ಶಿವಮೊಗ್ಗ,ಮೇ.14 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ಸುದ್ದಿಯಾಗಿರುವ ಬಂಗಾರದ ಹಗರಣವನ್ನು ರಾಜ್ಯ ಸರ್ಕಾರ ಶೀಘ್ರವೇ ಸಿಬಿಐಗೆ ಮತ್ತು ಇಡಿಗೆ ಒಪ್ಪಿಸಬೇಕೆಂದು ಜನತಾದಳ (ಸಂಯುಕ್ತ) ರಾಜ್ಯ ಉಪಾಧ್ಯಕ್ಷ ಕೆ.ವಿ.ಶಿವರಾಮ್ ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿನ್ನ ತಂಬಿ ಅಲಿಯಾಸ್ ಸೌಂದರ್ ರಾಜನ್ ಎಂಬಾತ ಬೆಂಗಳೂರಿನಲ್ಲಿ ಎಸ್ಡಿಜೆ, ಡಿಜಿಎಫ್, ಧನ ಗಣೇಶ ಗೋಲ್ಡ್ ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್ಗಳಲ್ಲಿ ಅಡವಿಟ್ಟ ಬಂಗಾರವನ್ನು ಬಿಡಿಸಿಕೊಡುವುದಾಗಿ ಹೇಳಿ ಹಾಗೂ ತನ್ನ ಕಂಪನಿಯಲ್ಲಿ ಕಡಿಮೆ ಬಡ್ಡಿಗೆ ಗಿರವಿ ಇಟ್ಟುಕೊಳ್ಳುವುದಾಗಿ ರಾಜ್ಯಾದ್ಯಂತ ಗ್ರಾಹಕರಿಗೆ ನಂಬಿಸಿ ವಂಚಿಸಿದ್ದಾನೆ ಎಂದು ಆರೋಪಿಸಿದರು.
ತನ್ನ ಏಜೆಂಟರು ಅಥವಾ ಬ್ರೋಕರ್ಗಳ ಮೂಲಕ ಬಿಡಿಸಿ ತಂದ ಚಿನ್ನವನ್ನು ಗಿರವಿ ಇಟ್ಟುಕೊಳ್ಳುವುದಾಗಿ ಹೇಳಿ ಗ್ರಾಹಕರಿಗೆ ಚಿನ್ನ ಅಥವಾ ಹಣವನ್ನು ನೀಡದೇ ವಂಚಿಸಿದ್ದಾನೆ. ಗ್ರಾಹಕರು ಇದರ ಬಗ್ಗೆ ಪ್ರಶ್ನಿಸಿದರೆ ರೌಡಿಗಳಿಂದ ಬೆದರಿಸುವುದು, ಚಿನ್ನವನ್ನು ಸೊಸೈಟಿಯಲ್ಲಿ ಇಡಲಾಗಿದ್ದು, ಒಂದು ತಿಂಗಳ ನಂತರ ಬಿಡಿಸಿಕೊಳ್ಳಿ ಎಂದು ಗ್ರಾಹಕರನ್ನು ಅಲೆದಾಡಿಸುತ್ತಿದ್ದಾನೆ. ಹಾಗೂ ರೌಡಿಗಳನ್ನು ಬಿಟ್ಟು ದೈಹಿಕ ಹಿಂಸೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾನೆ ಮತ್ತು ತನಗೆ ಜನಪ್ರತಿನಿಧಿಗಳ ಮತ್ತು ರಾಜ್ಯದ ಪ್ರಭಾವಿ ಸಚಿವರ ಬೆಂಬಲವಿದೆ ಎಂದು ತೋರಿಸಿಕೊಳ್ಳುತ್ತಾನೆ ಇದರಿಂದ ವಂಚಿತ ಗ್ರಾಹಕರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.
