‘ಎಸ್.ಪೂರ‍್ಯಾನಾಯ್ಕ್’ : ನಡು ಮಧ್ಯಾಹ್ನವೇ ಮುಳುಗಿದ ‘ಸೂರ್ಯ’!
-ಎನ್. ರವಿಕುಮಾರ್
90 ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಎಸ್.ಪೂರ‍್ಯಾನಾಯ್ಕ್ ಹೆಸರು ಸದ್ದು ಮಾಡುತ್ತಿತ್ತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ತಾಂಡಾವೊಂದರ ಬಡತನದ ಕುಲುಮೆಯಿಂದ ಎದ್ದು ಬಂದಿದ್ದ ಪೂರ‍್ಯಾನಾಯ್ಕ್ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪ್ರವೇಶ ಮಾಡಿದ್ದರು. ಎಸ್.ಬಂಗಾರಪ್ಪ, ಬಿ.ಎಸ್ ಯಡಿಯೂರಪ್ಪ, ಜೆ.ಹೆಚ್ ಪಟೇಲ್ , ಕಾಗೋಡುತಿಮ್ಮಪ್ಪರಂತಹ ಘಟಾನುಘಟಿ ನಾಯಕರುಗಳ ಪ್ರಭಾವಗಳ ನಡುವೆಯೆ ಹೊಸತಲೆಮಾರಿನ ರಾಜಕಾರಣಕ್ಕೆ ಎಸ್.ಪೂರ‍್ಯಾನಾಯ್ಕ್ ಮಿಂಚುಹುಳುವಿನಂತೆ ಹೊಳೆಯುತ್ತಿದ್ದರು.
ಶಿವಮೊಗ್ಗ ಜಿಲ್ಲಾ ಪರಿಷತ್, ಆ ನಂತರದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ರಾಜಕೀಯ ಪ್ರವರ್ಧಮಾನಕ್ಕೆ ಬರುವ ಹೊತ್ತಿಗೆ ಜಿಲ್ಲೆಯ ಘಟಾನುಘಟಿ ನಾಯಕರುಗಳ ನಿದ್ದೆಗೆಡಿಸಿದ್ದರು ಈ ಪೂರ್ಯಾನಾಯ್ಕ್.

ಅವಿಭಜಿತ ಜನತಾದಳದಲ್ಲಿ ಸಕ್ರಿಯಗೊಂಡಿದ್ದ ಪೂರ‍್ಯಾನಾಯ್ಕರನ್ನು ಜೆ.ಹೆಚ್ ಪಟೇಲ್‌ರ ನೀಲಿಗಣ್ಣಿನ ಹುಡುಗನೆಂದೆ ಕರೆಯಲಾಗುತ್ತಿತ್ತು. 1994 ರ ಅವಧಿ . ರಾಜ್ಯದಲ್ಲಿ ಜನತಾದಳ ಅಧಿಕಾರಕ್ಕೆ ಬಂದಿತ್ತು. ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದ ಮೇಲೆ ಜೆ.ಹೆಚ್ ಪಟೇಲರು ಮುಖ್ಯಮಂತ್ರಿಯಾಗಿದ್ದರು. ಆಗ ನಡೆದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಅವಿಭಜಿತ ಶಿವಮೊಗ್ಗ ಜಿಲ್ಲೆಯಲ್ಲಿ ಜನತಾದಳ ನಿಚ್ಚಳ ಬಹುಮತ ಸಾಧಿಸಿತ್ತು. ಪೂರ‍್ಯಾನಾಯ್ಕ್ ಎರಡನೆ ಬಾರಿಗೆ ಗೆದ್ದು ಬಂದಿದ್ದರು. ಪೂರ‍್ಯಾನಾಯ್ಕ್ ಅವರ ನಾಯಕತ್ವ, ಹೋರಾಟಗುಣವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದ ಜೆ.ಹೆಚ್ ಪಟೇರು ಶಿವಮೊಗ್ಗ ಜಿಲ್ಲಾ ಪಂಚಾಯ್ತಿಗೆ ಅವರನ್ನೆ ಅಧ್ಯಕ್ಷರನ್ನಾಗಿಸಲು ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲು ನಿಗದಿ ಪಡಿಸಿದ್ದರು.
