Homeರಾಜಕೀಯಹೊಸ ತಲೆಮಾರಿಗೆ ರಾಜಕೀಯ ಸಿದ್ದಾಂತವನ್ನು ಪಸರಿಸಿದ ದಳಪತಿ

ಹೊಸ ತಲೆಮಾರಿಗೆ ರಾಜಕೀಯ ಸಿದ್ದಾಂತವನ್ನು ಪಸರಿಸಿದ ದಳಪತಿ

Spread the love

ಬಹುಸಂಖ್ಯಾತ ಅಭಿಮಾನಿಗಳ ನಿರಾಳವಾಗಿದ್ದಾರೆ. ಎಲ್ಲೆಡೆ ಜೆನ್-ಜಿ ಗಳು ಸಂತಸದಲ್ಲಿ ಮುಳಗಿದ್ದಾರೆ. ಗೆದ್ದ ಶಾಸಕರಿಗೆ ಕೂಡಲೇ ಪಕ್ಷದ ಕಚೇರಿಗೆ ಬರಲು ನಾಯಕನಿಂದ ಬುಲಾವು ಬಂದಿದೆ. ದ್ರಾವಿಡ ರಾಜಕಾರಣದ ಹೊಸ ಅಧ್ಯಾಯ ಶುರುವಾಗುವ ಮುನ್ಸೂಚನೆಯಲ್ಲಿದೆ.

ಇವು ಪಂಚರಾಜ್ಯ ಚುನಾವಣೆಯ ತಮಿಳುನಾಡಿನ ಫಲಿತಾಂಶದಲ್ಲಿ ಕಂಡ ದೃಶ್ಯ. ನಟ ವಿಜಯ್ ಜೋಸೆಫ್ ನೂತನವಾಗಿ ಸ್ಥಾಪಿಸಿದ ಟಿವಿಕೆ ಪಕ್ಷ 112 ಸ್ಥಾನವನ್ನು ಗಳಿಸುವ ಮೂಲಕ ಬೃಹತ್ ಯಶಸ್ಸನ್ನು ಪಡೆದಿದೆ. ಎಂಜಿಆರ್, ಕರುಣನಿಧಿ, ಜಯಲಲಿತಾ, ಸಾಲಿಗೆ ಈಗ ವಿಜಯ್ ಹೆಸರು ಕೂಡ ನೂತನವಾಗಿ ಸೇರ್ಪಡೆಗೊಳ್ಳುತ್ತಿದೆ.

ದಕ್ಷಿಣ ಭಾರತದಲ್ಲಿ ತಮಿಳುನಾಡಿಗೆ ವಿಶೇಷ ಸ್ಥಾನಮಾನವಿದೆ. ಭಾಷೆ, ಸಂಸ್ಕೃತಿ, ರಾಜಕೀಯ, ಸಿದ್ದಾಂತಗಳನ್ನು ಎಂದಿಗೂ ರಾಜೀಯಾಗದ ದ್ರಾವಿಡ ಸಂಕುಲವಿದು. ಈಗ ಇಂತಹ ದ್ರಾವಿಡ ನೆಲಕ್ಕೆ ಹೊಸ ಸ್ಪರ್ಶವನ್ನು ವಿಜಯ್ ಕೊಟ್ಟಿದ್ದಾರೆ. ಪಂಚ ರಾಜ್ಯ ಚುನಾವಣೆ ಮುಗಿದ ಬೆನ್ನಲ್ಲೆ ಒಂದಿಷ್ಟು ರಾಷ್ಟ್ರ ಮತ್ತ ರಾಜ್ಯ ಮಾಧ್ಯಮಗಳ ಎಕ್ಸಿಟ್ ಪೋಲ್‌ಗಳು ಟಿವಿಕೆ ಪಕ್ಷವನ್ನು ತಿಪ್ಪೆಗೆ ಎಸೆಯುವಂತೆ ವಿಶ್ಲೇಷಿಸಿ, ವಿಮರ್ಶಿಸಿವೆ. ರಾಜಕೀಯವೇ ಬೇರೆ ಸಿನಿಮಾ ಬೇರೆ, ಸಿನಿಮಾದಲ್ಲಿ ನಟಿಸಿದಂತೆ ರಾಜಕೀಯದಲ್ಲಿ ನಟಿಸಲು ಸಾಧ್ಯವಿಲ್ಲ ಎಂಬ ಟ್ರೋಲ್‌ಗಳು ಸಹ ಹುಟ್ಟಿಕೊಂಡಿದ್ದವು, ಇನ್ನು ವೈಯಕ್ತಿಕ ಜೀವನದ ಸಮಸ್ಯೆಗಳನ್ನು ವೈಭವೀಕರಿಸಿವೆ. ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ವಿಜಯ್ ಸೋಲಿಸಬೇಕೆಂದು ಮಾಡುವ ಪ್ರಯತ್ನವನ್ನು ಈ ದೇಶದ ಮಾಧ್ಯಮಗಳೇ ಮಾಡಿದ್ದವು. ಆದರೆ ಅವೆಲ್ಲೂ ಶೂನ್ಯವಾಗಿದ್ದು, ಡಿಎಂಕೆ 65, ಎಐಎಡಿಎಂಕೆ 60 ಸ್ಥಾನವನ್ನು ಗಳಿಸಿದ್ದು, ಆ ಮೂಲಕ ಟಿವಿಕೆ ಬೃಹತ್ ರಾಜಕೀಯ ಪಕ್ಷವಾಗಿ ಹೊರಮೊಮ್ಮಿದೆ.

