ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.17
ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಟೌನ್‌ಶಿಪ್ ಯೋಜನೆ ಮಾಡಿ ತಪ್ಪು ಮಾಡಿದ್ದಾರೆ. ಆದರೆ ಈಗೀನ ಮುಖ್ಯಮಂತ್ರಿ ಅವರನ್ನು ದೂರುವ ಬದಲು ಆ ತಪ್ಪನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಕಿಡಿಕಾರಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಆಗಿರು ಕೆಲಸ ಬಗ್ಗೆ ದೂರುವ ಬದಲು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಮುಖ್ಯಮಂತ್ರಿ ಕೆಲಸ ಮಾಡಬೇಕು. ಆ ಉದ್ದೇಶದಿಂದಲೇ ಅದಕ್ಕಾಗಿ ನಿಮ್ಮನ್ನು ಅಧಿಕಾರದಲ್ಲಿ ಕೂರಿಸಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಮನಿಸಿ: ಪ್ಯಾಂಟ್ ಬಳಸಿಕೊಂಡು ಶೌಚಾಲಯದಲ್ಲಿ ನೇಣಿಗೆ ಶರಣು
ರಾಜಕಾರಣಗಳು ರೈತರಿಗೆ ಆಮಿಷ ಒಡ್ಡಿ ರೈತರ ಮಧ್ಯೆ ಒಡಕು ತಂದು ಭೂಮಿ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಯಾವುದೇ ಪಕ್ಷವಾಗಲಿ ರೈತರ ಭೂಮಿಯನ್ನು ಕಸಿಯಬಾರದು. ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಗಳಿಗೆ ರಾಜಕೀಯ ಮಾಡಲು ಅನೇಕ ಮಾರ್ಗಗಳಿವೆ. ಆ ಮಾರ್ಗದಲ್ಲಿ ರಾಜಕೀಯ ಮಾಡುವ ಬದಲು ರೈತರ ಸಂಕಷ್ಟಗಳನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಸಮಂಜಸವಲ್ಲ ಎಂದರು.
ಕರ್ನಾಟಕ ಹಿಂದೆಂದೂ ಕಾಣದ ಬರಗಾಲ ಎದುರಿಸುತ್ತಿದ್ದು, ಸರ್ಕಾರವು ರಾಜ್ಯವನ್ನು ಬರಗಾಲವೆಂದು ಘೋಷಣೆ ಮಾಡಬೇಕು. ಇದಲ್ಲದೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಉದ್ಯೋಗ ಭರವಸೆ, ಹಿಂಗಾರು ಮಳೆಯಾದರೆ ಪುನಃ ಬಿತ್ತನೆ ಮಾಡಲು ಪುಕ್ಕಟೆಯಾಗಿ ಬೀಜ, ರಸಗೊಬ್ಬರ ಕೊಡುವ ವ್ಯವಸ್ಥೆಯನ್ನೂ ಮಾಡಬೇಕು. ಈಗಾಗಲೇ ರಾಜ್ಯದಲ್ಲಿ ಮಳೆ ಬರದ ಕಾರಣ ಉತ್ತರ ಕರ್ನಾಟಕ ಭಾಗದ ಜನರು ಗುಳೆ ಹೋಗುತ್ತಿದ್ದಾರೆ. ದನ ಕರುಗಳನ್ನು ಕಸಾಯಿ ಖಾತೆಗಳಿಗೆ ಸಾಗಿಸುತ್ತಿದ್ದಾರೆ. ಇದರಿಂದ ರೈತರ ಜೀವನ ಕಷ್ಟಕರವಾಗಿದೆ ಎಂದರು.