ಆ ಹೊತ್ತಿಗಾಗಲೆ ಪೂರ‍್ಯಾನಾಯ್ಕ್ ಸಾಮಾನ್ಯ ಕ್ಷೇತ್ರವಾಗಿದ್ದ ಶಿಕಾರಿಪುರದ ಮುಂದಿನ ಶಾಸಕರು ಎಂಬ ದೊಡ್ಡ ಅಲೆಯೊಂದು ಏಳಲಾರಂಬಿಸಿತ್ತು. ಪೂರ‍್ಯಾನಾಯ್ಕ್ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದೇ ಆದರೆ ಅವರ ರಾಜಕೀಯ ಬೆಳವಣಿಗೆಯನ್ನು ನಿಯಂತ್ರಿಸಲಾಗದು ಎಂದು ಹೆದರಿದ ಜಿಲ್ಲೆಯಲ್ಲಿ ರಾಜಕೀಯ ಹಿಡಿತ ಸಾಧಿಸಿಕೊಂಡು ಬಂದಿದ್ದ ಹಿರಿಯ ರಾಜಕಾರಣಿಗಳು ಪಕ್ಷಾತೀತವಾಗಿ ಪೂರ‍್ಯಾನಾಯ್ಕ್ ಅವರನ್ನು ವ್ಯವಸ್ಥಿತವಾಗಿ ರಾಜಕೀಯವಾಗಿ ಮೂಲೆಗುಂಪು ಮಾಡುವ ಷಡ್ಯಂತ್ರ ಹೆಣೆದು ಬಿಟ್ಟಿರು.
ಜಿಲ್ಲೆಯಲ್ಲಿ ಯಡಿಯೂರಪ್ಪ, ಅವತ್ತಿನ ಮುಖ್ಯಮಂತ್ರಿ ಜೆ.ಹೆಚ್ ಪಟೇಲ್ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಕೆ.ಹೆಚ್ ಶ್ರೀನಿವಾಸ್ ಅವರ ನಡುವಿನ ಹೊಂದಾಣಿಕೆ ರಾಜಕಾರಣ ಪೂರ‍್ಯಾನಾಯ್ಕ್ ಅವರನ್ನು ತುಳಿದಿಡಲು ನಡೆದಿದ್ದು ಮಾತ್ರ ದೊಡ್ಡ ರಾಜಕೀಯ ದ್ರೋಹದ ಇತಿಹಾಸ.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಎಸ್ಸಿ ಗೆ ಮೀಸಲಿರಿಸಲಾಗಿತ್ತು. ಅಧ್ಯಕ್ಷರ ಆಯ್ಕೆಯ ಹಿಂದಿನ ದಿನದ

ತಡರಾತ್ರಿವರೆಗೂ ಪೂರ‍್ಯಾನಾಯ್ಕ್ ಅವರು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯೆಂದು ಜನತಾದಳದಲ್ಲಿ ತೀರ‍್ಮಾನಿಸಲಾಗಿತ್ತು. ಆದರೆ ದಿನಬೆಳಗಾಗುವುದರೊಳಗೆ ಭದ್ರಾವತಿ ಶಾಸಕ ಎಂ ಜೆ ಅಪ್ಪಾಜಿ ಅವರ ಬಳಗದ ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀಮತಿ ರಾಣಿಷಣ್ಮುಗಂ ಡಾರ್ಕ್‌ಹಾರ್ಸ್ ರೀತಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿಬಿಟ್ಟರು. ಪೂರ‍್ಯಾನಾಯ್ಕ್ ಅವರನ್ನು ಅಧ್ಯಕ್ಷ ಸ್ಥಾನದಿಂದ ದೂರವಿಡುವಲ್ಲಿ ನಡೆದ ಪಕ್ಷಾತೀತ ರಾಜಕಾರಣವೊಂದು ಯಶಸ್ವಿಯಾಗಿತ್ತು. (ಈ ವಿಷಯದಲ್ಲಿ ಜೆ.ಹೆಚ್ ಪಟೇಲರಿಗೆ ತಡವಾಗಿ ತಿಳಿದು ಅದಕ್ಕೆ ಕಾರಣರಾದವರನ್ನು ತರಾಟೆಗೆ ತೆಗೆದುಕೊಂಡಿದ್ದರೂ ಕೂಡ ಆ ಹೊತ್ತಿಗೆ ಕಾಲ ಮೀರಿ ಹೋಗಿತ್ತು )
ರಾಣಿಷಣ್ಮುಗಂ ಪರಿಶಿಷ್ಟಜಾತಿಗೆ ಸೇರಿದವರಲ್ಲ ಎಂದು ಪೂರ‍್ಯಾನಾಯ್ಕ್ ಕೋರ್ಟಿನಲ್ಲಿ ಬಡಿದಾಡಿದರು. ಕೋರ್ಟು ರಾಣಿ ಷಣ್ಮುಗಮ್ ಅವರ ನಕಲಿ ಎಸ್ಸಿ ಜಾತಿ ಸಟೀಫಿಕೆಟ್‌ನ್ನು ರದ್ದುಗೊಳಿಸಿ. ಜಿಲ್ಲಾ ಪಂಚಾಯ್ತಿ ಆಧ್ಯಕ್ಷ ಸ್ಥಾನ ಬಿಟ್ಟು ಕೊಡಬೇಕೆಂದು ಆದೇಶ ನೀಡಿದರೂ, ಪೂರ‍್ಯಾನಾಯ್ಕ್ ಅವರನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಲು ಅವರ ವಿರೋಧಿ ರಾಜಕಾರಣ ಬಿಡಲಿಲ್ಲ. ಅಷ್ಟರ ಮಟ್ಟಿಗೆ ಪೂರ‍್ಯಾನಾಯ್ಕ್ ನಾಯಕತ್ವ ವೇಗ ಕೆಲವರಿಗೆ ರಾಜಕೀಯ ಅಸ್ವಿತ್ವದ ಭಯ ತಂದಿತ್ತು.
ಸಹಜವಾಗಿ ಬಂಡಾಯದ ಗುಣ, ತನ್ನದೆ ಜನಬಲವನ್ನು ಹೊಂದಿದ್ದ ಪೂರ‍್ಯಾನಾಯ್ಕ್ 1996 ರಲ್ಲಿ ನಡೆದ ವಿಧಾನಪರಿಷತ್ ಚುನಾವಣೆಗೆ ( ಸ್ಥಳೀಯ ಸಂಸ್ಥೆಗಳ ಕ್ಷೇತ್ರ) ಜನತಾದಳದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಧಿಕೃತ ಅಭ್ಯರ್ಥಿ ಶ್ರೀಮತಿ ಬಲ್ಕೀಶ್ ಬಾನು ಅವರನ್ನು ಅವರನ್ನು ಸೋಲಿಸಿ ಸೇಡು ತೀರಿಸಿಕೊಂಡರು.
ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಷ್ಟು ದಿನ ಅವರು ಸಾಮಾನ್ಯ ಸಭೆಗಳಲ್ಲಿ ಮಾತಿಗೆ ನಿಂತರೆ ಪತ್ರಿಕೆಗಳಿಗೆ ಪುಟಗಟ್ಟಲೆ ಆಗುವಷ್ಟು ಸುದ್ದಿಗಳ ಸರಕು ಸಿಗುತ್ತಿತ್ತು. ಚಿಕ್ಕ ವಯಸ್ಸಿನಲ್ಲೇ ಅಪಾರವಾದ ಆಡಳಿತ ಜ್ಞಾನ, ರಾಜಕೀಯ ಜ್ಞಾನ ಅವರಿಗೆ ಕರಗತವಾಗಿತ್ತು. ಸ್ವಾಭಿಮಾನದ ವಿಷಯದಲ್ಲಿ ಅವರೆಂದೂ ರಾಜೀ ಆಗಿದ್ದನ್ನು ನಾನು ನೋಡಲಿಲ್ಲ.