ಗಮನಿಸಿ: ಕಾರು ಡಿಕ್ಕಿ ಪ್ರಕರಣ- ಆರೋಪಿಯನ್ನು ಒಂದು ಗಂಟೆಯೊಳಗೆ ಪತ್ತೆ ಹಚ್ಚಿದ ಎಸ್ ಐ ಪ್ರವೀಣ್ ತಂಡ
ಇತ್ತೀಚೆಗೆ ಸಿಸಿಬಿ ಪೊಲೀಸರು ಈತನನ್ನು ಸಾಂಕೇತಿಕವಾಗಿ ಬಂಧಿಸಿ ನೊಂದವರಿಂದ ದೂರು ಪಡೆಯದಂತೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನವನ್ನು ವಂಚಿತ ಗ್ರಾಹಕರು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮೈಸೂರಿನ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಸರ್ಕಾರ ಈತನ ಕಂಪನಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಹಾಗೂ ಆತನ ಕಛೇರಿಯಲ್ಲಿರುವ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳಬೇಕು. ತಕ್ಷಣವೇ ಸಿಬಿಐಗೆ ಮತ್ತು ಇಡಿಗೆ ಒಪ್ಪಿಸಬೇಕು. ಇಲ್ಲವಾದರೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ವತಿಯಿಂದ ನೊಂದ ಗ್ರಾಹಕರ ಸಮಾವೇಶ ನಡೆಸಿ, ಎಲ್ಲಾ ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲೂ ಸಹ ಗ್ರಾಹಕರು ವಂಚಿತರಾಗಿದ್ದು, ವಂಚಿತರು ಶಿವಮೊಗ್ಗದ ಬಾಲರಾಜ ಅರಸ್ ರಸ್ತೆಯಲ್ಲಿರುವ ಭೋವಿ ಸಮಾಜದ ವಾಣಿಜ್ಯ ಸಂಕೀರ್ಣದಲ್ಲಿರುವ ಪಕ್ಷದ ಕಚೇರಿಯಲ್ಲಿ ದೂರು ಸಲ್ಲಿಸುವಂತೆ ಕೋರಿದರು. ಸಂತ್ರಸ್ಥರು ಮೊ.ಸಂ: 9901161934 ಗೆ ಸಂಪರ್ಕಿಸಬಹುದು ಎಂದರು.
ಜೆಡಿಯು ಜಿಲ್ಲಾಧ್ಯಕ್ಷ ದೇವರಾಜ್ ಸಿಂಧೆ ಮಾತನಾಡಿ, ಜೆಡಿಯು ಕೃಷಿ, ಆರೋಗ್ಯ, ಶಿಕ್ಷಣ, ಪರಿಸರ ಮತ್ತು ಆಡಳಿತ ಸುಧಾರಣೆ ವಿಚಾರದಲ್ಲಿ ಕೆಲಸ ಮಾಡುತ್ತಿದೆ. ಶಿವಮೊಗ್ಗ ಜಿಲ್ಲೆಯಿಂದಲೇ ಮತ್ತೆ ಪಕ್ಷವನ್ನು ಕಟ್ಟುತ್ತೇವೆ.
ನಮ್ಮಲ್ಲಿ ವಂಶಾಪಾರಂಪರ್ಯ ರಾಜಕಾರಣ ಇಲ್ಲ. ಇಲ್ಲಿ ಕೆಲಸ ಮಾಡುವವರೇ ನಾಯಕರು. ಈಗಾಗಲೇ ಮಹಿಮಾ ಪಟೇಲ್ ನೇತೃತ್ವದಲ್ಲಿ ಸರ್ವೋದಯ ವೇದಿಕೆಯ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದೇವೆ. ಸಾರ್ವಜನಿಕರು ತಮ್ಮ ಪಕ್ಷದೊಂದಿಗೆ ಕೈ ಜೋಡಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ರಂಗನಾಥ್, ಹಾಲೇಶ್ ಉಪಸ್ಥಿತರಿದ್ದರು.
