ಶಿವಮೊಗ್ಗ, ಮೇ.5: “ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯ (SIIMS)” ದಲ್ಲಿ ಎ.ಪಿ.ಐ. API- Association Of Physicians Of India) ಸಹ್ಯಾದ್ರಿ ಶಾಖೆಯಿಂದ ಮೇ 8 ರಿಂದ 10 ರವರೆಗೆ ರಾಜ್ಯಮಟ್ಟದ ತಜ್ಞ ವೈದ್ಯರ ಸಮ್ಮೇಳನ, KAPICON -2026 ಆಯೋಜಿಸಲಾಗಿ ಎಂದು ಸಮ್ಮೇಳನದ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಡಾ.ಪೃಥ್ವಿ ಬಿ.ಸಿ ತಿಳಿಸಿದರು.
ಇಂದು ಸಿಮ್ಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದಲ್ಲಿ ರಾಜ್ಯಾದ್ಯಂತ 2000 ಕ್ಕೂ ಹೆಚ್ಚು ವೈದ್ಯರು ನೋಂದಾಯಿಸಿದ್ದು, ಮೂರು ದಿನಗಳ ಕಾಲ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ನೂತನ ಆವಿಷ್ಕಾರ, ಚಿಕಿತ್ಸೆ, ಇತ್ಯಾದಿಗಳ ಬಗ್ಗೆ ಉಪನ್ಯಾಸ- ಚರ್ಚೆ, ಕಾರ್ಯಗಾರಗಳು ನಡೆಯಲಿವೆ. ಮೇ 8 ರಂದು ಬೆಳಗ್ಗೆ 9 ರಿಂದ 11 ರವರೆಗೆ ಶಿವಮೊಗ್ಗದ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ತುರ್ತು ಜೀವರಕ್ಷಕ ತರಬೇತಿ (SIIMS ) ಮತ್ತು ಕಾರ್ಯಾಗಾರವನ್ನು API- Association Of Physicians Of India) ವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿದರು.
ಸಮ್ಮೇಳನ ಸಂಘಟನಾ ಸಮಿತಿಯ ಅಧ್ಯಕ್ಷ ಡಾ.ಎಸ್.ಬಿ.ಹೆಗಡೆ ಮಾತನಾಡಿ, 2004 ರಲ್ಲಿ ಶಿವಮೊಗ್ಗದಲ್ಲಿ ಸಮ್ಮೇಳನ ನಡೆಯಿತು. 22 ವರ್ಷದ ನಂತರ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲೆಡೆಯಿಂದ ತಜ್ಞ ವೈದ್ಯರುಗಳು ಭಾಗವಹಿಸಿ ಸಾವಿರಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಪ್ರಸ್ತುತ ಪಡಿಸಲಿದ್ದು, ದೇಶ-ವಿದೇಶಗಳಿಂದ ನುರಿತ ವೈದ್ಯರು ಉಪನ್ಯಾಸ ನೀಡಲು ಆಗಮಿಸಲಿದ್ದಾರೆ ಎಂದರು.
ಮೇ.8 ರ ಸಂಜೆ 5 ಗಂಟೆಗೆ ಸಮಾವೇಶದ ಉದ್ಘಾಟನೆಯನ್ನು ಖ್ಯಾತ ಹೃದ್ರೋಗ ತಜ್ಞ ವೈದ್ಯ, ಪದ್ಮಶ್ರೀ ಡಾ.ಸಿ. ಎನ್ ಮಂಜುನಾಥ್ ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ ಮಹಾಲಿಂಗಪ್ಪ ಬಿ, ಡಾ ಜಿ ನರಸಿಮುಲು, ಡಾ ಜ್ಯೋತಿರ್ಮೋಯ್ ಪಾಲ್, ಡಾ ನಂದಿನಿ ಚಟೆರ್ಜಿ , ಡಾ ವಿರೂಪಾಕ್ಷಪ್ಪ ವಿ , ಡಾ ನಾಗೇಂದ್ರ ಎಸ್ ಇವರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ವಿರೂಪಾಕ್ಷಪ್ಪ.ವಿ ಮಾತನಾಡಿ, ಮಹಾವಿದ್ಯಾಲಯದಲ್ಲಿ ನೂತನ ಸಭಾಂಗಣ ನಿರ್ಮಾಣ ಹಲವಾರು ಕಾರಣಗಳಿಂದ ವಿಳಂಬವಾಗಿದ್ದು, ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಮಧು ಬಂಗಾರಪ್ಪ ರವರ ಪ್ರಯತ್ನದಿಂದಾಗಿ ಈಗ ಸುಸಜ್ಜಿತ ಸಭಾಂಗಣ ಪೂರ್ಣಗೊಂಡಿದ್ದು, ಇಲ್ಲಿ ಸಮ್ಮೇಳನ ನಡೆಯುತ್ತಿರುವುದು ಹರ್ಷ ತಂದಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಖಜಾಂಚಿ ಡಾ.ಮಹೇಶ್ ಮೂರ್ತಿ ಬಿ.ಆರ್, ಡಾ. ಶ್ರೀಕಾಂತ್ ಎನ್ ಹೆಗಡೆ, ಡಾ.ರವೀಶ್ ಕೆ ಆರ್, ಡಾ. ಪರಮೇಶ್ವರ್ ಎಸ್, ಡಾ. ಅರವಿಂದ್ ಸಿ. ಎಲ್, ಡಾ. ಪ್ರವೀಣ್ ದೇವರಭಾವಿ, ಡಾ.ರತ್ನಾಕರ್, ಡಾ.ಪಿ ಕೆ ಪೈ, ಡಾ.ಡಿ. ಜಿ ಶಿವಕುಮಾರ್ , ಡಾ. ಈಶ್ವರಪ್ಪ, ಡಾ. ರಮ್ಯ ಭಟ್ ಮತ್ತಿತರ ತಜ್ಞ ವೈದ್ಯರು ಉಪಸ್ಥಿತರಿದ್ದರು.
