ಶಿವಮೊಗ್ಗ,ಮೇ.8: ಜಿಲ್ಲೆಯಲ್ಲಿ ಕಂಠೀರವ ಸ್ಟುಡೀಯೋ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಹಾರನಹಳ್ಳಿ ಹೋಬಳಿಯ ತ್ಯಾಜವಳ್ಳಿ ಗ್ರಾಮದ ಸರ್ವೇ ನಂ 60 ರಲ್ಲಿ 497 ಎಕರೆ ಹಾಗೂ ಸರ್ವೆ ನಂ 27 ರಲ್ಲಿ ಸರ್ಕಾರಿ ಜಮೀನು ಖಾಲಿಯಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ಗಮನಕ್ಕೆ ತಂದು ಜಾಗ ನೀಡಲು ಮನವಿ ಮಾಡಿದ್ದೇವೆ ಎಂದು ಕಂಠೀರವ ಸ್ಟುಡೀಯೊ ಅಧ್ಯಕ್ಷ ಮೆಹಬೂಬ್ ಪಾಷ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಠೀರವ ಸ್ಟುಡಿಯೋಸ್ ಘಟಕ ಸ್ಥಾಪನೆಗೆ ಕುರಿತು ಜಿಲ್ಲಾಧಿಕಾರಿ ಎನ್.ಹೇಮಂತ್ ಅವರೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಿತ್ರೀಕರಣದ ಚಟುವಟಿಕೆಗಳನ್ನು ವಿಕೇಂದ್ರೀಕರಿಸುವ ಮತ್ತು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಂಠೀರವ ಸ್ಟುಡಿಯೋಸ್‌ನ ನೂತನ ಘಟಕಗಳನ್ನು ಸ್ಥಾಪಿಸಲ ಸಿದ್ದರಾಗಿದ್ದೇವೆ.
ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ನಿರ್ಮಾಣಕ್ಕಾಗಿ ಸುಮಾರು 25 ಎಕರೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳು ಈಗಾಗಲೇ ಪತ್ರ ಬರೆದಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ವಿಕೇಂದ್ರೀಕರಣದ ಉದ್ದೇಶ: ಪ್ರಸ್ತುತ ಚಿತ್ರೀಕರಣದ ಚಟುವಟಿಕೆಗಳು ಕೇವಲ ಬೆಂಗಳೂರಿಗೆ ಸೀಮಿತವಾಗಿವೆ. ಇದರಿಂದ ಅಲ್ಲಿ ಜಾಗದ ಕೊರತೆ ಎದುರಾಗುತ್ತಿದ್ದು, ಇತರೆ ಜಿಲ್ಲೆಗಳಿಗೂ ಈ ಸೌಲಭ್ಯಗಳನ್ನು ವಿಸ್ತರಿಸುವುದರಿಂದ ಆ ಭಾಗದ ಕಲೆ, ಸಂಸ್ಕೃತಿ ಮತ್ತು ಕಲಾವಿದರಿಗೆ ಹೆಚ್ಚಿನ ಉತ್ತೇಜನಸಿಗಲಿದೆ.
ಶಿವಮೊಗ್ಗ ಆಯ್ಕೆಗೆ ಕಾರಣ: ಶಿವಮೊಗ್ಗ ಜಿಲ್ಲೆಯು ನೈಸರ್ಗಿಕ ಸೌಂದರ್ಯದಿಂದ ಕೂಡಿದ್ದು, ಹೊರಾಂಗಣ ಚಿತ್ರೀಕರಣಕ್ಕೆ (Outdoor Shooting) ಅತ್ಯಂತ ಸೂಕ್ತವಾಗಿದೆ. ಅಲ್ಲದೆ ಕಾರವಾರ, ಉಡುಪಿ, ಮಂಗಳೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಇದು ಹತ್ತಿರವಾಗಿರುವುದರಿಂದ ಚಿತ್ರೀಕರಣಕ್ಕೆ ಪೂರಕವಾದ ವಾತಾವರಣವಿದೆ.
ಗಮನಿಸಿ:ಜಿಲ್ಲೆಯಲ್ಲಿ ನಿರಾಣಿ ಸಮೂಹ ಸಂಸ್ಥೆಯ ವಿಜಯ ಸೌಹಾರ್ದ ಬ್ಯಾಂಕ್‌ನ 71 ನೇ ಶಾಖೆ ಆರಂಭ
ಆಧುನಿಕ ಸೌಲಭ್ಯಗಳು: ಹೊಸದಾಗಿ ಸ್ಥಾಪನೆಯಾಗುವ ಸ್ಟುಡಿಯೋದಲ್ಲಿ ಕೇವಲ ಚಿತ್ರೀಕರಣ ಮಾತ್ರವಲ್ಲದೆ, ರೆಕಾರ್ಡಿಂಗ್ ಮತ್ತು ಲ್ಯಾಬ್ ಡೆವಲಪ್‌ಮೆಂಟ್‌ನಂತಹ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರಿಂದ ಚಿತ್ರದ ಸಂಪೂರ್ಣ ಕೆಲಸಗಳು ಒಂದೇ ಸೂರಿನಡಿ ನಡೆಯಲು ಸಾಧ್ಯವಾಗುತ್ತದೆ.
ವಜ್ರ ಮಹೋತ್ಸವದ ಸ್ಮರಣೆ: ಬೆಂಗಳೂರಿನ ಕಂಠೀರವ ಸ್ಟುಡಿಯೋ ಸ್ಥಾಪನೆಯಾಗಿ 60 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ, ಅದರ ವಜ್ರ ಮಹೋತ್ಸವದ ನೆನಪಿಗಾಗಿ ಈ ವಿಸ್ತರಣಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಯ ಕುರಿತು ಈಗಾಗಲೇ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೆಹಬೂಬ್ ಪಾಷ ಅವರು ಈ ಸಂದರ್ಭದಲ್ಲಿ ತಿಳಿಸಿದರು.