ಗಮನಿಸಿ: ದ್ರಾವಿಡ ನೆಲದಲ್ಲಿ ರಾಜಕೀಯ ಕ್ರಾಂತಿ: ! ವಿಜಯದಳಪತಿಯೇ ಈಗ ’ಅಧಿಪತಿ’

ಜಾತ್ಯಾತೀತ ರಾಜಕೀಯ:

ವಿಜಯ್ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಸುದ್ದಿ ಹೊರಬಿದ್ದ ಕೂಡಲೇ ಅನೇಕ ರಾಜಕಾರಣಿಗಳು, ಆಡಳಿತ ಪಕ್ಷದ ನಾಯಕರು ಅಪಹಾಸ್ಯ ಮಾಡಿದ್ದುಂಟು. ಆದರೆ ವಿಜಯ್ ಇವೆಲ್ಲವನ್ನೂ ಮೀರಿ ರಾಜಕೀಯವಾಗಿ ಬೆಳೆದಿದ್ದು ಒಂದು ಸೋಜಿಗವೇ, ಯಾಕೆಂದರೆ ವಿಜಯ್ ಇಂದಿನ ಗೆಲುವಿಗೆ ಕುಟುಂಬ ರಾಜಕಾರಣವನ್ನು ಗುರಾಣಿಯಾಗಿ ಬಳಸಿಕೊಂಡಿದ್ದು.

ಡಿಎಂಕೆ ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಉಪ ಮುಖ್ಯಮಂತ್ರಿಯಾಗಿದ್ದ ಉದಯ್‌ನಿಧಿ ಸ್ಟಾಲಿನ್ ವಿರುದ್ದ ರಾಜಕೀಯ ಸಮರ ಸಾರಿದ್ದರು. ಕುಟುಂಬ ರಾಜಕಾರಣ ಅಂತ್ಯವಾಗಬೇಕೆಂಬ ಧೋರಣೆ ತಾಳಿದ್ದರು. ಅದರಂತೆ ತನ್ನ ಕಾರು ಚಾಲಕ ಮಗನಿಗೂ ಹಾಗೂ ಆಟೋ ಡೈವರ್‌ಗೆ ಪಕ್ಷದಿಂದ ಚುನಾವಣೆ ಟಿಕೇಟ್ ನೀಡಿದ್ದು, ಈಗ ಅವರೂ ಗೆಲುವು ಸಾಧಿಸಿದ್ದಾರೆ. ಇನ್ನೊಂದೆಡೆ ಯಾವ ಧರ್ಮ, ಜಾತಿಗೆ ಅಂಟಿಕೊಳ್ಳದೆ ಚರ್ಚ್, ಮಸೀದಿ, ದೇವಸ್ಥಾನ ಅಂಗಳಕ್ಕೂ ಹೋಗಿ ಜಾತ್ಯಾತೀತತೆಯನ್ನು ಸಾರಿದ್ದು ವಿಜಯ್ ಅವರ ಗೆಲುವಿಗೆ ಬಲವಾಗಿದೆ.

