ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.31
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರನ್ನು ಭೇಟಿ ಮಾಡಿ ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಲಕ್ಷಾಂತರ ರೈತರ ಹಿತದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಎರಡು ಕೃಷಿ ಯೋಜನಾ ಪ್ರಸ್ತಾವನೆಗಳ ಕುರಿತಂತೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಸಲ್ಲಿಸಿದ್ದಾರೆ.
ಅವರು ಗುರುವಾರ ನವದೆಹಲಿಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಮಲೆನಾಡು ಭಾಗದ ಪ್ರಮುಖ ಕೃಷಿ ಬೆಳೆಗಳಾದ ಅಡಿಕೆ, ಸಾಂಬಾರು ಪದಾರ್ಥಗಳು ಮತ್ತು ಮೆಕ್ಕೆಜೋಳ ಬೆಳೆಗಾರರು ಎದುರಿಸುತ್ತಿರುವ ಹಲವಾರು ತಾಂತ್ರಿಕ ಮತ್ತು ಆಡಳಿತಾತ್ಮಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆದಷ್ಟು ಶೀಘ್ರದಲ್ಲಿ ನೆರವು ನೀಡಬೇಕು ಎಂದು ಕೋರಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ‘ಅಡಿಕೆ ಮತ್ತು ಸಾಂಬಾರು ಅಭಿವೃದ್ಧಿ ನಿರ್ದೇಶನಾಲಯ’ದ (Directorate of Arecanut and Spices Development – DASD)ಉಪಕೇಂದ್ರವನ್ನು ಶೀಘ್ರವೇ ಸ್ಥಾಪಿಸಬೇಕು.
ಅಡಿಕೆ ಬೆಳೆಯುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಶಿವಮೊಗ್ಗ ಸೇರಿದಂತೆ ಸಾಗರ, ಸೊರಬ, ಹೊಸನಗರ ಮುಂತಾದ ಮಲೆನಾಡಿನ ಭಾಗಗಳಲ್ಲಿ ಅಡಿಕೆ ಬೆಳೆಗೆ ಎದುರಾಗುತ್ತಿರುವ ಕೊಳೆರೋಗ, ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಹಾಗೂ ವನ್ಯಜೀವಿಗಳ ಹಾವಳಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ಸಾಗರದಲ್ಲಿ ಈ ಉಪಕೇಂದ್ರ ಸ್ಥಾಪನೆಯಾದರೆ ಶಿವಮೊಗ್ಗ ಮಾತ್ರವಲ್ಲದೆ ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳ ರೈತರಿಗೆ ರೋಗ ನಿಯಂತ್ರಣ, ಉನ್ನತ ತಂತ್ರಜ್ಞಾನ, ತರಬೇತಿ ಮತ್ತು ಮೌಲ್ಯವರ್ಧನೆಗೆ ತಕ್ಷಣದ ವೈಜ್ಞಾನಿಕ ಮಾರ್ಗದರ್ಶನ ದೊರೆಯಲಿದೆ ಎಂದು ಸಚಿವರಿಗೆ ವಿವರಿಸಿದರು.
ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಮೆಕ್ಕೆಜೋಳ ಸಂಶೋಧನಾ ಕೇಂದ್ರ (ICAR-IIMR Regional Research Station) ಸ್ಥಾಪನೆಗೆ ಈಗಾಗಲೇ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜಾಗ ಮಂಜೂರಾಗಿದ್ದು, ಅಗತ್ಯ ಅನುದಾನ ಮತ್ತು ಸಂಪನ್ಮೂಲಗಳನ್ನು ಬಿಡುಗಡೆ ಮಾಡಿ ಯೋಜನೆಯನ್ನು ಶೀಘ್ರವಾಗಿ ಕಾರ್ಯಗತಗೊಳಿಸಬೇಕು.
‘ಮೆಕ್ಕೆಜೋಳದ ಸ್ವರ್ಣ ಪಥ’ ಎಂದೇ ಹೆಸರು ವಾಸಿಯಾಗಿರುವ ಶಿವಮೊಗ್ಗ ವರ್ಷಕ್ಕೆ ಮೂರು ಆವೃತ್ತಿ ಬೆಳೆ ತೆಗೆಯಲು ಸೂಕ್ತ ವಾತಾವರಣ ಹೊಂದಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಥನಾಲ್ ಬ್ಲೆಂಡಿಂಗ್ ಗುರಿಯನ್ನು ತಲುಪಲು ಹಾಗೂ ರೈತರಿಗೆ ಗುಣಮಟ್ಟದ ಹೈಬ್ರಿಡ್ ಬಿತ್ತನೆ ಬೀಜ ಒದಗಿಸಲು ಈ ಸಂಶೋಧನಾ ಕೇಂದ್ರ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದ್ದಾರೆ.
ಸಂಸದ ರಾಘವೇಂದ್ರ ರವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಎರಡೂ ಪ್ರಸ್ತಾವನೆಗಳ ಕುರಿತು ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
