Homeಜಿಲ್ಲೆದ್ರಾವಿಡ ನೆಲದಲ್ಲಿ ರಾಜಕೀಯ ಕ್ರಾಂತಿ: ! ವಿಜಯದಳಪತಿಯೇ ಈಗ ’ಅಧಿಪತಿ’

ದ್ರಾವಿಡ ನೆಲದಲ್ಲಿ ರಾಜಕೀಯ ಕ್ರಾಂತಿ: ! ವಿಜಯದಳಪತಿಯೇ ಈಗ ’ಅಧಿಪತಿ’

Spread the love

ದ್ರಾವಿಡ ನೆಲದಲ್ಲಿ ರಾಜಕೀಯ ಕ್ರಾಂತಿ!!
ವಿಜಯದಳಪತಿಯೇ ಈಗ ’ಅಧಿಪತಿ’

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಚಿತ್ರನಟ ವಿಜಯ ದಳಪತಿ ಪಕ್ಷ ಅಭೂತಪೂರ್ವ ಜಯ ಸಾಧಿಸುವುದರೊಂದಿಗೆ ಎಲ್ಲಾ ರಾಜಕೀಯ ತಜ್ಞರ ಲೆಕ್ಕಾಚಾರ ಕೆಳಗು ಮಾಡಿದೆ. ಅಷ್ಟೇ ಅಲ್ಲ, ದ್ರಾವಿಡ ನೆಲದಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ನಡುವೆ ಇದ್ದ ಸಾಂಪ್ರದಾಯಿಕ ರಾಜಕೀಯ ಸಂಘರ್ಷವನ್ನು ದಿಕ್ಕಾಪಾಲಾಗಿಸಿರುವ ಮತದಾರರು ವಿಜಯದಳಪತಿಯನ್ನು ತಮ್ಮ ಜನನಾಯಕನನ್ನಾಗಿ ಆರಿಸಿಕೊಂಡಿದ್ದಾರೆ. ಇದರೊಂದಿಗೆ ತಮಿಳುನಾಡಿನ ರಾಜಕೀಯ ಮಗ್ಗಲು ಬದಲಿಸಿದೆ.

ಕೆಲವೇ ತಿಂಗಳ ಹಿಂದೆಯಷ್ಟೆ ರಾಜಕೀಯ ಪಕ್ಷ ’ತಮಿಳಿಗ ವೆಟ್ರಿ ಕಳಗಂ’ (ಟಿವಿಕೆ) ಕಟ್ಟಿ ಚುನಾವಣಾ ಅಖಾಡಕ್ಕೆ ಧುಮುಕಿದ ಖ್ಯಾತ ಚಿತ್ರನಟ ವಿಜಯ ದಳಪತಿ ಪವಾಡವೆಂಬಂತೆ 108 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮುಖ್ಯಮಂತ್ರಿ ಗಾದಿಯ ಕಡೆಗೆ ಹೆಜ್ಜೆ ಹಾಕಿದ್ದಾರೆ. ಸರಳ ಬಹುಮತಕ್ಕೆ 118 ಮತಗಳ ಅವಶ್ಯಕತೆ ಇದ್ದು, ೧೦೫ ಸದಸ್ಯ ಬಲ ಹೊಂದಿರುವ ಟಿವಿಕೆ ಡಿಎಂಕೆ, ಎಐಡಿಎಂಕೆ ಯೇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸಾಧ್ಯತೆಗಳಿವೆ.

ತಮಿಳುನಾಡಿನ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ವಿಜಯದಳಪತಿ ರಾಜಕೀಯ ಪ್ರವೇಶ ಮಾಡುವ ಮೂಲಕ ಎಂ.ಜಿ ರಾಮಚಂದ್ರನ್ ( ಎಂಜಿಆರ್) ಅವರ ದಾರಿಯಲ್ಲೆ ಮೊದಲ ಚುನಾವಣೆಯಲ್ಲೇ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಕ್ಸಿಸ್ ಮೈ ಇಂಡಿಯಾ ನಡೆಸಿದ ಎಕ್ಸಿಟ್‌ಪೋಲ್‌ನಲ್ಲಿ ಮಾತ್ರ ಟಿವಿಕೆ ನಿಚ್ಚಳ ಬಹುಮತ ಪಡೆಯಲಿದೆ ಎಂದು ಹೇಳಲಾಗಿತ್ತು. ಉಳಿದಂತೆ ಎಲ್ಲಾ ಮತಗಟ್ಟೆ ಸರ್ವೇಗಳು ಟಿವಿಕೆ ಅಧಿಕಾರ ಕ್ಕೆ ಬರುವುದು ಸಾಧ್ಯವೇ ಇಲ್ಲೆ ಎಂದು ಸಮೀಕ್ಷಾ ವರದಿಗಳನ್ನು ಪ್ರಕಟಿಸಿದ್ದವು. ಎಲ್ಲಾ ಸಮೀಕ್ಷೆಗಳು ತಲೆಕೆಳಗಾಗಿಸುವ ದ್ರಾವಿದ ಮತದಾರರು ವಿಜಯ್ ಅವರನ್ನು ತಮ್ಮ ಜನನಾಯಕನನ್ನಾಗಿ ಆರಿಸಿಕೊಂಡಿದ್ದಾರೆ. ಭಾರತದ ಇತಿಹಾಸದಲ್ಲೆ ಇದೊಂದು ಮಹತ್ವದ ರಾಜಕೀಯ ಕ್ರಾಂತಿಯೇ ಎನ್ನಬಹುದು.

