ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.19
ಶಿವಮೊಗ್ಗ ಸಾಂಸ್ಕೃತಿಕ ಹಾಗೂ ಕಲೆಗಳ ತವರೂರು ಎಂದು ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಕೆ. ರಾಮಕೃಷ್ಣಯ್ಯ ಹೇಳಿದರು.
ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿವಿಯ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಮೈಸೂರು ಬಿಟ್ಟರೆ ಶಿವಮೊಗ್ಗವೇ ಪ್ರಮುಖ ಸಾಂಸ್ಕೃತಿಕ ನಗರಿಯಾಗಿದೆ. ಇದು ಕಲೆಗಳ ಬೀಡಾಗಿದ್ದು, ಸಂಗೀತ, ಸಾಹಿತ್ಯ, ನೃತ್ಯಕ್ಕೆ ಹೆಸರಾಗಿದ್ದು, ನಮ್ಮ ವಿವಿಯಿಂದ ನಡೆಯುತ್ತಿರುವ ಪರೀಕ್ಷಾ ಕೇಂದ್ರಕ್ಕೆ ಇದು ಸರಿಯಾದ ಸ್ಥಳ ಎಂದು ಮನಗಂಡು ಪರೀಕ್ಷಾ ಕೇಂದ್ರ ನೀಡಲಾಯಿತು. ಪರೀಕ್ಷೆಗಳು ಕೂಡ ಅತ್ಯಂತ ಯಶಸ್ವಿಯಾಗಿ ಇಲ್ಲಿ ನಡೆದಿವೆ ಎಂದರು.
ಗಮನಿಸಿ: ನೀಟ್ ಪರೀಕ್ಷೆ ರದ್ದತಿ-ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮೋದಿ ಸರ್ಕಾರವೇ ಕಾರಣ: ಸಿಎಂ
ಕಲೆಗಳು ವಿದ್ಯಾರ್ಥಿಗಳ ಬದುಕಿನಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿವೆ. ಅದರಲ್ಲೂ ವಿದ್ಯಾರ್ಥಿಗಳ ಓದಿನ ಜೊತೆಗೆ ಇಂತಹ ಪರೀಕ್ಷೆಗಳನ್ನು ಪಾಸು ಮಾಡುವುದರಿಂದ ಅವರ ಮುಂದಿನ ಜೀವನಕ್ಕೂ ಅನುಕೂಲವಾಗುತ್ತದೆ. ಈ ಮೊದಲು ಪ್ರದರ್ಶನ ಕಲೆಗಳ ಪರೀಕ್ಷೆಗಳು ಪ್ರೌಢಶಿಕ್ಷಣ ಮಂಡಳಿಯಿಂದಲೇ ನಡೆಯುತ್ತಿತ್ತು. ಕಳೆದ ಮೂರು ವರ್ಷಗಳಿಂದ ನಮ್ಮ ವಿವಿಯ ವತಿಯಿಂದಲೇ ಪರೀಕ್ಷೆಗಳನ್ನು ನಡೆಸುತ್ತಿದ್ದು, ರಾಜ್ಯದಲ್ಲಿ ಪ್ರತಿವರ್ಷ ಸುಮಾರು 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಶಿವಮೊಗ್ಗ ಕೇಂದ್ರದಲ್ಲಿ ಕೂಡ 835 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದು ಒಂದು ದಾಖಲೆಯೇ ಸರಿ ಎಂದರು.
ಈ ಪರೀಕ್ಷೆಗಳು ನಡೆಯಲು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಟಿ. ಅವಿನಾಶ್, ಶಿವಮೊಗ್ಗ ವಿಭಾಗದ ಸಂಚಾಲಕ ಡಾ. ಗಣೇಶ್ ಕೆಂಚನಾಳ್ ಸೇರಿದಂತೆ ಹಲವು ವಿದ್ವಾಂಸರು, ಸ್ಥಳೀಯ ಕಲಾವಿದರು ಕಾರಣರಾಗಿದ್ದಾರೆ. ಪರೀಕ್ಷೆಗಳು ಯಶಸ್ವಿಯಾಗಿ ಸಂಪನ್ನಗೊಂಡಿವೆ. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಈ ಸಂದರ್ಭದಲ್ಲಿ ವಿವಿಯ ಪ್ರಾಧ್ಯಾಪಕ ಹಾಗೂ ಶಿವಮೊಗ್ಗ ಪರೀಕ್ಷಾ ಕೇಂದ್ರದ ಸಂಯೋಜಕ ಡಾ. ಎಂ. ಚಂದ್ರಪ್ಪ, ಪರಿವೀಕ್ಷಕ ಡಾ. ಚಂದ್ರಶೇಖರ ಹೊಸಳ್ಳಿ ಹಾಗೂ ಸ್ಥಳೀಯ ಕಲಾವಿದರು ಹಾಜರಿದ್ದರು.
