂಕ ಶುಲ್ಕದ ಮೇಲೆ ಶೇ.2 ಖಾತೆ ಬದಲಾವಣೆ ಶುಲ್ಕ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಲಾಗಿದ್ದರೂ ಅದಕ್ಕೆ ವಿರುದ್ಧವಾಗಿ ಆಸ್ತಿ ಮೌಲ್ಯದ ಮೇಲೆ ಶೇ.0.5 ಖಾತೆ ಬದಲಾವಣೆ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಇದರಿಂದ ತೆರಿಗೆದಾರರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಪಾಲಿಕೆ ಹಗಲು ದರೋಡೆ ಮಾಡುತ್ತಿದೆ. ಆದ್ದರಿಂದ ಈ ಕಾನೂನು ಬಾಹಿರ ವಸೂಲಾತಿಯನ್ನು ತಕ್ಷಣ ನಿಲ್ಲಿಸಿ ಅಧಿಕ ಖಾತೆ ಬದಲಾವಣೆ ಶುಲ್ಕ ವಸೂಲಾಗಿರುವುದನ್ನು ಖಾತೆದಾರರಿಗೆ ಹಿಂದಿರುಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಗಮನಿಸಿ:ಶಾಲಾ-ಕಾಲೇಜುಗಳ ಹೆಚ್ಚುವರಿ ಶುಲ್ಕ ವಿರುದ್ಧ ಕಾವಲು ಪಡೆ ಆಕ್ರೋಶ

ಶಿವಮೊಗ್ಗ ಮಹಾನಗರ ಪಾಲಿಕೆಗೆ ವ್ಯಾಪ್ತಿಯಲ್ಲಿ ಸಿಎ ನಿವೇಶನ, ಕರಾಬು ಬಿಟ್ಟು ಜಾಗದಲ್ಲಿ ಅನಧಿಕೃತ ಶೆಡ್‌ಗಳು, ಆರ್‌ಸಿಸಿ ಕಟ್ಟಡಗಳು ತಲೆ ಎತ್ತುತ್ತಿದ್ದು ಪಾಲಿಕೆ ಅಧಿಕಾರಿಗಳು ಮೌನವಾಗಿದ್ದಾರೆ. ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಕನ್ಸರ್‌ವೆನ್ಸಿಗಳು ಸರಿಯಾಗಿ ಉಪಯೋಗವಾಗುತ್ತಿಲ್ಲ. ಆ ಕುರಿತು ಪಾಲಿಕೆ ತಕ್ಷಣ ಕ್ರಮವಹಿಸಬೇಕು ಎಂದು ಆಗ್ರಹಿಸಲಾಯಿತು.

ಪೌರಾಯುಕ್ತ ಕೆ.ಮಾಯಣ್ಣಗೌಡ ಮಾತನಾಡಿ, ಮುದ್ರಾಂಕ ಶುಲ್ಕ ಆಕರಣೆ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ನಾಗರಿಕರು ಒಮ್ಮೆ ಇ-ಆಸ್ತಿ ದಾಖಲು ಪಡೆದುಕೊಂಡರೆ ಮತ್ತೊಂದು ಸಾರಿ ಆ ದಾಖಲೆಯನ್ನು ಪಡೆಯುವ ಅಗತ್ಯತೆ ಇಲ್ಲ. ಕಂದಾಯದ ಯಾವುದೇ ಕೆಲಸಕ್ಕೆ ಈ ಇ-ಆಸ್ತಿ ದಾಖಲೆಯೇ ಸಾಕು ಎಂದು ಸ್ಪಷ್ಟಪಡಿಸಿದ ಅವರು, ಕಮಲಾ ನೆಹರೂ ಕಾಲೇಜು ಬದಿಯಲ್ಲಿರುವ ರಾಜಕಾಲುವೆಗೆ ಸಂಬಂಧಿಸಿದಂತೆ ಪ್ರಕರಣ ಲೋಕಾಯುಕ್ತದಲ್ಲಿದ್ದು ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ 150 ಪುಟದ ವರದಿ ಸಲ್ಲಿಸಲಾಗಿದೆ. 16 ಕನ್ಸರ್‌ವೆನ್ಸಿಗಳನ್ನು ಪಾಲಿಕೆಯೇ ನೋಡಿಕೊಳ್ಳುತ್ತಿದ್ದು, ಅಲ್ಲಿಯ ಭದ್ರತೆಗೆ ಪೊಲೀಸರಿಗೆ ಕೋರಿಕೊಳ್ಳಲಾಗಿದೆ. ನಾಲ್ಕು ರಿಟ್ ಪೆಟಿಷನ್‌ಗಳು ದಾಖಲೆಯಾಗಿದ್ದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ನಾಗರಿಕ ಒಕ್ಕೂಟ ನೀಡಿದ ಮನವಿಗೆ ಸಾಕಾರಾತ್ಮಕವಾಗಿ ಸ್ಪಂದಿಸಿ, ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಕೆ.ವಿ.ವಸಂತ್‌ ಕುಮಾರ್, ಪ್ರಮುಖರಾದ ಡಾ.ಸತೀಶ್‌ ಕುಮಾರ್ ಶೆಟ್ಟಿ, ಎಸ್.ಬಿ.ಅಶೋಕ್‌ ಕುಮಾರ್ ಗಾಂಧಿ, ಜನಮೇಜಿರಾವ್, ನಾರಾಯಣ ಮೂರ್ತಿ, ಸೀತಾರಾಮ್, ರಾಜು, ಇಕ್ಬಾಲ್ ನೇತಾಜಿ, ದತ್ತಾತ್ರಿ, ಪರಿಸರ ರಮೇಶ್ ಸೇರಿದಂತೆ ಹಲವರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments