ಶಿವಮೊಗ್ಗ, ಏ.24: ಕುಲಬುರಗಿ ಜಿಲ್ಲೆ ಜೀವರ್ಗಿ – ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ನಡೆದ ಪರಿಶಿಷ್ಡ ಜಾತಿಯ ಭೋವಿ ಸಮಾಜದ ಇಬ್ಬರು ಅಪಾಪ್ತ ಸಹೋದರಿಯರ ಸಾವಿನ ಹಿಂದೆ ಅನೇಕ ಶಂಕೆಗಳಿದ್ದು, ಈ ಪ್ರಕರಣವನ್ನು ಸೂಕ್ತ ತನಿಖೆಗೆ ಒಳಪಡಿಸ ಬೇಕೆಂದು ಸಾಮಾಜಿಕ ಹೋರಾಟಗಾರರು ಹಾಗೂ ಭೋವಿ ಸಮಾಜದ ಮಹಿಳಾ ಮುಖಂಡರೂ ಆದ ರೂಪಾ ಸತೀಶ್ ಮತ್ತು ವರಲಕ್ಷ್ಮೀ ಪ್ರಕಾಶ್ ಒತ್ತಾಯಿಸಿದ್ದಾರೆ.
ಯಡ್ರಾಮಿಯ ಇಜೇರಿ ಗ್ರಾಮದಲ್ಲಿ ಸಣ್ಣ ಸಂಖ್ಯೆಯಲ್ಲಿರುವ ಭೋವಿ ಸಮಾಜಕ್ಕೆ ಇದು ದೊಡ್ಡ ಆಘಾತವೇ ಆಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬಹಿರ್ದೆಸೆಗೆ ಹೋಗಿದ್ದ ಭೋವಿ ಸಮಾಜದ ಆ ಇಬ್ಬರು ಸಹೋದರಿಯರ ಮೃತ ದೇಹಗಳು ಮರುದಿವಸ ಗ್ರಾಮದ ಹೊರ ವಲಯದ ಭಾವಿಯಲ್ಲಿ ಪತ್ತೆಯಾಗಿವೆ. ಆತ್ಮಹತ್ಯೆ ಎಂದು ಹೇಳಲಾಗಿದೆಯಾದರೂ, ಅವರ ಸಾವಿನ ಹಿಂದೆ ಅನೇಕ ಶಂಕೆಗಳಿವೆ. ಇಬ್ಬರ ಮೃತ ದೇಹಗಳು ಪತ್ತೆಯಾದಾಗ, ಅವರ ಕೈಗಳನ್ನು ಕಟ್ಡಲಾಗಿದೆ.ಇದು ಹಲವಾರು ಅನುಮಾನಗಳಿಂದ ಕೂಡಿದೆ. ದುಷ್ಟ ಶಕ್ತಿಗಳು ಆ ಇಬ್ಬರು ಸಹೋದರಿಯರನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಮನಿಸಿ:ಖಾತೆ ಬದಲಾವಣೆ ಹೆಸರಿನಲ್ಲಿ ಪಾಲಿಕೆ ಸುಲಿಗೆ; ಹಿತರಕ್ಷಣಾ ವೇದಿಕೆ ಸರ್ಕಾರಕ್ಕೆ ಮನವಿ
ಇಜೇರಿಯಲ್ಲಿರುವ ಭೋವಿಸಮಾಜದ ಜನರು ಅತ್ಯಂತ ಹಿಂದುಳಿದಿದ್ದು, ಈಗಲೂ ಕೂಲಿ ಮಾಡಿಯೆ ಬದುಕುತ್ತಿದ್ದಾರೆ. ಅಂತಹ ಬಡ ಕುಟುಂಬದ ಸಹೋದರಿಯರು ಈಗ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಾರೆ. ಅವರ ಕುಟುಂಬ ಅನಾಥವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಸರ್ಕಾರದಿಂದ ತಲಾ 25 ಲಕ್ಷ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪ್ರಕರಣ ಕುರಿತು ತನಿಖೆಗೆ ವಿಶೇಷ ತಂಡ ರಚನೆ ಮಾಡಬೇಕು, ಆಮೂಲಕ ಪ್ರಕರಣ ವಾಸ್ತವ ಸಂಗತಿ ಪತ್ತೆ ಹಚ್ಚುವ ಮೂಲಕ ನೊಂದ ಕುಟುಂಬಕ್ಕೆನ್ಯಾಯ ಒದಗಿಸಿಬೇಕು ಎಂದು ಒತ್ತಾಯಿಸಿ ಈಗಾಗಲೇ ಸಮಾಜದ ಜನರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅದೇ ರೀತಿ ತಾವು ಕೂಡ ಪ್ರಕರಣದ ಸೂಕ್ತ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
