ಶಿವಮೊಗ್ಗ,ಮೇ.12: ಮೇ 3 ರಂದು ನಡೆದ ನೀಟ್-ಯುಜಿ-2026 ರ ಪರೀಕ್ಷೆ ರದ್ದಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗಿದೆ. ಸಂಪೂರ್ಣ ತನಿಖೆಗೆ ಒಳಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಆಗ್ರಹಿಸಿದ್ದಾರೆ.
ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ರದ್ದಾಗಿರುವುದಾಗಿ ತಿಳಿಸಿದೆ. ಆದರೆ ಈ ಪರೀಕ್ಷೆ ಬರೆಯಲು ಸುಮಾರು 22 ಲಕ್ಷ ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಓದಿ, ಉತ್ತರ ಬರೆದಿದ್ದರು.
ಗಮನಿಸಿ:ಸಿಮ್ಸ್ ನಲ್ಲಿ ಸಂಭ್ರಮದಿಂದ ನಡೆದ ಶುಶೂಷಾಧಿಕಾರಿಗಳ ದಿನಾಚರಣೆ
ಇದರಲ್ಲಿ ಪೋಷಕರ ಸಹಕಾರ ಕೂಡ ಇದೆ. ಈಗ ಈ ಪರೀಕ್ಷೆಯನ್ನು ಇಡೀ ರಾಷ್ಟ್ರಕ್ಕೆ ಅನ್ವಯಿಸಿ, ರದ್ದು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ? ವಿದ್ಯಾರ್ಥಿಗಳ ಜೊತೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರ ಆಟವಾಡಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬಂದಿದ್ದು, ಇದಕ್ಕೆಲ್ಲಾ ಹೊಣೆ ಕೇಂದ್ರ ಸರ್ಕಾರವೇ ಆಗಿದೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಕೇಂದ್ರ ಸಚಿವ ತಕ್ಷಣವೇ ರಾಜೀನಾಮೆ ನೀಡಬೇಕು. ಇದನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವುದು ಬಿಜೆಪಿಗೆ ಅಭ್ಯಾಸವಾಗಿ ಹೋಗಿಬಿಟ್ಟಿದೆ. ಈ ಹಿಂದೆಯೂ ಈ ಪರೀಕ್ಷೆ ರದ್ದಾಗಿತ್ತು. ನೀಟ್ ಎನ್ನುವುದು ಈಗ ಪರೀಕ್ಷೆಯಾಗದೆ ಒಂದು ರೀತಿಯ ಹರಾಜಾಗುತ್ತಿದೆ. ಪರೀಕ್ಷೆಗೆ ಮುಂಚೆಯೇ ಪ್ರಶ್ನೆ ಪತ್ರಿಕೆಗಳು ಮಾರಾಟವಾಗಿದ್ದವು ಎಂದರೆ ಏನರ್ಥ ? ಭಾರತದ ಯುವಕರ ಕನಸಿಗೆ ಇದು ದೊಡ್ಡಪೆಟ್ಟು ಎಂದಿದ್ದಾರೆ.
