Homeಜಿಲ್ಲೆಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕತೆ ಏನು ಗೊತ್ತಾ?

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕತೆ ಏನು ಗೊತ್ತಾ?

Spread the love

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಡಜನ್‌ಗಟ್ಟಲೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಿದ್ದು, ಎಐಸಿಸಿ ವೀಕ್ಷಕರ ಮುಂದೆ ಬಲಾಬಲ ಪ್ರದರ್ಶನ ನಡೆದಿದೆ.

ಎಐಸಿಸಿ ಕಾರ್ಯದರ್ಶಿ ಸರತ್ ನೇತೃತ್ವದ ತಂಡ ಕಳೆದ ಎರಡು ವಾರಗಳಿಂದ ಜಿಲ್ಲೆಯ ಪಕ್ಷದ ವಿವಿಧ ಬ್ಲಾಕ್‌ಗಳ ಅಭಿಪ್ರಾಯ ಸಂಗ್ರಹದಲ್ಲಿ ತೊಡಗಿದ್ದು, ಇದೇ ಮೊದಲ ಬಾರಿಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಬಾರಿ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿರುವುದು ಕಂಡುಬರುತ್ತಿದೆ.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ , ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಸೂಡಾ ಅಧ್ಯಕ್ಷ ಎನ್. ರಮೇಶ್ ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ರಂತಹ ಹಿರಿಯ ಮುಖಂಡರುಗಳು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೆ, ಹಾಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹೆಚ್.ಎಸ್.ಸುಂದರೇಶ್ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾಗುವ ಪ್ರಯತ್ನ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಉತ್ಸಾಹಿ, ಹೊಸ ಆಲೋಚನೆಗಳ ಯುವ ಸಮುದಾಯದ ಕೈಗಿಟ್ಟು ಪಕ್ಷ ಕಟ್ಟುವ ನಿಟ್ಟಿನಲ್ಲಿ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರ ಆಲೋಚನೆಗೆ ಪೂರಕವಾಗುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಯುವಕರಿಗೆ ನೀಡಬೇಕು ಎಂಬ ಕೂಗು ಪಕ್ಷದಲ್ಲಿ ಕೇಳಿಬರುತ್ತಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯುವಕರನ್ನೇ ನೇಮಕ ಮಾಡಿರುವಾಗ ಕಾಂಗ್ರೆಸ್ ಪಕ್ಷ ಕೂಡ ಇಂತಹ ಪ್ರಯೋಗ ಶೀಲಾ ರಾಜಕಾರಣಕ್ಕೆ ಸಜ್ಜಾಗಬೇಕು ಈ ನಿಟ್ಟಿನಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ 50 ವರ್ಷ ವಯಸ್ಸಿನ ಒಳಗಿರುವ ಪಕ್ಷ ನಿಷ್ಠರಿಗೆ ಆದ್ಯತೆ ನೀಡಬೇಕು ಎಂದು ಯುವ ಕಾರ್ಯಕರ್ತರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ.

ಗಮನಿಸಿ: ರಾಜೀನಾಮೆಯಿಂದ ಯೂಟರ್ನ್- ಬೇಳೂರು ಹೇಳಿದ್ದೇನು!?

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಪರಾಜಯಗೊಂಡಿರುವ ಹೆಚ್.ಸಿ.ಯೋಗೀಶ್, ವಿದ್ಯಾರ್ಥಿ ಕಾಂಗ್ರೆಸ್‌ನಿಂದಲೂ ಸಕ್ರಿಯವಾಗಿರುವ ಕೆ. ರಂಗನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ವೇದಾ ವಿಜಯಕುಮಾರ್ ಅವರುಗಳು ಯುವ ಕೋಟಾದಡಿ, ಮಹಿಳಾ ಮೀಸಲು ಸ್ಥಾನದಡಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಕ್ಕು ಮಂಡಿಸಿದ್ದಾರೆ.

ಜಿಲ್ಲೆಯಲ್ಲಿ 14 ಬ್ಲಾಕ್ ಗಳಲ್ಲಿ ಸಾಗರ-ಹೊಸನಗರ, ಆನವಟ್ಟಿ – ಸೊರಬ, ತೀರ್ಥಹಳ್ಳಿ – ಗ್ರಾಮಾಂತರ, ಭದ್ರಾವತಿ – ಗ್ರಾಮಾಂತರ ಬ್ಲಾಕ್ ಗಳಲ್ಲಿ ಎಐಸಿಸಿ ವೀಕ್ಷಕರಾದ ಸರತ್ ನೇತೃತ್ವದ ತಂಡ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಬಗೆಗಿನ ಬ್ಲಾಕ್ ಪದಾಧಿಕಾರಿ, ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಈ ವಾರದಲ್ಲೇ ಶಿವಮೊಗ್ಗ-ಗ್ರಾಮಾಂತರ, ಶಿವಮೊಗ್ಗ ಉತ್ತರ- ದಕ್ಷಿಣ, ಹೊಳೆಹೊನ್ನೂರು-ಗ್ರಾಮಾಂತರ, ಶಿಕಾರಿಪುರ-ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಅಭಿಪ್ರಾಯಗಳನ್ನು ಆಲಿಸಿದೆ.

ಪಕ್ಷದ ಸ್ಥಾನ ಮಾನಗಳ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ವರಿಷ್ಠ ಮಂಡಳಿ ಮುಂದಾಗಿದ್ದು ರಾಜ್ಯದ ಎಲ್ಲಾ ಜಿಲ್ಲಾ ಅಧ್ಯಕ್ಷ ಸ್ಥಾನಗಳಲ್ಲಿ ಸಾಮಾಜಿಕ ನ್ಯಾಯದ ಆಧಾರದಲ್ಲಿ ಎಲ್ಲಾ ಜಾತಿಗಳಿಗೂ ಅವಕಾಶ ಕಲ್ಪಿಸುವ, ಮಹಿಳೆ, ಯುವ ಸಮುದಾಯಗಳಿಗೂ ಅಳವಡಿಸಲಾಗಿದೆ. ಇದೊಂದು ಪರಿಣಾಮಕಾರಿ ಹೆಜ್ಜೆ ಎನ್ನಬಹುದು.

ಸೈದ್ಧಾಂತಿಕ ಸಹವರ್ತಿಗಳ ಅಭಿಪ್ರಾಯಕ್ಕೂ ಮಣೆ:

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಕೇವಲ ಪಕ್ಷದ ಸದಸ್ಯರು, ಮುಖಂಡರುಗಳ ಅಭಿಪ್ರಾಯಗಳನ್ನಷ್ಟೇ ಸಂಗ್ರಹಿಸುವುದಲ್ಲದೆ ಕಾಂಗ್ರೆಸ್ ಸಿದ್ಧಾಂತಕ್ಕೆ ಪೂರಕ ನಿಲುವು ಹೊಂದಿರುವ ರಾಜಕೀಯೇತರ ಸಂಘಟನೆಗಳ, ವ್ಯಕ್ತಿಗಳ ಅಭಿಪ್ರಾಯವನ್ನು ಪಡೆಯಬೇಕು ಎಂಬ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನವನ್ನು ವೀಕ್ಷಕರ ತಂಡ ಪಾಲಿಸಬೇಕಿದೆ. ಅದಕ್ಕಾಗಿ ಜಿಲ್ಲೆಯ ಸಾಮಾಜಿಕ ಹೋರಾಟಗಾರರ, ಬುದ್ಧಿಜೀವಿಗಳ, ಪತ್ರಕರ್ತರ ,ಕಲಾವಿದರ ಹೆಸರುಗಳನ್ನು ಗುರುತಿಸಿಕೊಂಡಿದೆ ಎನ್ನಲಾಗುತ್ತಿದೆ.

ಸೈದ್ಧಾಂತಿಕ ಬದ್ಧತೆ:

ಮಾಸ್ ಬೇಸ್ಡ್ ಪಕ್ಷವಾಗಿರುವ ಕಾಂಗ್ರೆಸ್‌ನ್ನು ಸೈದ್ಧಾಂತಿಕ ತಳಹದಿಯ ಮೇಲೆ ಪ್ರಬಲವಾಗಿ ಮರುಕಟ್ಟುವ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಬಲ ತುಂಬಲು ಪಕ್ಷದ ಎಲ್ಲಾ ಹಂತಗಳಲ್ಲೂ ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧರಾಗಿರುವ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಬಲ ಸೈದ್ಧಾಂತಿಕ ಮತ್ತು ರಾಜಕೀಯ ಎದುರಾಳಿ ಆಗಿರುವ ಬಿಜೆಪಿಯನ್ನು ಎದುರಿಸಲು ರಾಜೀ ರಹಿತ ಹೋರಾಟ ಮಾಡುವವರಿಗೆ, ಕಾಂಗ್ರೆಸ್ ಸಿದ್ಧಾಂತಕ್ಕೆ ಕಟಿ ಬದ್ಧರಾಗಿರುವ, ಬುದ್ಧತೆ ಹೊಂದಿರುವವರಿಗೆ ಮತ್ತು ಪಕ್ಷದ ಮೂಲ ನಿವಾಸಿಗಳಿಗೆ ನೀಡುವುದು ಅಗತ್ಯವಿದೆ,

ಪಕ್ಷದಲ್ಲಿದ್ದುಕೊಂಡೆ ಪಕ್ಷ ವಿರೋಧಿ ಚಟುವಟಿಕೆಗಳು ನಡೆಸುವ, ಕೇವಲ ನಾಯಕರುಗಳ ಬಾಲಂಗೋಚಿಗಳಾಗಿ ಓಡಾಡುವವರಿಗೆ ಯಾವುದೇ ಕಾರಣಕ್ಕೂ ಯಾವುದೇ ಸ್ಥಾನ ಮಾನ ನೀಡಬಾರದು ಎಂಬುದು ಜಿಲ್ಲೆಯ ನಿಷ್ಠಾವಂತ ಕಾಂಗ್ರೆಸಿಗರ ಒತ್ತಾಯ ಕೂಡ ಆಗಿದೆ.

ಲಾಭಿಗೆ ಜಾಗವಿಲ್ಲ:

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಆಧರಿಸಿಯೇ ನೇಮಕ ನಡೆಯುತ್ತದೆ. ಯಾವುದೇ ಲಾಭಿಗೆ ಇಲ್ಲಿ ಅವಕಾಶವಿಲ್ಲ. ಪಕ್ಷ ನಿಷ್ಠೆ, ಸಂಘಟನಾ ಸಾಮರ್ಥ್ಯ, ಸೈದ್ಧಾಂತಿಕ ಸ್ಪಷ್ಟತೆ ಹೊಂದಿರುವವರಿಗೆ ಅವಕಾಶ ನೀಡುವ ದೃಢ ಸಂಕಲ್ಪವನ್ನು ಪಕ್ಷ ಹೊಂದಿದೆ ಎನ್ನಲಾಗುತ್ತಿದೆ.

ವೀಕ್ಷಕರ ತಂಡ ಯಾರ ಪ್ರಭಾವಗಳಿಗೂ ಒಳಗಾಗದೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆಯ ವರದಿಯನ್ನು ನೇರವಾಗಿ ಹೈ ಕಮಾಂಡ್‌ಗೆ ನೀಡಲಿದ್ದು, ಅಂತಿಮ ತೀರ್ಮಾನ ಹೈ ಕಮಾಂಡ್ ಕೈ ಗೊಳ್ಳಲಿದೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಈಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments