Homeಜಿಲ್ಲೆಮಹಾನಗರ ಪಾಲಿಕೆಯಿಂದ ಹಗಲು ದರೋಡೆ: ನಾಗರೀಕ ಹಿತರಕ್ಷಣಾ ವೇದಿಕೆ ಆರೋಪ

ಮಹಾನಗರ ಪಾಲಿಕೆಯಿಂದ ಹಗಲು ದರೋಡೆ: ನಾಗರೀಕ ಹಿತರಕ್ಷಣಾ ವೇದಿಕೆ ಆರೋಪ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.26

ಸರ್ಕಾರದ ಸುತ್ತೋಲೆಗೆ ವಿರುದ್ಧವಾಗಿ ಮಹಾನಗರ ಪಾಲಿಕೆ ಖಾತೆ ಬದಲಾವಣೆ ಶುಲ್ಕವನ್ನು ಪಡೆಯುತ್ತಿದ್ದು, ಜನರಿಂದ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ್‌ಕುಮಾರ್ ಆರೋಪಿಸಿದರು.

ಮಂಗಳವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆ ಖಾತೆ ಬದಲಾವಣೆ ಶುಲ್ಕ ಹೆಸರಿನಲ್ಲಿ ಬಾರೀ ಸುಲಿಗೆ ಮಾಡುತ್ತಿದೆ. ಆಯುಕ್ತರಿಗೆ ಹಲವು ಬಾರಿ ದೂರು ನೀಡಿದರೂ ಇದು ಮುಂದುವರಿದಿದೆ. ಸರ್ಕಾರದ ಸುತ್ತೋಲೆಗೂ ಗೌರವ ಇಲ್ಲದಂತ್ತಾಗಿದೆ. ನಿಯಮಬಾಹಿರವಾಗಿ ಮುದ್ರಾಂಕ ಶುಲ್ಕವನ್ನು ಪಡೆಯಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳ ಪಾತ್ರವೂ ಇದೆ ಎಂದರು.

ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರು 2006ರ ಜನವರಿ 30ರಂದು ಸುತ್ತೋಲೆ ಹೊರಡಿಸಿ ಆಸ್ತಿಯ ಮುದ್ರಾಂಕದ ಮೇಲೆ ಶೇ.2ರಷ್ಟು ಖಾತೆ ಬದಲಾವಣೆ ಶುಲ್ಕ ತೆಗೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ಸುತ್ತೋಲೆ ಹೊರಡಿಸಿದೆ. 2022 ರ ಫೆ.19 ರಂದು ಸುತ್ತೋಲೆ ನೀಡಿ ಮುದ್ರಾಂಕ ಶುಲ್ಕದ ಮೇಲೆ ಶೇ.2ರಷ್ಟು ಖಾತೆ ಬದಲಾವಣೆ ಶುಲ್ಕ ನೀಡಬೇಕೆಂದು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಿಗೆ ತಿಳಿಸಿದ್ದಾರೆ. ಎಲ್ಲಾ ಮಹಾನಗರ ಪಾಲಿಕೆಗಳು ಇದನ್ನು ಅನುಸರಿಸುತ್ತಿವೆ. ಆದರೆ ಶಿವಮೊಗ್ಗ ಮಹಾನಗರ ಪಾಲಿಕೆ ಮಾತ್ರ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಆಸ್ತಿಯ ಮೌಲ್ಯ 1 ಕೋಟಿ 10 ಲಕ್ಷ ಇದ್ದರೆ ಸರ್ಕಾರದ ಸುತ್ತೋಲೆ ಪ್ರಕಾರ ಮುದ್ರಾಂಕ ಶುಲ್ಕದ ಮೇಲೆ 12,320 ರೂ. ಶುಲ್ಕ ಪಡೆಯಬಹುದು. ಆದರೆ ಪಾಲಿಕೆ 55,000 ಶುಲ್ಕ ಪಡೆಯುತ್ತಿದೆ. ಅಂದರೆ ಸುಮಾರು ಶೇ.446 ರಷ್ಟು ಅಧಿಕ ಶುಲ್ಕ ಪಡೆಯುತ್ತಿದೆ. ಆಯುಕ್ತರಿಗೆ ಇದು ಗೊತ್ತಿದ್ದರೂ ಕೂಡ ಸುಮ್ಮನಿದ್ದಾರೆ. ಈ ಬಗ್ಗೆ ಹಲವು ದೂರುಗಳು ಕೂಡ ಬಂದಿವೆ.
2006 ಮತ್ತು 2014 ರಿಂದಲೂ ಈ ರೀತಿ ಅವೈಜ್ಞಾನಿಕವಾಗಿ ಶುಲ್ಕ ಪಡೆಯಲಾಗುತ್ತಿದೆ. ಸಾರ್ವಜನಿಕರಿಂದ ಸುಮಾರು 30 ಕೋಟಿಗೂ ಹೆಚ್ಚು ಹಣವನ್ನು ಪಡೆಯಲಾಗಿದೆ. ಆದ್ದರಿಂದ ಹೆಚ್ಚಿಗೆ ಕಟ್ಟಿಸಿಕೊಂಡ ಶುಲ್ಕವನ್ನು ಆಸ್ತಿದಾರರಿಗೆ ವಾಪಾಸ್ಸು ಕೊಡಬೇಕು ಎಂದು ಆಗ್ರಹಿಸಿದರು.

ಗಮನಿಸಿ: ಹೈಕೋರ್ಟ್ ಪೀಠ ತಪ್ಪಿಸಿದರೆ ನಿಮ್ಮ ಸಿಎಂ ಸ್ಥಾನ ಉಳಿಯುವುದಿಲ್ಲ: ಕೆಎಸ್‌ಈ

ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್‌ಕುಮಾರ್ ಶೆಟ್ಟಿ ಮಾತನಾಡಿ, ಪಾಲಿಕೆಗೆ ಇದೊಂದು ದಂಧೆಯಾಗಿ ಬಿಟ್ಟಿದೆ. ಅಧಿಕಾರಿಗಳಿಗೆ ಲಂಚಕೊಟ್ಟರೆ ಕಡಿಮೆ ಶುಲ್ಕಕ್ಕೆ ಬರೆದು ಕೊಡುತ್ತಾರೆ. ಹಾಗಾಗಿ ಇದು ಭ್ರಷ್ಟಾಚಾರದ ಕೂಪವಾಗಿದೆ. ಆದ್ದರಿಂದ ತಕ್ಷಣವಾಗಿ ಕಾನೂನುಬಾಹಿರ ವಸೂಲಿ ಹಣವನ್ನು ನಿಲ್ಲಿಸಬೇಕು. ಮತ್ತು ಇದೂವರೆಗೂ ಅಧಿಕ ಶುಲ್ಕ ವಸೂಲಿ ಮಾಡಿದ ಪಾಲಿಕೆ ಆಯುಕ್ತರುಗಳು ಹಾಗೂ ಕಂದಾಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಈ ಹಗಲು ದರೋಡೆಯನ್ನು ನಿಲ್ಲಿಸಬೇಕು ಎಂದರು.

ಈಗಾಗಲೇ ಅಧಿಕ ಶುಲ್ಕ ಕಟ್ಟಿದವರು ನಮ್ಮ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟಕ್ಕೆ ಚಲನ್ ನಂ. ಸಮೇತ ವಿವರಗಳನ್ನು ನೀಡಬೇಕು. ನಾವು ಮುಂದೆ ಕಾನೂನು ಹೋರಾಟ ಮಾಡಲು ಇದು ಅನುಕೂಲವಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಕಾರ್ಯದರ್ಶಿ ಎಸ್.ಪಿ. ಅಶೋಕ್‌ಕುಮಾರ್, ಜನಮೇಜಿರಾವ್, ಚನ್ನವೀರಪ್ಪ ಗಾಮನಗಟ್ಟೆ ಸೇರಿದಂತೆ ಹಲವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments