ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.15
ಜಾಗತೀಕರಣದ ಹೆಸರಲ್ಲಿ ಇವತ್ತು ಸಮಾಜ ಜಾಗೃತೀಕರಣಗೊಳ್ಳುವ ಬದಲಿಗೆ ಜಾತೀಕರಣಗೊಳ್ಳುತ್ತಿರುವುದು ಅತ್ಯಂತ ಅಪಾಯದ ಸಂಕೇತ ಎಂದು ದಲಿತ ಸಂಘಟನೆಯ ಹಿರಿಯ ಮುಖಂಡ ಹಾಗೂ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಆತಂಕ ವ್ಯಕ್ತಪಡಿಸಿದರು.
ಅವರು ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಎಸ್ಸಿ ಎಸ್ಟಿ ಅಧಿಕಾರಿಗಳು ಮತ್ತು ನೌಕರರ ಸಮನ್ವಯ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ‘ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.
ಜಗತ್ತು ಇವತ್ತು ಅನೇಕ ತಲ್ಲಣಗಳನ್ನು ಎದುರಿಸುತ್ತಿದೆ. ಉಕ್ರೇನ್, ಇರಾನ್, ಅಮೆರಿಕ, ರಷ್ಯಾ ಯುದ್ದಗಳ ನಡುವೆ ಸಿಲುಕಿವೆ. ದ್ವೇಷದ ಕಾರ್ಮೋಡ ಆವರಿಸತೊಡಗಿದೆ. ಆದರೆ ಭಾರತದಲ್ಲಿ ಹಾಗೆ ಆಗಲು ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಅಂಬೇಡ್ಕರ್ ಬರೆದ ಸಂವಿಧಾನವು ಇಂದು ನಮಗೆ ರಕ್ಷಕವಾಗಿದೆ. ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಅಷ್ಟು ಶಕ್ತಿಯಿದೆ. ಆದರೆ ಈ ಸಂವಿಧಾನವನ್ನೇ ಇಲ್ಲವಾಗಿಸಲು ಇಲ್ಲಿರುವ ದುಷ್ಟ ಶಕ್ತಿಗಳು ಯತ್ನಿಸುತ್ತಿವೆ. ಈ ಬಗ್ಗೆ ಅಂಬೇಡ್ಕರ್ ಅನುಯಾಯಿಗಳಲ್ಲಿ ಅರಿವು ಮೂಡಬೇಕಿದೆ ಎಂದರು.
ಗಮನಿಸಿ: ತುಂಗಾ ಹೊಸ ಸೇತುವೆ ನಿರ್ಮಾಣಕ್ಕೆ ಮುನ್ಸೂಚನೆ – ಯಾವಾಗ ಆರಂಭ? ಸಚಿವರು ಹೇಳಿದ್ದೇನು?
ಅಂಬೇಡ್ಕರ್ ಅವರು ಆದರ್ಶವಾದಿ ರಾಷ್ಟ್ರಪ್ರೇಮಿ ಮತ್ತು ವಿಶ್ವಮಾನವ. ಆದರೂ ಅವರ ಸುತ್ತಲೂ ಜಾತಿ ಬೇಲಿ ಹಾಕುವ ಹುನ್ನಾರ ನಡೆದಿದೆ. ಗಾಂಧಿ ಚಳವಳಿ ಮೂಲಕ ವಿಶ್ವಕ್ಕೆ ಗೊತ್ತಾದ ಹಾಗೆ, ಜ್ಞಾನದಲ್ಲಿ, ತಿಳಿವಳಿಕೆಯಲ್ಲಿ ಇಡೀ ಜಗತ್ತಿಗೆ ಅಂಬೇಡ್ಕರ್ ಗೊತ್ತು ಎಂದು ಶಿವಂಕರ್ ಪ್ರತಿಪಾದಿಸಿದರು.
