ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜೂ.5
ಹವಾಮಾನ ಬದಲಾವಣೆಯು ಪ್ರಸ್ತುತ ಇಡೀ ಜಗತ್ತನ್ನು ಕಾಡುತ್ತಿರುವ ಅತ್ಯಂತ ಗಂಭೀರವಾದ ಪರಿಸರ ಸಮಸ್ಯೆಯಾಗಿದ್ದು ಈ ಹವಾಮಾನ ಬದಲಾವಣೆಯು ನಮ್ಮ ಪರಿಸರ, ಆರೋಗ್ಯ, ಕೃಷಿ ಮತ್ತು ಆರ್ಥಿಕತೆಯ ಮೇಲೆ ಬೀರುತ್ತಿರುವ ಪ್ರಮುಖ ಪರಿಣಾಮಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಸುಸ್ಥಿರ ಜೀವನ ಶೈಲಿ ಮತ್ತು ವೈಜ್ಞಾನಿಕ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಶುಕ್ರವಾರದಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್ಐ), ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್ಸಿಎಸ್ಟಿ) ಸಹಯೋಗದೊಂದಿಗೆ ಹವಾಮಾನ ಬದಲಾವಣೆಯ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹವಾಮಾನ ಸಮತೋಲನ ತಪ್ಪುತ್ತಿದೆ. ಇದರಿಂದ ಅನಿಶ್ಚಿತ ಮಳೆ, ಇಳುವರಿಯಲ್ಲಿ ಕುಸಿತ, ಪ್ರವಾಹ, ಭೂ ಕುಸಿತ, ಬಿಸಿಗಾಳಿ, ಆರೋಗ್ಯದಲ್ಲಿ ವೈಪರೀತ್ಯಗಳನ್ನು ಎದುರಿಸುತ್ತಿದ್ದೇವೆ. ಜಾಗತಿಕ ತಾಪಮಾನದ ಪರಿಣಾಮವಾಗಿ ಧ್ರುವ ಪ್ರದೇಶಗಳಲ್ಲಿನ ಹಿಮನದಿಗಳು ಹಾಗೂ ಹಿಮಾಲಯದ ಮಂಜುಗಡ್ಡೆಗಳು ವೇಗವಾಗಿ ಕರಗುತ್ತಿವೆ.
ಇದರಿಂದಾಗಿ ಸಮುದ್ರದ ನೀರಿನ ಮಟ್ಟ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಕರಾವಳಿ ತೀರದ ನಗರಗಳು ಮತ್ತು ದ್ವೀಪಗಳು ಮುಳುಗಡೆಯಾಗುವ ಭೀತಿ ಎದುರಿಸುತ್ತಿವೆ. ಮಂಗಳೂರು, ಮುಂಬೈನಂತಹ ನಗರಗಳು ಸಹ ಮುಳುಗುತ್ತಿರುವುದನ್ನು ಕಾಣುತ್ತಿದ್ದೇವೆ ಹಾಗೂ ಹವಾಮಾನ ಬದಲಾವಣೆಯಿಂದ ಮಲೆನಾಡು ಬಯಲುಸೀಮೆಯಾಗಿ, ಮರಳುಗಾಡು ಮಳೆ ಪಡೆಯುವ ನಾಡಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ಹವಾಮಾನ ಬದಲಾವಣೆಯಿಂದ ತುಂಬಾ ತೊಂದರೆಗೀಡಾಗುವವರು ರೈತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗವಾಗಿದೆ. ಆದ್ದರಿಂದ ಹವಾಮಾನ ಬದಲಾವಣೆ, ವೈಪರೀತ್ಯ ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ.ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬಹುದಾಗಿದೆ.
ಗಮನಿಸಿ: ಮೂರು ದಿನಗಳ ಕಾಲ ಎಪಿಎಂಸಿ ಮೇಳ: ರೈತರ ಬೆಳೆ ನೇರವಾಗಿ ಗ್ರಾಹಕರಿಗೆ
ಮುಖ್ಯವಾಗಿ ಯಾವುದೇ ಒಂದು ಉತ್ತಮ ಹಾಗೂ ಗುಣಮಟ್ಟದ ಕ್ರಿಯಾ ಯೋಜನೆಯನ್ನು ತಯಾರಿಸಲು ನಿಖರವಾದ ದತ್ತಾಂಶವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆಯಾದ್ದರಿಂದ ಎಂಪ್ರಿ (ಇಎಂಪಿಆರ್ ಐ)ಸಂಸ್ಥೆ ನೀಡುವ ಇನ್ಪುಟ್ಸ್ ಹಾಗೂ ತರಬೇತಿಯು ಇಲಾಖಾ ಮಟ್ಟದಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಕ್ರಿಯಾ ಯೋಜನೆಗಳನ್ನು ತಯಾರಿಸಲು ಸಹಕಾರಿಯಾಗಲಿದ್ದು ಅಧಿಕಾರಿ/ನೌಕರರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಹನುಮಾನಾಯ್ಕ ಮಾತನಾಡಿ, ಹವಾಮಾನ ವೈಪರೀತ್ಯಗಳನ್ನು ನಿರ್ವಹಿಸಲು ವೈಜ್ಞಾನಿಕವಾದ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ(ಎಂಪ್ರಿ) ಹವಾಮಾನ ಬದಲಾವಣೆ ಕುರಿತು ರಾಜ್ಯ ಕ್ರಿಯಾ ಯೋಜನೆ ರೂಪಿಸಿದ್ದು ಇದನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ತಿಳಿದುಕೊಂಡು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಈ ಕಾರ್ಯಾಗಾರವನ್ನು ಗ್ರಾಮ ಪಂಚಾಯ್ತಿ ಹಂತದಲ್ಲೂ ಮಾಡಿದರೆ ಇನ್ನೂ ಸಹಕಾರಿಯಾಗುತ್ತದೆ.
ಸಂಯುಕ್ತ ರಾಷ್ಟ್ರಗಳು ಸುಮಾರು 17 ಗುರಿಗಳನ್ನು ಇಟ್ಟುಕೊಂಡು 2030 ರ ಹೊತ್ತಿಗೆ ಗುರಿ ಸಾಧಿಸಲು ಕಾಲ ನಿಗದಿಪಡಿಸಿಕೊಂಡಿದ್ದು, ಸುಸ್ಥಿರ ಹವಾಮಾನ ಸಮತೋಲನೆ ಸಹ ಒಂದು ಗುರಿಯಾಗಿದೆ. ಈ ನಿಟ್ಟಿನಲ್ಲಿ ಎಂಪ್ರಿ ಸಂಸ್ಥೆ ಶ್ರಮಿಸುತ್ತಿದ್ದು ಎಲ್ಲ ಇಲಾಖೆಗಳು ಸಹಕರಿಸಬೇಕೆಂದರು.
ಕಾರ್ಯಾಗಾರದಲ್ಲಿ ಎಂಪ್ರಿ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಡಾ. ಪವಿತ್ರಾ ಪಿ. ನಾಯಕ್ ಮಾತನಾಡಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಅಡಿಯಲ್ಲಿ 2002 ರಲ್ಲಿ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿದೆ. ಅನ್ವಯಿಕ ಮತ್ತು ನೀತಿ ಸಂಶೋಧನೆ ನಡೆಸುತ್ತದೆ ಮತ್ತು ಪ್ರಸ್ತುತ ಪರಿಸರ ಸಮಸ್ಯೆಗಳ ಕುರಿತು ಸಾಮರ್ಥ್ಯ-ನಿರ್ಮಾಣ ತರಬೇತಿಗಳನ್ನು ಒದಗಿಸುತ್ತದೆ ಎಂದು ತಿಳಿಸಿದ ಅವರು ಪಿಪಿಟಿ ಪ್ರದರ್ಶನದ ಮೂಲಕ ಹವಾಮಾನ ಬದಲಾವಣೆ ಕಾರಣಗಳು, ಜಾಗತಿಕ ಮತ್ತು ಭಾರತೀಯ ಉಪ ಕ್ರಮಗಳು ಸೇರಿದಂತೆ ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ನೀರು, ಇಂಧನ, ಆರೋಗ್ಯ, ಸಾರಿಗೆ, ಕೈಗಾರಿಕೆಗಳು, ಕಂದಾಯ, ಸ್ಥಳೀಯ ಸಂಸ್ಥೆಗಳು(ತ್ಯಾಜ್ಯ ನಿರ್ವಹಣೆ)ಸೇರಿದಂತೆ ವಿವಿಧ ಇಲಾಖೆಗಳು ಹೇಗೆ ಸುಸ್ಥಿರ ಕ್ರಿಯಾ ಯೋಜನೆ ರೂಪಿಸಬೇಕೆಂಬ ಬಗ್ಗೆ ವಿವರಿಸಿದರು.
ಬೆಂಗಳೂರಿನ ಎಸಿಡಬ್ಲ್ಯೂಆರ್ಎಂ ಜಲ ಸಂಪನ್ಮೂಲ ತಜ್ಞರಾದ ಡಾ. ಉಷಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿವಮೊಗ್ಗದ ಎನ್ ಆರ್ ಡಿ ಎಂ ಎಸ್ ಅಧಿಕಾರಿ ಶಂಕರ್ ಪಿ. ಹಾಗೂ ಎಂಪ್ರಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರುಗಳಾದ ಕುಮಾರಿ ರುಚಿತಾ ಶ್ರೀ ಮತ್ತು ರಾಘವೇಂದ್ರ ಎನ್ ಉಪಸ್ಥಿತರಿದ್ದರು.