ರಾಜ್ಯ ಸರ್ಕಾರ ರಾಜ್ಯದಲ್ಲಿ ಶಾಶ್ವತ ಬರಗಾಲ ಪರಿಹಾರಕ್ಕಾಗಿ ಕ್ರಮಕೈಗೊಳ್ಳಬೇಕು. ಇದಕ್ಕಾಗಿ ರಾಜ್ಯದಲ್ಲಿರುವ ಏತ ನೀರಾವರಿಗಳ ವಿದ್ಯುತ್ ಬಿಲ್ ಕಟ್ಟದೆ ನಿಲ್ಲಿಸಿರುವ ಯೋಜನೆಗಳ ವಿದ್ಯುತ್ ಬಿಲ್ ಪಾವತಿ ಮಾಡಿ ತಕ್ಷಣದಿಂದ ಏತ ನೀರಾವರಿಗಳನ್ನು ಪ್ರಾರಂಭಿಸಬೇಕು ಎಂದರು.
*ಜು.21 ರಂದು ರೈತ ಸ್ಮಾರಕ ಉದ್ಘಾಟನಾ ಸಮಾರಂಭ*
ನರಗುಂದ-ನವಲಗುಂದ 46 ನೇ ವರ್ಷದ ರೈತ ಹುತ್ಮಾತರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜು.21 ರಂದು ಬೆಳಿಗ್ಗೆ 10 ಗಂಟೆಗೆ ಧಾರವಾಡದ ನವಲಗುಂದದ ಅಳಗವಾಡಿಯಲ್ಲಿ ರೈತ ಸ್ಮಾರಕ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ತಿಳಿಸಿದರು .
1980ರ ದಶಕದಲ್ಲಿ ಮಲಪ್ರಭ- ಘಟಪ್ರಭ ನೀರು ಕಪ್ಪು ಭೂಮಿಯಾಗಿದ್ದರಿಂದ ಹರಿಸಿದ ನೀರು ನಾಲೆಯಲ್ಲೇ ಇಂಗಿ ಹೋಗಿತ್ತು. ಆದರೂ ನೀರು ನಿಮಗೆ ಕೊಟ್ಟಿದ್ದೇವೆ ಎಂದು ನೀರಾವರಿ ಅಭಿವೃದ್ದಿ ತೆರಿಗೆ ಹಾಗೂ ನೀರಿನ ಕಂದಾಯವನ್ನು ಬಲವಂತವಾಗಿ ವಸೂಲಿ ಮಾಡಿ, ರೈತರ ಮನೆಗಳನ್ನು ಜಪ್ತಿ ಮಾಡಿ ರೈತರಿಗೆ ಅವಮಾನ ಮಾಡಿದ್ದರು. ಈ ವಿಚಾರವಾಗಿ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು ಪ್ರಯೋಜನವಾಗದ ಕಾರಣ ಜು.21 1980 ರಲ್ಲಿ ನರಗುಂದ ತಹಸೀಲ್ದಾರ್ ಕಚೇರಿ ಎದುರು ಈ ಭಾಗದ ರೈತರು ಸತ್ಯಾಗ್ರಹ ಮಾಡಿದ್ದರು. ಆ ವೇಳೆ ಗಲಭೆ ಉಂಟಾಗಿ ಅಶಾಂತಿಯಾಗಿ ಸೃಷ್ಟಿಯಾಯಿತು. ಪೊಲೀಸರು ಲಾಠಿ ಏಟು ಮತ್ತು ಗುಂಡು ಹಾರಿಸಿದ ಪರಿಣಾಮ ಅಳಗವಾಡಿ ಗ್ರಾಮ ರೈತ ಬಸಪ್ಪ ಶಿವಪ್ಪ ಲಕ್ಕುಂಡಿ, ಚಿಕ್ಕನರಗುಂದ ಗ್ರಾಮದ ವೀರಪ್ಪ ಕಡ್ಲಿಕೊಪ್ಪ ಅನುನೀಗಿದರು. ಅಂದಿನಿಂದ ಇವತ್ತಿನವರೆಗೂ ಪ್ರತಿ ವರ್ಷ ಅವರ ವೀರಗಲ್ಲುಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಣೆ ಮಾಡಲಾಗುತ್ತದೆ ಎಂದರು.