ಜಾಗತೀಕರಣದ ಯುಗದಲ್ಲೂ ಹೆಚ್ಚುತ್ತಿರುವ ಜಾತಿ ವ್ಯವಸ್ಥೆ ಬಗ್ಗೆ ತೀವ್ರ ವಿಷಾಧ ವ್ಯಕ್ತಪಡಿಸಿದ ಅವರು, ದೈಹಿಕ ಕಾಯಿಲೆಗಳಿಗೆ ಇಲ್ಲಿ ಔಷಧಿಗಳಿವೆ, ಆದರೆ ಮನಸ್ಸಿನಲ್ಲಿದ್ದ ಜಾತಿವಾದ ಎಂಬ ಕಾಯಿಲೆಗೆ ಇನ್ನು ಔಷಧಿ ಸಿಗುತ್ತಿಲ್ಲ. ಆದರೆ ಸಂವಿಧಾನದ ಮೂಲಕ ಔಷಧಿಯನ್ನು ಅಂಬೇಡ್ಕರರೇ ನೀಡಿದ್ದಾರೆ. ಅದನ್ನು ನಾವು ಬಳಸಬೇಕು. ಜಾತಿ ಪ್ರೀತಿಯನ್ನು ಬಿಟ್ಟು, ಪ್ರೀತಿ ಜಾತಿಯನ್ನು ಹರಡಬೇಕಿದೆ ಎಂದು ಕರೆ ನೀಡಿದರು.
ಎಲ್ಲರಿಗೂ ಸಮಾನ ಹಕ್ಕು, ಆಸ್ತಿ ಹಕ್ಕು, ಮತದಾನದ ಹಕ್ಕು ಮತ್ತು ಉದ್ಯೋಗದ ಹಕ್ಕು ದೊರೆಯಬೇಕು. ಮಹಿಳೆಯರು ಮತ್ತು ಪುರುಷರು ಸಮಾನರು. ಹೆಣ್ಣು ಮಕ್ಕಳಿಗೆ ವಿಶೇಷ ಗೌರವ ನೀಡಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೆ ಸಂವಿಧಾನದ ಆಶಯದಂತೆ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಕೊಡಲು ಸರ್ಕಾರ ಒಪ್ಪದಿದ್ದಾಗ ಮೊಟ್ಟ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಹೆಗ್ಗಳಿಕೆ ಅಂಬೇಡ್ಕರ್ ಅವರಿಗೆ ಸೇರಿದ್ದು ಎಂದು ಸ್ಮರಿಸಿದರು.
ಶಿಕ್ಷಣದ ಅರಿವಿನ ನಡುವೆಯೂ ಹೆಚ್ವುತ್ತಿರುವ ವ್ಯಕ್ತಿಪೂಜೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊರಬೇಕು. ಜಾತಿ-ಧರ್ಮಗಳ ಆಧಾರದಲ್ಲಿ ಭೇದಭಾವ ಮಾಡದೆ ಮಾನವೀಯತೆಯನ್ನು ಮೆರೆಯಬೇಕು. ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರರ ಮಾರ್ಗದಲ್ಲಿ ಸಾಗುತ್ತಾ, ಸ್ವಾವಲಂಬಿಗಳಾಗಿ, ಸ್ವಾಭಿಮಾನಿಗಳಾಗಿ ಬದುಕುವತ್ತ ಯುವಕರು ಗಮನ ಹರಿಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ನಿಯಂತ್ರಣಾಧಿಕಾರಿ ಟಿ.ಆರ್.ನವೀನ್ ಆಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ, ನಿಧಿ ಸಿ.ಸಂಘಮಿತ್ರ, ಡಾ.ವಿಜಯ್ ಕುಮಾರ್, ಕೆಎಸ್ ಆರ್ ಟಿಸಿ ಶಿವಮೊಗ್ಗ ವಿಭಾಗದ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ದುರ್ಗಪ್ಪ ವೈ ಮಾದಾರ್ ಇದ್ದರು.ಸಂಘಟನೆಯ ಮುಖಂಡ ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