ಅಂದಿನ ಪ್ರಧಾನಿ ಪಿ.ವಿ ನರಸಿಂಹರಾವ್ ಅವರ ಕಣ್ಣಿಗೂ ಬಿದ್ದಿದ್ದ ಪೂರ‍್ಯಾನಾಯ್ಕ್ ಭವಿಷ್ಯದಲ್ಲಿ ಎಸ್ ಬಂಗಾರಪ್ಪ, ಯಡಿಯೂರಪ್ಪ ಅವರಂತೆ ವಿದ್ಯಾವಂತ, ಬುದ್ಧಿವಂತ, ಸ್ನೇಹಮಹಿ ಎಸ್.ಪೂರ‍್ಯಾನಾಯ್ಕರಿಗೆ ಬಡವರು-ಬಗ್ಗರು ಎಂದರೆ ಎಲ್ಲಿಲ್ಲದ ಕಾರುಣ್ಯ, ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತರಲ್ಲದಿದ್ದರೂ ಮನೆಬಾಗಿಲಿಗೆ ನೆರವು ಕೇಳಿಕೊಂಡು ಬಂದವರನ್ನು ಬರಿಗೈಲಿ ಕಳುಹಿಸದ ಹೃದಯವಂತ. ಆ ಹೊತ್ತಿನ ಕಾಲಕ್ಕೆ ಬಂಜಾರ ಸಮುದಾಯಕ್ಕಷ್ಟೇ ಅಲ್ಲದೆ ಇಡೀ ದಲಿತ ಸಮುದಾಯಕ್ಕೂ ಭರವಸೆಯ ನಾಯಕನಂತೆ ಕಾಣತೊಡಗಿದ್ದ ಪೂರ‍್ಯಾನಾಯ್ಕ್ ಅವರನ್ನು ಹಿತಾಸಕ್ತಿಯ ರಾಜಕಾರಣ ಸೂತಪುತ್ರನಂತೆ ಕಂಡು ಬಲಿ ತೆಗೆದುಕೊಂಡಿತು.
ತಮ್ಮ ಜನಸೇವೆಯ ರಾಜಕೀಯ ಕನಸುಗಳನ್ನು ಸುಟ್ಟ ವಿಶ್ವಾಸ ದ್ರೋಹಗಳ ಗಾಯಗಳನ್ನೆ ಹೊತ್ತುಕೊಂಡು ನಗುನಗುತ್ತ ಇದ್ದ ಪೂರ‍್ಯಾನಾಯ್ಕ್ ಅವರ ಹೃದಯ ಇಂದಿಗೆ 27 ವರ್ಷಗಳ ಹಿಂದಿನ ಈ ದಿನ (12/5/1999) ಹಠಾತ್ತಾಗಿ ನಿಂತು ಹೋಯಿತು. ಬದುಕಿನ ನಡು ಮಧ್ಯಾಹ್ನವೇ ಪೂರ‍್ಯನಾಯ್ಕ್ ಎಂಬ ಸೂರ್ಯ ಮುಳುಗಿ ಹೋಗಿದ್ದ.
ಪೂರ‍್ಯಾನಾಯ್ಕ್ ಸಂಪಾದಿಸಿದ ಅಪಾರ ಜನಪ್ರೀತಿ,ಜನರಿಗಾಗಿ ಮಾಡಿದ ಕೆಲಸಗಳೇ ಅವರ ಪತ್ನಿ ಶ್ರೀಮತಿ ಶಾರದಾಪೂರ‍್ಯಾನಾಯ್ಕ್ ಅವರನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿತು. ಅಷ್ಟೇ ಅಲ್ಲ, ಶಾಸಕರನ್ನಾಗಿಯೂ ಮಾಡಿ ಪೂರ‍್ಯಾನಾಯ್ಕ್ ಅವರು ಕಂಡ ಕನಸುಗಳನ್ನು ಸಾಕಾರಗೊಳಿಸಿದೆ. ಜನನಾಯಕನಿಗೆ ಸಲ್ಲಬೇಕಾದ ನಿಜ ಗೌರವ ಎಂದರೆ ಇದೇ ಅಲ್ಲವೇ?!.
ನನ್ನ ಹಿರಿಯ ಗೆಳೆಯರೂ ಆಗಿದ್ದ ಎಸ್. ಪೂರ‍್ಯಾನಾಯ್ಕ್ ಅವರಿಲ್ಲದ ನಿರ್ವಾತವೊಂದು ಸದಾ ಕಾಡುತ್ತಲೆ ಇರುತ್ತದೆ.
