ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.17
ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಾಗರ ಮತ್ತು ರಿಪ್ಪನ್ ಪೇಟೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ 26 ಉಪನ್ಯಾಸಕರುಗಳಿಗೆ 2025ನೇ ಸಾಲಿನ ಎಂಟು ದಿನಗಳ ಗೌರವ ಧನವನ್ನು ಕೂಡಲೇ ಬಿಡುಗಡೆ ಮಾಡಿಸಬೇಕೆಂದು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಗಮನಿಸಿ: ಕಲಿತ ವಿದ್ಯೆ ಸಮುದಾಯದ ತಲ್ಲಣಗಳಿಗೆ ಸ್ಪಂದಿಸುವ ಗುಣವಿರಬೇಕು: ಕೆ.ಪ್ರಭಾಕರ್
ರಾಜ್ಯದ ಬಹುತೇಕ ಸ.ಪ್ರ.ದ. ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಹೆಚ್ಚುವರಿ ಕಾರ್ಯಭಾರಕ್ಕೆಂದು ನೇಮಕ ಮಾಡಿಕೊಳ್ಳಲಾಗುತ್ತದೆ. ಅವರಿಗೆ ಗಂಟೆಗಳ ಆಧಾರದ ಮೇಲೆ ಗೌರವಧನ ನೀಡಲಾಗುತ್ತದೆ. ಪಾಠ ಮಾಡಲಿಕ್ಕೆಂದು ನೇಮಕ ಗೊಂಡ ಅತಿಥಿ ಉಪನ್ಯಾಸಕರುಗಳಿಗೆ ವರ್ಷದ 10 ತಿಂಗಳುಗಳಿಗೆ ಮಾತ್ರ ಕೆಲವು ಬಾರಿ ಆರೇಳು ತಿಂಗಳುಗಳ ಲೆಕ್ಕದಲ್ಲಿ ಮಾತ್ರ ಸೀಮಿತ ಮಾಡಿ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಸರ್ಕಾರ ಗೌರವಧನ ನೀಡುತ್ತದೆ.
ಕೆಲವು ಸ.ಪ್ರ.ದ. ಕಾಲೇಜುಗಳ ಪ್ರಾಂಶುಪಾಲರುಗಳು ಸರ್ವಾಧಿಕಾರಿ ಧೋರಣೆ ನೀತಿಯಿಂದ ಸಿಗುವ ಅಲ್ಪ ಗೌರವ ಧನವನ್ನೂ ಸಕಾಲಕ್ಕೆ ನೀಡದೆ ಸತಾಯಿಸುವ ಕಾರ್ಯ ಮಾಡುತ್ತಿದ್ದಾರೆ. ಪೂರ್ಣಾವಧಿ ಪ್ರಾಧ್ಯಾಪಕರು ನಿರ್ವಹಿಸಬೇಕಾದ ಎಲ್ಲಾ ಕಾರ್ಯಗಳನ್ನು ಅತಿಥಿ ಉಪನ್ಯಾಸಕರು ಮಾಡುತ್ತಿದ್ದಾರೆ. ಜೊತೆಗೆ ಗ್ರಂಥಾಲಯ ತಪಾಸಣೆ, ಪೀಠೋಪಕರಣ ತಪಾಸಣೆ, ಇನ್ನಿತರ ಕಾರ್ಯಗಳನ್ನು ಮಾಡುತ್ತಿದ್ದು, ಕಾಲೇಜುಗಳ ಉಪನ್ಯಾಸಕರುಗಳಲ್ಲಿ ಗುಂಪುಗಾರಿಕೆ ಸೃಷ್ಟಿಸಿ ತಮಗೆ ಆಗದವರನ್ನು ಅನಗತ್ಯ ಕಾರಣನೀಡಿ ಗೌರವಧನ ಕಡಿತಮಾಡುವುದು, ಶೋಷಣೆ ಮಾಡುವುದು, ಅತಿಥಿ ಉಪನ್ಯಾಸಕರುಗಳನ್ನು ಜೀತಗಾರರಂತೆ ನೋಡುವ ಪ್ರವೃತ್ತಿಯನ್ನು ಕೆಲವು ಪ್ರಾಂಶುಪಾಲರು ಮುಂದುವರಿಸಿದ್ದಾರೆ.
ಇದಕ್ಕೆ ಉದಾಹರಣೆಯಂತೆ ಸಾಗರ ಮತ್ತು ರಿಪ್ಪನ್‌ಪೇಟೆಯ 26 ಉಪನ್ಯಾಸಕರಿಗೆ ಶಿಕ್ಷಣ ಇಲಾಖೆ ಗೌರವಧನ ಬಿಡುಗಡೆ ಮಾಡಿ 7 ತಿಂಗಳಾದರೂ ಸಕಾರಣವಲ್ಲದ ಸಬೂಬು ನೀಡಿ ಈ ಉಪನ್ಯಾಸಕರಿಗೆ ಸಿಗುವ ಗೌರವ ಧನಕ್ಕೆ ಕತ್ತರಿ ಹಾಕಲಾಗಿದೆ. ಪರೀಕ್ಷೆ ಕಾರ್ಯಗಳನ್ನು ಪೂರ್ಣಾವಧಿ ಅಧ್ಯಾಪಕರಿಗೆ ಹಂಚಿಕೆ ಮಾಡಿ ನಂತರ ಅತಿಥಿ ಉಪನ್ಯಾಸಕರುಗಳಿಗೆ ಹಂಚಿಕೆ ಮಾಡಬೇಕೆಂಬ ನಿಯಮವಿದ್ದರೂ ಪಾಲನೆ ಮಾಡದೆ ಅತಿಥಿ ಉಪನ್ಯಾಸಕರುಗಳಿಂದಲೇ ಈ ಕಾರ್ಯ ಮಾಡಿಸಿ, ನಂತರ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಪ್ರಾಂಶುಪಾಲರು ವಿವಿಧ ಕಾರಣ ನೀಡಿ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ. ಗೌರವಧನ ವೆಚ್ಚ ಮಾಡದೇ ಕಾಲೇಜು ಖಾತೆಯಲ್ಲಿ ಹಾಗೆ ಉಳಿಸಿ ಕೊಂಡಿರುವುದು ಕೂಡ ಕಾನೂನು ಉಲ್ಲಂಘನೆಯಾಗುತ್ತದೆ. ಆದ್ದರಿಂದ ನಿಯಮದ ಪ್ರಕಾರ ಸಾಗರ ಮತ್ತು ರಿಪ್ಪನ್‌ಪೇಟೆ ಕಾಲೇಜು ಪ್ರಾಂಶುಪಾಲರುಗಳ ಮೇಲೆ ಇಲಾಖೆ ಸೂಕ್ತ ಕ್ರಮ ಜರುಗಿಸಿ, ಅತಿಥಿ ಉಪನ್ಯಾಸಕರುಗಳಿಗೆ ನೀಡಬೇಕಾದ ಗೌರವಧನ ಕೊಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಕೂಡ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಡಾ.ಸೋಮಶೇಖರ ಹೆಚ್. ಶಿಮೊಗ್ಗಿ, ಧನಂಜಯ್, ಲಕ್ಷö್ಮಣಪ್ಪ, ಶಹಾಬಾಜ್, ನಾಗರಾಜ್, ವನಜಾಕ್ಷಿ, ಅನಿತಾ, ರಾಚಪ್ಪ, ಡಿಎಸ್‌ಎಸ್ ಹಾಲೇಶಪ್ಪ, ಶಿವಕುಮಾರ್, ಶೇಷಪ್ಪ ಮೊದಲಾದವರು ಇದ್ದರು.