2021 ರಲ್ಲೆ ರಾಜಕೀಯ ಸುಳಿವು, ಈಗ ಗೆಲುವು:

ಕೇವಲ 9 ತಿಂಗಳಲ್ಲಿ ಒಂದು ನೂತನ ರಾಜಕೀಯ ಪಕ್ಷ ಕಟ್ಟಿ ಸಿಎಂ ಗದ್ದುಗೆ ಏರುವುದೆಂದರೆ ಅಷ್ಟು ಸುಲಭದ ಸಂಗತಿಯಲ್ಲ. ನಟ ವಿಜಯ್ ಜೋಸೆಫ್ ಅಂತಹ ಸಾಹಸ ಮಾಡಿ ಈಗ ಸಿಎಂ ಗದ್ದುಗೆ ಏರಲು ಸಜ್ಜಾಗಿದ್ದಾರೆ. ಎಂಜಿಆರ್ ಕೂಡ ಇಂತಹ ಸಾಹಸ ಮಾಡಿ ರಾಜಕೀಯದಲ್ಲಿ ಅಚ್ಚಾಗಿ ಉಳಿದಿದ್ದಾರೆ. ಈಗ ಅವರ ಹಾದಿಯಾಗಿ ವಿಜಯ್ ಸಾಗುತ್ತಿದ್ದಾರೆ. ಹಾಗೇ ನೋಡಿದರೆ ವಿಜಯ್ ಏ.2021 ರಂದು ಚೆನ್ನೈನಿಲಾಂಕರೈ ವಿಧಾನಸಭಾ ಕ್ಷೇತ್ರದ ಮತದಾನದ ಮಾಡಲು ಸೈಕಲ್ ನಲ್ಲಿ ತೆರಳುವ ಮೂಲಕ ಇಂತಹದೊದ್ದು ಸೂಚನೆ ನೀಡಿದ್ದರು. ಯಾಕೆಂದರೆ ಈ ನಿರ್ಧಾರ ಇಡೀ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಪಕ್ಷ ಕಟ್ಟುವ ಮೊದಲೆ ರಾಜಕೀಯದಲ್ಲಿ ಬದಲಾವಣೆಯಾಗಬೇಕು ಎಂಬ ಕೂಗಿಗೆ ಇದೊಂದು ಉತ್ತಮ ಅಡಿಗಲ್ಲು ಹಾಕಿಕೊಟ್ಟಿತು. ನಂತರ ಬೃಹತ್ ಸಮಾವೇಶ, ಯುವ ಸಮೂಹಗಳಲ್ಲಿ ನಮ್ಮ ನಾಯಕ ರಾಜಕೀಯಕ್ಕೆ ಬರುತ್ತಾನೆ ಎಂಬ ಉತ್ಸಹ ಎಲ್ಲರಲ್ಲೂ ಮನೆ ಮಾಡಿತ್ತು. ಅದನ್ನು ಸರಿಯಾಗಿ ಸದ್ಭಳಕೆ ಮಾಡಿಕೊಂಡ ವಿಜಯ್ ರಾಜಕೀಯ ರಂಗವನ್ನು ತನಗೆ ಬೇಕಾದಂತೆ ಬಳಸಿಕೊಂಡಿದ್ದಾರೆ. ರಾಜಕೀಯ ಕೇವಲ ಪ್ರಚಾರವಲ್ಲ ಸಮಾಜ ಸೇವೆಯೂ ಎನ್ನುತ್ತಾ ಪಕ್ಷದಿಂದ ಜೂನ್ 2025 ರಲ್ಲಿ ತಮಿಳುನಾಡಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ರ‍್ಯಾಂಕ್ ಪಡೆದ 800 ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಮತ್ತು ಪ್ರೋತ್ಸಾಹ ಧನವನ್ನು ನೀಡುವ ಮೂಲಕ ಸನ್ಮಾನಿಸಿದರು. ಇವೆಲ್ಲವೂ ಇಂದು ವಿಜಯ್‌ನ ಗೆಲುವಿಗೆ ರಹದಾರಿಯಾಗಿದೆ.

ವಿಜಯ್ ನ ಗೆಲುವು ಇಂದು ಶಾಶ್ವತವಲ್ಲದಿರಬಹುದು ಆದರೆ ಇದೊಂದು ಮಾದರಿ ರಾಜಕಾರಣ ಎನ್ನುವುದರಲ್ಲಿ ಸಂಶಯವಿಲ್ಲ. ಯಾವುದೇ ವೈಯಕ್ತಿಕ ದ್ವೇಷ, ದ್ವೇಷ ಭಾಷಣ, ಕೋಮು ಪ್ರಚೋದನೆ, ಜಾತಿ, ಧರ್ಮಗಳು ಒಡೆದು ಹಾಳುವ ನೀತಿಯನ್ನು ಅನುಸರಿಸದೆ. ತನ್ನ ಅಭಿಮಾನಿಗಳನ್ನೆ ಮತಗಳಾನ್ನಾಗಿ ಮಾರ್ಪಾಡು ಮಾಡಿಕೊಂಡು ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದಾರೆ. ಹೊಸ ತಲೆಮಾರಿಗೆ ದ್ರಾವಿಡ ಸಿದ್ದಾಂತದ ರಾಜಕೀಯವನ್ನು ದಾಟಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments