ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.4
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲ್ಲಿಸಿದ್ದ ವಾಹನ ಮೇಲೆ ಪೊಲೀಸ್ ಇಲಾಖೆ ನೋಟಿಸ್ ಅಂಟಿಸಲಾಗಿದ್ದು, ಇದರಿಂದ ಎಚ್ಚೆತ್ತ ವಾಹನ ಮಾಲೀಕರು ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗಬಾರದೆಂದು ಸ್ವಯಂಪ್ರೇರಿತವಾಗಿ ವಾಹನಗಳನ್ನು ತೆರವುಗೊಳಿಸಿದ್ದಾರೆ.
ಶಿವಮೊಗ್ಗ ನಗರ ವ್ಯಾಪ್ತಿಯ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಲಾಗಿದ್ದ ಒಟ್ಟು 84 ವಾಹನಗಳು ಪತ್ತೆಯಾಗಿದ್ದು, ಇವುಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದು ಪೊಲೀಸ್ ಇಲಾಖೆ ಗಮನಕ್ಕೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಎಸ್ಪಿ ನಿಖಿಲ್ ಬಿ ರವರ ಮಾರ್ಗದರ್ಶನದಲ್ಲಿ ಸಂಬಂಧಿತ ವಾಹನಗಳ ಮಾಲೀಕರಿಗೆ ವಾಹನಗಳನ್ನು ತೆರವುಗೊಳಿಸುವಂತೆ ಸೂಚಿಸಿ, ವಾಹನಗಳ ಮೇಲೆ ನೋಟಿಸ್ ಅಂಟಿಸಲಾಗಿತ್ತು. ನೋಟಿಸ್ ಸ್ಪಂದಿಸಿ 84 ವಾಹನಗಳಲ್ಲಿ 68 ವಾಹನಗಳ ಮಾಲೀಕರು ಸ್ವಯಂಪ್ರೇರಿತವಾಗಿ ತಮ್ಮ ವಾಹನಗಳನ್ನು ತೆರವುಗೊಳಿಸಿದ್ದಾರೆ.

ಬಾಕಿ ಉಳಿದಿರುವ 16 ವಾಹನಗಳನ್ನು ಸೋಮವಾರ ಎಎಸ್ಪಿ ಕಾರಿಯಪ್ಪ. ಎ.ಜಿ ರವರ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆ ಪ್ರಕಾರ ಈ ವಾಹನಗಳನ್ನು ಪರಿತ್ಯಕ್ತ ಅನುಪಯುಕ್ತ ಎಂದು ಪರಿಗಣಿಸಿ ಜಾರಿಯಲ್ಲಿರುವ ನಿಯಮಾನುಸಾರ ಟೋಯಿಂಗ್ ವಾಹನದ ಮೂಲಕ ತೆರವುಗೊಳಿಸುವ ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಚರಣೆಯ ಅಂಗವಾಗಿ ಸಾಂಕೇತಿಕವಾಗಿ ಅಶೋಕ ನಗರ ಪ್ರದೇಶದಲ್ಲಿನ 06 ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗುತ್ತದೆ.