ವಿಜಯ್ ಚುನಾವಣೆ ಅಖಾಡದಲ್ಲಿ ಡಿಎಂಕೆ , ಅಣ್ಣಾ ಡಿಎಂಕೆ, ಬಿಜೆಪಿ, ಕಾಂಗ್ರೆಸ್ ಸೇರಿದ ಎಲ್ಲಾ ಪಕ್ಷಗಳಿಂದಲೂ ಅಂತರ ಕಾಯ್ದುಕೊಂಡಿದ್ದರು. ಚುನಾವಣೆಗೂ ಮುಂಚೆ ಕರೂರಿನಲ್ಲಿ ನಡೆದ ಕಾಲ್ತುಳಿದಲ್ಲಿ 41 ಜನ ಸಾವು ಕಂಡ ಘಟನೆಯನ್ನು ವಿಜಯ್ ತಲೆಗೆ ಕಟ್ಟಿ ಅವರನ್ನು ಕಟ್ಟಿಹಾಕುವ ಪ್ರಯತ್ನವನ್ನು ಅಧಿಕಾರದಲ್ಲಿದ್ದ ಡಿಎಂಕೆ ಮಾಡಿತು.ವಿಜಯ್‌ ಸಂತ್ರಸ್ತರ ಕಣ್ಣೀರು ಒರೆಸವು ಮೂಲಕ ಜನ ಮನಗೆದ್ದರು.

ವಿಜಯ್ ಅಭಿನಯದ ಬಹುನಿರೀಕ್ಷಿತ ಮತ್ತು ರಾಜಕೀಯ ಸಂದೇಶವನ್ನೆ ಸಾರುವಂತ ’ಜನನಾಯಗನ್’ ಸಿನಿಮಾ ಬಿಡುಗಡೆಗೆ ಸೆನ್ಸಾರ್ ಮಂಡಳಿ ತಡೆಯಾಜ್ಞೇ ನೀಡಿತ್ತು. ಇದರ ಹಿಂದೆ ಕೇಂದ್ರದ ಎನ್ ಡಿ ಎ ಸರ್ಕಾರದ ಕೈ ವಾಡವಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಜನನಾಯಗನ್ ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸಿದರೇನು? ಅಸಲಿ ಜನನಾಯಕ ನಾನೇ ಎಂದು ಜನರ ಮಧ್ಯೆ ಹೋದ ವಿಜಯ್‌ದಳಪತಿಯನ್ನು ಮತದಾರರು ತಮ್ಮ ನೈಜ ಜನನಾಯಕ ಎಂದೇ ಎತ್ತಿ ಕುಣಿದಿದ್ದಾರೆ.

ದಳಪತಿಯ ಬೆನ್ನಿಗೆ ನಿಂತ ಜೆನ್ ಜೀ-ಆಲ್ಫಾ ಜನರೇಷನ್

ತಮಿಳುನಾಡಿನಲ್ಲಿ ಪರ‍್ಯಾಯ ರಾಜಕೀಯ ಆಯ್ಕೆಗಾಗಿ ಕಾದುಕುಳಿತಂತಿದ್ದ ಹೊಸ ತಲೆಮಾರು ಜೆನ್ ಜೀ. ಜೆನ್ ಆಲ್ಫಾ ಯುವ ಪೀಳಿಗೆಗೆ ವಿಜಯ್ ದಳಪತಿ ಯನ್ನು ’ಅಧಿಪತಿ’ಯಂತೆ ಕಂಡಿದ್ದಾರೆ. ತಮಿಳುನಾಡಿನೇತರ ರಾಜ್ಯಗಳಲ್ಲಿ ಯುವ ಜನಾಂಗ ಮೋದಿ, ಬಿಜೆಪಿ,ಹಿಂದೂತ್ವದ ಅಲೆಯಲ್ಲಿ ತೇಲುತ್ತಿದ್ದರೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಅಸ್ಮಿತೆ ಮತ್ತು ಎಂದಿನಂತೆ ಸಿನಿಮಾ ಕ್ಷೇತ್ರದ ಒಲವಿನ ಅವರಣಗಳನ್ನು ಬಿಟ್ಟು ಯಾವ ಕಾರಣಕ್ಕೂ ಹೊರ ಬರುವುದಿಲ್ಲ ಎಂಬ ಸಂದೇಶವನ್ನು ಯುವ ಜನಾಂಗ ಸಾರಿದಂತಿದೆ.

ಡಿಎಂಕೆ, ಎಐಡಿಎಂಕೆ ಪಕ್ಷಗಳು ವಿಜಯ್ ಅವರ ರಾಜಕೀಯ ಪ್ರವೇಶವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ತಮಿಳುನಾಡಿನ ಮುಖ್ಯವಾಹಿನಿ ಮಾಧ್ಯಮಗಳು ವಿಜಯ್ ಅವರ ರಾಜಕಾರಣಕ್ಕೆ ಮಹತ್ವ ಕೊಡಲಿಲ್ಲ. ಇದನ್ನು ಗ್ರಹಿಸಿದ್ದ ವಿಜಯ್ ಸಾಮಾಜಿಕ ಜಾಲಾತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಯುವ ಸಮುದಾಯ , ಮಹಿಳಾ ಮತದಾರರನ್ನು ತಲುಪುವಲ್ಲಿ ಚಾಣಾಕ್ಷತನ ತೋರಿದ್ದಾರೆ. ಅಭಿಮಾನಿಗಳು ತಮ್ಮ ಮೇಲಿಟ್ಟಿರುವ ಅಭಿಮಾನವನ್ನು ಮತಗಳನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಯೋಜನೆ ರೂಪಿಸಿಕೊಂಡಿದ್ದ ವಿಜಯ್ ತಾವೊಬ್ಬ ಚಾಣಕ್ಯ ರಾಜಕಾರಣಿಯೂ ಹೌದು ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಅನ್ನ, ಚಿನ್ನ ಮತ್ತು ಅಸ್ಮಿತೆ

ವಿಜಯ ದಳಪತಿ ತಮ್ಮ ಪಕ್ಷದ ಪ್ರನಾಳಿಕೆಯಲ್ಲಿ ಕೊಟ್ಟ ಭರವಸೆಗಳು ಯುವ ಜನತೆ, ಮಹಿಳೆಯರನ್ನು ಸೆಳೆದಿದ್ದು, ಅವುಗಳು ಮತಗಳಾಗಿ ಪರಿವರ್ತನೆ ಆಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.

ಚಿನ್ನದ ದರ ದುಬಾರಿಯಾಗಿರುವ ಕಾಲದಲ್ಲಿ ಮದುವೆ ಸಂದರ್ಭಕ್ಕೆ 8 ಗ್ರಾಂ ಚಿನ್ನದ ತಾಳಿ ಕೊಡುವುದಾಗಿ ಘೋಷಿಸಿದ ವಿಜಯ ದಳಪತಿ ಮೊದಲ ಏಟಿನಲ್ಲೆ ಬಡವರು, ಮಧ್ಯಮ ವರ್ಗದ ಮತದಾರರನ್ನು ತಮ್ಮಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಯರಿಗೆ ಪ್ರತಿ ತಿಂಗಳು 2500 ರೂ. ಸ್ತ್ರೀ ಶಕ್ತಿಗುಂಪುಗಳಿಗೆ 5 ಲಕ್ಷ ಸಾಲ, ವಿದ್ಯಾರ್ಥಿಗಳಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ 25 ಲಕ್ಷ ರೂ. ಗಳ ವರೆಗೆ ಆಧಾರ ರಹಿತ ಸಾಲ, ಮೀನುಗಾರರಿಗೆ ಡೀಸಲ್ ಸಬ್ಸಿಡಿ, ರೈತರ ಬೆಳೆ ಗೆ ಕನಿಷ್ಠ ಬೆಂಬಲ ಬೆಲೆ ಕೊಡುವುದಾಗಿ ಭರವಸೆ ನೀಡಿದ್ದರು.

ಡಿಎಂಕೆ ಪಕ್ಷದ ಮೇಲೆ ದುರಾಡಳಿತ, ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿದ್ದ ಸಂದರ್ಭದಲ್ಲಿ ಟಿವಿಕೆ ಸರ್ಕಾರಕ್ಕೆ ಬಂದರೆ ಪ್ರಾಮಾಣಿಕ ಅಡಳಿತ ನೀಡುವ ಮಾತು ಕೊಟ್ಟಿತು.
ತಮಿಳಿಗರ ಪ್ರಾದೇಶಿಕ ಅಸ್ಮಿತೆ ಯನ್ನು ಬಿಟ್ಟುಕೊಡದ ವಿಜಯ ಒಂದು ದೇಶ, ಒಂದು ಮತ, ಜನಸಂಖ್ಯೆ ಆಧಾರಿತ ಮತಕ್ಷೇತ್ರ ವಿಂಗಡಣೆಯನ್ನು ಪ್ರಬಲವಾಗಿ ವಿರೋಧಿಸಿದ್ದರು. ಈ ಎಲ್ಲಾ ಭರವಸೆಗಳು ತಮಿಳಿಗರನ್ನು ಸೆಳೆದಿದ್ದವು. ಅದಕ್ಕಾಗಿಯೇ ವಿಜಯ್ ಅವರನ್ನು ಕೈ ಹಿಡಿದಿರುವ ಮತದಾರರು ಇನ್ನಿಲ್ಲದ ಗೆಲುವನ್ನು ತಂದು ಕೊಟ್ಟಿದ್ದಾರೆ.

ಜಾತಿ,ಧರ್ಮ ಮೀರಿದ ತೀರ್ಪು:

ತಮಿಳುನಾಡಿನಲ್ಲಿ ವಿಜಯ ದಳಪತಿ ಅವರಿಗೆ ಸಿಕ್ಕಿರುವ ಅಭೂತಪೂರ್ವ ಗೆಲುವನ್ನು ಜಾತ್ಯಾತೀತ , ಧರ್ಮಾತೀತ ಜನರ ತೀರ್ಪು ಆಗಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿದೆ. ವಿಜಯ ಮೂಲತಃ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದು, ಮೇರಿಯಮ್ಮ, ಮಾರಿಯಮ್ಮ ಇಬ್ಬರನ್ನೂ ಪೂಜಿಸುತ್ತೇನೆ ಎಂದಿದ್ದರು.

ಚುನಾವಣಾ ಕಣದಲ್ಲಿ ವಿಜಯ್ ಅವರ ಧರ್ಮವನ್ನು ಕೆದಕಿ ಬಿಜೆಪಿ .ಎಐಡಿಎಂಕೆ ಅವರನ್ನು ಕಟ್ಟಿಹಾಕಲು ಯತ್ನಿಸಿತು. ವನ್ನಿಯಾರ್, ಗೌಂಡರ್ ನಂತಹ ಪ್ರಬಲ ಜಾತಿಗಳ ಸಮೀಕರಣದಲ್ಲೆ ನಡೆಯುತ್ತಿದ್ದ ತಮಿಳುನಾಡಿನ ರಾಜಕಾರಣ ವಿಜಯ ದಳಪತಿ ಕಾರಣಕ್ಕಾಗಿ ಯಾವ ಜಾತಿ, ಧರ್ಮಗಳನ್ನು ಧಿಕ್ಕರಿಸಿ ಮತದಾರರ ಟಿವಿಕೆ ಪಕ್ಷವನ್ನು ಬೇಷರತ್ತಾಗಿ ಬೆಂಬಲಿಸಿದ್ದಾರೆ. ಶೇ. 77 ರಷ್ಟಿರುವ ಓಬಿಸಿ ಶೇ. 17 ರಷ್ಟಿರುವ ದಲಿತ ಸಮುದಾಯಗಳ ಮತಗಳು ವಿಜಯ ಅವರ ಜೊತೆ ಹೆಜ್ಜೆ ಹಾಕಿರುವುದು ಎಲ್ಲಾ ಜಾತಿ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.

ವಿಜಯದಳಪತಿ ಕೊಟ್ಟ ಮಾತುಗಳನ್ನು ಈಡೇರಿಸುವ ಸವಾಲಿನೊಂದಿಗೆ ತಮಿಳು ನಾಡಿನ ರಾಜಕೀಯವನ್ನು ಮುನ್ನಡೆಸಬೇಕಾಗಿದೆ. ಹೊಸ ರಾಜಕೀಯ ಮನ್ವಂತರವನ್ನು ಗೆದ್ದ ದಳಪತಿ ವಿಜಯ್ ತಮಿಳುನಾಡಿನ ಹೊಸ ನಾಯಕನಾಗಿ ಉದಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments