ಸೊರಬ,ಏ.24: ಮಕ್ಕಳಿಗೆ ಬಾಲ್ಯದಲ್ಲಿಯೇ ಧರ್ಮ ಸಂಸ್ಕಾರವನ್ನು ನೀಡಿದಾಗ ಭವಿಷ್ಯದಲ್ಲಿ ಗುರು-ಹಿರಿಯರಿಗೆ ಗೌರವ ನೀಡುವ ಜೊತೆಗೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಕಾಸರಗುಪ್ಪೆ ಗ್ರಾಮದಲ್ಲಿ ಶ್ರೀ ಲವಕುಶ ನೂತನ ದೇವಾಲಯ ಪ್ತವೇಶೋತ್ಸವ, ಪುನರ್‌ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಸಮ್ಮುಖ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರಸ್ತುತ ದಿನಮಾನಗಳಲ್ಲಿ ಮನೆಗಳಲ್ಲಿ ನೀಡುತ್ತಿದ್ದ ಧರ್ಮ ಸಂಸ್ಕಾರದ ಕೊರತೆ ಕಾಣುತ್ತಿದೆ. ಪೋಷಕರಾದವರು ಮಕ್ಕಳಿಗೆ ಶಿಕ್ಷಣವಂತರನ್ನಾಗಿಸಿದರೆ ಸಾಲದು ಧಾರ್ಮಿಕ ಪ್ರಜ್ಞೆ ಮತ್ತು ಉತ್ತಮ ಆಚಾರ ವಿಚಾರಗಳನ್ನು ತಿಳಿಸಿಕೊಡಬೇಕು. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಸಂಸ್ಕಾರಯುತ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಇತಿಹಾಸ ಪ್ರಸಿದ್ಧ ಕಾಸರಗುಪ್ಪೆಯು ಈಶ್ವರ ಮತ್ತು ಬಸವೇಶ್ವರ ದೇವರ ಜೋಡಿ ದೇಗಲಗಳಿರುವ ಅಪರೂಪದ ಗ್ರಾಮವಾಗಿದೆ. ಗ್ರಾಮಸ್ಥರು ದೇಗುಲಗಳನ್ನು ಲವ-ಕುಶ ದೇವಸ್ಥಾನವೆಂದು ಕರೆಯುತ್ತಿರುವುದು ವಿಶೇಷವಾಗಿದೆ. ಮತ್ತೊಂದಡೆ ನಿಸರ್ಗದ ನಡುವೆ ಭಗವಂತ ನೆಲೆ ನಿಂತಿದ್ದಾನೆ. ಇದು ಪ್ರತಿಯೊಬ್ಬರು ಸಾಮರಸ್ಯದ ಬಾಳ್ವೆ ಮಾಡಬೇಕು ಎಂಬುವ ಸಂದೇಶವನ್ನು ಸಮಾಜಕ್ಕೆ ಸಾರುತ್ತದೆ. ತಾಲೂಕಿನ ಅಷ್ಠ ಮಠಗಳ ಶ್ರೀಗಳನ್ನು ಆಮಂತ್ರಿಸಿ ಕಾರ್ಯಕ್ರಮ ನಡೆಸುತ್ತಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಶ್ರೀ ಲವ-ಕುಶ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ವಿ. ಗೌಡ ಪ್ರಾಸ್ತವಿಕವಾಗಿ ಮಾತನಾಡಿ, ಗ್ರಾಮದಲ್ಲಿ ಶಿಥಿಲಗೊಂಡ ದೇವಸ್ಥಾನವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಲಾಗಿದೆ. ದೇವಸ್ಥಾನದ ನಿರ್ಮಾಣದ ಹಂತದಲ್ಲಿ ಹಲವು ಅಡೆತಡೆಗಳು ಎದುರಾದವು. ಅವುಗಳನ್ನು ನಿವಾರಿಸಿ ಸುಂದರವಾದ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ಈ ಹಿಂದೆ ಎಸ್. ಮಧುಬಂಗಾರಪ್ಪ ಅವರು ಮೊದಲ ಬಾರಿಗೆ ಶಾಸಕರಾಗಿದ್ದ ಅವಧಿಯಲ್ಲಿ ಮೂರು ಲಕ್ಷ ರೂ., ಅನುದಾನ ನೀಡಿದ್ದರು. ದೇವಸ್ಥಾನ ನಿರ್ಮಾಣದ ಹಂತದಲ್ಲಿ ಹಲವಾರು ದಾನಿಗಳು ಹಾಗೂ ಭಕ್ತರು ದೇವರ ನೂತನ ಮೂರ್ತಿ ಸೇರಿದಂತೆ ವಿವಿಧ ರೀತಿಯಲ್ಲಿ ಸಹಕರಿಸಿದ್ದಾರೆ ಎಂದರು.
ನಿವೃತ್ತ ಪ್ರಾಂಶುಪಾಲ ಪ್ರೊ. ಎಚ್.ಬಿ. ಪಂಚಾಕ್ಷರಯ್ಯ ಸಾಗರ ಉಪನ್ಯಾಸ ನೀಡಿದರು. ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಕೆ.ಬಿ.ಎಂ. ಪಟೇಲ್ ಕಾಸರಗುಪ್ಪೆ, ರವೀಂದ್ರನಾಥ ಎಚ್.ವಿ. ಸಂಪಗೋಡು, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ವಿ. ರುದ್ರಮುನಿಗೌಡ ಚಗಟೂರು, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಚ್.ಸಿ. ವೀರಭದ್ರ ಹಿರಳೆ ಅವರನ್ನು ಸನ್ಮಾನಿಸಲಾಯಿತು.
