ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.25
ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ರಾಜ್ಯ ಸಿವಿಲ್ ಸೇವೆಗಳ `ಎ’ ಯಿಂದ `ಡಿ’ ವೃಂದದ ಹುದ್ದೆಗಳಲ್ಲಿ ಮೀಸಲಾತಿ ಅವಕಾಶ ಕಲ್ಪಿಸಿ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆದಿವಾಸಿ ಅರಣ್ಯ ಮೂಲ ಬುಡಕಟ್ಟು, ಹಸಲರು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಎಂ.ಸಿ.ಕವುಲಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅರಣ್ಯ ಮತ್ತು ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಹಸಲರು, ಕಾಡು ಕುರುಬ, ಬೆಟ್ಟ ಕುರುಬ, ಜೇನು ಕುರುಬ, ಸೋಲಿಗ, ಈರುಳಿಗ, ಕೊರಗ, ಗೌಡರು, ಪಣಿಯನ್, ಯರವ, ಮಲೆಕುಡಿಯ ಮತ್ತು ಕುಡಿಯಸಿದ್ಧಿ ಮುಂತಾದ 13 ಆದಿವಾಸಿ ಕುಟುಂಬಗಳು ಯಾವ ಮೂಲಭೂತ ಸೌಕರ್ಯಗಳಿಲ್ಲದ ಅರಣ್ಯದ ಅಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಹುಲ್ಲಿನ ಜೋಪಡಿಗಳೇ ಇವರ ಮನೆಗಳು. ದೂರದ ಹಳ್ಳ-ಕೊಳ್ಳದ ನೀರೇ ಇವರಿಗೆ ಕುಡಿಯಲು ಗತಿ. ಬೆಳಕು ಕಾಣದ ಮನೆಗಳೇ ಇವೆ.
ಗಮನಿಸಿ: ಹೈಕೋರ್ಟ್ ಪೀಠಕ್ಕೆ ಶಿವಮೊಗ್ಗವೇ ಸೂಕ್ತ; ಶಾರದಾ ಪೂರ್ಯನಾಯ್ಕ
ಈ ಮೂಲ ಆದಿವಾಸಿ ಸಮುದಾಯಗಳ ಅನೇಕರು ಎಂಎಸ್ಸಿ, ಎಂಎ., ಪಿಹೆಚ್ಡಿ, ಎಂಕಾಂ, ಐಟಿಐ, ಡಿಪ್ಲೋಮಾ, ಬಿಇ ಮುಂತಾದ ವಿದ್ಯಾರ್ಹತೆಗಳನ್ನು ಹೊಂದಿದ್ದಾರೆ. ಆದರೆ ಯಾರಿಗೂ ಉದ್ಯೋಗ ಇಲ್ಲವಾಗಿದೆ. 53 ಸಮುದಾಯದ ಎಸ್ಟಿ ಒಳಗೆ ಇರುವ ಪ್ರಬಲ ಸಮುದಾಯಗಳೊಂದಿಗೆ ಪೈಪೋಟಿ ನೀಡಲು ಆಗುತ್ತಿಲ್ಲ. ಹಾಗಾಗಿ ಕೆಲಸವೂ ಇಲ್ಲದೆ ಊರಲ್ಲೂ ಬದುಕದೆ ಕೂಲಿ-ನಾಲಿ ಮಾಡಿಕೊಂಡು ಜಿಗುಪ್ಸೆ ಜೀವನ ನಡೆಸುತ್ತಿದ್ದಾರೆ. ಯಾಕಾದರು ಓದಿದೆವೋ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಇವರ ನೆರವಿಗೆ ಬರಬೇಕು. 2025-2026ನೇ ಸಾಲಿನ ಬಜೆಟ್ನಲ್ಲಿ ಹೇಳಿದಂತೆ 13 ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ (ಕೆಎಎಸ್) ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿ ಸಂದರ್ಭದಲ್ಲಿ `ಎ’ಯಿಂದ ‘ಡಿ’ ವೃಂದಗಳಲ್ಲೂ ಅವಕಾಶ ಕಲ್ಪಿಸಿಕೊಟ್ಟು ಆದಿವಾಸಿಗಳ ಅಭಿವೃದ್ಧಿಗೆ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹಿರಿಯಣ್ಣ, ಡಾ.ಎಂ.ಷಣ್ಮುಖಪ್ಪ, ರಮೇಶ್, ಬಸವೇಶ, ದೇವಪ್ಪ, ಸುರೇಶ್ ಕಲ್ಲಂಗಡಿ, ಗಣೇಶ್ ಮುಂತಾದವರು ಇದ್ದರು.
