ಶಿವಮೊಗ್ಗ, ಮೇ.8 : ಇತ್ತೀಚಿನ ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಮಗನಿಗೆ ರಾಜಕೀಯ ಬಳುವಳಿ ನೀಡಲು ನಾಳೆ ಚಿತ್ರದುರ್ಗದಲ್ಲಿ ಬಿಎಸ್ವೈ ಅಭಿಮಾನೋತ್ಸವ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ತೀವ್ರ ವಾಗ್ದಾಳಿ ನಡೆಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪನವರ ಹಿರಿತನದ ಬಗ್ಗೆ ನನಗೆ ಗೌರವವಿದೆ. ನಾನೂ ಅನೇಕ ಹೋರಾಟಗಳನ್ನು ಮಾಡಿಯೇ ರಾಜಕೀಯದಲ್ಲಿ ಬೆಳೆದು ಬಂದಿದ್ದೇನೆ. ನಮ್ಮ ತಂದೆ ಬಂಗಾರಪ್ಪನವರೂ ಮುಖ್ಯಮಂತ್ರಿಗಳಾಗಿ ಇನ್ನೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅಂತಹ ಒಂದಾದರೂ ಯೋಜನೆಗಳನ್ನು ಯಡಿಯೂರಪ್ಪ ಜಾರಿಗೆ ತಂದಿದ್ದಾರಾ ಎಂದು ಪ್ರಶ್ನಿಸಿದ ಅವರು ನಕಲಿ ಛೋಟಾ ಸಹಿಯಿಂದಾಗಿ ಮುಖ್ಯಮಂತ್ರಿಯಾಗಿದ್ದ ಬಿಎಸ್ವೈ ಜೈಲಿಗೆ ಹೋಗಬೇಕಾಯಿತು. ಅದು ದುರ್ದೈವದ ಸಂಗತಿ. ಅವರಿಂದ ಜನ ಯಾವ ಪಾಠ ಕಲಿಯಲು ಸಾಧ್ಯ? ಎಲ್ಲಿ ಮಗನ ರಾಜ್ಯಾಧ್ಯಕ್ಷ ಪಟ್ಟ ಕೈ ತಪ್ಪಿ ಹೋಗುತ್ತೋ ಎಂಬ ಭಯದಿಂದ ಅಭಿಮಾನೋತ್ಸವ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಮಗನ ರಕ್ಷಣೆಗೆ ಮುಂದಾಗಿದ್ದಾರೆ. ಜನತೆ ಅದನ್ನು ತಿಳಿಯದಷ್ಟು ಮೂರ್ಖರಲ್ಲ ಎಂದು ತಿರುಗೇಟು ನೀಡಿದರು.
ಗಮನಿಸಿ:ಜಿಲ್ಲಾ ಉಸ್ತುವಾರಿ ಸಚಿವರಿಂದ ಕೋಣಂದೂರು ಲಿಂಗಪ್ಪನವರ ಭೇಟಿ-ಅಭಿನಂದನೆ
ಬೇಸೂರು ಅಣು ಸ್ಥಾವರ ಸ್ಥಾಪನೆಗೆ ತಮ್ಮ ತೀವ್ರ ವಿರೋಧವಿದೆ. ಯಾವುದೇ ಕಾರಣಕ್ಕೂ ಈ ಮಾರಕ ಯೋಜನೆಯನ್ನು ಒಪ್ಪುವುದಿಲ್ಲ ಎಂದ ಅವರು ಕೇಂದ್ರ ಸರ್ಕಾರದವರು ನಮ್ಮನ್ನು (ರಾಜ್ಯ ಸರ್ಕಾರ) ಕೇಳದೆ ಪಂಪ್ಡ್ ಸ್ಟೋರೇಜ್ ನಂತಹ ಪರಿಸರ ಮಾರಕ ಯೋಜನೆಗಳನ್ನು ಜಾರಿ ಗೊಳಿಸುತ್ತಿದೆ. ಅದು ದುರ್ದೈವದ ಸಂಗತಿ. ಈಗ ಬೇಸೂರು ಅಣುಸ್ಥಾವರದ ಪ್ರಸ್ತಾವನೆ ಮುನ್ನೆಲೆಗೆ ಬಂದಿದೆ. ಮೊದಲು ಕೇಂದ್ರ ಸರ್ಕಾರ ಈ ಭಾಗದ ಅರಣ್ಯ ವಾಸಿಗಳಿಗೆ ಭೂ ಹಕ್ಕು ನೀಡುವ ಕೆಲಸ ಮಾಡಲಿ. ಅದನ್ನು ಬಿಟ್ಟು ತನಗೆ ಬೇಕಾದ ಯೋಜನೆ ಜಾರಿಗೆ ತರುವುದನ್ನು ನಿಲ್ಲಿಸಲಿ ಎಂದು ತಾಕೀತು ಮಾಡಿದರು.
ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ ಅವರು, ಅದನ್ನು ನಿರ್ಮಿಸಿದ್ದು ರಾಜ್ಯ ಸರ್ಕಾರದ ದುಡ್ಡಿಂದ. ರಾಜ್ಯ ಸರ್ಕಾರದಿಂದ ಅದರ ರ್ವಹಣೆ ಸಾಧ್ಯವಾಗದಿದ್ದರೆ ಕೇಂದ್ರ ಸರ್ಕಾರಕ್ಕೆ ವಹಿಸಿಕೊಡಿ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ. ನಿಲ್ದಾಣ ನಿರ್ಮಾಣವಾಗಿದ್ದು ಅವರಪ್ಪನ ದುಡ್ಡಿಂದಲ್ಲ ಎಂದು ಗುಡುಗಿದ ಸಚಿವರು ಇನ್ನೆರಡು ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಆಗುತ್ತದೆ. ಆಗ ಎಲ್ಲ ಸರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಕಲಗೋಡು ರತ್ನಾಕರ ಮೊದಲಾದವರಿದ್ದರು.
